ಅಣ್ಣಾವ್ರ ಬಗ್ಗೆ ರಾಮ್‌ಗೋಪಾಲ್ ವರ್ಮಾ ಹೇಳಿಕೆಗೆ ಅಭಿಮಾನಿಗಳು ಕೆಂಡಾಮಂಡಲ
ಡಾ. ರಾಜ್‌ಕುಮಾರ್ ಮಾಡದ ಪಾತ್ರಗಳಿಲ್ಲ, ನಟಿಸಿದ ಸಿನಿಮಾ ಜಾನರ್‌ಗಳಿಲ್ಲ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ತರಹೇವಾರಿ ವೇಷ ಹಾಕಿ ಅಣ್ಣಾವ್ರು ಗೆದ್ದಿದ್ದಾರೆ. ಇನ್ನು ಡಾ. ರಾಜ್ ಸಿನಿಮಾಗಳು ದೇಶ ವಿದೇಶದ ಭಾಷೆಗಳಿಗೆ ರೀಮೆಕ್ ಆಗಿರುವ ಉದಾಹರಣೆಗಳಿವೆ. ಅಣ್ಣಾವ್ರು ಒಮ್ಮೆ ನಟಿಸಿದ ಬಳಿಕ ಆ ಪಾತ್ರ ಮಾಡಲು ಬೇರೆಯವರು ಹೆದರುತ್ತಿದ್ದರು.
ಚಿತ್ರರಂಗಕ್ಕೆ ಡಾ. ರಾಜ್‌ಕುಮಾರ್ ಸೇವೆ ಅಪಾರ. ಅಣ್ಣಾವ್ರ ನಟನೆ ಬಗ್ಗೆ ಖ್ಯಾತನಾಮರೇ ಮೆಚ್ಚಿ ಕೊಂಡಿದಿದ್ದಾರೆ. ಎನ್‌ಟಿಆರ್, ಎಎನ್‌ಆರ್, ಎಂಜಿಆರ್, ಅಮಿತಾಬ್ ಬಚ್ಚನ್ ರೀತಿಯ ಸ್ಟಾರ್ ನಟರೆಲ್ಲಾ ಅಣ್ಣಾವ್ರ ನಟನೆ ಹಾಗೂ ಸರಳ ಸಜ್ಜನ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದರು. 60, 70ರ ದಶಕಗಳಲ್ಲೇ ಅದ್ಭುತ ಪಾತ್ರಗಳನ್ನು ಮಾಡಿ ಮುತ್ತುರಾಜ್ ಸೈ ಎನಿಸಿಕೊಂಡಿದ್ದರು.

ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ರಾಜ್‌ಕುಮಾರ್ ಆರಂಭದಲ್ಲಿ ಪೌರಾಣಿಕ ಹಾಗೂ ಐತಿಹಾಸಿಕ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದರು. ಸಾಮಾಜಿಕ ಚಿತ್ರಗಳಲ್ಲಿ ಅವ್ರು ಗೆಲ್ಲುವುದು ಕಷ್ಟ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ಎಲ್ಲರ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿ ಅಣ್ಣಾವ್ರು ಸಕ್ಸಸ್ ಕಂಡಿದ್ದರು. ಮುಂದೆ ಬಾಂಡ್ ಶೈಲಿಯ ಚಿತ್ರಗಳಲ್ಲಿ ಕೂಡ ಜಾದೂ ಮಾಡಿದ್ದರು.
ಅಮಿತಾಬ್ ಬಚ್ಚನ್ ಸಿನಿಮಾಗಳನ್ನು ರೀಮೆಕ್ ಮಾಡಿ ದಕ್ಷಿಣದ ಸ್ಟಾರ್ ನಟರು ಗೆದ್ದವರು ಎಂದು ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಹೇಳಿದ್ದಾರೆ. ಇಂಡಿಯಾ ಟಿವಿಗೆ ಆರ್‌ಜಿವಿ ಹಾಗೂ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಸಂದರ್ಶನ ನೀಡಿದ್ದಾರೆ. ಈ ವೇಳೆ ಸಿನಿಮಾ ಬೆಳೆದು ಬಂದ ಹಾದಿ ಬಗ್ಗೆ ಇಬ್ಬರೂ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ನಡುವೆ ದಕ್ಷಿಣದ ಖ್ಯಾತ ನಟರು ಅಮಿತಾಬ್ ಸಿನಿಮಾಗಳನ್ನು ರೀಮೆಕ್ ಮಾಡಿ ಗೆದ್ದಿದ್ದರು ಎಂದು ಕಾಮೆಂಟ್ ಮಾಡಿದ್ದಾರೆ. ಇದು ಅಣ್ಣಾವ್ರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಬಾಲಿವುಡ್ ಹಾಗೂ ದಕ್ಷಿಣದ ಸಿನಿಮಾಗಳ ನಡುವಿನ ವ್ಯತ್ಯಾಸದ ಬಗ್ಗೆ ಆರ್‌ಜಿವಿ ಮಾತನಾಡುತ್ತಾ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. "ಇಡೀ ದಕ್ಷಿಣ ಭಾರತ ಸಿನಿಮಾ ಎಲ್ಲಾ ಭಾಷೆಗಳಲ್ಲಿ ಮೊದಲಿಗೆ ಅಮಿತಾಬ್ ಬಚ್ಚನ್ ಸಿನಿಮಾಗಳನ್ನು ರೀಮೆಕ್ ಮಾಡುತ್ತಿದ್ದರು. ರಜನಿಕಾಂತ್, ಚಿರಂಜೀವಿ, ಎನ್‌ಟಿಆರ್, ರಾಜ್‌ಕುಮಾರ್ ಎಲ್ಲರೂ 70, 80ರ ದಶಕದ ಬಿಗ್‌ಬಿ ಸಿನಿಮಾಗಳನ್ನು ರೀಮೆಕ್ ಮಾಡುತ್ತಿದ್ದರು. 90ರ ದಶಕದ ಬಳಿಕ ಬದಲಾಯಿತು" ಎಂದು ಆರ್‌ಜಿವಿ ಮಾತು ಆರಂಭಿಸಿದ್ದಾರೆ.
