ರೂಮ್ ಬುಕ್ ಆಗಿದೆ ಅಂತ ಫಾರ್ಮ್‌ಹೌಸ್‌ಗೆ ಕರ್ಕೊಂಡು ಹೋದ್ರು, ಬೆಡ್‌ರೂಮ್‌ನಲ್ಲಿ ಆ ಡೈರೆಕ್ಟರ್ ನನ್ನ ಕೂಡಿ ಹಾಕಿದ್ರು
ಕಂಡ ಕನಸು ಇನ್ನೇನು ನನಸಾಗಬೇಕು.. ಅಷ್ಟರಲ್ಲಿ ಸ್ವಾಭಿಮಾನವನ್ನೇ ಅಡ ಇಡಬೇಕಾದ ಪ್ರಸಂಗ ಎದುರಾದರೆ ಹೇಗಾಗಬೇಡ..? ಹೀಗೆ ಕಣ್ಣಲ್ಲಿ ಕನಸೊತ್ತ ಅಸಂಖ್ಯಾತ ಯುವ ಪ್ರತಿಭಾವಂತರಿಗೆ ಚಿತ್ರರಂಗದ ಗ್ಲಾಮರ್ ಲೋಕ, ಮಾಯಾಜಾಲದಂತೆ ಕಾಣುತ್ತೆ.
ಆದರೆ, ವಾಸ್ತವದಲ್ಲಿ ಕಣ್ಸೆಳೆಯುವ ಈ ಬೆಳಕಿನ ಹಿಂದೆ ಹಲವರ ಕನಸನ್ನು ಹೊಸಕಿ ಹಾಕುವ ಕತ್ತಲೆಯ ಜಗತ್ತು ಕೂಡ ಇದೆ. ಚಿತ್ರರಂಗದ ಭಾಷೆಯಲ್ಲಿ ಈ ಜಗತ್ತನ್ನು ಕಾಸ್ಟಿಂಗ್ ಕೌಚ್ ಎಂದು ಕರೆಯುತ್ತಾರೆ. ಹಲವರು ಇಲ್ಲಿ ಪಾತ್ರಕ್ಕಾಗಿ ಪಲ್ಲಂಗದ ಈ ಸಂಸ್ಕೃತಿಯಿಂದ ನರಳಿದ್ದಾರೆ. ಕಣ್ಣೀರು ಹಾಕಿದ್ಧಾರೆ. ಉದಾಹರಣೆಗೆ ಫರ್ಹಾನಾ ಭಟ್.

ಹೌದು, ಫರ್ಹಾನಾ ಭಟ್.. ಕಾಶ್ಮೀರದ ಚೆಲುವೆ. ಹಿಂದಿ ಕಿರುತೆರೆ ಮತ್ತು ಬೆಳ್ಳಿತೆರೆಯ ಖ್ಯಾತ ಹೆಸರು. ರ್‍ಯಾಂಪ್ ಮೇಲೆ ಬೆಕ್ಕಿನ ನಡಿಗೆ ಮಾಡುತ್ತಲೇ ''ಇಷ್ಕ್ ಮೆ ಮರ್ಜಾವಾನ್'' ವೆಬ್ ಸರಣಿಯಲ್ಲಿ ಕಾಣಿಸಿಕೊಂಡ ಫರ್ಹಾನಾ ಕಾಶ್ಮೀರಿ ಪಂಡಿತರ ವಲಸೆಯ ಕಥೆ ಹೊಂದಿದ್ದ ವಿಧು ವಿನೋದ್ ಚೋಪ್ರಾ ನಿರ್ದೇಶನದ ''ಶಿಖಾರಾ'' ಚಿತ್ರದಲ್ಲಿ ಕೂಡ ಮಿಂಚಿದ್ದರು.
ಇನ್ನೂ ಕಳೆದ ವರ್ಷ ಸಲ್ಮಾನ್ ಖಾನ್ ಸಾರಥ್ಯದಲ್ಲಿ ನಡೆದ ''ಬಿಗ್ ಬಾಸ್''ನ 19ನೇ ಸೀಸನ್‌ನ ಮೊದಲ ರನ್ನರ್ ಅಪ್ ಈ ಫರ್ಹಾನಾ ಭಟ್. ಇರಾನ್ ಮತ್ತು ಇಸ್ರೇಲ್ ನಡುವೆ ನಡೆದ ಯುದ್ದದಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲ ಅಲಿ ಖಮೇನಿಯ ಹತ್ಯೆಗೆ ಕಣ್ಣೀರು ಹಾಕಿ ಹಲವರ ಕೆಂಗಣ್ಣಿಗೆ ಕೂಡ ಇವರು ಗುರಿಯಾಗಿದ್ದರು. ಅಯತೊಲ್ಲಾ ಅಲಿ ಖಮೇನಿ ಅವರದ್ದು ಮರೆಯಲಾಗದಂತಹ ವ್ಯಕ್ತಿತ್ವ, ಅವರು ನಮ್ಮ ಹೃದಯದಲ್ಲಿ ಸದಾ ಜೀವಂತವಾಗಿರುತ್ತಾರೆ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದರು.
