ಸಲ್ಮಾನ್ ಖಾನ್ ಕಂಗಾಲು,ಸಿಕಂದರ್ ಬೆನ್ನೇರಿದ ಪೈರಸಿ ಭೂತ ; ಬಿಡುಗಡೆಗೆ ಮುನ್ನ ಲೀಕ್ ಆದ ಚಿತ್ರಗಳು ಯಾವುವು ಗೊತ್ತಾ?
ಒಂದು ಚಿತ್ರದ ಹಿಂದೆ ಹತ್ತಾರು ಕಥೆಗಳಿರುತ್ತವೆ, ವ್ಯಥೆಗಳಿರುತ್ತವೆ. ಸಿನಿಮಾ ನಿರ್ಮಾಣ ಸಿನಿಮಾವೊಂದನ್ನು ಚಿತ್ರಮಂದಿರದಲ್ಲಿ ಕುಳಿತು ನೋಡಿದಷ್ಟು ಸುಲಭವಲ್ಲ. ಇಲ್ಲಿ ಎಲ್ಲೆಲ್ಲಿಂದಲೋ ದುಡ್ಡು ಹೊಂಚಿತಂದು ಚಿತ್ರವನ್ನು ಮಾಡುವ ನಿರ್ಮಾಪಕರಿದ್ದಾರೆ. ಜೀವವನ್ನೇ ಬಸಿದು ನಿರ್ದೇಶನ ಮಾಡುವ ನಿರ್ದೇಶಕರಿದ್ದಾರೆ.
ತಮ್ಮ ಚಿತ್ರಕ್ಕೆ ತಿಂಗಳಾನುಗಟ್ಟಲೆ ಕುಳಿತು ಸ್ಕ್ರಿಪ್ಟು, ಪ್ಲ್ಯಾನಿಂಗು, ನೂರಾರು ದಿನಗಳ ಚಿತ್ರೀಕರಣವನ್ನು ಮಾಡಿ ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಂಡು ಅನೇಕರು ಇಲ್ಲಿ ದುಡಿಯುತ್ತಾರೆ. ಆದರೆ ಈಗೀಗ ಯಾವ ಭಯ ಇಲ್ಲದೇ ಈಗಷ್ಟೇ ಬಿಡುಗಡೆಯಾದ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಲೀಕ್ ಮಾಡುವುದು, ಪೈರಸಿಯನ್ನು ಮಾಡುವ ಲೀಕಾಸುರರ ಹಾವಳಿ ಹೆಚ್ಚಾಗಿದೆ.

ಈ ತರಹದ ವಿದ್ಯಮಾನ ಚಿತ್ರದ ಮಾರುಕಟ್ಟೆಗೆ ಗಳಿಕೆಗೆ ಪೆಟ್ಟು ನೀಡಬಹುದು ಎಂಬ ಅರಿವು ಇದ್ದರೂ ಕೂಡ ಅರಿವು ಇಲ್ಲದಂತೆ ಸೋಶಿಯಲ್ ಮೀಡಿಯಾದಲ್ಲಿ ಇಡೀ ಚಿತ್ರವನ್ನು ಅಪ್‌ಲೋಡ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಷ್ಟೇ ಜಾಗರೂಕತೆಯಿಂದ ಇದ್ದರೂ ಕೂಡ ಕಿಡಿಗೇಡಿಗಳು ಚಿತ್ರವನ್ನು ಸೆರೆ ಹಿಡಿದು ಕ್ಷಣಾರ್ಧದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಾರೆ. ಇದಕ್ಕೆ ಇನ್ನೊಂದು ಜ್ವಲಂತ ಉದಾಹರಣೆಯಂತೆ ಇಂದು ಬಿಡುಗಡೆಯಾದ ಸಿಕಂದರ್ ಚಿತ್ರ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಅದು ಚಿತ್ರದ ಬಿಡುಗಡೆಗೆ ಮುನ್ನವೇ ಎನ್ನುವುದು ಬಹುದೊಡ್ಡ ದುರಂತ.
ಹೌದು, ಸಿಕಂದರ್ ಚಿತ್ರದ ಬಿಡುಗಡೆಗೆ ಕೆಲವೇ ಗಂಟೆ ಇರುವ ಸಮಯದಲ್ಲಿ ನಿನ್ನೆ ಇಡೀ ಸಿಕಂದರ್ ಚಿತ್ರವನ್ನು ಆನ್‌ಲೈನ್‌ನಲ್ಲಿ ಹರಿಬಿಡಲಾಗಿದೆ. ಒಂದಲ್ಲ, ಎರಡಲ್ಲ, ತಮಿಳು ರಾಕರ್ಸ್, ಮೂವಿ ರೂಲ್ಸ್, ಫಿಲ್ಮಿ ಜಿಲ್ಲಾ ಹೀಗೆ 600ಕ್ಕೂ ಅಧಿಕ ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಚಿತ್ರ ಲೀಕ್ ಆಗಿದೆ.
ಸಹಜವಾಗಿಯೇ ಲೀಕಾಸುರರ ಈ ಕೃತ್ಯದಿಂದ ಚಿತ್ರದ ನಿರ್ಮಾಪಕ ಸಾಜಿದ್ ನಾಡಿಯಾವಾಲಾ ಮತ್ತು ಸಲ್ಮಾನ್ ಖಾನ್ ಹೈರಾಣಾಗಿದ್ದಾರೆ. ಯಾಕೆಂದರೆ ಸಿಕಂದರ್ ಚಿತ್ರಕ್ಕೆ ಖರ್ಚು ಮಾಡಿರುವುದು ಹತ್ತು, ಇಪ್ಪತ್ತು ಕೋಟಿಯಲ್ಲ ಬದಲಿಗೆ ಇನ್ನೂರು ಕೋಟಿ. ಸಿಕಂದರ್ ಸಿನಿಮಾ ನೋಡಿದ್ರಾ ಎಂದರೆ ಓ ಆನ್‌ಲೈನ್‌ನಲ್ಲಿಯೇ ಒಳ್ಳೆಯ ಪ್ರಿಂಟ್ ಇದೆ ಅಂತಾ ಜನ ಮಾತನಾಡುತ್ತಿದ್ದಾರೆ. ಇಂಥಾ ಮಾತನ್ನು ಕೇಳಿದರೆ ಜೀವ ತೇದು ಕೋಟಿಗಳಿಗೆ ಲೆಕ್ಕ ಇಲ್ಲದಂತೆ ಖರ್ಚು ಮಾಡಿದ ನಿರ್ಮಾಪಕನ ಎದೆ ಮೇಲೆ ಒದ್ದಂತಾಗೋದಿಲ್ವಾ ?
ಇನ್ನು, ಸಲ್ಮಾನ್ ಖಾನ್ ದೊಡ್ಡ ಗೆಲುವನ್ನು ಕಂಡು ಹೆಚ್ಚು ಕಡಿಮೆ ಆರು ವರ್ಷಗಳಾಗಿವೆ. ಆದರೆ ಇದ್ಯಾವುದನ್ನು ಆಲೋಚನೆ ಮಾಡದ ಲೀಕಾಸುರರು ಸಲ್ಮಾನ್ ಖಾನ್ ಪ್ರತಿಷ್ಠೆಗೆ ಕೊಳ್ಳಿ ಇಟ್ಟು ಚಿತ್ರವನ್ನು ಬಿಡುಗಡೆಯ ಮುನ್ನವೇ ತೇಲಿ ಬಿಟ್ಟಿದ್ದಾರೆ.
