ನಂಬಿಕೆ ದ್ರೋಹ, ಪರಸ್ತ್ರೀ ವ್ಯಾಮೋಹ ; ಸ್ಮ್ರತಿ ಮಂಧಾನ ಬೆನ್ನಿಗೆ ಚೂರಿ ? ಬಯಲಾಯ್ತು ಸಂಗೀತ ನಿರ್ದೇಶಕನ ರಹಸ್ಯ
ಪ್ರೀತಿ ಎನ್ನುವ ಈ ಎರಡಕ್ಷರ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ಅನೇಕರಿಗೆ ಜೀವನ ನೀಡಿದೆ. ಇನ್ನೂ ಹಲವರ ಜೀವನ ಕಸಿದುಕೊಂಡಿದೆ. ಖುಷಿ, ನೋವು, ಸ್ವಾರ್ಥ, ಜಗಳ, ನಗು, ಮಾತು, ಮೌನ, ಆಸೆ, ಅಭಿಲಾಸೆ, ವಿರಹ, ಹೀಗೆ ಎಲ್ಲವೂ ಕೂಡ ಪ್ರೀತಿ ಹುಟ್ಟಿದ ದಿನವೇ ಚಿಗುರೊಡೆದು ಮರವಾಗಿ ಬೆಳೆಯುತ್ತದೆ. ಆದರೆ, ಈಗೀಗ ಈ ಪ್ರೀತಿಯ ಅರ್ಥ ಬದಲಾಗಿದೆ. ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ.
ಒಬ್ಬರ ಜೊತೆ ಪ್ರೀತಿಯಲ್ಲಿದ್ದರೂ ಮತ್ತೊಬ್ಬರ ಸಾಂಗತ್ಯ ಬಯಸುವವರ ಸಂಖ್ಯೆ ಹೆಚ್ಚಾಗಿದೆ. ಒಂದಿಲ್ಲೊಂದು ರೀತಿಯಲ್ಲಿ ಸಂಗಾತಿಗೆ ಮೋಸ ಮಾಡುವವರ ಸಂತತಿ ಕೂಡ ಹೆಚ್ಚಾಗಿದೆ. ಈ ಸಾಲಿನಲ್ಲಿ ಆರ್ ಸಿಬಿ ಕ್ಯಾಪ್ಟನ್ ಮತ್ತು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಪ್ಲೇಯರ್ ಸ್ಮ್ರತಿ ಮಂಧಾನ ಅವರ ಕೈ ಹಿಡಿಯಬೇಕಿದ್ದ ಬಾಲಿವುಡ್‌ನ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಇದ್ದಾರಾ..? ಗೊತ್ತಿಲ್ಲ.

ಆದರೆ.. ಸದ್ಯ ಪಲಾಶ್ ಮುಚ್ಚಲ್ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಸ್ಮ್ರತಿ ಜೊತೆ ಮದುವೆ ನಿಶ್ಚಯವಾಗಿದ್ದರೂ ಬೇರೆ ಮಹಿಳೆಯ ಜೊತೆ ಪಲಾಶ್ ಮುಚ್ಚಲ್ ಮಾಡಿದ್ದಾರೆ ಎನ್ನಲಾದ ಚಾಟ್‌ನ ಸ್ಕ್ರೀನ್‌ಶಾಟ್ ವೈರಲ್ ಆಗಿದೆ.
ಹೌದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮೊನ್ನೆ ನವೆಂಬರ್ 23ರಂದು ಪಲಾಶ್ ಮುಚ್ಚಲ್ ಜೊತೆ ಸ್ಮೃತಿ ಮಂಧಾನ ಸಪ್ತಪದಿ ತುಳಿಯಬೇಕಿತ್ತು. ಆದರೆ.. ಇದೇ ಸಮಯದಲ್ಲಿ ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಅವರಿಗೆ ಹೃದಯಾಘಾತವಾಯ್ತು. ಸಂಭ್ರಮದ ಮನೆಯಲ್ಲಿ ದುಗುಡ-ದುಮ್ಮಾನದ ವಾತಾವರಣ ನಿರ್ಮಾಣವಾಯ್ತು. ಮದುವೆಯನ್ನು ಮುಂದೂಡಲಾಯ್ತು.
ಇಷ್ಟೇ ಆಗಿದ್ದರೆ ಸದ್ಯ ಸ್ಮೃತಿ ಮಂಧಾನ ಮದುವೆ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರಲಿಲ್ಲ. ಆದರೆ.. ಮದುವೆ ಮುಂದೂಡಿದ ಬೆನ್ನಲ್ಲೇ ತಮ್ಮ ಮದುವೆಯ ಸಂಭ್ರಮಾಚರಣೆಯ ಫೋಟೊ ಮತ್ತು ವಿಡಿಯೋಗಳನ್ನು ಸ್ಮೃತಿ ಮಂಧಾನ ಏಕಾಏಕಿ ಡಿಲೀಟ್ ಮಾಡಿದರು.
ನಿಜಾ.. ಪಲಾಶ್ ಜೊತೆ ಈ ಹಿಂದೆ ತೆಗೆಸಿಕೊಂಡಿದ್ದ ಫೋಟೊಗಳು ಇನ್ನು ಸ್ಮೃತಿ ಮಂಧಾನ ಅವರ ಖಾತೆಯಲ್ಲಿವೆ. ಆದರೆ, ನಿಶ್ಚಿತಾರ್ಥದ ವಿಡಿಯೋ... ಫೋಟೊ.. ಮದುವೆ ಸಮಾರಂಭದ ಚಿತ್ರಣ.. ಎಲ್ಲವನ್ನೂ ಸ್ಮೃತಿ ತೆಗೆದು ಹಾಕಿದ್ದಾರೆ. ಇಷ್ಟೇ ಅಲ್ಲ ಶ್ರೇಯಾಂಕ ಪಾಟೀಲ್, ಜೆಮಿಯಾ, ಸೇರಿ ಸ್ಮೃತಿ ಮಂಧಾನ ಮದುವೆ ಸಂಭ್ರಮದಲ್ಲಿ ಭಾಗವಹಿಸಿದ್ದ ಬೇರೆ ಆಟಗಾರ್ತಿಯರು ಕೂಡ ತಮ್ಮ ಖಾತೆಗಳಿಂದ ಫೋಟೊ ಮತ್ತು ವಿಡಿಯೋ ಡಿಲೀಟ್ ಮಾಡಿದ್ದಾರೆ.

