ಲಾಭಿ ಮಾಡಿ ಕೊನೆಗೂ ಮೊದಲ ರಾಷ್ಟ್ರ ಪ್ರಶಸ್ತಿ ಪಡೆದ್ರಾ ಶಾರುಖ್ ಖಾನ್ ?
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ. 2013ರಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗಳಿಗೆ ಇದೀಗ ಪ್ರಶಸ್ತಿ ಘೋಷಿಸಿದ್ದಾರೆ. ಶಾರುಖ್ ಖಾನ್ ಹಾಗೂ ವಿಕ್ರಾಂತಿ ಮೆಸ್ಸಿ ಅತ್ಯುತ್ತಮ ನಟ ಪ್ರಶಸ್ತಿ ಹಂಚಿಕೊಂಡಿದ್ದಾರೆ.
'ಜವಾನ್' ಚಿತ್ರದ ನಟನೆಗಾಗಿ ಕಿಂಗ್ ಖಾನ್ ರಾಷ್ಟ್ರಪ್ರಶಸ್ತಿ ಮುಡಿಗೇಡಿಸಿಕೊಂಡಿದ್ದಾರೆ. ಅಟ್ಲಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಜವಾನ್ ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಸ್ವತಃ ಶಾರುಖ್ ಚಿತ್ರ ನಿರ್ಮಾಣ ಮಾಡಿದ್ದರು. '12th ಫೇಲ್' ಚಿತ್ರದ ನಟನೆಗಾಗಿ ವಿಕ್ರಾಂತ್ ಈ ಬಾರಿ ಪ್ರಶಸ್ತಿ ಪಡೆಯುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಶಾರುಖ್ ಖಾನ್ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಸಹಜವಾಗಿಯೇ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಆದರೆ ಕೆಲವರು ಮಾತ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. 'ಜವಾನ್' ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ನೀಡುವಂಥಹದ್ದು ಏನಿತ್ತು? ಪ್ರಶ್ನಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ. ಶಾರುಖ್ ಖಾನ್‌ಗೆ ಪ್ರಶಸ್ತಿ ಸಿಕ್ಕಿದ್ದು ಸಂತಸ ತಂದಿದ್ದರೂ ಈ ಚಿತ್ರಕ್ಕೆ ಎನ್ನುವುದು ಯಾಕೋ ಸಮಂಜಸ ಎನಿಸುತ್ತಿಲ್ಲ ಎಂದಿದ್ದಾರೆ. ಅಪ್ಪಿತಪ್ಪಿ ಲಾಭಿ ಮಾಡಿ ಪ್ರಶಸ್ತಿ ತಗೊಂಡ್ರಾ ಎಂದು ಕೆಲವರು ಕುಹಕವಾಡುತ್ತಿದ್ದಾರೆ.
ಇದಕ್ಕಿಂತಲೂ 'ಸ್ವದೇಶ್' ಹಾಗೂ 'ಚಕ್ ದೇ ಇಂಡಿಯಾ' ಚಿತ್ರಗಳಲ್ಲಿ ಶಾರುಖ್ ಖಾನ್ ಅದ್ಭುತವಾಗಿ ನಟಿಸಿದ್ದರು. ಆಗ ರಾಷ್ಟ್ರಪ್ರಶಸ್ತಿ ಕೊಡಬೇಕಿತ್ತು. ಅದರಲ್ಲೂ ಒಂದೇ ಪ್ರಶಸ್ತಿಯನ್ನು ಹೀಗೆ ಇಬ್ಬರಿಗೆ ಹಂಚುವುದು ಕೂಡ ಸರಿಯಾದ ನಿರ್ಧಾರ ಅಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. '12th ಫೇಲ್' ಚಿತ್ರದ ನಟನೆಗಾಗಿ ವಿಕ್ರಾಂತ್ ಮೆಸ್ಸಿಗೆ ಪ್ರಶಸ್ತಿ ನೀಡಿದ್ದು ಅರ್ಹವಾಗಿದೆ. ಅಷ್ಟಕ್ಕೆ ಬಿಡಬೇಕಿತ್ತು. ಸುಖಾಸುಮ್ಮನೆ ಶಾರುಖ್ ಖಾನ್‌ಗೆ ಕೊಡುವ ಪ್ರಯತ್ನ ಮಾಡಬಾರದಿತ್ತು.

ಕಮರ್ಷಿಯಲ್ ಸಿನಿಮಾಗಳಿಗೆ ಪ್ರಶಸ್ತಿ ಕೊಡಬೇಕು ಎನ್ನುವ ಕಾರಣಕ್ಕೆ 'ಜವಾನ್' ಚಿತ್ರಕ್ಕೆ ಕೊಟ್ಟಂತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಹಿಂದೆ ಕೂಡ ಇದೇ ರೀತಿ ಒಂದೇ ಪ್ರಶಸ್ತಿಯನ್ನು ಇಬ್ಬರಿಗೆ ಹಂಚಿರುವ ಉದಾಹರಣೆಗಳಿವೆ. ಅದಕ್ಕೆ ಕೆಲವರು ಚಕಾರ ಎತ್ತಿ ಪ್ರಶಸ್ತಿ ಬೇಡ ಎಂದಿರುವುದು ಇದೆ. 'ವೀರಪ್ಪ ನಾಯ್ಕ' ಚಿತ್ರದ ನಟನೆಗಾಗಿ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತ್ತು. ಆದರೆ ಜೊತೆಗೆ 'ಹೂಮಳೆ' ಚಿತ್ರದ ನಟನೆಗಾಗಿ ರಮೇಶ್ ಅರವಿಂದ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿದ್ದರು. ಇದು ದಾದಾ ಬೇಸರಕ್ಕೆ ಕಾರಣವಾಗಿತ್ತು.
ಇನ್ನುಳಿದಂತೆ 'Mrs. ಚಟರ್ಜಿ vs ನಾರ್ವೆ' ಚಿತ್ರಕ್ಕಾಗಿ ರಾಣಿ ಮುಖರ್ಜಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. '12th ಫೇಲ್' ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ಶೀಘ್ರದಲ್ಲೇ ನವದೆಹಲಿಯ ವಿಜ್ಞಾನ ಭವನದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. 'ಜವಾನ್' ಚಿತ್ರದಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ನಟಿಸಿದ್ದರು. ತಂದೆ ಮಗನಾಗಿ ಎರಡು ಪಾತ್ರಗಳಲ್ಲಿ ಅಬ್ಬರಿಸಿದ್ದರು. ನಯನತಾರ ನಾಯಕಿಯಾಗಿ ಮಿಂಚಿದ್ದರೆ ವಿಜಯ್ ಸೇತುಪತಿ ಮತ್ತೊಂದು ಮುಖ್ಯ ಪಾತ್ರಕ್ಕೆ ಜೀವ ತುಂಬಿದ್ದರು.
'ಜವಾನ್' ಬಳಿಕ 'ಡಂಕಿ' ಚಿತ್ರದಲ್ಲಿ ನಟಿಸಿ ಶಾರುಖ್ ಖಾನ್ ಗೆದ್ದಿದ್ದರು. ನಂತರ ಕೊಂಚ ಗ್ಯಾಪ್ ತೆಗೆದುಕೊಂಡಿದ್ದಾರೆ. ಸದ್ಯ 'ಕಿಂಗ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಮಗಳು ಸುಹಾನಾ ಖಾನ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ.


Click it and Unblock the Notifications











