'ಕೆಜಿಎಫ್ 2' ಸಿನಿಮಾದ 100 ಟಿಕೆಟ್ ಖರೀದಿಸಿದ ಸಲ್ಮಾನ್ ಖಾನ್ 'ಮಾಜಿ' ಅಭಿಮಾನಿ
'ಕೆಜಿಎಫ್ 2' ಹವಾ ನಿರೀಕ್ಷೆಗಿಂತಲೂ ಹೆಚ್ಚಿಗೆ ದೇಶದಾದ್ಯಂತ ಹರಡಿದೆ. ಜನ ಮುಗಿಬಿದ್ದು ಸಿನಿಮಾದ ಟಿಕೆಟ್‌ಗಳನ್ನು ಮುಂಗಡವಾಗಿ ಖರೀದಿಸುತ್ತಿದ್ದಾರೆ. ಹಲವೆಡೆ ಈಗಾಗಲೇ ಎರಡು ಮೂರು ದಿನದ ಟಿಕೆಟ್‌ಗಳು ಮಾರಾಟವಾಗಿಬಿಟ್ಟಿವೆ.
Recommended Video

ಉತ್ತರ ಭಾರತದಲ್ಲಂತೂ ರಾಕಿ ಭಾಯ್ ಹವಾ ಬಹಳ ಜೋರಾಗಿದೆ. ಮುಂಬೈನಲ್ಲಿ ಈಗಾಗಲೇ ಹಲವು ಶೋಗಳು ಬುಕ್ ಆಗಿವೆ. ಮುಂಬೈನಲ್ಲಿ ಒಬ್ಬನೇ ವ್ಯಕ್ತಿ 'ಕೆಜಿಎಫ್ 2' ಸಿನಿಮಾದ ಬರೋಬ್ಬರಿ 100 ಟಿಕೆಟ್ ಖರೀದಿಸಿದ್ದಾರೆ!
ಮುಂಬೈನ ಸಿನಿ ಪ್ರೇಮಿ ವಿಜಯ್ ಎಂಬುವರು 'ಕೆಜಿಎಫ್ 2' ಸಿನಿಮಾದ ಬರೋಬ್ಬರಿ 100 ಟಿಕೆಟ್ ಖರೀದಿಸಿದ್ದಾರೆ. ಅವರೇ ಹೇಳುವಂತೆ ಈ ಹಿಂದೆ ಅವರು ಬಾಲಿವುಡ್ ದೊಡ್ಡ ಹೀರೋಗಳ ಸಿನಿಮಾ ಟಿಕೆಟ್‌ಗಳನ್ನು ಹೀಗೆ ದೊಡ್ಡ ಸಂಖ್ಯೆಯಲ್ಲಿ ಖರೀದಿಸುತ್ತಿದ್ದರಂತೆ, ಆದರೆ ಈಗ ದಕ್ಷಿಣ ಭಾರತ ಸಿನಿಮಾಗಳ ಹವಾ ಹಾಗಾಗಿ 'ಕೆಜಿಎಫ್ 2' ಸಿನಿಮಾದ ಟಿಕೆಟ್‌ಗಳನ್ನು ಖರೀದಿಸಿದ್ದೇನೆ ಎಂದಿದ್ದಾರೆ.