ಇಂಥಾ ಫರ್ಹಾನಾ ಭಟ್ ತಮ್ಮ ಭಯಂಕರ ಅನುಭವ ಹಂಚಿಕೊಂಡಿದ್ದಾರೆ. ಅವಕಾಶದ ಹೆಸರಿನಲ್ಲಿ ತಮ್ಮನ್ನು ಹೇಗೆಲ್ಲಾ ಟ್ಯ್ರಾಪ್ ಮಾಡಲಾಯ್ತು ಎನ್ನುವುದನ್ನು ಹೇಳಿರುವ ಫರ್ಹಾನಾ, ನಿರ್ದೇಶಕ ನನ್ನನ್ನು ತನ್ನ ಬೆಡ್‌ರೂಮ್‌ನಲ್ಲಿ ಕೂಡ ಹಾಕಿದ್ದ ಎಂದು ಹೇಳಿದ್ದಾರೆ. ಮಾತನಾಡುತ್ತಾ ಭಾವುಕರಾಗಿದ್ದಾರೆ.
''ದೈನಿಕ್ ಭಾಸ್ಕರ್''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಫರ್ಹಾನಾ ಭಟ್, ನನ್ನ ಈ ಕಥೆ ನನ್ನ ವೃತ್ತಿ ಬದುಕಿನ ಆರಂಭದ್ದು ಎಂದು ಮಾತು ಶುರು ಮಾಡಿದ್ಧಾರೆ. ಆ ಸಮಯದಲ್ಲಿ ಚಿತ್ರವೊಂದರಲ್ಲಿ ಪ್ರಮುಖ ನಾಯಕಿಯ ಪಾತ್ರವನ್ನು ಕೊಡಿಸುವುದಾಗಿ ಹೇಳಿದ ಮಹಿಳಾ ಕೋಆರ್ಡಿನೇಟರ್ ಒಬ್ಬರು ಭರವಸೆ ನೀಡಿದ್ದರು ಎಂದು ಹೇಳಿರುವ ಫರ್ಹಾನಾ ಅವಕಾಶ ಬೇಕು ಅಂದರೆ ಈ ಕೂಡಲೇ ಮುಂಬೈಗೆ ಬಾ ಎಂದು ಆಕೆ ಬಲವಂತ ಮಾಡಿದಳು ಎಂದು ಹೇಳಿದ್ದಾರೆ.

ಮುಂಬೈಗೆ ನೀನು ಬಾ ಮಿಕ್ಕ ವ್ಯವಸ್ಥೆ ಎಲ್ಲ ನಾನು ಮಾಡ್ತೇನೆ ಎಂದು ಆಕೆ ನನಗೆ ಹೇಳಿದ್ದಳು, ಇಷ್ಟೇ ಅಲ್ಲ ಉಳಿದುಕೊಳ್ಳಲು ಒಳ್ಳೆಯ ಮತ್ತು ಸುರಕ್ಷಿತವಾದ ಹೋಟೆಲ್‌ನಲ್ಲಿ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಆಶ್ವಾಸನೆಯನ್ನು ಕೂಡ ನೀಡಿದಳು ಎಂದಿದ್ದಾರೆ.
ಅವಳ ಮಾತನ್ನು ನಂಬಿ ನಾನು ಹೆಚ್ಚೇನೂ ಯೋಚನೆ ಮಾಡದೇ ಮುಂಬೈಗೆ ಬಂದಿಳಿದೆ ಎಂದು ಹೇಳಿರುವ ಫರ್ಹಾನಾ, ಮುಂಬೈಗೆ ನಾನು ಕಾಲಿಡುತ್ತಿದ್ದಂತೆಯೇ ಹೋಟೆಲ್ ರೂಮ್‌ಗೆ ಕರೆದೊಯ್ಯದ ಆಕೆ ಸೀದಾ ನನ್ನನ್ನು ಖ್ಯಾತ ಮತ್ತು ಪ್ರಭಾವಿ ನಿರ್ದೇಶಕನ ಫಾರ್ಮ್‌ಹೌಸ್‌ಗೆ ಕರೆದೊಯ್ದಳು ಎಂದಿದ್ದಾರೆ.
