Year Ender 2024 ; ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ 05 ನಿರೀಕ್ಷಿತ ಚಿತ್ರಗಳು...!
ಸಿನಿಮಾ ಮಾಡುವುದು ಸುಲಭ ಅಲ್ಲ. ಅದೊಂದು ತಪಸ್ಸು. ಆದರೆ ಇದನ್ನರಿಯದ ಅನೇಕರು ಎಲ್ಲರ ಮುಂದೆ ಅಕಿರಾ ಕುರಸೋವಾನ ಶಿಷ್ಯರೆಂಬಂತೆ ಪೋಸು ಕೊಡುತ್ತಾರೆ. ಸಂತೆಯ ಹೊತ್ತಿಗೆ ಮೂರು ಮೊಳ ನೇಯ್ದಂತೆ ರೀಲು ಸುತ್ತಿ ಬಿಸಾಕುತ್ತಾರೆ. ಹೀಗೆ ಮಾಡುವ ಕೆಲ ಚಿತ್ರಗಳು ಯಾವ ಮಟ್ಟಿಗೆ ಖರಾಬಾಗಿರುತ್ತಾವೆ ಎಂದರೆ ಪ್ರೇಕ್ಷಕರ ಪಾಡು ಹೇಳತೀರದು.
ಇನ್ನೂ ನಿರ್ಮಾಪಕರ ಕಥೆ ದೇವರಿಗೆ ಗೊತ್ತು. ಯಾಕೆಂದರೆ ಎಲ್ಲೆಲ್ಲಿಂದಲೋ ಹಣ ಹೊಂದಿಸಿಕೊಂಡು ಬಂದು, ಕಲಾವಿದರು, ತಂತ್ರಜ್ಞರನ್ನೆಲ್ಲಾ ಒಂದು ಕಡೆ ಸೇರಿಸಿ ಸಿನಿಮಾ ಮಾಡಿ, ಅದನ್ನು ತೆರೆಗೆ ತರೋ ಹೊತ್ತಿಗೇ ನಿರ್ಮಾಪಕನ ಪರಿಸ್ಥಿತಿ ಅಕ್ಷರಶಃ ಹೆಣ ಬಿದ್ದಂತಾಗಿರುತ್ತದೆ. ಆದರೂ ಕೂಡ ಹಾಕಿದ ಬಂಡವಾಳದ ಮೇಲೆ ಚೂರು ಲಾಭ ಬರಬಹುದು ಎಂದುಕೊಂಡು ಅನೇಕರ ಎಲ್ಲೆಲ್ಲಿಂದಾ ತಂದು ದುಡ್ಡು ಸುರಿಯುತ್ತಾರೆ. ಚಿತ್ರವನ್ನು ನಿರ್ಮಾಣ ಮಾಡುತ್ತಾರೆ. ಆದರೆ, ಹಣೆಬರಹಕ್ಕೆ ಹೊಣೆ ಯಾರು ? ಒಮ್ಮೊಮ್ಮೆ ಲಾಭದ ಮಾತು ಒಂದು ಕಡೆ ಇರಲಿ ಹಾಕಿದ ಬಂಡವಾಳ ಕೂಡ ನಿರ್ಮಾಪಕರಿಗೆ ಮರಳಿ ಬರುವುದಿಲ್ಲ.

ಹೌದು, ಅಸಲಿಗೆ ಕಳೆದ ವರ್ಷ 12,226 ಕೋಟಿ ವ್ಯಾಪಾರ ವಹಿವಾಟು ಮಾಡಿದ್ದ ಬಾಲಿವುಡ್‌ನಲ್ಲಿ ಈ ವರ್ಷ ಕೂಡ ಹಣದ ಮಳೆ ಬೀಳುವ ನಿರೀಕ್ಷೆ ಇತ್ತು. ಒಂದು ಹಂತಕ್ಕೆ ಈ ನಿರೀಕ್ಷೆ ನಿಜಾ ಕೂಡ ಆಯಿತು. ಕೆಲ ಚಿತ್ರ ನಿರ್ಮಾಪಕರಿಗೆ ಕುಬೇರ ವರ ಕೂಡ ಸಿಕ್ಕಿತು. ಆದರೆ, ಈ ಚಿತ್ರಗಳೆಲ್ಲ ಈ ವರ್ಷ ಗೆದ್ದೇ ಗೆಲ್ಲುತ್ತಾವೆ ಎಂದು ಅನೇಕರು ಬಾಜಿ ಕಟ್ಟಿದ್ದ ಚಿತ್ರಗಳೆಲ್ಲ ಸೋತು ಹೋದವು. ಆ ಪೈಕಿ ತೋಪೆದ್ದ ಐದು ಚಿತ್ರಗಳ ಪಟ್ಟಿ ಇಲ್ಲಿದೆ.
ಬಡೇ ಮಿಯಾ ಚೋಟೆ ಮಿಯಾ
ಹೌದು, ನಿಮಗೆ ನೆನಪಿದ್ದರೆ ಈ ವರ್ಷ ಹಿಂದಿಯಲ್ಲಿ ಬಡೇ ಮಿಯಾ ಚೋಟೆ ಮಿಯಾ ಎಂಬ ಚಿತ್ರ ಬಂದಿತ್ತು. ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯಿಸಿದ್ದ ಸಿನಿಮಾ ಇದು. ಬಿಡುಗಡೆಗೆ ಮುನ್ನ ಅಪಾರವಾದ ನಿರೀಕ್ಷೆಯನ್ನು ಮೂಡಿಸಿದ್ದ ಈ ಚಿತ್ರ ಭಾರತದಲ್ಲಿ ಗಳಿಸಿದ್ದು ಕೇವಲ 60 ಕೋಟಿ ಹಣ ಮಾತ್ರ. ಆದರೆ, ಇದಕ್ಕೆ ಖರ್ಚಾಗಿದ್ದು ನೂರಲ್ಲ, ಇನ್ನೂರಲ್ಲ ಬದಲಿಗೆ 350 ಕೋಟಿ ಹಣ. ಇಷ್ಟೊಂದು ಹಣ ಹೂಡಿದ ನಿರ್ಮಾಪಕ ವಾಶು ಭಗ್ನಾನಿ ಕೈಗೆ ಹಾಕಿದ ಬಂಡವಾಳದ ಅರ್ಧ ಹಣ ಕೂಡ ಬರಲಿಲ್ಲ. ಇದರಿಂದ ಸಹಜವಾಗಿ ಸಾಲದ ಸುಳಿಯಲ್ಲಿ ಸಿಲುಕಿದ್ದ ವಾಶು ಭಗ್ನಾನಿ ಈ ಹಿಂದೆ ತಮ್ಮ ