ಪರೇಶ್ ರಾವಲ್ ನಂತರ ತನ್ನ 'ಮೂತ್ರ'ವನ್ನು ಕುಡಿದು ಇದು 'ಅಮೃತ' ಎಂದ ಖ್ಯಾತ ನಟಿ..!
ಸೀಸನ್ ಯಾವುದೇ ಇರಲಿ ದಿನಕ್ಕೊಂದು ಬಾರಿಯಾದರೂ ಹಣ್ಣಿನ ಜ್ಯೂಸ್ ಕುಡಿಯಬೇಕೆಂದು ಅನೇಕರು ಹೇಳುತ್ತಾರೆ. ಯಾವಾಗಲೂ ತಂಪು ಪಾನೀಯ ಮತ್ತು ಕಾರ್ಬೊನೇಟೆಡ್ ಸಕ್ಕರೆಯುಕ್ತ ಪಾನೀಯಗಳನ್ನು ಸೇವನೆ ಮಾಡಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲು ನೈಸರ್ಗಿಕ ರೂಪದ ಹಣ್ಣು ಮತ್ತು ತರಕಾರಿಗಳಿಂದ ಸಿಗುವ ರಸಗಳನ್ನು ಕುಡಿದರೆ ಆರೋಗ್ಯ ವೃದ್ಧಿಯಾಗುತ್ತೆ ಎನ್ನುವುದು ಹಲವರ ಅಭಿಮತ. ಆದರೆ ಈಗೀಗ ಹಣ್ಣಿನ ಜ್ಯೂಸ್
ಬದಲು ಮೂತ್ರ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಮಾತುಗಳನ್ನು ಹಲವರು ಹೇಳಲು ಶುರು ಮಾಡಿದ್ದಾರೆ. ಇದಕ್ಕೆ ಅನು ಅಗರ್‌ವಾಲ್ ಮತ್ತೊಂದು ಉದಾಹರಣೆ. ಹೌದು, ಅನು ಅಗರ್‌ವಾಲ್.. ಒಂದ್ಕಾಲದ ಆಶಿಕಿ.

1990ರಲ್ಲಿ ಆಶಿಕಿ ಚಿತ್ರದ ಮೂಲಕ ಅನೇಕ ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕಿದವರು ಇವರು. ಆದರೆ ಆ ನಂತರ ಇವರ ವೃತ್ತಿ ಬದುಕು ಹಳಿ ತಪ್ಪಿತು ಎನ್ನುವುದು ಬೇರೆ ವಿಷಯ. ಇಂಥಾ ಅನು ಅಗರ್ ವಾಲ್ ಸದ್ಯ ಮೂತ್ರವನ್ನು ಅಮೃತಕ್ಕೆ ಹೋಲಿಸಿದ್ದಾರೆ. ಮೂತ್ರ ಕುಡಿಯುವದರಿಂದ ಆಗುವ ಪ್ರಯೋಜನೆಗಳೇನು ಎಂದು ಹೇಳಿದ್ದಾರೆ.
ಈ ಕುರಿತು ಇನ್‌ಸ್ಟೆಂಟ್ ಬಾಲಿವುಡ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅನು ಅಗರ್ವಾಲ್, ಅಜ್ಞಾನವೋ ಅಥವಾ ಮಾಹಿತಿಯ ಕೊರತೆಯೋ ಗೊತ್ತಿಲ್ಲ. ಆದರೆ ತುಂಬಾ ಜನರಿಗೆ ಮೂತ್ರವನ್ನು ಕುಡಿಯುವುದು, ವಾಸ್ತವದಲ್ಲಿ ಯೋಗದಲ್ಲಿನ ಒಂದು ಅಭ್ಯಾಸ ಎನ್ನುವುದು ಹಲವರಿಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ನಾನು ಇದನ್ನು ಅಭ್ಯಾಸ ಮಾಡಿದ್ದೇನೆ, ಇದು ತುಂಬಾ ಮುಖ್ಯವಾದ ಅಭ್ಯಾಸ ಕೂಡ ಹೌದು ಎಂದಿರುವ ಅನು ಅಗರ್ವಾಲ್ ಪೂರ್ತಿ ಮೂತ್ರವನ್ನು ಕುಡಿಯಬೇಕಿಲ್ಲ ಎನ್ನುವುದನ್ನು ನೆನಪಿನಲ್ಲಿಡಿ ಎಂದು ಹೇಳಿದ್ದಾರೆ.