''ಸಲ್ಮಾನ್ ಖಾನ್ ಸಿನಿಮಾ ಟಿಕೆಟ್ ಖರೀದಿಸುತ್ತಿದ್ದೆ, ಇನ್ನು ಖರೀದಸಲ್ಲ''
''ಈ ಹಿಂದೆ ನಾನು ಸಲ್ಮಾನ್ ಖಾನ್ ಸಿನಿಮಾಗಳಿಗೆ ಅಥವಾ ಖಾನ್ ಸಹೋದರರ ಸಿನಿಮಾಗಳ ಟಿಕೆಟ್‌ಗಳನ್ನು ಹೀಗೆ ಭಾರಿ ಸಂಖ್ಯೆಯಲ್ಲಿ ಖರೀದಿಸುತ್ತಿದ್ದೆ. ಆದರೆ ಇದೇ ಮೊದಲ ಬಾರಿಗೆ ನಾನು ಬಾಲಿವುಡ್ ಬಿಟ್ಟು ದಕ್ಷಿಣ ಭಾರತದ ಸಿನಿಮಾದ ಟಿಕೆಟ್ ಖರೀದಿಸಿದ್ದೇನೆ ಅದುವೇ 'ಕೆಜಿಎಫ್ 2'. ಸಿನಿಮಾ ಮೂಲಕ ಯಶ್ 'ತೂಫಾನ್' ಅನ್ನೇ ಕೊಂಡು ತಂದಿದ್ದಾರೆ'' ಎಂದಿದ್ದಾರೆ ವಿಜಯ್.

ಬಾಲಿವುಡ್ ಸಿನಿಮಾಗಳು ಮಂಕಾಗಿವೆ: ವಿಜಯ್
'ಕೆಜಿಎಫ್ 2' ಸಿನಿಮಾದ 100 ಟಿಕೆಟ್‌ಗಳನ್ನು ಕೊರಳಿಗೆ ಹಾರದಂತೆ ಧರಿಸಿಯೇ ಯೂಟ್ಯೂಬ್ ಚಾನೆಲ್ ಒಂದರ ಜೊತೆ ಮಾತನಾಡಿದ ವಿಜಯ್, ''ಇತ್ತೀಚೆಗೆ ದಕ್ಷಿಣ ಭಾರತದ ಸಿನಿಮಾಗಳೇ ಹೆಚ್ಚು ನಡೆಯುತ್ತಿವೆ. ಬಾಲಿವುಡ್ ಸಿನಿಮಾಗಳು ಮಂದವಾಗಿಬಿಟ್ಟಿವೆ. ಇವೆಲ್ಲವೂ ಭಾರತದ ಸಿನಿಮಾಗಳೇ. ಬೇಸರದ ಸಂಗತಿಯೆಂದರೆ ನಾನು ಈಗ ಬಾಲಿವುಡ್ ಸಿನಿಮಾಗಳ ಟಿಕೆಟ್‌ಗಳನ್ನು ಹೀಗೆ ದೊಡ್ಡ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿಲ್ಲ. ಬದಲಿಗೆ ದಕ್ಷಿಣ ಭಾರತದ ಸಿನಿಮಾಗಳ ಟಿಕೆಟ್ ಖರೀದಿ ಮಾಡುತ್ತೇನೆ'' ಎಂದಿದ್ದಾರೆ.

ಮುಂಬೈನಲ್ಲಿ ಯಶ್ ಕ್ರೇಜ್ ದೊಡ್ಡದಿದೆ: ವಿಜಯ್
''ಕೆಜಿಎಫ್: ಚಾಪ್ಟರ್ 1' ನಶೆ ಇನ್ನೂ ಜನರ ತಲೆಯಿಂದ ಇಳಿದಿಲ್ಲ ಅದಾಗಲೇ 'ಕೆಜಿಎಫ್; ಚಾಪ್ಟರ್ 2' ತೆರೆಗೆ ಬಂದಿದೆ. ಇದು ಪಕ್ಕಾ ಹಿಟ್ ಆಗಲಿದೆ. ನವಿ ಮುಂಬೈನಲ್ಲಿ ಯಶ್ ಪ್ರೊಮೋಷನ್‌ಗಾಗಿ ಬಂದಿದ್ದಾಗ ಇಡೀಯ ಮಾಲ್ ಜನರಿಂದ ತುಂಬಿತ್ತು. ಸ್ಥಳವೇ ಇಲ್ಲದಂತಾಗಿತ್ತು. ನೀವೇ ಅಂದಾಜಿಸಬಹುದು ಯಶ್‌ರ ಕ್ರೇಜ್ ಇಲ್ಲಿ ಹೇಗಿದೆ ಎಂಬುದನ್ನು'' ಎಂದಿದ್ದಾರೆ ವಿಜಯ್.

