ಆಸ್ಕರ್‌ಗೆ ನಮ್ಮ ಚಿತ್ರ ಆಯ್ಕೆಯಾಗಿದೆ ಎಂದು ಸುಳ್ಳು ಹೇಳಿ ನಗೆಪಾಟಲಿಗೀಡಾದ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ತಂಡ...!
ಸುಳ್ಳು ಅನ್ನುವುದು ಮನುಷ್ಯನ ವ್ಯಕ್ತಿತ್ವವನ್ನು ತಿಂದು ಬಿಸಾಕುವ ಗೆದ್ದಲಿದ್ದಂತೆ. ಒಂದು ಸುಳ್ಳನ್ನು ನಿಜವೆಂದು ಸಾಬೀತು ಮಾಡಲು ಹೋಗಿ ಸುಳ್ಳಿನ ಸುಳಿಯಲ್ಲಿ ಸಿಲುಕಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದಕ್ಕೆ ರಣ್ ದೀಪ್ ಹೂಡ ಅವರ ಸ್ವಾತಂತ್ರ್ಯ ವೀರ್ ಸಾವರ್ಕರ್ ತಂಡ ಅತ್ಯುತ್ತಮ ಉದಾಹರಣೆ.
ಹೌದು, ಲಾಪತಾ ಲೇಡೀಸ್ ಚಿತ್ರ ಆಸ್ಕರ್ ಅಂಗಳಕ್ಕೆ ಧುಮುಕಿದ ಬೆನ್ನಲ್ಲಿಯೇ ಎಲ್ಲೆಡೆ ಸಂಭ್ರಮದ ಅಲೆ ಎದ್ದಿತ್ತು. ಆದರೆ ಈ ಅಲೆಯಲ್ಲಿ ತೇಲುವ ಅವಕಾಶದಿಂದ ವಂಚಿತಗೊಂಡ ಸ್ವಾತಂತ್ರ್ಯ ವೀರ್ ಸಾವರ್ಕರ್ ತಂಡದ ಬೇಗುದಿ ಹೆಚ್ಚಿತ್ತು. ಹೀಗಾಗಿಯೇ ಕೇವಲ ಲಾಪತಾ ಲೇಡೀಸ್ ಮಾತ್ರವಲ್ಲ ನಮ್ಮ ಸ್ವಾತಂತ್ರ್ಯ ವೀರ್ ಸಾವರ್ಕರ್ ಚಿತ್ರ ಕೂಡ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದೆ ಎನ್ನುವ ಸುದ್ದಿಯನ್ನು ಚಿತ್ರದ ನಿರ್ಮಾಪಕ ಸಂದೀಪ್ ಸಿಂಗ್ ಹುಯಿಲೆಬ್ಬಿಸಿದರು. ತಮ್ಮ ಚಿತ್ರವನ್ನು ಆಸ್ಕರ್‌ಗೆ ಕಳುಹಿಸಿದ್ದಕ್ಕೆ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾಗೆ ಧನ್ಯವಾದವನ್ನು ಸಲ್ಲಿಸಿದರು. ಮಾಧ್ಯಮದವರು ಸೇರಿ ಅನೇಕರು ಈ ಸುದ್ದಿಯನ್ನು ನಿಜಾ ಎಂದೇ ಅಂದುಕೊಂಡರು. ಸ್ವಾತಂತ್ರ್ಯ ವೀರ್ ಸಾವರ್ಕರ್ ತಂಡಕ್ಕೆ ಚಿತ್ರದ ನಿರ್ದೇಶಕ ರಣ್‌ದೀಪ್ ಹೂಡಗೆ ಅಭಿನಂದನೆಯನ್ನು ಕೂಡ ಸಲ್ಲಿಸಿದರು.

