ಅತ್ಯಂತ ಭಯಾನಕ: ವೈರಲ್ ಲಿಫ್ಟ್ ವಿಡಿಯೋ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ನಟಿ ರಶ್ಮಿಕಾ ಮಂದಣ್ಣ
ಸದ್ಯ ಭಾರಿ ಚರ್ಚೆಯಲ್ಲಿರುವ ವಿಷಯ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವೀಡಿಯೊ. ಇನ್ನೊಬ್ಬರ ದೇಹಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖ ಹಾಕಿರುವ ಈ ನಕಲಿ ವಿಡಿಯೋ ತಂತ್ರಜ್ಞಾನದ ದುರ್ಬಳಕೆಗೆ ತಾಜಾ ಉದಾಹರಣೆಯಾಗಿದೆ. ನಟಿಯ ನಕಲಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೆ ಹಲವಾರು ಮಂದಿ ಆಕ್ರೋಶ ಹೊರಹಾಕಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕೇಂದ್ರ ಸಚಿವ ರಾಜೀವ ಚಂದ್ರಶೇಖರ್ ಕೂಡ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸದ್ಯ ನಟಿಯೇ ಮೊದಲ ಬಾರಿಗೆ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸೈಬರ್‌ಕ್ರೈಮ್‌ಗೆ ಬಲಿಯಾದ ರಶ್ಮಿಕಾ ಮಂದಣ್ಣ
ಈ ಡೀಪ್‌ಫೇಕ್ ವಿಡಿಯೋ ವೈರಲ್ ಆದ ನಂತರ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಹಳ ಸೂಕ್ಷ್ಮವಾಗಿ ಮತ್ತು ವಿವರವಾಗಿ ವಿಷಯದ ಬಗ್ಗೆ ಬರೆದುಕೊಂಡಿದ್ದಾರೆ. ವೈರಲ್ ಆಗಿರುವ ಅವರ AI ಡೀಪ್‌ಫೇಕ್ ವಿಡಿಯೋ 'ತಂತ್ರಜ್ಞಾನದ ದೊಡ್ಡ ದುರ್ಬಳಕೆ' ಮತ್ತು ಈ ಅನುಭವವನ್ನು 'ಅತ್ಯಂತ ಭಯಾನಕ' ಎಂದು ಅಸಮಾಧಾನ ಹೊರಹಾಕಿದ್ದಾರೆ.
ರಶ್ಮಿಕಾ ಮಂದಣ್ಣ ಹೇಳಿದ್ದೇನು..?
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಇದನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗಿದೆ. ಆದರೂ, ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿರುವ ನನ್ನ ಡೀಪ್‌ಫೇಕ್ ವೀಡಿಯೊದ ಬಗ್ಗೆ ಮಾತನಾಡಬೇಕಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೇ, ಈ ರೀತಿ ಏನಾದರೂ ಆಗುವುದು ನನಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ತುಂಬಾ ಭಯಾನಕ. ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕಾರಣದಿಂದಾಗಿ ಇಂದು ನಮ್ಮಲ್ಲಿ ಹಲವರು ಇಂತಹ ಘಟನೆಗಳಿಗೆ ಗುರಿಯಾಗುತ್ತಿದ್ದಾರೆ" ಎಂದಿದ್ದಾರೆ.
"ಇಂದು, ಮಹಿಳೆಯಾಗಿ ಮತ್ತು ನಟಿನಾಗಿ, ನನ್ನ ರಕ್ಷಣೆಗೆ ಮತ್ತು ಬೆಂಬಲಕ್ಕೆ ಬಂದ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಆದರೆ, ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ಇಂತಹ ಘಟನೆ ನಡೆದಿದ್ದರೇ, ನಾನು ಅದನ್ನು ಹೇಗೆ ನಿಭಾಯಿಸುತ್ತಿದ್ದೇ ಎಂಬುದು ನಿಜಕ್ಕೂ ನನಗೆ ಗೊತ್ತಿಲ್ಲ. ನಮ್ಮಲ್ಲಿ ಹೆಚ್ಚಿನವರು ಇಂತಹ ಕೆಟ್ಟ ಘಟನೆಗೆ ಸಾಕ್ಷಿಯಾಗುವ ಮೊದಲು ನಾವು ಇದನ್ನು ಒಂದು ಸಮುದಾಯವಾಗಿ ಆದಷ್ಟು ತುರ್ತಾಗಿ ಪರಿಹರಿಸಬೇಕಾಗಿದೆ" ಎಂದು ಮನವಿ ಮಾಡಿದ್ದಾರೆ.
ಡೀಪ್‌ಫೇಕ್ ವೀಡಿಯೊ ಪ್ರಕರಣವೇನು..?
ನಟಿ ರಶ್ಮಿಕಾ ಮಂದಣ್ಣ ಕಪ್ಪು ಬಣ್ಣದ ಶಾರ್ಟ್ ಡ್ರೆಸ್ ಅನ್ನು ಧರಿಸಿ ಎದೆಯ ಭಾಗ ಹೆಚ್ಚು ಕಾಣುವಂತೆ ಲಿಫ್ಟ್ ಒಳಗೆ ಎಂಟ್ರಿ ಕೊಡುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಇರುವುದು ಅವರೇ ಎಂದು ಕೊಂಡು ಹಲವು ಮಂದಿ ಕಾಮೆಂಟ್ ಮಾಡಿ ಶೇರ್ ಮಾಡಿದ್ದರು. ಆದರೆ, ಇದು ಬ್ರಿಟಿಷ್ ಭಾರತೀಯ ಯುವತಿ ಜಾರಾ ಪಟೇಲ್ ಎನ್ನುವವರ ವಿಡಿಯೋ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಳಸಿಕೊಂಡು ಇನ್ನೋಬ್ಬರ ದೇಹಕ್ಕೆ ನಟಿಯ ಮುಖವನ್ನು ಹಾಕಲಾಗಿತ್ತು. ವಿಡಿಯೋ ವೈರಲ್ ಆದ ಬೆನ್ನಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕೂಡ ವಿಡಿಯೋವನ್ನು ಗಮನಿಸಿ ಪ್ರತಿಕ್ರಿಯೆ ನೀಡಿದ್ದರು. ತಕ್ಷಣ ಇಂತಹ ವಿಡಿಯೋ ಮಾಡಿದವರ ವಿರುದ್ಧ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು. ಕಠಿಣ ಪ್ರಕರಣ ದಾಖಲಿಸಬೇಕಾದ ಘಟನೆಯಿದು ಎಂದು ರಶ್ಮಿಕಾ ಮಂದಣ್ಣ ಅವರನ್ನು ಬೆಂಬಲಿಸಿದ್ದರು. ರಶ್ಮಿಕಾ ಮತ್ತು ಅಮಿತಾಬ್ ಬಚ್ಚನ್ ಗುಡ್‌ಬೈ ಸಿನಿಮಾದಲ್ಲಿ ತಂದೆ, ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