ಮೂತ್ರದಲ್ಲಿನ ನಿರ್ದಿಷ್ಟವಾದ ಭಾಗವನ್ನು ಮಾತ್ರ ಕುಡಿಯಬೇಕು ಎಂದಿರುವ ಅನು ಅಗರ್‌ವಾಲ್ ಆ ಭಾಗವನ್ನು ಅಮೃತ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದ್ಧಾರೆ. ಈ ಅಮೃತ ಕುಡಿಯುವುದರಿಂದ ಚರ್ಮ ಸುಕ್ಕಾಗುವುದಿಲ್ಲ ಎಂದು ಹೇಳಿರುವ ಅನು ಇದು ಕೇವಲ ಆರೋಗ್ಯಕ್ಕೆ ಅಲ್ಲ ಉತ್ತಮವಾದ ಜೀವನ ನಡೆಸಲು ಕೂಡ ಅನುಕೂಲವಾಗುತ್ತೆ ಎಂದು ಹೇಳಿದ್ದಾರೆ. ನನಗೆ ಈ ಅಭ್ಯಾಸದಿಂದ ವ್ಯೆಯಕ್ತಿಕವಾಗಿ ಲಾಭ ಆಗಿದೆ ಎಂದು ಹೇಳಿದ್ದಾರೆ. ಪ್ರಯೋಜಗಳನ್ನು ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ.
ಅನು ಅಗರ್ವಾಲ್ ಅವರ ಈ ಹೇಳಿಗೆ ಇದಕ್ಕೆ ವೈಜ್ಞಾನಿಕ ಪುರಾವೆ ಇದೆಯಾ ಎಂದು ನಿರೂಪಕ ಕೇಳಿದಾಗ, ವಿಜ್ಞಾನ ಎಷ್ಟು ಹಳೆಯದು ? ಅಬ್ಬಬ್ಬಾ ಅಂದರೆ 200 ವರ್ಷ ಹಳೆಯದ್ದಿರಬಹುದಾ ? ಆದರೆ ಯೋಗ ಹಾಗಲ್ಲ. ಅದಕ್ಕೆ ಹತ್ತು ಸಾವಿರ ವರ್ಷಗಳ ಇತಿಹಾಸ ಇದೆ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ನೀವು ಯಾರ ಪರ ಎನ್ನುವುದು ನಿಮಗೆ ಬಿಟ್ಟಿದ್ದು ಆದರೆ ನಾನು ಮೂತ್ರ ಕುಡಿಯುವುದನ್ನು ಬೆಂಬಲಿಸುತ್ತೇನೆ ಎಂದು ಅನು ಅಗರ್ವಾಲ್ ಹೇಳಿದ್ದಾರೆ.
ಸದ್ಯ ಅನು ಅಗರ್ವಾಲ್ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ವಿಡಿಯೋ ವೈರಲ್ ಆಗುತ್ತಿದೆ. ಅನೇಕರು ಈ ವಿಚಾರದ ಕುರಿತು ಚರ್ಚೆ ಮಾಡುತ್ತಿದ್ದಾರೆ. ಕೆಲವರು ಅನು ಅಗರ್ವಾಲ್ ಅವರ ಈ ಹೇಳಿಕೆಯನ್ನು ಸಮರ್ಥಿಸಿಕೊಂಡರೆ ಇನ್ನು ಕೆಲವರು ಇದು ಅಜ್ಞಾನದ ಪರಮಾವಧಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮೂತ್ರ ಕುಡಿಯುವದರಿಂದ ಚರ್ಮ ಸುಕ್ಕಾಗುವುದಿಲ್ಲ ಎಂದರೆ ನಿಮ್ಮ ಚರ್ಮ ಯಾಕೆ ಸುಕ್ಕಾಗಿದೆ, ನೀವು ಯಾಕೆ ವಯಸ್ಸಾದಂತೆ ಕಾಣುತ್ತಿದ್ದೀರಾ ಎಂದು ಪ್ರಶ್ನೆಯನ್ನು ಮಾಡುತ್ತಿದ್ದಾರೆ.
ಅಂದ್ಹಾಗೇ ಕೆಲ ದಿನಗಳ ಹಿಂದೆ ಪರೇಶ್ ರಾವಲ್ ತಮಗಾದ ಗಾಯವನ್ನು ಮೂತ್ರ ಕುಡಿದು ವಾಸಿ ಮಾಡಿಕೊಂಡಿದ್ದಾಗಿ ಹೇಳಿದ್ದರು. ಪರೇಶ್ ರಾವಲ್ ಅವರ ಈ ಹೇಳಿಕೆಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ಅನು ಅಗರ್‌ವಾಲ್ ಈ ಮೇಲಿನ ಮಾತುಗಳನ್ನು ಹೇಳಿದ್ದಾರೆ.


Click it and Unblock the Notifications