ದೊಡ್ಡ ಓಪನಿಂಗ್ ಆ ಸಿನಿಮಾಕ್ಕೆ ಸಿಗಲಿದೆ: ವಿಜಯ್
'ಕೆಜಿಎಫ್ 2' ಸಿನಿಮಾ ಏಪ್ರಿಲ್ 14ಕ್ಕೆ ತೆರೆಗೆ ಬರುತ್ತಿದ್ದು, ನಾಲ್ಕು ದಿನ ರಜೆ ಇದೆ ಬಹಳ ದೊಡ್ಡ ಓಪನಿಂಗ್ ಈ ಸಿನಿಮಾಕ್ಕೆ ಸಿಗಲಿದೆ. ಈ ಸಿನಿಮಾ ಬರುತ್ತಿದೆ ಎಂಬ ಕಾರಣಕ್ಕೆ ಯಾವ ಸಿನಿಮಾ ಸಹ ಬಿಡುಗಡೆ ಆಗುತ್ತಿಲ್ಲ. ಶಾಹಿದ್ ಕಪೂರ್ ಧೈರ್ಯ ಮಾಡಿ 'ಜೆರ್ಸಿ' ಬಿಡುಗಡೆ ಮಾಡುತ್ತಿದ್ದಾರೆ. ಆದರೆ 'ಕೆಜಿಎಫ್ 2' ಕ್ರೇಜ್ ಬಹಳ ದೊಡ್ಡದಿದೆ. 'ಬೀಸ್ಟ್' ಸಿನಿಮಾ ಸಹ ಬಿಡುಗಡೆ ಆಗುತ್ತಿದೆ. ಆದರೆ ಅವರು ಪ್ರೊಮೋಷನ್ ಎಲ್ಲ ಮಾಡಿಲ್ಲ'' ಎಂದಿದ್ದಾರೆ ವಿಜಯ್.

'ಕೆಜಿಎಫ್ 2' ಗೆ ಹೆಚ್ಚು ಸಂಖ್ಯೆಯ ಚಿತ್ರಮಂದಿರ
ಮುಂಬೈನಲ್ಲಿ 'ಕೆಜಿಎಫ್ 2' ಸಿನಿಮಾಕ್ಕೆ ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಗಳು ಸಿಕ್ಕಿವೆ. ಬೆಳಿಗ್ಗೆ 5 -6 ಗಂಟೆಯಿಂದಲೇ ಶೋಗಳು ಆರಂಭವಾಗುತ್ತಿದ್ದು, ಬಹುತೇಕ ಕಡೆ ಮೊದಲ ದಿನದ ಶೋ ಬುಕ್ ಆಗಿಬಿಟ್ಟಿವೆ. 'ಕೆಜಿಎಫ್ 2' ಗೆ ಹೋಲಿಸಿದರೆ 'ಬೀಸ್ಟ್' ಸಿನಿಮಾಕ್ಕೆ ಮುಂಬೈನಲ್ಲಿ ಬಹಳ ಕಡಿಮೆ ಚಿತ್ರಮಂದಿರಗಳು ದೊರಕಿವೆ. ಸ್ವತಃ ಹಿಂದಿ ಸಿನಿಮಾ ಆಗಿರುವ 'ಜೆರ್ಸಿ'ಗೆ ಸಹ ಹೆಚ್ಚು ಚಿತ್ರಮಂದಿರಗಳು ಮುಂಬೈನಲ್ಲಿ ಸಿಕ್ಕಿಲ್ಲ ಎಂದರೆ 'ಕೆಜಿಎಫ್ 2' ಹವಾ ಎಷ್ಟಿದೆ ಎಂಬುದನ್ನು ಸುಲಭವಾಗಿ ಊಹಿಸಬಹುದು.


Click it and Unblock the Notifications











