ನವರಾತ್ರಿಗೆ ಅಶ್ಲೀಲ ಜಾಹೀರಾತು ಪ್ರಸಾರ: ತೀವ್ರ ವಿರೋಧದ ಬಳಿಕ ಕ್ಷಮೆಯಾಚಿಸಿದ 'ಎರೋಸ್ ನೌ'
ನವರಾತ್ರಿ ಹಬ್ಬದ ಪ್ರಯುಕ್ತ ಪ್ರಸಾರ ಮಾಡಿರುವ ಅಶ್ಲೀಲ ಜಾಹೀರಾತುಗಳ ವಿರುದ್ಧ ಭಾರಿ ವಿರೋಧ ವ್ಯಕ್ತವಾದ ಬಳಿಕ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಎರೋಸ್ ನೌ ಕ್ಷಮೆಯಾಚಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಸಂಸ್ಥೆಯನ್ನು ಬ್ಯಾನ್ ಮಾಡಬೇಕೆಂದು ಅನೇಕರು ಒತ್ತಾಯ ಮಾಡಿದ್ದರು.
ನವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ದೇಶದ ಅತೀ ದೊಡ್ಡ ಮತ್ತು ತುಂಬಾ ಹಳೆಯ ಮನರಂಜನಾ ಸಂಸ್ಥೆಯಾಗಿರುವ ಎರೋಸ್ ನೌ ಅಶ್ಲೀಲ ಜಾಹೀರಾತುಗಳನ್ನು ಪ್ರಸಾರ ಮಾಡಿ ಜನರಕೆಂಗಣ್ಣಿಗೆ ಗುರಿಯಾಗಿದೆ. ಹಬ್ಬದ ಸಮಯದಲ್ಲಿ ಇಂಥ ಜಾಹೀರಾತು ಪ್ರಸಾರ ಮಾಡಿರುವುದರ ವಿರುದ್ಧ ಬಾಲಿವುಡ್ ನಟಿ ಕಂಗನಾ ರಣಾವತ್ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು.
ಇದೀಗ ಎರೋಸ್ ನೌ ಪ್ರಕಟ ಮಾಡಿರುವ ಜಾಹೀರಾತುಗಳನ್ನು ಡಿಲೀಟ್ ಮಾಡಿ, ಜನರ ಭಾವನೆಗಳನ್ನು ಕೆರಳಿಸಿದ್ದಕ್ಕಾಗಿ ಕ್ಷಮೆಯಾಚಿಸುತ್ತಿರುವುದಾಗಿ ಹೇಳಿದೆ. "ಎರೋಸ್ ಸಂಸ್ಥೆ ಸಂಸ್ಕೃತಿಗಳನ್ನು ಸಮಾನವಾಗಿ ಗೌರವಿಸುತ್ತೇನೆ ಮತ್ತು ಪ್ರೀತಿಸುತ್ತೇವೆ. ಮತ್ತು ಯಾರ ಭಾವನೆಗಳನ್ನೂ ನೋಯಿಸುವುದುನಮ್ಮ ಉದ್ದೇಶವಾಗಿರಲಿಲ್ಲ. ನಾವು ಎಲ್ಲಾ ಪೋಸ್ಟ್ ಗಳನ್ನು ಡಿಲೀಟ್ ಮಾಡಿದ್ದೇವೆ. ಮತ್ತು ಯಾರೋಬ್ಬರ ಭಾವನೆಗಳನ್ನು ಕೆರಳಿಸಿದ್ದಕ್ಕಾಗಿ ಕ್ಷಮೆಯಾಚಿಸುತ್ತೇವೆ" ಎಂದು ಹೇಳಿದೆ.

ಎರೋಸ್ ನೌ ಸಂಸ್ಥೆ ನವರಾತ್ರಿ ಹಬ್ಬಕ್ಕೆ ಬಾಲಿವುಡ್ ಸ್ಟಾರ್ ಕಲಾವಿದರು ಇರುವ ಕೆಲವು ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದೆ. ಕರೀನಾ ಕಪೂರ್, ರಣ್ವೀರ್ ಸಿಂಗ್, ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಈ ಪೋಸ್ಟರ್ ನಲ್ಲಿದ್ದಾರೆ. ದ್ವಂದ್ವಾರ್ಥ ಬರುವಂತಹಾ ಹೇಳಿಕೆಗಳನ್ನು ಪೋಸ್ಟರ್ ನಲ್ಲಿ ಮುದ್ರಿಸಿದೆ. ಈ ಪೋಸ್ಟರ್ ಗಳನ್ನು ಶೇರ್ ಮಾಡುತ್ತಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.

ಎರೋಸ್ ನೌ ನಡೆಗೆ ನಟಿ ಕಂಗನಾ ರಣೌತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಿನಿಮಾ ಎಂಬುದು ಸಮುದಾಯವನ್ನು ಹತ್ತಿರ ತರಬೇಕು, ಆದರೆ ಕಲೆ ಹೆಸರಲ್ಲಿ ಅಶ್ಲೀಲತೆ ಹರಡಬಾರದು, ಅಶ್ಲೀಲತೆ ವಿಜೃಂಭಿಸುವ ಈ ರೀತಿಯ ಸಂಸ್ಥೆಗಳು ಪಾರ್ನ್ ಹಬ್ ನಂತೆ ಎಂದಿದ್ದರು ಕಂಗನಾ.


Click it and Unblock the Notifications