ಆದರೆ, ವಾಸ್ತವದಲ್ಲಿ ಈ ಸುದ್ದಿಯೇ ಸುಳ್ಳು. ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾನೇ ಈ ವಿಚಾರವನ್ನು ಸ್ಪಷ್ಟಪಡಿಸಿದೆ. ತಮ್ಮ ಸಂಸ್ಥೆ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಚಿತ್ರತಂಡಕ್ಕೆ ತಪರಾಕಿಯನ್ನೂ ಹಾಕಿದೆ. ಹೌದು, ಅಸಲಿಗೆ ನಿಮಗೆ ಗೊತ್ತಿರಲಿ.. ಒಂದು ದೇಶದಿಂದ ಒಂದು ಚಿತ್ರವನ್ನು ಮಾತ್ರ ಆಸ್ಕರ್‌ಗೆ ಕಳುಹಿಸಬೇಕೆಂಬ ನಿಯಮ ಇದೆ. ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಈ ನಿಯಮದಡಿಯೇ ಕೆಲಸ ಮಾಡುತ್ತೆ. ಪ್ರತಿ ವರ್ಷ ಹತ್ತಾರು ಚಿತ್ರಗಳನ್ನು ನೋಡಿ ಅದರಲ್ಲಿ ಒಂದು ಚಿತ್ರವನ್ನು ಮಾತ್ರ ಆಯ್ಕೆ ಮಾಡಿ ಆಸ್ಕರ್ ಅಂಗಳಕ್ಕೆ ಕಳುಹಿಸುತ್ತೆ.
ಅದ್ರಂತೆ ಈ ಬಾರಿ ಲಾಪತಾ ಲೇಡೀಸ್ ಚಿತ್ರವನ್ನು ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಕಳುಹಿಸಿದೆ. ಹೀಗಿರುವಾಗ ಸ್ವಾತಂತ್ರ್ಯ ವೀರ್ ಸಾವರ್ಕರ್ ಚಿತ್ರವನ್ನು ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಆಯ್ಕೆ ಮಾಡಲು ಹೇಗೆ ಸಾಧ್ಯ..? ಹಾಗಂಥ ಸ್ವಾತಂತ್ರ್ಯ ವೀರ್ ಸಾವರ್ಕರ್ ಚಿತ್ರ ಆಸ್ಕರ್‌ಗೆ ಹೋಗಿಯೇ ಇಲ್ಲ, ಹೋಗಲು ಸಾಧ್ಯವೇ ಇಲ್ಲ ಅಂತಲ್ಲ. ಚಿತ್ರ ಹೋಗಿದ್ದರು ಹೋಗಿರಬಹುದು. ಯಾಕೆಂದರೆ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾಗೆ ಕೇವಲ ಒಂದು ಚಿತ್ರವನ್ನು ಆಯ್ಕೆ ಮಾಡುವ ಅವಕಾಶ ಇದೆಯಾದರೂ, ಆಸ್ಕರ್ ಗೆ ತಮ್ಮ ಚಿತ್ರ ಅರ್ಹ ಎಂದು ಅಂದುಕೊಂಡವರು ತಮ್ಮ ಚಿತ್ರವನ್ನು ಪ್ರತೈಕವಾಗಿ ಆಸ್ಕರ್‌ಗೆ ಕಳುಹಿಸಬಹುದು. ಆದರೆ. ಇದಕ್ಕೆ ತಗಲುವ ಖರ್ಚು ವೆಚ್ಚ ಹೆಚ್ಚು. ಒಂದರ್ಥದಲ್ಲಿ ಹಿಂಬದಿ ದ್ವಾರದಿಂದ ಆಸ್ಕರ್ ಅಂಗಳಕ್ಕೆ ತೆರಳಬಹುದು. ಈ ವಿಚಾರವನ್ನು ಸ್ಪಷ್ಟವಾಗಿ ಹೇಳದೇ ಸ್ವಾತಂತ್ರ್ಯ ವೀರ್ ಸಾವರ್ಕರ್ ತಂಡ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ತಮ್ಮ ಚಿತ್ರ ಆಸ್ಕರ್‌ಗೆ ಆಯ್ಕೆಯಾಗಿದೆ ಎಂದು ಸುಳ್ಳು ಹೇಳಿದೆ. ಅನವಶ್ಯಕ ಗೊಂದಲವನ್ನು ಸೃಷ್ಟಿಸಿದೆ. ಈ ಮೂಲಕ ನಗೆಪಾಟಲಿಗೆ ಕೂಡ ಈ ತಂಡ ಈಗ ಈಡಾಗಿದೆ.

ಅಂದ್ಹಾಗೇ 2022ರಲ್ಲಿ ಕೂಡ ಇದೇ ತರಹದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಯಾಕೆಂದರೆ ಅವತ್ತು ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಗುಜರಾತಿ ಭಾಷೆಯ ಚಿತ್ರ ಚೆಲ್ಲೋ ಚಿತ್ರವನ್ನು ಅಧಿಕೃತವಾಗಿ ಆಸ್ಕರ್‌ಗೆ ಕಳುಹಿಸಿತ್ತು. ಆದರೆ, ಇನ್ನೊಂದು ಕಡೆ ಆರ್.ಆರ್.ಆರ್, ಗಂಗೂಬಾಯಿ ಕಾಠಿಯಾವಾಡಿ ಚಿತ್ರಗಳು ಕೂಡ ಆಸ್ಕರ್‌ಗೆ ಆಯ್ಕೆಯಾಗಿದ್ದವು. ಆದರೆ, ಈ ಸಿನಿಮಾಗಳನ್ನು ಆಯಾ ಚಿತ್ರತಂಡಗಳು ಪ್ರತೈಕವಾಗಿ ಆಸ್ಕರ್‌ಗೆ ಕಳುಹಿಸಿದ್ದವು. ಈ ವಿಚಾರವನ್ನು ಸ್ಪಷ್ಟಪಡಿಸಿದ್ದವು. ಸ್ವಾತಂತ್ರ್ಯ ವೀರ್ ಸಾವರ್ಕರ್ ಚಿತ್ರತಂಡದಂತೆ ನಮ್ಮ ಚಿತ್ರ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಆಯ್ಕೆಯಾಗಿದೆ ಎಂದು ಸುಳ್ಳು ಹೇಳಿರಲಿಲ್ಲ. ನಗೆಪಾಟಲಿಗೆ ಗುರಿಯಾಗಿರಲಿಲ್ಲ.


Click it and Unblock the Notifications











