ಯೋಗಾಸನ ಮಾಡುವ ಬದಲು 'ಗುಟ್ಕಾಸನ' ಮಾಡಿದ ಹೆಬ್ಬುಲಿ ನಟ ; ಬಿಜೆಪಿ ಸಂಸದ ರವಿ ಕಿಶನ್ ಯೋಗ ನೋಡಿ ಬಿದ್ದು ಬಿದ್ದು ನಗ್ತಿರೋ ಜನ
ಮಲ್ಟಿ ಜಿಮ್‌ಗಳ ಈ ಜಮಾನಾದಲ್ಲಿ ಈಗೀಗ ಅನೇಕರು ಯೋಗವನ್ನು ತಮ್ಮ ಜೀವನ ಶೈಲಿಯ ಒಂದು ಭಾಗವಾಗಿಸಿಕೊಂಡಿದ್ದಾರೆ. ಮನಸ್ಸಿನ ಏಕಾಗ್ರತೆ ಹೆಚ್ಚಿಸಲು.. ಖಿನ್ನತೆ.. ಆತಂಕ.. ಭಯ.. ನಕಾರಾತ್ಮಕ ಭಾವನೆಗಳಿಂದ ಹೊರ ಬರಲು ಅನೇಕರು ಯೋಗಾಭ್ಯಾಸ ಮಾಡುತ್ತಿದ್ದಾರೆ.
ಒಂದು ಅಧ್ಯಯನದ ಪ್ರಕಾರ ಜಗತ್ತಿನ ಮೂರನೇ ಒಂದಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಯೋಗಾಭ್ಯಾಸವನ್ನು ಮಾಡುತ್ತಿದೆ. ಆಂತರಿಕ ಬಲವನ್ನು ಕಂಡುಕೊಳ್ಳಲು ಯೋಗದ ಮೊರೆ ಹೋಗಿದೆ. ಇಂತಹ ಯೋಗದ ಮಹತ್ವವನ್ನು ಇವತ್ತು ಜಗತ್ತು ಅರಿತಿದೆ. ಆದರೆ, ಕೆಲವರು ಮಾತ್ರ ಈ ಯೋಗವನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಯೋಗದಲ್ಲಿ ಪರಿಣಿತಿ ಹೊಂದಿರುವಂತೆ ಫೋಸ್ ಕೊಡಲು ಹೋಗುತ್ತಾರೆ. ಕೊನೆಗೆ ನಗೆಪಾಟಲಿಗೀಡಾಗುತ್ತಾರೆ. ಉದಾಹರಣೆಗೆ ರವಿ ಕಿಶನ್ ಅವರನ್ನೇ ತೆಗೆದುಕೊಳ್ಳಿ.

ಹೌದು, ರವಿ ಕಿಶನ್.. ಭೋಜ್‌ಪುರಿಯ ಸೂಪರ್ ಸ್ಟಾರ್. ''ದೇವ್ ರಾಜ್''.. ''ಸತ್ಯಮೇವ ಜಯತೇ''.. ''ಕಟ್ಟಾ ತನಾಲ್ ದೂಗಾ''.. ''ಬಿಹಾರಿ ಬಾಬು''.. ''ಧುರಂಧರ್''.. ಹೀಗೆ ಭೋಜ್‌ಪುರಿಯಲ್ಲಿಯೇ 150ಕ್ಕೂ ಅಧಿಕ ಸಿನಿಮಾಗಳನ್ನು ಮಾಡಿರುವ ರವಿಕಿಶನ್ ಹಿಂದಿ ಚಿತ್ರರಂಗದಲ್ಲಿ ಕೂಡ ಕೆಲಸ ಮಾಡಿದ್ದಾರೆ. 100ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕೇವಲ ಹಿಂದಿ ಮಾತ್ರ ಅಲ್ಲ, ತೆಲುಗು, ತಮಿಳಿನಲ್ಲಿಯೂ ಕೂಡ ಅಭಿನಯಿಸಿರುವ ರವಿಕಿಶನ್ ಕನ್ನಡದಲ್ಲಿ ''ಹೆಬ್ಬುಲಿ'' ಚಿತ್ರದಲ್ಲಿ ಅಬ್ಬರಿಸಿದ್ದರು. ಆ ನಂತರ ''ದ್ರೋಣ''.. ''ಶಿವಾರ್ಜುನ''.. ''ರಾಬರ್ಟ್''.. ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು.
