ಫೈಟರ್ ಸೋಲಿಗೆ 90 % ಕಥೆ ಹೇಳಿದ ನಿರ್ದೇಶಕ ; ಕೆರಳಿ ಕೆಂಡವಾದ ಸಿನಿಮಾಸಕ್ತರು
ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ ತಮ್ಮ ಚಿತ್ರ 100 ಕೋಟಿಯ ಗಡಿ ದಾಟಿದರೆ ಸಾಕು ಎಂದು ಹಿಂದಿ ಉದ್ಯಮದವರು ಪ್ರಾರ್ಥನೆ ಮಾಡ್ತಿದ್ದರು. ಆ ನಂತರ ಕಾಲ ಬದಲಾದಂತೆ ಆಸೆ ಹೆಚ್ಚಾಯಿತು. ವ್ಯಾಪಾರ ವಿಸ್ತರಿಸಿತು. 100 ಕೋಟಿಯ ಬದಲು 200.. 300..400 ಹಾಗೂ 500 ಕೋಟಿ ಕೊಳ್ಳೆ ಹೊಡೆಯಲು ನಾನಾ ಕಸರತ್ತು ಆರಂಭವಾದವು. ಕೆ.ಜಿ.ಎಫ್.. ಪಠಾಣ್ ಹಾಗೂ ಜವಾನ್ ನಂತರ 500 ಕೋಟಿಗೆ ಸೀಮಿತವಾಗಿದ್ದ ಬಯಕೆ ಇನ್ನೂ ಹೆಚ್ಚಾಯಿತು. ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ ಬಾಲಿವುಡ್ ನಲ್ಲಿ ಎಲ್ಲರೂ ಕುಬೇರ ವರಕ್ಕೆ ಪ್ರಾರ್ಥನೆ ಮಾಡ್ತಿದ್ದಾರೆ. ತಾವೂ ಕೂಡ 1000 ಕೋಟಿಯ ಸರದಾರನಾಗಬೇಕೆಂಬ ನಿಟ್ಟಿನಲ್ಲಿ ಪ್ರಯತ್ನವನ್ನ ಮಾಡ್ತಿದ್ದಾರೆ.
ಹೃತಿಕ್ ರೋಷನ್ ಅಭಿನಯದ ಫೈಟರ್ ಇದೇ ಪ್ರಯತ್ನದ ಒಂದು ಭಾಗ. ಆದರೆ ದುರಾದೃಷ್ಟ ಫೈಟರ್ ಅಂದುಕೊಂಡತೆ ಆಗಲಿಲ್ಲ. 1000 ಬಿಡಿ 200 ಕೋಟಿಯನ್ನ ಕೂಡ ಭಾರತದಲ್ಲಿ ಗಳಿಸಲಿಲ್ಲ. ಈ ಕಾರಣಕ್ಕೆ ಮಾಯಾನಗರಿ ಮುಂಬೈನಲ್ಲಿ ಈಗ ಫೈಟರ್ ಚಿತ್ರದ ಅಸಾಧಾರಣ ಗಳಿಕೆ ಕುರಿತು ಚರ್ಚೆಗಳು ಈಗ ಆರಂಭವಾಗಿವೆ.

ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು ಎಂಬಂತೆ ನಡೆಯುತ್ತಿರುವ ಚರ್ಚೆ ಹಾಗೂ ಚಿತ್ರದ ಬಗ್ಗೆ ವ್ಯಕ್ತವಾಗ್ತಿರುವ ಸಾರ್ವತ್ರಿಕ ಅಭಿಪ್ರಾಯ, ಫೈಟರ್ ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರನ್ನ ಕೆರಳಿಸಿದೆ. ಹೀಗಾಗಿಯೇ ಆತ್ಮಾವಲೋಕನದ ಹೆಸರಿನಲ್ಲಿ ಚಿತ್ರದ ಗಳಿಕೆಯ ಕುರಿತು ಮಾತನಾಡಿರುವ ಸಿದ್ಧಾರ್ಥ್ ಆನಂದ್ ಪ್ರೇಕ್ಷಕರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ.
