ಚಿತ್ರೀಕರಣ ನಡೆಸದಂತೆ ನಮ್ಮ ಮೇಲೆ ಫತ್ವಾ ಹೊರಡಿಸಲಾಗಿತ್ತು: ನಿರ್ಮಾಪಕಿ ಪಲ್ಲವಿ ಜೋಶಿ
ವಿವೇಕ್ ಅಗ್ನಿಹೋತ್ರಿಯವರ 'ದಿ ಕಾಶ್ಮೀರ್ ಫೈಲ್ಸ್' ರಾಷ್ಟ್ರಾದ್ಯಂತ ಅಸಾಧಾರಣ ವಿಮರ್ಶೆಗಳೊಂದಿಗೆ ಜನಸಾಮಾನ್ಯರ ಮೌತ್ ಪಬ್ಲಿಸಿಟಿ ಕೂಡ ಸೇರಿ ಚಿತ್ರ ಯಶಸ್ಸನ್ನು ಕಾಣುತ್ತಿದೆ. ಚಿತ್ರದ ನಿರ್ಮಾಣದ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದ ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿ ಮತ್ತು ನಿರ್ಮಾಪಕಿ ಪಲ್ಲವಿ ಜೋಶಿ, ದೊಡ್ಡ ಪರದೆಯ ಮೇಲೆ ತರಲು ಇದು ಸುಲಭವಾದ ಚಿತ್ರವಾಗಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇವಲ 630 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾದರೂ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ 'ದಿ ಕಾಶ್ಮೀರ್ ಫೈಲ್ಸ್' ತನ್ನ ಆರಂಭಿಕ ದಿನದಲ್ಲಿ 3.55 ಕೋಟಿ ರೂ ಗಳಿಸಿದೆ, ಇದು ಸ್ವತಃ ಒಂದು ದಾಖಲೆಯಾಗಿದೆ, ಚಲನಚಿತ್ರವನ್ನು ಸಣ್ಣ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ ಮತ್ತು ಯಾವುದೇ ಮುಖ್ಯವಾಹಿನಿಯ ಬಾಲಿವುಡ್ ತಾರೆಯರನ್ನು ಈ ಚಿತ್ರ ಹೊಂದಿಲ್ಲ. ಕಣಿವೆಯಿಂದ ಕಾಶ್ಮೀರಿ ಪಂಡಿತರ ನಿರ್ಗಮನವನ್ನು ಆಧರಿಸಿದ ಚಲನಚಿತ್ರವು ನಿರೀಕ್ಷೆಗಳನ್ನು ಸ್ಪಷ್ಟವಾಗಿ ಮೀರಿ ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಮತ್ತು ಸಕಾರಾತ್ಮಕ ಮಾತುಗಳಿಂದ ಚಿತ್ರ ದಿನೇ ದಿನೇ ಜನಸಾಮಾನ್ಯರನ್ನು ತನ್ನೆಡೆಗೆ ಸೆಳೆಯುತ್ತಿದೆ.

ಕಣಿವೆಯಿಂದ ಹೊರಬಿದ್ದ 5ಲಕ್ಷ ಪಂಡಿತರ ಕಥೆ
1990 ರಲ್ಲಿ ಕಣಿವೆಯಲ್ಲಿ ತಮ್ಮ ಬಳಿ ಇದ್ದ ಎಲ್ಲವನ್ನೂ ಬಿಟ್ಟು ಹೊರಹೋಗಬೇಕಾಗಿದ್ದ ಐದು ಲಕ್ಷಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರ ದುಸ್ಥಿತಿಯನ್ನು ಹೊರತರುವ ಪ್ರಾಮಾಣಿಕ ಮತ್ತು ಶ್ರದ್ಧೆಯ ಪ್ರಯತ್ನಕ್ಕಾಗಿ ಚಲನಚಿತ್ರವನ್ನು ಪ್ರಶಂಸಿಸಲಾಗುತ್ತಿದೆ. ಆದರೆ ಇಂತಹ ಒಂದು ವಾಸ್ತವಿಕ ಚಿತ್ರವನ್ನು ತೆರೆಗೆ ತರುವುದು ಸುಲಭದ ಮಾತಲ್ಲ. 'ದಿ ಕಾಶ್ಮೀರ್ ಫೈಲ್ಸ್' ನ ಸ್ಕ್ರಿಪ್ಟ್ ರಿಯಾಲಿಟಿ ಯನ್ನು ಬೇಸ್ ಮಾಡಿಕೊಂಡೆ ಮಾಡಲಾಗಿದೆ. ಇದರಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅಪಾರವಾದ ಶ್ರಮವನ್ನು ವಹಿಸಿದ್ದಾರೆ.