ಇನ್ನು ರವಿಕಿಶನ್ ಕೇವಲ ಆಕ್ಟರ್ ಮಾತ್ರ ಅಲ್ಲ. ರಾಜಕಾರಣಿ ಕೂಡ ಹೌದು.2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಗೋರಖ್‌ಪುರದಿಂದ ಸತತ ಎರಡನೇ ಬಾರಿ ಬಿಜೆಪಿ ಪರ ಕಣಕ್ಕಿಳಿದು, ಗೆಲುವಿನ ಧ್ವಜ ಹಾರಿಸಿದ ರವಿಕಿಶನ್ ಸದ್ಯ ಸಂಸದರಾಗಿ ಮುಂದುವರೆದಿದ್ದಾರೆ.
ಇಂಥಾ ರವಿಕಿಶನ್ ಅಂತರಾಷ್ಟ್ರೀಯ ಯೋಗಾಸನ ದಿನಕ್ಕೆ ಇನ್ನೂ 3 ದಿನಗಳೂ ಬಾಕಿ ಇರುವಾಗಲೇ ಗೋರಖ್‌ಪುರದಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ತಾವು ಮೀಮ್ ಮೆಟಿರೀಯಲ್ ಆಗಲಿದ್ದೇನೆ ಎಂದು ರವಿಕಿಶನ್ ಈ ಸಮಯದಲ್ಲಿ ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ.

ಹೌದು, ಅಸಲಿಗೆ ಈ ಯೋಗ ಕಾರ್ಯಕ್ರಮದಲ್ಲಿ ರವಿಕಿಶನ್, ಪ್ರಾಣಾಯಾಮ ಮಾಡಬೇಕಿತ್ತು. ಶವಾಸನ ಮಾಡಬೇಕಿತ್ತು. ತಾಡಾಸನ.. ವಜ್ರಾಸನ.. ಭುಜಂಗಾಸನ.. ಪದ್ಮಾಸನ.. ಹೀಗೆ ಬೇರೆ ಬೇರೆ ಭಂಗಿಗಳನ್ನು ಮಾಡಬೇಕಿತ್ತು. ಆದರೆ ಇದ್ಯಾವುದನ್ನು ಮಾಡದ ರವಿಕಿಶನ್ ಮಾಡಿದ್ದು ಮಾತ್ರ ''ಗುಟ್ಕಾಸನ್''. ಅಚ್ಚರಿ ಆದರೂ ಇದು ಸತ್ಯ.
ಕಾರ್ಯಕ್ರಮದಲ್ಲಿ ಯೋಗಾಸನ ಮಾಡಲು ಶಿಸ್ತಾಗಿ ಬಂದು ಕುಂತ ರವಿಕಿಶನ್, ಎಲ್ಲರ ಜೊತೆ ಕುಂತು ಯೋಗ ಏನೋ ಮಾಡುತ್ತಿದ್ದರು. ಆದರೆ ಇವರ ದವಡೆ ಮಾತ್ರ ಕಟ್ ಕಟ್ ಸದ್ದು ಮಾಡುತ್ತಿತ್ತು. ಇಷ್ಟೇ ಸಾಕಿತ್ತು. ವಿಡಿಯೋವನ್ನು ಜೂಮ್ ಮಾಡಿ ಮಾಡಿ ಕಣ್ತುಂಬಿಕೊಂಡ ಹಲವರು ಇದು ಯೋಗ ಅಲ್ಲ ಗುರು ಒಳಗಡೆ ಅಣ್ಣಾ ಗುಟ್ಕಾ ಹಾಕೊಂಡು ಜಗಿತಾವ್ರೆ ಎಂದು ರವಿಕಿಶನ್ ಅವರನ್ನು ಜಡಿಯಲು ಶುರು ಮಾಡಿದರು.
ಸದ್ಯ ಇವರ ಇದೇ ''ಗುಟ್ಕಾಸನ್''ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಯದ್ವಾ ತದ್ವಾ ವೈರಲ್ ಆಗಿದೆ. ಮೀಮ್ಸ್ ಪೈಲ್ವಾನರ ಕೈಗೆ ಇಂತಹದ್ದೊಂದು ಮೆಟಿರಿಯಲ್ ಸಿಕ್ಕರೆ ಬಿಡ್ತಾರಾ..? ಇದಕ್ಕೆ ಕೈಗನ್ನಡಿ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಹಬ್ಬ ನಡೆಯುತ್ತಿದೆ.