ಸಿಕಂದರ್ ಚಿತ್ರ ಲೀಕಾಸುರರ ಹಾವಳಿಯಿಂದ ನಲುಗಿರುವ ವಿಚಾರವನ್ನು ತಿಳಿದು ಆತಂಕ ವ್ಯಕ್ತಪಡಿಸಿರುವ ಬಾಲಿವುಡ್ ಟ್ರೇಡ್ ವಿಶ್ಲೇಷಕ ಕೋಮಲ್ ನಹ್ತಾ ಯಾವುದೇ ನಿರ್ಮಾಪಕ ಇರಲಿ, ಅವರಿಗೆ ಇದು ಅತ್ಯಂತ ಕೆಟ್ಟ ಕನಸು ಎಂದು ಹೇಳಿದ್ದಾರೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೊದಲೇ ಇಡೀ ಚಿತ್ರ ಲೀಕ್ ಆಗಿದೆ ದುರದೃಷ್ಟವಶಾತ್ ಸಾಜಿದ್ ನಾಡಿಯಾವಾಲಾ ಈ ಬಾರಿ ಇದಕ್ಕೆ ಬಲಿಪಶು ಆಗಿದ್ಧಾರೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಸಿಕಂದರ್ ಚಿತ್ರದ HD ಪ್ರಿಂಟ್ ಲೀಕ್ ಆದ ಬೆನ್ನಲ್ಲೇ ಈ ಆನ್‌ಲೈನ್ ಕಳ್ಳರನ್ನು ಹಿಡಿಯೋದಾದರೂ ಹೇಗೆ ? ಇದರ ಹಿಂದೆ ಇರುವ ಕಾಣದ ಕೈಗಳ್ಯಾವುವು ? ಹಗಲಿರುಳು ಶ್ರಮ ವಹಿಸಿ ತಯಾರು ಮಾಡಿದ ಚಿತ್ರದ ಪ್ರತಿಯನ್ನು ಕದ್ದು ಮಾರಿಕೊಂಡು ದುಡ್ಡು ಮಾಡುತ್ತಿರುವ ಖದೀಮರು ಯಾರು ? ಚಿತ್ರರಂಗಕ್ಕೆ ಸಂಬಂಧಿಸಿದ ತಂತ್ರೆಜ್ಞರಿಂದಲೇ ಚಿತ್ರಗಳು ಈ ತರ ಲೀಕ್ ಆಗುತ್ತಿವೆಯಾ ? ಯುಎಫ್‌ಓ ಕ್ಯೂಬ್‌ಗೆ ಕೊಟ್ಟಾಗ ಯಾರಾದರೂ ಗೋಲ್‌ಮಾಲ್ ಮಾಡುತ್ತಿದ್ದಾರಾ ಎನ್ನುವ ಅನೇಕ ಪ್ರಶ್ನೆಗಳು ಕೇವಲ ಚಿತ್ರರಂಗದವರನ್ನು ಮಾತ್ರವಲ್ಲ ಚಿತ್ರಮಂದಿರದಲ್ಲಿಯೇ ಚಿತ್ರವನ್ನು ನೋಡುವ ಅಭ್ಯಾಸವನ್ನು ಮಾಡಿಕೊಂಡಿರುವ ಸಾಮಾನ್ಯ ಸಿನಿಮಾ ಪ್ರೇಮಿಗಳನ್ನು ಕೂಡ ಕಾಡುತ್ತಿವೆ.
ಅಂದ್ಹಾಗೇ ಚಿತ್ರವೊಂದು ಬಿಡುಗಡೆಗೆ ಮುನ್ನವೇ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು ಇದು ಮೊದಲೇನಲ್ಲ. ಈ ಹಿಂದೆ ಕೂಡ ಕಿರಾತಕರು ತಮ್ಮ ಕೈ ಚಳಕ ತೋರಿಸಿದ್ದಾರೆ. ಚಿತ್ರದ ಬಿಡುಗಡೆಗೆ ಮುನ್ನವೇ ಚಿತ್ರವನ್ನು ಲೀಕ್ ಮಾಡಿದ್ದಾರೆ. ಉದಾಹರಣೆಗೆ ಆಲಿಯಾ ಭಟ್ ಮತ್ತು ಶಾಹಿದ್ ಕಪೂರ್ ಅಭಿನಯದ ಉಡ್ತಾ ಪಂಜಾಬ್, ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಅಭಿನಯದ ಪದ್ಮಾವತ್, ವಿವೇಕ್ ಓಬೆರಾಯ್, ರಿತೇಶ್ ದೇಶಮುಖ್ ಮತ್ತು ಅಪ್ತಾಭ್ ಶಿವದಾಸನಿ ಅಭಿನಯದ ಗ್ರೇಟ್ ಗ್ರ್ಯಾಂಡ್ ಮಸ್ತಿ.
ಹೀಗೆ ಅನೇಕ ಸಿನಿಮಾಗಳು ಬಿಡುಗಡೆಗೆ ಮುನ್ನವೇ ಆನ್ ಲೈನ್‌ನಲ್ಲಿ ಲೀಕ್ ಆಗಿವೆ. ಇನ್ನು ಸಲ್ಮಾನ್ ಖಾನ್ ಅಭಿನಯದ ಚಿತ್ರ ಲೀಕ್ ಆಗುತ್ತಿರುವುದು ಇದು ಮೊದಲೇನಲ್ಲ. ಹಿಂದೆ ಸುಲ್ತಾನ್ ಸಿನಿಮಾ ಕೂಡ ಹೀಗೆ ಆನ್‌ಲೈನ್‌ನಲ್ಲಿ ಸೋರಿಕೆಯಾಗಿತ್ತು. ಆದರೂ ಕೂಡ ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಪೈರಸಿಯ ನಡುವೆಯೂ ವಿಶ್ವದೆಲ್ಲೆಡೆಯಿಂದ ಚಿತ್ರ ₹614 .49 ಕೋಟಿ ಹಣವನ್ನು ಕೊಳ್ಳೆ ಹೊಡೆದಿತ್ತು.
