ನಾನವನಲ್ಲ ; ಧುರಂಧರ್ 2 ಬಿಡುಗಡೆ ಮುನ್ನ ಎಚ್ಚರಿಕೆ ನೀಡಿದ ಆರ್ ಮಾಧವನ್
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಸೋಶಿಯಲ್ ಮೀಡಿಯಾ ಚಿತ್ರರಂಗದ ಧ್ರುವತಾರೆಯರಿಗೆ ವರದಾನವೂ ಹೌದು. ಶಾಪವೂ ಹೌದು. ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಹಲವರು ಈ ತಾಣಕ್ಕೇನೋ ಬಂದಿದ್ದಾರೆ. ಆದರೆ.. ಇದೇ ವೇಳೆ ಹಲವರು ತಮ್ಮ ಇಷ್ಟದ ಸ್ಟಾರ್ ಕೇವಲ 'ಒನ್ ಕ್ಲಿಕ್ ಅವೇ' ಇದ್ದಾರೆ ಎಂದು ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
ಮಾನಸಿಕ, ಲೈಂ*ಗಿಕ ಕಿರುಕುಳ ನೀಡುವುದು ಮಾತ್ರವಲ್ಲದೇ ಸ್ಟಾರ್ ಗಳ ಸಲುಗೆಯನ್ನೇ ಬಂಡವಾಳ ಮಾಡಿಕೊಂಡು ಜನಸಾಮಾನ್ಯರನ್ನು ತಮ್ಮ ಖೆಡ್ಡಾಗೆ ಬೀಳಿಸುತ್ತಿದ್ದಾರೆ. ಯಾಮಾರಿದರೆ ಸ್ಟಾರ್ ಸಮೇತ ಜನಸಾಮಾನ್ಯರಿಗೆ ಕೂಡ ಪಂಗನಾಮ ಹಾಕುತ್ತಿದ್ದಾರೆ. ಸೆಲೆಬ್ರಿಟಿಗಳ ಅಸಲಿ ಫೋಟೋಗಳನ್ನು ಬಳಸಿ ನಕಲಿ ಖಾತೆ ತೆರೆದು ಅಸಲಿಯಂತೆ ಬಿಂಬಿಸುತ್ತಾರೆ. ಸಿನಿಮಾ ಹೆಸರಿನಲ್ಲಿ ಇಲ್ಲ ಸಲ್ಲದ ಆಸೆ ತೋರಿಸುತ್ತಾರೆ, ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಈ ಡಿಜಿಟಲ್ ಮಾಯಾಜಾಲಕ್ಕೆ ಆರ್.ಮಾಧವನ್ ಕೂಡ ಈಗ ಬಲಿಯಾಗಿದ್ದಾರೆ.

ಹೌದು, ಇನ್ನೇನು.. ಕೇವಲ ಕೆಲವೇ ದಿನ. ''ಧುರಂಧರ್ 2'' ಬಿಡುಗಡೆಯಾಗಲಿದೆ. ಅಜಯ್ ಸಾನ್ಯಾಲ್ ಪಾತ್ರದಲ್ಲಿ ಮಾಧವನ್ ಈ ಚಿತ್ರದಲ್ಲಿ ಮಿಂಚಿದ್ದು ಮೊದಲ ಭಾಗಕ್ಕಿಂತ ಎರಡನೇ ಭಾಗದಲ್ಲಿ ಮಾಧವನ್ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎನ್ನುವ ಮಾತು ಇದೆ.ಮಾಧವನ್ ಅವರ ಅಭಿಮಾನಿಗಳಿಗೆ ಮತ್ತು ಚಿತ್ರ ರಸಿಕರಿಗೆ ಆ ನಿರೀಕ್ಷೆಯೂ ಇದೆ.
ಹೀಗಿರುವಾಗ '' ಧುರಂಧರ್ 2'' ಅಲೆಯನ್ನೇ ವ್ಯಕ್ತಿಯೊಬ್ಬ ಬಹುಶಃ ಬಂಡವಾಳವನ್ನಾಗಿಸಿಕೊಳ್ಳುವ ಪ್ರಯತ್ನವನ್ನು ಮಾಡಿದಂತೆ ಇದ್ದು, ಆರ್.ಮಾಧವನ್ ಅವರ ಫೋಟೊ ಬಳಸಿಕೊಂಡು ನಕಲಿ ಖಾತೆಯನ್ನು ತೆರೆದಿದ್ದಾನೆ. ಈ ಮೂಲಕ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾನೆ.