ಯೋಗದಲ್ಲಿ ರವಿಕಿಶನ್ ಹೊಸ ಆಸನ ಕಂಡು ಹಿಡಿದಿದ್ದಾರೆ ಎಂದು ಒಬ್ಬರು ಕಾಲೆಳೆದರೆ, ಮತ್ತೊಬ್ಬರು ಈ ಆಸನಕ್ಕೆ ''ಗುಟ್ಕಾಸನ'' ಎಂದು ನಾಮಕರಣ ಮಾಡಿ ಒಬ್ಬ ಎಂಪಿ ಮಾಡಿದ ಯೋಗನ ರಾಷ್ಟ್ರ ಮಟ್ಟದ ಕಾಮಿಡಿ ಶೋ ಎಂಬಂತೆ ಬಿಂಬಿಸಿದ್ದಾರೆ.
ಲೈಫ್‌ನಲ್ಲಿ ಯೋಗ ಮಾಡಲೇಬೇಕು ಅಂದರೆ ರವಿಕಿಶನ್ ಅವರಂತೆ ''ಗುಟ್ಕಾಸನ'' ಮಾಡಿ ಎಂದು ಮತ್ತೊಬ್ಬರು ಹೇಳಿದರೆ, ನಿಮ್ಮ ಯೋಗ ಟೀಚರ್‌ಗೆ ಗೊತ್ತಾಗದ ಹಾಗೆ ಕ್ಲಾಸ್ ಮಧ್ಯೆ ಗುಟ್ಕಾ ತಿನ್ನುವುದು ಹೇಗೆ..? ಎನ್ನುವುದನ್ನು ಸ್ಟೆಪ್ ಬೈ ಸ್ಟೆಪ್ ರವಿಕಿಶನ್ ಹೇಳಿ ಕೊಟ್ಟಿದ್ದಾರೆ ಎಂದು ಮಗದೊಬ್ಬರು ಟ್ರೋಲ್ ಮಾಡಿದ್ದಾರೆ.
ಇಷ್ಟೇ ಅಲ್ಲ ಈ ಚಿಕ್ಕ ವಿಡಿಯೋ ಇಂಟರ್ನೆಟ್‌ನಲ್ಲಿ ಎಷ್ಟರ ಮಟ್ಟಿಗೆ ಗಿರಕಿ ಹೊಡೆಯುತ್ತಿದೆ ಅಂದರೆ ಕೆಲವರು ಬಾಲಿವುಡ್‌ನ ಚಾರ್ಟ್ ಬಸ್ಟರ್ ಹಾಡುಗಳ ಜೊತೆ ಈ ವಿಡಿಯೋನ ಎಡಿಟ್ ಮಾಡಿ ಮಜಾ ತೆಗೆದುಕೊಳ್ಳುತ್ತಿದ್ದಾರೆ.
ಇನ್ನು ರವಿಕಿಶನ್ ಕೇವಲ ನಟ ಮಾತ್ರ ಅಲ್ಲ. ರಾಜಕಾರಣಿ ಕೂಡ ಹೌದು. ಈ ಹಿನ್ನೆಲೆವಿರೋಧ ಪಕ್ಷದವರು ಕೂಡ ರವಿಕಿಶನ್ ಬೆನ್ನ ಹಿಂದೆ ಬಿದ್ದಿದ್ದಾರೆ. ಒಂದ್ಕಡೆ ದೇಶಕ್ಕೆ ಹೆಲ್ತ್ ಟಿಪ್ಸ್ ಕೊಡ್ತೀರಾ, ಇನ್ನೊಂದ್ಕಡೆ ಯೋಗ ಮಾಡ್ತಾನೆ ಗುಟ್ಖಾ ಜಗಿತೀರಾ? ಸೂಪರ್ ಸ್ವಾಮಿ ನಿಮ್ಮ ಫಿಟ್‌ನೆಸ್..! ಎಂದು ವ್ಯಂಗ್ಯವಾಡುತ್ತಿದ್ದಾರೆ.
ಒಟ್ನಲ್ಲಿ ರವಿಕಿಶನ್ ನಿಜಕ್ಕೂ ಬಾಯಲ್ಲಿ ಗುಟ್ಕಾ ಇಟ್ಕೊಂಡಿದ್ದರಾ.? ಎನ್ನುವುದು ಅವರಿಗೆ ಗೊತ್ತಾದರೂ ಸದ್ಯ ಸಾಮಾಜಿಕ ಜಾಲತಾಣ ಈ ''ಗುಟ್ಕಾಸನ''ದಿಂದ ತುಂಬಿ ಹೋಗಿದೆ. ಈ ಟ್ರೋಲ್‌ಗಳಿಂದ ಪಾರಾಗಲು ರವಿಕಿಶನ್ ಮುಂದೆ ಯಾವ ಹೊಸ ಆಸನ ಮಾಡ್ತಾರೆ ಎನ್ನುವುದನ್ನು ಕಾದು ನೋಡಬೇಕು.


Click it and Unblock the Notifications