ಕನ್ನಡ, ತೆಲುಗು ಬಳಿಕ ಹಿಂದಿಗೆ ಹೊರಟ 'ದೃಶ್ಯಂ 2'
ಮಲಯಾಳಂ ಸೂಪರ್ ಹಿಟ್ ಸಿನಿಮಾ 'ದೃಶ್ಯಂ 2' ಈಗಾಗಲೇ ತೆಲುಗು ಹಾಗೂ ಕನ್ನಡ ಭಾಷೆಗಳಿಗೆ ರೀಮೇಕ್ ಆಗುವುದು ಖಾತ್ರಿಯಾಗಿದೆ. ಇದೀಗ ಹಿಂದಿಗೆ ಸಹ ರೀಮೇಕ್ ಆಗಲಿದೆ.
ತೆಲುಗಿನಲ್ಲಿ ವೆಂಕಟೇಶ್ ಅವರು 'ದೃಶ್ಯಂ 2' ರೀಮೇಕ್‌ನಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಮಲಯಾಳಂನ 'ದೃಶ್ಯಂ 2' ನಿರ್ದೇಶಿಸಿದ್ದ ಜೀತು ಜೋಸೆಫ್ ಅವರೇ ತೆಲುಗಿನಲ್ಲಿಯೂ ನಿರ್ದೇಶನ ಮಾಡಿದ್ದಾರೆ.
ಇನ್ನು ಕನ್ನಡದಲ್ಲಿ ವಾಸು ಅವರು 'ದೃಶ್ಯಂ 2' ಸಿನಿಮಾದ ನಿರ್ದೇಶನ ಮಾಡಲಿದ್ದು, ಮೊದಲ 'ದೃಶ್ಯಂ' ಸಿನಿಮಾದ ಕನ್ನಡ ರೀಮೇಕ್ 'ದೃಶ್ಯ'ದಲ್ಲಿ ನಟಿಸಿದ್ದ ರವಿಚಂದ್ರನ್ ಅವರೇ 'ದೃಶ್ಯಂ 2' ನಲ್ಲಿಯೂ ನಟಿಸಲಿದ್ದಾರೆ.

ಬಾಲಿವುಡ್‌ನ ಪೊನೊರಮಾ ಸ್ಟುಡಿಯೋಸ್ ಅವರು ಮಲಯಾಳಂ 'ದೃಶ್ಯಂ 2' ಸಿನಿಮಾದ ಹಿಂದಿ ರೀಮೇಕ್ ಹಕ್ಕು ಖರೀದಿಸಿದ್ದು, ಅದೇ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಲಿದೆ.
ಈ ಹಿಂದೆ ಮಲಯಾಳಂನ 'ದೃಶ್ಯಂ' ಅನ್ನು ಹಿಂದಿಯಲ್ಲಿ ಅದೇ ಹೆಸರಲ್ಲಿ ರೀಮೇಕ್ ಮಾಡಲಾಗಿತ್ತು. ಆ ಸಿನಿಮಾದಲ್ಲಿ ಅಜಯ್ ದೇವಗನ್, ಶ್ರೆಯಾ ನಟಿಸಿದ್ದರು ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾವನ್ನೂ ಸಹ ಪೊನೊರಮಾ ಸ್ಟುಡಿಯೋಸ್ ನಿರ್ಮಾಣ ಮಾಡಿತ್ತು.
ಈ ಬಗ್ಗೆ ಮಾತನಾಡಿರುವ ಜೀತು ಜೋಸೆಫ್, 'ಪೊನೊರಮಾ ಸ್ಟುಡಿಯೋಸ್ ಅವರು ರೀಮೇಕ್ ಹಕ್ಕು ಪಡೆದುಕೊಂಡಿರುವುದು ಖುಷಿಯ ವಿಚಾರ. ನಮ್ಮ ಸಿನಿಮಾವನ್ನು ಹೆಚ್ಚು ಪ್ರೇಕ್ಷಕರಿಗೆ ತಲುಪಿಸುವ ಕಾರ್ಯವನ್ನು ಅವರು ಯಶಸ್ವಿಯಾಗಿ ಮಾಡುತ್ತಾರೆಂಬ ವಿಶ್ವಾಸವಿದೆ' ಎಂದಿದ್ದಾರೆ.
ಈಗ 'ದೃಶ್ಯಂ 2' ಹಿಂದಿ ರೀಮೇಕ್‌ನಲ್ಲಿ ಸಿನಿಮಾದ ಮೊದಲ ಭಾಗದಲ್ಲಿ ನಟಿಸಿದ್ದ ಅಜಯ್ ದೇವಗನ್, ಶ್ರೆಯಾ ಅವರುಗಳೇ ನಟಿಸಲಿದ್ದಾರೆ ಎನ್ನಲಾಗಿದೆ. ಮೊದಲ ಸಿನಿಮಾದಲ್ಲಿದ್ದ ಅದೇ ಪಾತ್ರಗಳು 'ದೃಶ್ಯಂ 2'ನಲ್ಲೂ ಮುಂದುವರೆಯಲಿದೆ.
2013 ರಲ್ಲಿ ಬಿಡುಗಡೆ ಆಗಿದ್ದ ಮಲಯಾಳಂ ಸಿನಿಮಾ 'ದೃಶ್ಯಂ' ಕನ್ನಡ, ತೆಲುಗು, ತಮಿಳು, ಹಿಂದಿ, ಸಿಂಹಳ, ಚೈನೀಸ್ ಭಾಷೆಗಳಿಗೆ ರೀಮೇಕ್ ಆಗಿತ್ತು. ಇದೀಗ 'ದೃಶ್ಯಂ2' ಸಿನಿಮಾ ಬಿಡುಗಡೆ ಆಗಿದ್ದು ಆ ಸಿನಿಮಾ ಸಹ ಸೂಪರ್ ಹಿಟ್ ಆಗಿದೆ. ಹಾಗಾಗಿ ಅದೂ ಸಹ ಹಲವು ಭಾಷೆಗಳಿಗೆ ರೀಮೇಕ್ ಆಗುತ್ತಿದೆ.
Recommended Video
ಮೂಲ 'ದೃಶ್ಯಂ 2' ಸಿನಿಮಾದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ನಟಿಸಿದ್ದರು. ಜೊತೆಗೆ ಮೀನಾ, ಮುರಳಿ ಗೋಪಿ ಇನ್ನೂ ಹಲವರು ನಟಿಸಿದ್ದಾರೆ. ಜೀತು ಜೋಸೆಫ್ ನಿರ್ದೇಶಿಸಿರುವ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿತ್ತು.


Click it and Unblock the Notifications