ನಾನು ಅಲ್ಲಿ ಹೋದ ಮೇಲೆ ನನಗೆ ಅನುಮಾನ ಬರಲು ಶುರುವಾಯ್ತು ಎಂದು ಹೇಳಿರುವ ಫರ್ಹಾನಾ, ಆ ಕ್ಷಣಕ್ಕೆ ನನಗೇನು ಮಾಡಬೇಕೆಂದು ದಿಕ್ಕೆ ತೋಚಲಿಲ್ಲ, ನಾನು ಸಂಪೂರ್ಣ ಅಸಹಾಯಕಳಾಗಿದ್ದೆ ಎಂದಿದ್ದಾರೆ.
ಮುಂದುವರೆದು ಆ ರಾತ್ರಿ ಆ ಖ್ಯಾತ ನಿರ್ದೇಶಕನ ಫಾರ್ಮ್‌ಹೌಸ್‌ನಲ್ಲಿ ನನ್ನ ಕೈಗೆ ಒಪ್ಪಂದ ಪತ್ರವನ್ನು ನೀಡಲಾಯ್ತು ಎಂದು ಹೇಳಿರುವ ಫರ್ಹಾನಾ, ಆ ಅಗ್ರಿಮೆಂಟ್ ಪೇಪರ್ ಓದಿದಿ ನಂತರ ನನಗೆ ಮಾನಸಿಕ ಆಘಾತವಾಯ್ತು ಎಂದು ಹೇಳಿದ್ದಾರೆ.
ಚಿತ್ರದ ಕುರಿತು, ಸಂಭಾವನೆಯ ಕುರಿತು ಅದರಲ್ಲಿ ಯಾವ ಮಾಹಿತಿ ಇರಲಿಲ್ಲ ಬದಲಿಗೆ ಡೈರೆಕ್ಟರ್ ಜೊತೆ ಕೆಲ ದಿನ ಕಾಲ ಕಳೆಯಬೇಕು, ಕಡ್ಡಾಯವಾಗಿ ಫಾರ್ಮ್‌ಹೌಸ್‌ನಲ್ಲಿಯೇ ವಾಸ ಮಾಡಬೇಕೆಂದೆಲ್ಲ ಬರೆಯಲಾಗಿತ್ತು ಎಂದು ಹೇಳಿರುವ ಫರ್ಹಾನಾ ಅದನ್ನು ಓದಿದ ನಂತರ ನಾನು ಬಹುದೊಡ್ಡ ಜಾಲದಲ್ಲಿ ಸಿಲುಕಿಕೊಂಡಿದ್ದೇನೆ ಎನ್ನುವುದು ನನಗೆ ಸ್ಪಷ್ಟವಾಯ್ತು ಎಂದಿದ್ದಾರೆ.
ಆ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದಾಗ, ಆ ವ್ಯಕ್ತಿ ಅಸಲಿ ರೂಪ ಪ್ರದರ್ಶಿಸಿದ ಎಂದು ಹೇಳಿರುವ ಫರ್ಹಾನಾ, ನಾನು ಅಲ್ಲಿಂದ ತಪ್ಪಿಸಿಕೊಳ್ಳಬಾರದೆಂದು ಬಲವಂತದಿಂದ ನನ್ನನ್ನು ಬೆಡ್ ರೂಮ್‌ನಲ್ಲಿ ಕೂಡಿ ಹಾಕಲಾಯ್ತು ಎಂದು ಬಿಕ್ಕಿದ್ದಾರೆ.
ಆ ಕ್ಷಣ ನಿಜಕ್ಕೂ ಭಯಾನಕವಾದದ್ದು ಎಂದು ಹೇಳಿರುವ ಫರ್ಹಾನಾ, ನನಗೆ ತುಂಬಾನೇ ಭಯ ಆಗಿತ್ತು. ಆದರೆ ನಾನು ಸೋಲು ಒಪ್ಪಿರಲಿಲ್ಲ. ಹೇಗಾದರೂ ಮಾಡಿ ಅಲ್ಲಿಂದ ಹೊರ ಬರಬೇಕು ಎಂದುಕೊಂಡು ಅಲ್ಲಿಯೇ ರೂಮ್‌ನಲ್ಲಿದ್ದ ಹೂವಿನ ಕುಂಡ ಕೈಯಲ್ಲಿ ಹಿಡಿದುಕೊಂಡು ನಿಂತೆ ಎಂದು ಹೇಳಿದ್ದಾರೆ.
ಸದ್ಯ ಫರ್ಹಾನಾ ಭಟ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಬಾಲಿವುಡ್‌ನಲ್ಲಿ ಯಾವುದೇ ಗಾಡ್‌ಫಾದರ್ ಇಲ್ಲದೆ ಹೊಸಬರು ನೆಲೆಯೂರುವುದು ತುಂಬಾನೇ ಕಷ್ಟ ಎನ್ನುವುದಕ್ಕೆ ಇದೊಂದು ನಿದರ್ಶನ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.


Click it and Unblock the Notifications