ಆ ಬಳಿಕ ಮ್ಯೂಸಿಕ್ ಸಂಸ್ಥೆಗಳು ಬಂದವು. ಆ ಸಂಸ್ಥೆ ಮ್ಯೂಸಿಕಲ್ ಸಿನಿಮಾಗಳನ್ನು ಮಾಡಲು ಆರಂಭಿಸಿದರು. ಆಗ 'ಮೈನೆ ಪ್ಯಾರ್ ಕಿಯಾ', 'ಸಾಜನ್' ರೀತಿಯ ಸಿನಿಮಾಗಳು ಬಾಲಿವುಡ್‌ನಲ್ಲಿ ಬರೋಕೆ ಆರಂಭವಾಯಿತು. ಆದರೆ ದಕ್ಷಿಣದಲ್ಲಿ ಬದಲಾಗಲಿಲ್ಲ. ಅವರು ಅಮಿತಾಬ್ ಬಚ್ಚನ್‌ನಿಂದ ಕಾಪಿ ಮಾಡಿದ ಅದೇ ಹಳೆಯ ಮಸಾಲಾ ಸಿನಿಮಾಗಳನ್ನು ಮಾಡುತ್ತಿದ್ದರು. ಅದಕ್ಕೆ ಅಲ್ಲಿನ ಸ್ಟಾರ್‌ಗಳು ಮತ್ತಷ್ಟು ಜನಪ್ರಿಯತೆ ಪಡೆದರು. ಅಭಿಮಾನಿಗಳು ಅವರನ್ನು ಆರಾಧಿಸಲು ಆರಂಭಿಸಿದರು. ಇವತ್ತಿಗೂ ಅದು ಮುಂದುವರೆದಿದೆ" ಎಂದು ವರ್ಮಾ ಹೇಳಿದ್ದಾರೆ.
ಆರ್‌ಜಿವಿ ಹೇಳಿಕೆಗೆ ಅಣ್ಣಾಚ್ರ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅಮಿತಾಬ್ ಬಚ್ಚನ್ ದಕ್ಷಿಣದ ಸಿನಿಮಾಗಳನ್ನು ರೀಮೆಕ್ ಮಾಡಿದ್ದಾರೆ. ಅಣ್ಣಾವ್ರ 'ಶಂಕರ್ ಗುರು' ಚಿತ್ರವನ್ನು ಮಹಾನ್ ಹೆಸರಿನಲ್ಲಿ ಹಿಂದಿಯಲ್ಲಿ ರೀಮೆಕ್ ಮಾಡಿದ್ದರು. ರಾಜ್‌ಕುಮಾರ್ 1954ರಲ್ಲೇ ಚಿತ್ರರಂಗಕ್ಕೆ ಬಂದಿದ್ದರು. ಅಮಿತಾಬ್ ಬಂದಿದ್ದು 1969ರಲ್ಲಿ. ಅಂದರೆ 15 ವರ್ಷಗಳ ಬಳಿಕ. ಅಷ್ಟರಲ್ಲಿ ಅಣ್ಣಾವ್ರು ಸೂಪರ್ ಸ್ಟಾರ್ ಆಗಿದ್ದರು. ಅಮಿತಾಬ್ ಸಿನಿಮಾ ರೀಮೆಕ್ ಮಾಡಿ ಗೆಲ್ಲುವ ಅವಶ್ಯಕತೆ ಅವರಿಗೆ ಇರಲಿಲ್ಲ. ಆರ್‌ಜಿವಿ ವಾಸ್ತವ ತಿಳಿದು ಮಾತನಾಡಿ. ಸುಳ್ಲು ಹೇಳಬೇಡಿ ಎಂದು ಅಭಿಮಾನಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ತಿರುಗೇಟು ನೀಡಿದ್ದಾರೆ.


Click it and Unblock the Notifications