ತಮ್ಮ ಭಾವಚಿತ್ರ ದುರ್ಬಳಕೆಯಾಗುತ್ತಿರುವ ವಿಚಾರ ಸದ್ಯ ಆರ್ ಮಾಧವನ್ ಅವರ ಗಮನಕ್ಕೂ ಕೂಡ ಬಂದಿದ್ದು, ಮಾಧವನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದಾರೆ.
ಈ ವ್ಯಕ್ತಿಗೂ ನನಗೂ ಅಥವಾ ನಮ್ಮ ತಂಡಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ಆರ್ ಮಾಧವನ್ ಈ ವ್ಯಕ್ತಿ ನನ್ನ ಅಥವಾ ನನ್ನ ತಂಡದ ಪರವಾಗಿ ಮಾತನಾಡುತ್ತಿಲ್ಲ. ಇನ್‌ಸ್ಟಾಗ್ರಾಮ್ ಅಥವಾ ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ನನ್ನ ಪರವಾಗಿ ಮಾತನಾಡಲು ಬೇರೆ ಯಾವುದೇ ಖಾತೆಗಳಿಲ್ಲ. ದಯವಿಟ್ಟು ಇಂತಹ ಖಾತೆಗಳ ಬಗ್ಗೆ ಜಾಗರೂಕರಾಗಿರಿ" ಎಂದು ಬರೆದುಕೊಂಡಿದ್ದಾರೆ.

ತಮ್ಮ ಫೋಟೊ ಬಳಸಿಕೊಂಡು ವಂಚನೆಯ ಜಾಲ ಬೀಸುವ ಪ್ರಯತ್ನ ಮಾಡುತ್ತಿರುವ ವ್ಯಕ್ತಿಯ ಅಕೌಂಟ್‌ನ ಸ್ಕ್ರೀನ್‌ಶಾಟ್ ಕೂಡ ಹಂಚಿಕೊಂಡಿರುವ ಮಾಧವನ್, "ಫ್ರಾಡ್ ಅಲರ್ಟ್" ಎಂದು ಕೂಡ ಬರೆದಿದ್ದಾರೆ. ವಂಚನೆಗಳಿಗೆ ಬಲಿಯಾಗಬೇಡಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಕ್ರಮ ಕೈಗೊಳ್ಳಲಾಗುವುದು ಎಂದು ವ್ಯಕ್ತಿಗೆ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.
ಇನ್ನುಳಿದಂತೆ ಸದ್ಯ ಆರ್. ಮಾಧವನ್ ''ಧುರಂಧರ್ 2'' ಚಿತ್ರದ ಬಿಡುಗಡೆಯ ದಿನವನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ. ಈಗಾಗಲೇ ಚಿತ್ರದ ಪೇಯ್ಡ್ ಪ್ರಿವ್ಯೂವ್‌ನ ನಾಲ್ಕು ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಭಾರತದಲ್ಲಿ ಮಾರಾಟವಾಗಿದ್ದು ಮೊದಲ ದಿನ ''ಧುರಂಧರ್ 2'' ದಾಖಲೆ ಬರೆಯುವ ನಿರೀಕ್ಷೆ ಬಾಲಿವುಡ್ ಪಂಡಿತರಿಗಿದೆ. ಬಾಲಿವುಡ್ ಇತಿಹಾಸದಲ್ಲಿಯೇ ''ಧುರಂಧರ್ 2'' ಹೊಸ ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳು ಸದ್ಯ ದಟ್ಟವಾಗಿ ಕಂಡು ಬರುತ್ತಿವೆ.
ಒಟ್ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾರನ್ನೇ ಫಾಲೋ ಮಾಡುವ ಮೊದಲು ಅವರ ಖಾತೆಯಲ್ಲಿ 'ಬ್ಲೂ ಟಿಕ್' ಇದೆಯಾ, ಇಲ್ವಾ ಎನ್ನುವುದನ್ನು ಅಭಿಮಾನಿಗಳು ನೋಡುವುದು ಉತ್ತಮ. ಯಾಕೆಂದರೆ.. ಸೆಲೆಬ್ರಿಟಿಗಳ ಹೆಸರಿನಲ್ಲಿ ವಂಚಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾಧವನ್ ಹೆಸರಿನಲ್ಲಿ ನಕಲಿ ಖಾತೆ ತೆರೆದ ಈ ವ್ಯಕ್ತಿಯ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











