ರಷ್ಯಾಕ್ಕೆ ನಿರ್ಬಂಧ ಹೇರಿದ ಮನರಂಜನಾ ಕ್ಷೇತ್ರ!
ಉಕ್ರೇನ್‌ನ ಸ್ವಾಯತ್ತತೆಯನ್ನು ಗೌರವಿಸದ ರಷ್ಯಾ ಯುದ್ಧ ಸಾರಿದೆ. ರಷ್ಯಾದ ಆಕ್ರಮಣಶೀಲತೆ, ವಿಸ್ತಾರವಾದಕ್ಕೆ ವಿಶ್ವದಾದ್ಯಂತ ವಿರೋಧ ವ್ಯಕ್ತವಾಗಿದೆ.
ಅಮೆರಿಕ ಸೇರಿದಂತೆ ಹಲವು ದೇಶಗಳು ರಷ್ಯಾದ ವಿರುದ್ಧ ಹಲವು ನಿರ್ಬಂಧಗಳನ್ನು ಹೇರಿದೆ. ಇದೀಗ ಮನರಂಜನಾ ಕ್ಷೇತ್ರವೂ ರಷ್ಯಾದ ವಿರುದ್ಧ ನಿರ್ಬಂಧ ಹೇರಿದ್ದು ವಿಶ್ವದ ಹಲವು ದೊಡ್ಡ ನಿರ್ಮಾಣ ಸಂಸ್ಥೆಗಳು ರಷ್ಯಾದಲ್ಲಿ ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದು ಘೋಷಿಸಿದೆ.
ಸಿನಿಮಾಗಳು ಮಾತ್ರವೇ ಅಲ್ಲ ನೆಟ್‌ಫ್ಲಿಕ್ಸ್ ಸೇರಿದಂತೆ ಹಲವು ಒಟಿಟಿಗಳು ರಷ್ಯಾದಲ್ಲಿ ಸೇವೆ ಸ್ಥಗಿತಗೊಳಿಸಿವೆ ಕೆಲವು ಒಟಿಟಿಗಳು ರಷ್ಯಾದ ಕಂಟೆಂಟ್ ಅನ್ನು ಪ್ರದರ್ಶನ ಮಾಡುತ್ತಿಲ್ಲ.

ಇಂದಷ್ಟೆ ವಿಶ್ವದಾದ್ಯಂತ ಬಿಡುಗಡೆ ಆದ 'ದಿ ಬ್ಯಾಟ್‌ಮ್ಯಾನ್' ಸಿನಿಮಾ ರಷ್ಯಾದಲ್ಲಿ ಬಿಡುಗಡೆ ಆಗಿಲ್ಲ. ವಾರ್ನರ್ ಬ್ರದರ್ಸ್ ನಿರ್ಮಾಣ ಸಂಸ್ಥೆಯು ತಾವು ತಮ್ಮ ಸಿನಿಮಾವನ್ನು ರಷ್ಯಾದಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಘೊಷಿಸಿದೆ. ''ರಷ್ಯಾ-ಉಕ್ರೇನ್ ಬೆಳವಣಿಗೆಯನ್ನು ನಾವು ಗಮನಿಸುತ್ತಿದ್ದೇವೆ. ಈ ಖೇದಕರ ಘಟನೆಗಳು ಆದಷ್ಟು ಬೇಗ ಮುಗಿಯಲಿ ಎಂದು ಇಚ್ಛಿಸುತ್ತೇವೆ. ಅಲ್ಲಿಯವರೆಗೆ ನಾವು ಕಾಯುತ್ತೇವೆ'' ಎಂದು ಹೇಳಿಕೆ ಬಿಡುಗಡೆ ಮಾಡಿದೆ ವಾರ್ನರ್ ಬ್ರದರ್ಸ್.
ಮಾರ್ಚ್ 10 ಕ್ಕೆ ರಷ್ಯಾದ ಮಾಸ್ಕೊದಲ್ಲಿ 'ಟರ್ನಿಂಗ್ ರೆಡ್' ಸಿನಿಮಾದ ಪ್ರೀಮಿಯರ್ ಶೋ ಇತ್ತು. ಆ ಶೋ ಅನ್ನು ಸಿನಿಮಾದ ನಿರ್ಮಾಣ ಸಂಸ್ಥೆ ವಾಲ್ಟ್ ಡಿಸ್ನಿ ರದ್ದು ಮಾಡಿದೆ. ಸಿನಿಮಾವನ್ನು ರಷ್ಯಾದಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ವಾಲ್ಟ್ ಡಿಸ್ನಿ ಹೇಳಿದೆ.
