Dunki Boxoffice: ಅಧಿಕೃತವಾಗಿ ಫಸ್ಟ್ ವೀಕೆಂಡ್ ಕಲೆಕ್ಷನ್ ಘೋಷಿಸಿದ 'ಡಂಕಿ' ನಿರ್ಮಾಪಕರು
ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಗುರುವಾರ ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಪೈಪೋಟಿ ಕೊಡುತ್ತಿದ್ದು 'ಡಂಕಿ' ಆರ್ಭಟ ಕಮ್ಮಿ ಆಗಿಲ್ಲ.
ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಕಾಮಿಡಿ ಡ್ರಾಮಾ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮಾನ್ ಇರಾನಿ ನಟಿಸಿದ್ದಾರೆ. ಜಿಯೋ ಸ್ಟುಡಿಯೋಸ್ ಜೊತೆ ಸೇರಿ ಶಾರುಖ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮೊದಲ ದಿನವೇ ಸಿನಿಮಾ ವಿಶ್ವದಾದ್ಯಂತ 58 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು.

ಬಹಳ ಹಿಂದೆಯೇ 'ಡಂಕಿ' ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿತ್ತು. ಆದರೆ ಸೆಪ್ಟೆಂಬರ್ 28ಕ್ಕೆ ಬರಬೇಕಿದ್ದ 'ಸಲಾರ್' ಡಿಸೆಂಬರ್ 22ಕ್ಕೆ ಬಂದಿದ್ದು 'ಡಂಕಿ'ಗೆ ಕೊಂಚ ಹಿನ್ನಡೆಯಾಗಿದ್ದು ಸುಳ್ಳಲ್ಲ. ಎರಡೂ ಚಿತ್ರಗಳಿಗೆ ಪ್ರೇಕ್ಷಕರು ಬಹುಪರಾಕ್ ಎನ್ನುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಕಲೆಕ್ಷನ್ ಚೆನ್ನಾಗಿದೆ. 'ಸಲಾರ್' ಸಿನಿಮಾ ಫಸ್ಟ್ ವೀಕೆಂಡ್‌ನಲ್ಲಿ 400 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಹೇಳಿದೆ.
ಇನ್ನು ಮೊದಲ ದಿನ 58 ಕೋಟಿ ರೂ. ಗಳಿಕೆ ಕಂಡಿದ್ದ 'ಡಂಕಿ' ಸಿನಿಮಾ 2ನೇ ದಿನಕ್ಕೆ 100 ಕೋಟಿ ರೂ. ಗಡಿ ದಾಟಿತ್ತು. 3ನೇ ದಿನಕ್ಕೆ 54 ಕೋಟಿ ಸೇರಿ 157 ಕೋಟಿ ರೂ. ಬಾಚಿತ್ತು. ಇದೀಗ ಮೊದಲ ನಾಲ್ಕು ದಿನಗಳ ಕಲೆಕ್ಷನ್ ಲೆಕ್ಕ ಸಿಕ್ಕಿದೆ. ಫಸ್ಟ್ ವೀಕೆಂಡ್‌ನಲ್ಲಿ 'ಡಂಕಿ' ಸಿನಿಮಾ ಒಟ್ಟು 211 ಕೋಟಿ ರೂ. ದೋಚಿರುವುದಾಗಿ ಶಾರುಖ್ ಒಡೆತನದ ರೆಡ್ ಚಿಲ್ಲೀಸ್ ಸಂಸ್ಥೆಯೇ ಪೋಸ್ಟರ್ ರಿಲೀಸ್ ಮಾಡಿದೆ.
ಒಂದು ಸಿಂಪಲ್ ಕಥೆಯನ್ನು ಬಹಳ ತಮಾಷೆಯಾಗಿ ಅಷ್ಟೇ ಭಾವನಾತ್ಮಕವಾಗಿ ರಾಜ್‌ಕುಮಾರ್ ಹಿರಾನಿ ಹೇಳಿ ಗೆದ್ದಿದ್ದಾರೆ. ಕಿಂಗ್ ಖಾನ್- ಹಿರಾನಿ ಒಟ್ಟಿಗೆ ಕೈಜೋಡಿಸುತ್ತಿದ್ದಾರೆ ಎಂದಾಗಲೇ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿತ್ತು. 'ಡಂಕಿ' ಎನ್ನುವ ವಿಭಿನ್ನ ಟೈಟಲ್ ಕೂಡ ಕುತೂಹಲ ಮೂಡಿಸಿದ್ದು ಸುಳ್ಳಲ್ಲ. 'ಮುನ್ನಾಭಾಯ್' ಸರಣಿ, 'ಪಿಕೆ', 'ಸಂಜು' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ನಿರ್ದೇಶಕರು ಈ ಬಾರಿ ಯಾವ ಕಥೆ ಹೇಳುತ್ತಾರೆ ಎನ್ನುವ ನಿರೀಕ್ಷೆ ಇತ್ತು.