ಫೈಟರ್ ಚಿತ್ರದ ಸೋಲಿನ ಕುರಿತು ಮಾತನಾಡಿರುವ ಸಿದ್ಧಾರ್ಥ್ ಆನಂದ್, ಭಾರತದಲ್ಲಿರುವ ಶೇಕಡಾ 90ರಷ್ಟು ಜನ ಇಲ್ಲಿಯವರೆಗೆ ವಿಮಾನ ನಿಲ್ದಾಣವನ್ನೇ ನೋಡಿಲ್ಲ, ವಿಮಾನದಲ್ಲಿ ಒಮ್ಮೆಯೂ ಪ್ರಯಾಣ ಕೂಡ ಮಾಡಿಲ್ಲ. ಹೀಗಿದ್ದಾಗ ಫೈಟರ್ ಜೊತೆ ಭಾವನಾತ್ಮಕವಾದ ಬೆಸುಗೆ ಬೆಸೆಯಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ ಸಿದ್ಧಾರ್ಥ್ ಆನಂದ್.
ಇನ್ನೂ ಇದೇ ಸಂದರ್ಶನದಲ್ಲಿ ಶೇಕಡಾ 90ರ ಅನುಪಾತದಲ್ಲಿ, ಬೇರೆ ಚಿತ್ರಗಳ ಗೆಲುವನ್ನೂ ವಿಶ್ಲೇಷಿಸಿರುವ ಸಿದ್ಧಾರ್ಥ್ ಆನಂದ್ ಜುರಾಸಿಕ್ ಪಾರ್ಕ್ ಗೆಲ್ಲಲು ನಮ್ಮ ಜನಕ್ಕೆ ಇರುವ ಕುತೂಹಲ ಕಾರಣ ಎಂದಿದ್ದಾರೆ. ಏಕ್ ಥಾ ಟೈಗರ್ ಗೆಲ್ಲಲು ಭಾರತದಲ್ಲಿರುವ ಶೇಕಡಾ 90ರಷ್ಟು ಜನ RAW ಏಜೆಂಟ್ಸ್ ಕಾರಣ ಅಂದಿದ್ದಾರೆ. ಅವತಾರ್ ಸಿನಿಮಾ ಕೋಟ್ಯಂತರ ರೂಪಾಯಿ ಹಣ ಗಳಿಸಲು ನಮ್ಮ ಜನಕ್ಕೆ ನೀಲಿ ಬಣ್ಣದ ಮೇಲಿರುವ ಆಕರ್ಷಣೆ ಕಾರಣ ಅಂದಿದ್ದಾರೆ.
ಸದ್ಯಕ್ಕೆ ಸಿದ್ಧಾರ್ಥ್ ಆನಂದ್ ಅವರ ಈ ಶೇಕಡಾ 90 ಪ್ರತಿಶತ ಲೆಕ್ಕ ಉಲ್ಪಾ ಹೊಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಶೇಕಡಾ 90ರಷ್ಟು ಜನ ಸಿದ್ಧಾರ್ಥ್ ಆನಂದ್ ಮೇಲೆ ಮುಗಿ ಬಿದ್ದಿದ್ದಾರೆ. ತರಾಟೆಗೆ ತೆಗೆದುಕೊಳ್ತಿದ್ದಾರೆ. ಥರೇವಾರಿಯಾಗಿ ಸಿದ್ಧಾರ್ಥ್ ಆನಂದ್ ಅವರನ್ನ ಟ್ರೋಲ್ ಕೂಡ ಮಾಡ್ತಿದ್ದಾರೆ. ಆ ಪೈಕಿ ಕೆಲ ಟ್ರೋಲ್ ಗಳು ಇಲ್ಲಿವೆ.


Click it and Unblock the Notifications