ಜನಪ್ರಿಯ ನಿರ್ಮಾಣ ಸಂಸ್ಥೆ ಸೋನಿ ಸಹ ತಮ್ಮ ಸಿನಿಮಾ 'ಮೋಬಿಯಸ್' ಅನ್ನು ರಷ್ಯಾದಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದಿದೆ. ಮಾರ್ವೆಲ್ ಸಹ ತನ್ನ ಇತ್ತೀಚಿನ ಸಿನಿಮಾ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಪ್ರದರ್ಶನವನ್ನು ರಷ್ಯಾದಲ್ಲಿ ನಿಲ್ಲಿಸಿದೆ.
ಇವುಗಳು ಮಾತ್ರವೇ ಅಲ್ಲದೆ, 'ದಿ ಲಾಸ್ಟ್ ಸಿಟಿ', 'ಸಾನಿಕ್ ದಿ ಹೆಡ್ಜ್ ಹಾಗ್ 2', 'ಆಂಬುಲೆನ್ಸ್', 'ದಿ ಬ್ಯಾಡ್ ಗೈಸ್' ಇನ್ನೂ ಹಲವು ಸಿನಿಮಾಗಳು ರಷ್ಯಾದಲ್ಲಿ ಬಿಡುಗಡೆ ಆಗುತ್ತಿಲ್ಲ. ರಷ್ಯಾ ಯುದ್ಧವನ್ನು ನಿಲ್ಲಿಸುವವರೆಗೆ ಸಿನಿಮಾ ಪ್ರದರ್ಶನ ಮಾಡುವುದಿಲ್ಲ ಎಂದು ನಿರ್ಮಾಣ ಸಂಸ್ಥೆಗಳು ಘೋಷಿಸಿವೆ.
ಕ್ಯಾನನ್ ಸಿನಿಮೋತ್ಸವವು ರಷ್ಯಾದ ಸಿನಿಮಾಗಳಿಗೆ ನಿರ್ಬಂಧ ಹೇರಿದೆ. ಯುದ್ಧ ನಿಲ್ಲಿಸಿದೇ ಇದ್ದರೆ ರಷ್ಯಾದ ಸಿನಿಮಾಗಳ ಪ್ರದರ್ಶನ ಮಾಡುವುದಿಲ್ಲ ಎಂದು ಕ್ಯಾನನ್ ಸ್ಪಷ್ಟಪಡಿಸಿದೆ. ಆದರೆ ಮತ್ತೊಂದು ಪ್ರತಿಷ್ಟಿತ ಸಿನಿಮೋತ್ಸವ ವೆನ್ನಿಸ್ ಫಿಲಂ ಫೆಸ್ಟಿವಲ್ ರಷ್ಯಾದ ಸಿನಿಮಾ ಅಥವಾ ರಷ್ಯಾ ಸಿನಿಮಾ ಕರ್ಮಿಗಳಿಗೆ ನಿಷೇಧ ಹೇರುತ್ತಿಲ್ಲ.
ಇನ್ನು ಒಟಿಟಿ ನೆಟ್‌ಫ್ಲಿಕ್ಸ್ ಸಹ ರಷ್ಯಾವು ಉಕ್ರೇನ್ ಮೇಲೆ ಮಾಡುತ್ತಿರುವ ಯುದ್ಧಕ್ಕೆ ಪ್ರತಿಭಟನಾರ್ತವಾಗಿ ರಷ್ಯಾದ ಕಂಟೆಂಟ್ ಅನ್ನು ತನ್ನ ವೀಕ್ಷಕರಿಗೆ ಪ್ರದರ್ಶಿಸುತ್ತಿಲ್ಲ. ಅಲ್ಲದೆ ರಷ್ಯಾದಲ್ಲಿ ನೆಟ್‌ಫ್ಲಿಕ್ಸ್ ತನ್ನೆಲ್ಲ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಹಾಗೂ ರಷ್ಯಾದ ಸ್ಥಳೀಯ ಕಂಟೆಂಟ್ ಅನ್ನು ತೋರಿಸುವುದನ್ನು ಸಹ ಬಂದ್ ಮಾಡಿದೆ. ನೆಟ್‌ಫ್ಲಿಕ್ಸ್ ಮಾತ್ರವೇ ಅಲ್ಲದೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಹಾಗೂ ಇತರ ಕೆಲವು ಒಟಿಟಿಗಳು ಸಹ ರಷ್ಯಾ ಮೇಲೆ ನಿರ್ಬಂಧ ಹೇರಿವೆ.


Click it and Unblock the Notifications