ಕೇವಲ ಸಲ್ಮಾನ್ ಖಾನ್ ಮಾತ್ರವಲ್ಲ ಶಾರುಖ್ ಖಾನ್ ಕೂಡ ಈ ಪೈರಸಿಯಿಂದ ಹಿಂದೆ ನಲುಗಿದವರೇ. ಕಿಂಗ್ ಖಾನ್ ಅಭಿನಯದ ರಹೀಸ್ ಮತ್ತು ಜಬ್ ಹ್ಯಾರಿ ಮೇಟ್ ಸೇಜಲ್ ಸಿನಿಮಾಗಳು ಕೂಡ ಪೈರಸಿಗೆ ಬಲಿಯಾಗಿದ್ದವು. ರಹೀಸ್ ಚಿತ್ರ ಈ ಅಡೆ ತಡೆಯ ನಡುವೆ ಬಾಕ್ಸಾಫೀಸ್‌ನಲ್ಲಿ ₹281.44 ಕೋಟಿ ಹಣವನ್ನು ಗಳಿಸಿತ್ತು. ಇನ್ನು ಜಬ್ ಹ್ಯಾರಿ ಮೇಟ್ ಸೇಜಲ್ ಚಿತ್ರ ಪೈರಸಿಯಿಂದ ತತ್ತರಿಸಿ ಹೋಗಿತ್ತು. ನಿರೀಕ್ಷೆಯನ್ನು ಮೂಡಿಸಿದ್ದ ಚಿತ್ರ ಕೇವಲ ₹153.43 ಕೋಟಿಯನ್ನು ಮಾತ್ರ ಗಳಿಸಿತ್ತು.
ಬರೀ ಬಾಲಿವುಡ್ ಮಾತ್ರವಲ್ಲ ಪವನ್ ಕಲ್ಯಾಣ್ ಅಭಿನಯದ ಅತ್ತಾರಿಂಟಿಕಿ ದಾರೇದಿ ಚಿತ್ರವನ್ನು ಕೂಡ ಬಿಡುಗಡೆಗೆ ಮೊದಲೇ ಲೀಕ್ ಮಾಡಲಾಗಿತ್ತು. ಚಿತ್ರದ ಬಿಡುಗಡೆಗೆ ಮುನ್ನವೇ 90 ನಿಮಿಷದ ಫುಟೇಜ್‌ನ ಲೀಕ್ ಮಾಡಲಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಆ ನಂತರ ತನಿಖೆ ಮಾಡಿದಾಗ ಚಿತ್ರದ ಸಂಕಲನಕಾರನ ಸಹಾಯಕನೇ ಚಿತ್ರವನ್ನು ಮಾರಿಕೊಂಡಿರುವ ವಿಚಾರ ಬೆಳಕಿಗೆ ಬಂದಿತ್ತು. ತೆಲುಗು ಚಿತ್ರರಂಗ ಈ ವಿಚಾರವನ್ನು ಕೇಳಿ ಬೆಚ್ಚಿ ಬಿದ್ದಿತ್ತು.
ಇಷ್ಟೆಲ್ಲ ಯಾಕೆ ಪೈರೇಟ್ಸ್ ಆಫ್ ಕೆರೆಬಿಯನ್, ಎವೆಂಜರ್ಸ್ ಎಂಡ್ ಗೇಮ್, ದಿ ಡಾರ್ಕ್ ನೈಟ್, ಜುರಾಸಿಕ್ ಲೀಗ್ ಹೀಗೆ ಹಾಲಿವುಡ್ ಚಿತ್ರಗಳನ್ನು ಕೂಡ ಬಿಡದ ಕಿರಾತಕರು ಭಾರತದಲ್ಲಿ ಚಿತ್ರ ಬಿಡುಗಡೆಯಾಗುವ ಮುನ್ನವೇ ಆನ್‌ಲೈನ್‌ನಲ್ಲಿ ಹಂಚಿದ್ದರು. ಇನ್ನು ಬಿಡುಗಡೆಯಾದ ಕೆಲ ಗಂಟೆಗಳಲ್ಲಿ ಸೋರಿಕೆಯಾದ ಚಿತ್ರಗಳ ಸಂಖ್ಯೆ ಲೆಕ್ಕಕ್ಕಿಲ್ಲ.
