ಯಶ್ ನಿರ್ಮಾಣದ 'ರಾಮಾಯಣ' ಚಿತ್ರದಲ್ಲಿ ರಣ್‌ಬೀರ್, ಸಾಯಿ ಪಲ್ಲವಿ ಲುಕ್ ಲೀಕ್
ನಿತೇಶ್ ತಿವಾರಿ ನಿರ್ದೇಶನದಲ್ಲಿ 'ರಾಮಾಯಣ' ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿತ್ರದಲ್ಲಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತಾಮಾತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಸದ್ಯ ಇಬ್ಬರೂ ಚಿತ್ರೀಕರಣದಲ್ಲಿ ಭಾಗಿ ಆಗಿದ್ದು ಫಸ್ಟ್ ಲುಕ್ ಫೋಟೊಗಳು ಲೀಕ್ ಆಗಿದೆ. ಇಬ್ಬರನ್ನು ಸೀರಾ-ರಾಮರ ಲುಕ್‌ನಲ್ಲಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ನಮಿತ್ ಮಲ್ಹೋತ್ರಾ ಜೊತೆ ಸೇರಿ ನಟ ಯಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್ ನಟಿಸೋಕೆ ಬಹುತೇಕ ಖಚಿತವಾಗಿದೆ. ಬಹುಕೋಟಿ ವೆಚ್ಚದಲ್ಲಿ 'ರಾಮಾಯಣ' ಕಾವ್ಯವನ್ನು ತೆರೆಮೇಲೆ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. 3 ಭಾಗಗಳಾಗಿ ಕಥೆಯನ್ನು ತೆರೆಗೆ ತರಲಾಗುತ್ತಿದೆ.

ಸಾಕಷ್ಟು ಭದ್ರತೆ ನಡುವೆ ಮುಂಬೈನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಸೆಟ್‌ನಲ್ಲಿ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯದಂತೆ ಚಿತ್ರತಂಡ ಆದೇಶಿಸಿದೆ. ಆದರೂ ಚಿತ್ರದ ಫೋಟೊಗಳು ಲೀಕ್ ಆಗಿರುವುದು ಚಿತ್ರತಂಡಕ್ಕೆ ಬೇಸರ ತಂದಿದೆ. ಈ ಹಿಂದೆ ಕೂಡ ಚಿತ್ರದ ಕೆಲ ಮೇಕಿಂಗ್ ಸ್ಟಿಲ್ಸ್ ಲೀಕ್ ಆಗಿದ್ದವು. ಜೂಮ್ ಟಿವಿ ವಾಹಿನಿ ಸದ್ಯ ಲೀಕ್ ಆಗಿರುವ ಫೋಟೊಗಳನ್ನು ಹಂಚಿಕೊಂಡಿದೆ.
ಅಧಿಕೃತವಾಗಿ 'ರಾಮಾಯಣ' ಸಿನಿಮಾ ಇನ್ನು ಘೋಷಣೆ ಆಗಿಲ್ಲ. ಕಳೆದೊಂದು ವರ್ಷದಿಂದ ಈ ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೀತಿತ್ತು. ತೆರೆಮರೆಯಲ್ಲಿ ಸಿನಿಮಾ ಕೆಲಸಗಳನ್ನು ನಡೆಯುತ್ತಾ ಬಂದಿತ್ತು. ಇತ್ತೀಚೆಗೆ ಮುಂಬೈನಲ್ಲಿ ಗುರುಕುಲದ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಾರೆ ಎನ್ನಲಾಗಿತ್ತು. ಅದಕ್ಕೆ ಸಂಬಂಧಿಸಿದ ಫೋಟೊಗಳು ಇದೇ ರೀತಿ ಲೀಕ್ ಆಗಿತ್ತು.
'ಅನಿಮಲ್' ಸಿನಿಮಾ ಬಳಿ ರಣ್‌ಬೀರ್ ಕಪೂರ್ 'ರಾಮಾಯಣ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ದಕ್ಷಿಣದ ನಟಿ ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿರುವುದು ವಿಶೇಷ. ಈ ಕಾಂಬಿನೇಷನ್ ಹೊಸತು. ಇನ್ನು ರಾಮ-ಸೀತೆಯಾಗಿ ಇಬ್ಬರ ಲುಕ್ ನೋಡಿ ಸಿನಿರಸಿಕರು ಮೆಚ್ಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೊಗಳು ಸಖತ್ ವೈರಲ್ ಆಗುತ್ತಿವೆ.