'ಜೀರೊ' ಸಿನಿಮಾ ಸೋಲಿನ ಬಳಿಕ ಸೈಲೆಂಟ್ ಆಗಿದ್ದ ಶಾರುಖ್ ಖಾನ್ ಈ ವರ್ಷ 'ಪಠಾಣ್' ಆಗಿ ಭರ್ಜರಿ ಕಂಬ್ಯಾಕ್ ಮಾಡಿದ್ದರು. ಚಿತ್ರ ಸಾವಿರ ಕೋಟಿ ರೂ. ಕಲೆಕ್ಷನ್ ಗಡಿ ದಾಟಿತ್ತು. ಬಳಿಕ ಬಂದ 'ಜವಾನ್' ಕೂಡ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಈ ಸಿನಿಮಾ ಕೂಡ 1000 ಕೋಟಿ ರೂ. ಕ್ಲಬ್ ಸೇರಿತ್ತು. ಹಾಗಾಗಿ 'ಡಂಕಿ' ಸಿನಿಮಾ ಬಗ್ಗೆ ಸಹಜವಾಗಿಯೇ ಕ್ರೇಜ್ ಹೆಚ್ಚಾಗಿತ್ತು.
ಸುಖಿ(ವಿಕ್ಕಿ ಕೌಶಲ್), ಮನು(ತಾಪ್ಸಿ), ಬಲ್ಲಿ(ಅನಿಲ್ ಗೋವರ್), ಬುಗ್ಗು(ವಿಕ್ರಂ ಕೌಚರ್) ಎನ್ನುವ ನಾಲ್ಕು ಜನ ಸ್ನೇಹಿತರು. 1995ರಲ್ಲಿ ಪಂಜಾಬ್‌ನ ಒಂದು ಹಳ್ಳಿಯಲ್ಲಿ ವಾಸಿಸುತ್ತಿರುತ್ತಾರೆ. ಆರ್ಥಿಕ ಸಮಸ್ಯೆ ಎದುರಿಸುವ ಇವರು ಲಂಡನ್‌ಗೆ ಹೋಗಿ ಹಣ ಸಂಪಾದಿಸುವ ಕನಸು ಕಾಣುತ್ತಾರೆ. ಆದರೆ ಅದಕ್ಕೆ ಬೇಕಾದ ವಿದ್ಯಾರ್ಹತೆ, ಇಂಗ್ಲೀಷ್ ಮಾತನಾಡುವ ಕೌಶಲ್ಯ ಇರುವುದಿಲ್ಲ. ಅಷ್ಟರಲ್ಲಿ ಹರ್ಡಿ ಸಿಂಗ್ ಎನ್ನುವ ಮಾಜಿ ಸೈನಿಕ ಆ ಊರಿಗೆ ಬರ್ತಾನೆ. ಆತ ಇವರನ್ನು ಲಂಡನ್‌ಗೆ ತಲುಪಿಸಲು ಪ್ರಯತ್ನಿಸುತ್ತಾನೆ. ಆದರೆ ಅದು ಲೀಗಲ್ ಆಗಿ ಅಲ್ಲ. ಇಲ್ಲೀಗಲ್ ಆಗಿ. ಅಷ್ಟಕ್ಕೂ ಅವರೆಲ್ಲಾ ವಾಮಮಾರ್ಗ(ಡಂಕಿ)ದಲ್ಲಿ ಲಂಡನ್‌ಗೆ ಹೋದ್ರಾ? ಮುಂದೆ ಏನಾಯ್ತು? ಎನ್ನುವುದೇ ಸಿನಿಮಾ ಕಥೆ.


Click it and Unblock the Notifications