ಸ್ಮೃತಿ ಮಂಧಾನ ಮತ್ತು ಬೇರೆ ಆಟಗಾರ್ತಿಯರ ಈ ನಡೆ ಸದ್ಯ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ. ಇದರ ನಡುವೆ ಪಲಾಶ್ ಮುಚ್ಚಲ್ ನಿಜಕ್ಕೂ ಸ್ಮೃತಿ ಮಂಧಾನ ಅವರನ್ನು ಪ್ರೀತಿ ಮಾಡುತ್ತಾರಾ ? ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಯಾಕೆಂದರೆ.. ಅಚ್ಚರಿಯ ಬೆಳವಣಿಗೆಯಲ್ಲಿ ಮೇರಿ ಡಿಕೋಸ್ಟಾ ಎಂಬ ಮಹಿಳೆ ಪಲಾಶ್ ಮುಚ್ಚಲ್ ಜಾತಕ ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪಲಾಶ್ ಮುಚ್ಚಲ್ ತಮ್ಮ ಜೊತೆ ಆಡಿದ ಮಾತುಕತೆಯ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ಧಾರೆ.
ಹಂಚಿಕೊಳ್ಳಲಾದ ಈ ಸ್ಕ್ರೀನ್ ಶಾಟ್‌ನಲ್ಲಿ ಉಲ್ಲೇಖವಾದಂತೆ ಮೇರಿ ಡಿಕೋಸ್ಟಾ ಅವರನ್ನು ಪಲಾಶ್ ಈಜಾಡಲು ಬರುವಂತೆ ಮೆಸೇಜ್ ಮಾಡಿದ್ದಾರೆ. ಇಷ್ಟೇ ಅಲ್ಲ ಸ್ಪಾಗೆ ಜೊತೆಯಲ್ಲಿ ಹೋಗೋಣ ಎಂದು ಹೇಳಿರುವ ಪಲಾಶ್ ಬೆಳಿಗ್ಗೆ 5ಕ್ಕೆ ಮೇರಿ ಡಿಕೋಸ್ಟಾ ಅವರನ್ನು ವರ್ಸೋವಾ ಬೀಚ್‌ಗೆ ಕರೆದಿದ್ದಾರೆ.

ಇನ್ನೂ ಇದೇ ಸಮಯದಲ್ಲಿ ಸ್ಮೃತಿ ಮಂಧಾನ ಅವರ ಜೊತೆಗಿನ ಲಾಂಗ್ ಡಿಸ್ಟೆನ್ಸ್ ಸಂಬಂಧದ ಕುರಿತು ಮೇರಿ ಡಿಕೋಸ್ಟಾ ಪ್ರಶ್ನೆ ಮಾಡಿದ್ದಾರೆ. ಆಗ ಪಲಾಶ್ ನುಣುಚಿಕೊಂಡಿದ್ದಾರೆ. ಪ್ರವಾಸದಲ್ಲಿ ಸ್ಮೃತಿ ಜೊತೆ ಇರುವುದಾಗಿ ಹೇಳಿದ್ದಾರೆ. ಮೇರಿ ಡಿಕೋಸ್ಟಾ ಸೌಂದರ್ಯವನ್ನು ಹಾಡಿಹೊಗಳಿದ್ದಾರೆ. ಒಂದರ್ಥದಲ್ಲಿ ಫ್ಲರ್ಟ್ ಮಾಡುವ ರೀತಿಯಲ್ಲಿ ಪಲಾಶ್ ಇಲ್ಲಿ ಚಾಟ್ ಮಾಡಿದ್ದಾರೆ.
''ಫಿಲ್ಮಿಬೀಟ್ ಕನ್ನಡ'' ಈ ವೈರಲ್ ಸ್ಕ್ರೀನ್ ಶಾಟ್ ಮತ್ತು ಚಾಟ್‌ನ ಸತ್ಯಾಸತ್ಯತೆ ಪರಿಶೀಲಿಸಲು ಸಾಧ್ಯ ಇಲ್ಲವಾದರೂ ಸದ್ಯ ಈ ಸ್ಕ್ರೀನ್ ಶಾಟ್ ವೈರಲ್ ಆಗಿದೆ. ಮದುವೆ ಮುರಿದು ಬಿದ್ದಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಪಲಾಶ್ ಮುಚ್ಚಲ್ ಬಂಡವಾಳ ಗೊತ್ತಾದ ಹಿನ್ನೆಲೆ ಸ್ಮೃತಿ ಮಂಧಾನ ತಮ್ಮ ಮದುವೆ ಸಂಭ್ರಮದ ಫೋಟೊಗಳನ್ನು ಡಿಲೀಟ್ ಮಾಡಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪಲಾಶ್ ಮುಚ್ಚಲ್ ಆಗಲಿ ಸ್ಮ್ರತಿ ಮಂಧಾನ ಅವರಾಗಲಿ ಅಥವಾ ಪಲಾಶ್ ಅವರ ಅಕ್ಕ ಗಾಯಕಿ ಪಲಕ್ ಮುಚ್ಚಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನೀಡುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