ಚಿತ್ರದಲ್ಲಿ ರಾವಣನಾಗಿ ಯಶ್ ನಟಿಸುತ್ತಾರೆ ಎನ್ನುವ ಮಾತುಗಳು ಬಹಳ ಹಿಂದೆಯೇ ಕೇಳಿಬಂದಿತ್ತು. ಆದರೆ ಈ ಬಗ್ಗೆ ಖಚಿತ ಮಾಹಿತಿ ಇನ್ನು ಲಭ್ಯವಾಗಿಲ್ಲ. ಆದರೆ ಯಶ್ ಚಿತ್ರ ನಿರ್ಮಾಣಕ್ಕೆ ನಮಿತ್ ಮಲ್ಹೋತ್ರಾ ಜೊತೆ ಕೈ ಜೋಡಿಸಿರುವುದು ವರದಿಯಾಗಿದೆ. ಇನ್ನು ಇತ್ತೀಚೆಗೆ ಮತ ಚಲಾಯಿಸಲು ಬಂದಿದ್ದ ವೇಳೆಯೂ 'ರಾಮಾಯಣ' ಸಿನಿಮಾ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಯಶ್ ಉತ್ತರಿಸಲಿಲ್ಲ.
ಈಗಾಗಲೇ ನಾಟಕ, ಸಿನಿಮಾ ರೂಪದಲ್ಲಿ ರಾಮಾಯಣ ಕಾವ್ಯ ಜನರ ಮುಂದೆ ಬಂದಿದೆ. ಆದರೂ ಹೊರ ರೂಪದಲ್ಲಿ ಅದೇ ಕಾರಣಕ್ಕೆ ಹೇಳುವ ಪ್ರಯತ್ನ ನಡೀತಿದೆ. 'ದಂಗಲ್' ರೀತಿ ಅದ್ಭುತ ಸಿನಿಮಾ ಕೊಟ್ಟ ನಿತೇಶ್ ತಿವಾರಿ ಆಕ್ಷನ್ ಕಟ್ ಹೇಳುತ್ತಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಯಶ್ ನಿರ್ಮಾಪಕರಾಗಿಯೂ ಕೈ ಜೋಡಿಸಿರುವುದು ನಿರೀಕ್ಷೆ ಹೆಚ್ಚಿಸಿದೆ.
'ರಾಮಾಯಣ' ಮೊದಲ ಭಾಗದಲ್ಲಿ ರಾವಣನ ಪಾತ್ರದ ಬಗ್ಗೆ ಹೆಚ್ಚು ತೋರಿಸಲ್ಲ ಎನ್ನಲಾಗ್ತಿದೆ. ಹಾಗಾಗಿ ಯಶ್ ನಿಧಾನವಾಗಿ ಚಿತ್ರೀಕರಣದಲ್ಲಿ ಭಾಗಿ ಆಗುತ್ತಾರೆ ಎನ್ನುವ ಮಾತುಗಳು ಲಭ್ಯವಾಗುತ್ತಿದೆ. ಇನ್ನು ಯಶ್ 50-50 ಪಾರ್ಟ್‌ನರ್‌ಶಿಪ್‌ನಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇವತ್ತಿನ ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿಕೊಂಡು ಬಹಳ ರೋಚಕವಾಗಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ.
ಬಾಲಿವುಡ್ ಮಾತ್ರವಲ್ಲ ದಕ್ಷಿಣದ ಕಲಾವಿದರು 'ರಾಮಾಯಣ' ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ. ವಿಭಿಷಣ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸುವ ಸಾಧ್ಯತೆಯಿದೆ. ಸನ್ನಿ ಡಿಯೋಲ್, ಇಂದಿರಾ ಕೃಷ್ಣನ್, ರವಿ ದುಬೇ ಹೀಗೆ ಹಲವರು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ.


Click it and Unblock the Notifications