ಚಿತ್ರದ ಮೇಕಿಂಗ್ ಬಗ್ಗೆ ಮಾತನಾಡಿರುವ ನಿರ್ಮಾಪಕಿ
ಇತ್ತೀಚೆಗೆ ಖಾಸಗಿ ವಾಹಿನಿಯೊಂದರ ಜೊತೆ ಚಿತ್ರದ ಮೇಕಿಂಗ್ ಬಗ್ಗೆ ಮಾತನಾಡಿರುವ ನಿರ್ಮಾಪಕಿ ಪಲ್ಲವಿ ಜೋಶಿ, "ನಾವು ಚಿತ್ರೀಕರಣಕ್ಕೆ ಮೀಸಲಿಟ್ಟಿದ್ದು ಕೇವಲ ಒಂದು ತಿಂಗಳು ಮಾತ್ರ. ಚಿತ್ರ ಮಾಡಲು ಬೇಕಾದ ಸಂಶೋಧನೆ, ಅದಕ್ಕೆ ಬೇಕಾದ ತಯಾರಿ ಮತ್ತು ಸ್ಕ್ರಿಪ್ಟ್ ವರ್ಕ್ ಮಾಡಲು ಸುಮಾರು ನಾಲ್ಕು ವರ್ಷ ಹಿಡಿಯಿತು. ಶೂಟಿಂಗ್ ನಮ್ಮ ಇಡೀ ಪ್ರಯಾಣದ ಚಿಕ್ಕ ಭಾಗವಾಗಿತ್ತು. ಸಂಶೋಧನೆ, ಜನರನ್ನು ತಲುಪುವುದು, ಚಿತ್ರಕ್ಕೆ ಹಣ ಪಡೆಯುವುದು, ನಟರನ್ನು ಸೇರಿಸುವುದು ಎಲ್ಲವೂ ದೊಡ್ಡ ಸವಾಲಾಗಿತ್ತು" . ಇದೇ ಸಮಯದಲ್ಲಿ ಮತ್ತೊಂದು ಆಘಾತಕಾರಿಯಾದ ಅಂಶವನ್ನು ಕೂಡ ಅವರು ಬಹಿರಂಗಪಡಿಸಿದ್ದಾರೆ. ಅದೇ ಚಿತ್ರೀಕರಣದ ಸಮಯದಲ್ಲಿ ತಮ್ಮ ಪತಿ ಹಾಗೂ ಚಿತ್ರದ ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿ ಮತ್ತು ತಮ್ಮ ವಿರುದ್ಧ ಕಾಶ್ಮೀರದಲ್ಲಿ ಫತ್ವಾ ಹೊರಡಿಸಿದ ಘಟನೆ ಬಗ್ಗೆ ವಿವರವಾಗಿ ಹೇಳುವ ಅವರು "ಚಿತ್ರೀಕರಣವು ಸುಲಭವಾಗಿ ನಡೆಯುತ್ತಿತ್ತು ಆದರೆ ಕೊನೆಯ ದೃಶ್ಯಗಳನ್ನು ನಾವು ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ ಚಿತ್ರೀಕರಣ ಮುಂದುವರೆಸದಂತೆ ನಮ್ಮ ಹೆಸರಿನ ಮೇಲೆ ಫತ್ವಾ ಹೊರಡಿಸಲಾಗಿತ್ತು. ಅದೃಷ್ಟವಶಾತ್ ನಾವು ನಮ್ಮ ಕೊನೆಯ ದೃಶ್ಯದಲ್ಲಿದ್ದೇವೆ. ಈ ಸೀನ್ ಬೇಗ ಮುಗಿಸಿ ಏರ್‌ಪೋರ್ಟ್‌ಗೆ ಹೋಗೋಣ ಎಂದು ವಿವೇಕ್‌ಗೆ ಹೇಳಿದೆ, ಹೇಗಿದ್ದರೂ ನಾವು ಹೊರಡುತ್ತಿದ್ದೆವು, ಆದರೆ ನಾನು ಅವರಿಗೆ ಹೇಳಿದೆ, "ಏನೂ ಹೇಳಬೇಡಿ ಮತ್ತು ಈಗಲೇ ಶೂಟಿಂಗ್ ಮುಗಿಸೋಣ" ಏಕೆಂದರೆ ನಮಗೆ ಬರಲು ಮತ್ತೊಂದು ಅವಕಾಶ ಸಿಗುವುದಿಲ್ಲ. ಹಾಗಾಗಿ ನಾವು ಆ ದೃಶ್ಯವನ್ನು ಮುಗಿಸಿದೆವು ಮತ್ತು ನಾನು ಕೆಲವು ಜನರನ್ನು ಹೋಟೆಲ್‌ಗೆ ಕಳುಹಿಸಿದೆ ಮತ್ತು 'ನೀವು ಪ್ಯಾಕ್ ಮಾಡಲು ಪ್ರಾರಂಭಿಸಿ ಮತ್ತು ಎಲ್ಲವನ್ನೂ ಬ್ಯಾಗ್‌ನಲ್ಲಿ ಇರಿಸಿ ಮತ್ತು ಅದನ್ನು ಸೆಟ್‌ಗೆ ತೆಗೆದುಕೊಂಡು ಹೋಗುತ್ತೇವೆ ಮತ್ತು ನಾವು ಅಲ್ಲಿಂದ ಹೊರಡುತ್ತೇವೆ' ಎಂದು ಹೇಳಿದೆ. ನಾವು ಎದುರಿಸಿದ ಏಕೈಕ ಸವಾಲು ಅದು. ಶೂಟಿಂಗ್ ಮಾಡುವಾಗ ನಾವು ಎದುರಿಸಿದ ಅತ್ಯಂತ ಕಠಿಣ ಸಂದರ್ಭ ಅದಾಗಿತ್ತು" ಅಂತ ಮೆಲಕು ಹಾಕಿಕೊಂಡಿದ್ದಾರೆ.

ವಿವೇಕ್ ಅಗ್ನಿಹೋತ್ರಿಯ 'ದಿ ಕಾಶ್ಮೀರ ಫೈಲ್ಸ್'
ವಿವೇಕ್ ಅಗ್ನಿಹೋತ್ರಿಯ 'ದಿ ಕಾಶ್ಮೀರ ಫೈಲ್ಸ್' ಕಠಿಣವಾದ, ಬಹುತೇಕ ದೇಶದ ಜನಸಾಮಾನ್ಯರ ಎದುರಲ್ಲೇ ಘಟಿಸಿದ ಘಟನೆಗಳು...ತಮ್ಮದೇ ಸ್ವಂತ ನೆಲೆಯಿಂದ ಕಾಶ್ಮೀರಿ ಪಂಡಿತರು ಎಲ್ಲವನ್ನು ಕಳೆದುಕೊಂಡು ನಿರ್ಗತಿಕರಾಗಿ ದೆಹಲಿಯ ಕಡೆಗೆ ಮುಖ ಮಾಡಿದ ಅಂದಿನ ಭಯಂಕರ ದೃಶ್ಯಾವಳಿಗಳನ್ನು ಮತ್ತೆ ನಮ್ಮ ಮುಂದೆ 'ದಿ ಕಾಶ್ಮೀರ್ ಫೈಲ್ಸ್' ತಂದು ನಿಲ್ಲಿಸುತ್ತದೆ. ಚಿತ್ರವನ್ನು ಇಡಿಯಾಗಿ ಆವರಿಸಿಕೊಳ್ಳುವುದು ಪುಷ್ಕರ್ ನಾಥ್ ಪಂಡಿತ್ ಪಾತ್ರಧಾರಿಯಾದ ಅನುಪಮ್ ಖೇರ್ ಅವರು. ಇವರೊಂದಿಗೆ ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ದರ್ಶನ್ ಕುಮಾರ್, ಭಾಷಾ ಸುಂಬ್ಳಿ, ಚಿನ್ಮಯ್ ಮಾಂಡ್ಲೇಕರ್, ಪುನೀತ್ ಇಸ್ಸಾರ್, ಪ್ರಕಾಶ್ ಬೆಳವಾಡಿ, ಮೃಣಾಲ್ ಕುಲಕರ್ಣಿ, ಅತುಲ್ ಶ್ರೀವಾಸ್ತವ್ ಮತ್ತು ಇತರರ ಅಭಿನಯವು ನಿಮ್ಮನ್ನು ಬೆಚ್ಚಿಬೀಳಿಸುತ್ತದೆ.

ಸ್ವತಂತ್ರ ಭಾರತದಲ್ಲಿನ ಅತಿದೊಡ್ಡ ವಲಸೆ
ಇಡೀ ಚಿತ್ರವನ್ನು ಮುನ್ನಡೆಸುವ ಪುಷ್ಕರ್ ನಾಥ್ ಪಂಡಿತ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ಅನುಪಮ್ ಖೇರ್ ಅವರು ಫಸ್ಟ್‌ಪೋಸ್ಟ್‌ಗೆ ಗೆ ನೀಡಿದ ಸಂದರ್ಶನದಲ್ಲಿ "ಕಾಶ್ಮೀರಿ ಪಂಡಿತರ ನಿರ್ಗಮನದ ಬಗ್ಗೆ ಮಾಧ್ಯಮ, ರಾಜಕಾರಣಿಗಳು, ಬುದ್ಧಿಜೀವಿಗಳು, ಬರಹಗಾರರು ಎಲ್ಲರೂ ಅದನ್ನು ವ್ಯವಸ್ಥಿತವಾಗಿ ಅಡಿಯಲ್ಲಿ ಹೊಸಕಿ ಹಾಕಲು ಯತ್ನಿಸಿದರು" ಎಂದು ಖೇರ್ ಹೇಳಿದ್ದಾರೆ. "ಇದು ಸರಳವಾದ ವಿಷಯವಾಗಿರಲಿಲ್ಲ. ಹತ್ಯೆಯಾದವರು 10-12 ಜನರಲ್ಲ. ಲೆಕ್ಕವಿಲ್ಲದಷ್ಟು ಜನರು ಕೊಲ್ಲಲ್ಪಟ್ಟರು, ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರು, ಮನೆಗಳನ್ನು ಸುಡಲಾಯಿತು. ತದನಂತರ ಜನವರಿ 19, 1990. ಆ ರಾತ್ರಿ 4 ಲಕ್ಷಕ್ಕೂ ಹೆಚ್ಚು ಜನರನ್ನು ಅವರ ಮನೆಗಳಿಂದ ಹೊರಹಾಕಲಾಯಿತು. ನನ್ನ ತಾಯಿಯ ಕಿರಿಯ ಸಹೋದರನೂ ಅಲ್ಲಿದ್ದನು. ಇದು ಸ್ವತಂತ್ರ ಭಾರತದಲ್ಲಿನ ಅತಿದೊಡ್ಡ ವಲಸೆ ಮತ್ತು ನರಮೇಧವಾಗಿದೆ" ಅಂತ ಅನುಪಮ್ ಖೇರ್ ಹೇಳಿದ್ದಾರೆ.


Click it and Unblock the Notifications











