'ಛಾವ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟನೆ ಚೆನ್ನಾಗಿಲ್ವಾ? ಆಕೆ ಬಗ್ಗೆ ನಿಮಗೇನು ಗೊತ್ತು?
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಛಾವ' ಚಿತ್ರ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ದಕ್ಷಿಣದ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡುವಂತೆ ಕೆಲವರು ಕೇಳುತ್ತಿದ್ದಾರೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಸಿನಿಮಾ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುತ್ತಿದೆ. ವಿಕ್ಕಿ ನಟನೆ ಬಗ್ಗೆ ಮುಖ್ಯವಾಗಿ ಕ್ಲೈಮ್ಯಾಕ್ಸ್ ನೋಡಿದವರು ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೊದಲ ವಾರವೇ 'ಛಾವ' ಸಿನಿಮಾ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಮರಾಠ ಸಾಮ್ರಾಜ್ಯದ ಛತ್ರಪತಿ ಶಿವಾಜಿ ಪುತ್ರ ಸಾಂಬಾಜಿ ಜೀವವನ್ನಾಧರಿಸಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸಾಂಬಾಜಿ ಪತ್ನಿ ಯೇಸುಬಾಯಿ ಪಾತ್ರದಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ ಆಕೆಗೆ ಮತ್ತೊಂದು ಸೂಪರ್ ಹಿಟ್ ಸಿಕ್ಕಂತಾಗಿದೆ.

ದಕ್ಷಿಣದ ನಟಿ ಆಗಿರುವುದರಿಂದ ರಶ್ಮಿಕಾ ಮಾತಿನ ಶೈಲಿ ಯೇಸುಬಾಯಿ ಪಾತ್ರಕ್ಕೆ ಹೊಂದಿಕೆ ಆಗುತ್ತಿಲ್ಲ. ನಟನೆಯ ವಿಚಾರದಲ್ಲೂ ಉತ್ತರದ ನಟಿಯಾಗಿದ್ದರೆ ಇನ್ನು ಚೆನ್ನಾಗಿ ಇರುತ್ತಿತ್ತು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಐತಿಹಾಸಿಕ ಕಥೆ ಆಧರಿಸಿದ ಸಿನಿಮಾ ಆಗಿರುವುದರಿಂದ ಆಯಾ ಪಾತ್ರಕ್ಕೆ ತಕ್ಕ ಕಲಾವಿದರು ಇರಬೇಕಿತ್ತು. ರಶ್ಮಿಕಾ ಕ್ರೇಜ್ ನೋಡಿ ಆಯ್ಕೆ ಮಾಡಿಬಿಟ್ರಾ? ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.
ಸದ್ಯ 'ಛಾವ' ಚಿತ್ರದಲ್ಲಿ ರಶ್ಮಿಕಾ ನಟನೆ ಬಗ್ಗೆ ಟೀಕೆ ಮಾಡಿದವರಿಗೆ ಸಹನಟಿ ತಿರುಗೇಟು ನೀಡಿದ್ದಾರೆ. ಚಿತ್ರದಲ್ಲಿ ಶಿವಾಜಿಯ 2ನೇ ಪತ್ನಿ ಸೋಯಾರಾಬಾಯಿ ಪಾತ್ರದಲ್ಲಿ ನಟಿ ದಿವ್ಯಾ ದತ್ತಾ ನಟಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಆಕೆ ರಶ್ಮಿಕಾ ನಟನೆಯನ್ನು ಟ್ರೋಲ್ ಮಾಡುವವರ ಬಗ್ಗೆ ಮಾತನಾಡಿದ್ದಾರೆ. ಚಿತ್ರದಲ್ಲಿ ನಾನು, ರಶ್ಮಿಕಾ ಒಟ್ಟಿಗೆ ಯಾವುದೇ ದೃಶ್ಯದಲ್ಲಿ ನಟಿಸಿಲ್ಲ, ಆದರೆ ಆಕೆ ಅದ್ಭುತ ನಟಿ ಎಂದಿದ್ದಾರೆ.
"ಕೆಲ ದೃಶ್ಯಗಳಲ್ಲಿ ರಶ್ಮಿಕಾ ಕಣ್ಣುಗಳಲ್ಲೇ ನಟಿಸಿರೋ ಪರಿ ಅದ್ಭುತ, ಆಕೆಯ ಕಣ್ಣುಗಳೇ ಮೋಡಿ ಮಾಡುವಂತಿದೆ. ರಶ್ಮಿಕಾ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿರುವುದನ್ನು ಮರೆಯಬಾರದು. ಅದರಲ್ಲೇ ಆಕೆ ಪ್ರೇಕ್ಷಕರ ಮನಗೆದ್ದಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಆಕೆ ಬಹಳ ಶ್ರಮಪಡುತ್ತಾರೆ. ಬೇರೆಯರು ಏನಾದರೂ ಹೇಳಲಿ, ನಿಜಕ್ಕೂ ಒಳ್ಳೆ ವ್ಯಕ್ತಿ. ಆಕೆ ಅಂದರೆ ನನಗಿಷ್ಟ" ಎಂದು ದಿವ್ಯಾ ಹೇಳಿದ್ದಾರೆ.