ಒಟ್ನಲ್ಲಿ ಈ ಹಿಂದೆಯೂ ಪೈರಸಿ ಆಗುತ್ತಿತ್ತು. ಆದರೆ ಬಿಡುಗಡೆಗೆ ಮುನ್ನವೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚಿತ್ರವೊಂದನ್ನು ಲೀಕ್ ಮಾಡಿರಲಿಲ್ಲ. 600 ವೆಬ್‌ಸೈಟ್‌ಗಳಲ್ಲಿ ತೇಲಿ ಬಿಟ್ಟಿರಲಿಲ್ಲ. ಸದ್ಯ ಸಿಕಂದರ್ ಚಿತ್ರದ ನಿರ್ಮಾಪಕ ಸಾಜಿದ್ ನಾಡಿಯಾವಾಲಾ ತಮ್ಮ ಎಲ್ಲ ಕೆಲಸ ಮರೆತು ಲಿಂಕ್‌ಗಳನ್ನು ಈ ವೆಬ್ ಸೈಟ್‌ಗಳಿಂದ ತೆಗೆಸುತ್ತಿದ್ದಾರೆ ಎನ್ನುವ ವರದಿಯನ್ನು ಅನೇಕ ಮಾಧ್ಯಮಗಳು ಪ್ರಸಾರ ಮಾಡಿವೆ. ಇದೆಲ್ಲದರ ನಡುವೆ ಸಿಕಂದರ್ ಸಿನಿಮಾವನ್ನು ಯಾಕೆ ಆ ಮಟ್ಟದಲ್ಲಿ ಪೈರಸಿ ಮಾಡಿದರು ಎಂಬುವುದಕ್ಕಿಂತ ಅಷ್ಟು ದೊಡ್ಡ ಸಿನಿಮಾವನ್ನೇ ಪೈರಸಿ ಮಾಡಿದ ಮೇಲೆ ಸಣ್ಣಪುಟ್ಟ ಸಿನಿಮಾಗಳ ಕಥೆಯೇನು? ಅನ್ನೋ ಪ್ರಶ್ನೆ ಚಿತ್ರನಗರಿಯಲ್ಲಿ ಅನೇಕರನ್ನು ಕಾಡುತ್ತಿದೆ. ನಿರ್ಮಾಪಕರ ಪ್ರಕಾರ ಪೈರಸಿಯಿಂದ ಸಿಕಂದರ್ ಚಿತ್ರಕ್ಕೆ ಕೋಟ್ಯಂತರ ಹಣ ನಷ್ಟವಾಗಿದೆ. ಇದೇ ತರಹದ ನಷ್ಟ ಚಿಕ್ಕ ಚಿಕ್ಕ ಚಿತ್ರವನ್ನು ನಿರ್ಮಾಣ ಮಾಡುವ ನಿರ್ಮಾಪಕರಿಗೆ, ಉದಯೋನ್ಮುಖ ನಟರಿಗಾದರೆ ಏನು ಮಾಡುವುದು? ಈ ಪ್ರಶ್ನೆ ಇಂದು ಪ್ರತಿಯೊಬ್ಬ ಚಿತ್ರೋದ್ಯಮಿಯೂ ಕೇಳಿಕೊಳ್ಳಬೇಕಾಗಿದೆ.
Disclaimer ; ಈ ವರದಿಯಲ್ಲಿ ಉಲ್ಲೇಖಿಸಲಾದ ಬಾಕ್ಸಾಫೀಸ್ ಗಳಿಕೆಯ ಅಂಕಿ ಅಂಶಗಳ ಮಾಹಿತಿಯನ್ನು ಬಾಲಿವುಡ್ ಹಂಗಾಮಾ ವೆಬ್ ಸೈಟ್‌ದಿಂದ ಸಂಗ್ರಹಿಸಲಾಗಿದೆ. ಫಿಲ್ಮಿಬೀಟ್ ಕನ್ನಡ ಈ ಡೇಟಾದ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.


Click it and Unblock the Notifications