ಮಾತು ಮುಂದುವರೆಸಿರುವ ದಿವ್ಯಾ ದತ್ತಾ, "ಪ್ರತಿಯೊಬ್ಬರಿಗೂ ಭಿನ್ನ ಅಭಿಪ್ರಾಯವಿರುತ್ತದೆ. ನಿಮಗೆ ಸುದೀರ್ಘ ಪಾತ್ರವಿದೆ, ಅಥವಾ ನಿಮಗೆ ಒಳ್ಳೆ ಸ್ಕ್ರೀನ್ ಪ್ರಸೆನ್ಸ್ ಎನ್ನಬಹುದು ಅದಕ್ಕೆ ಏನು ಮಾಡಲು ಸಾಧ್ಯವಿಲ್ಲ. ಆದರೆ ನಾನು ಹಾಗೂ ರಶ್ಮಿಕಾ ನಮ್ಮ ಬೆಸ್ಟ್ ನೀಡಿದ್ದೇವೆ. ಉಳಿದವರು ಅವರವರ ಪಾತ್ರ ಮಾಡಿದ್ದಾರೆ. ಈಗ ಪ್ರೇಕ್ಷಕರು ಅವರ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ಸಿನಿಮಾ ಗೆದ್ದಿದೆ. ಅದನ್ನು ಸಂಭ್ರಮಿಸುತ್ತೇವೆ" ಎಂದು ವಿವರಿಸಿದ್ದಾರೆ.
ರಶ್ಮಿಕಾ ಮುಟ್ಟಿದೆಲ್ಲಾ ಚಿನ್ನ ಎನ್ನುವಂತಾಗಿದೆ. ಈ ಹಿಂದೆ ಬಾಲಿವುಡ್‌ನಲ್ಲಿ 'ಅನಿಮಲ್' ಸಿನಿಮಾ ಮಾಡಿ ಗೆದ್ದಿದ್ದರು. ಈಗ ಐತಿಹಾಸಿಕ 'ಛಾವ' ಚಿತ್ರದಲ್ಲಿ ನಟಿಸಿ ಸುದ್ದಿಯಲ್ಲಿದ್ದಾರೆ. ಮರಾಠ ರಾಜರಲ್ಲಿ ತಂದೆ ಶಿವಾಜಿ ರೀತಿಯಲ್ಲೇ ರಾಜ್ಯವನ್ನು ಕಟ್ಟಿ ಬೆಳೆಸಿದವರು ಸಾಂಬಾಜಿ. ಮೊಘಲರ ದಾಳಿಯನ್ನು ಹಿಮ್ಮೆಟಿಸಲು ಆತನ ಪ್ರಯತ್ನ ದೊಡ್ಡದು. ಅಂತಿಮವಾಗಿ ತನ್ನವರ ಕುತಂತ್ರದಿಂದಲೇ ಸಂಕಷ್ಟಕ್ಕೆ ಸಿಲುಕುವಂತಾಯಿತು.
ಸೆರೆಸಿಕ್ಕ ಸಾಂಬಾಜಿಗೆ ಬಹಳ ಚಿತ್ರಹಿಂಸೆ ಕೊಡಲಾಗಿತ್ತು. 'ಛಾವ' ಚಿತ್ರದಲ್ಲಿ ಆ ದೃಶ್ಯಗಳು ಬಹಳ ನೈಜವಾಗಿ ಮೂಡಿ ಬಂದಿದೆ. ಪ್ರೇಕ್ಷಕರಂತೂ ಆ ದೃಶ್ಯಗಳನ್ನು ನೋಡಿ ಭಾವುಕರಾಗುತ್ತಿದ್ದಾರೆ. ಕೆಲವರು ಕಣ್ಣೀರಾಕುತ್ತಾ ಚಿತ್ರಮಂದಿರದಿಂದ ಹೊರ ಬರುತ್ತಿದ್ದಾರೆ.


Click it and Unblock the Notifications











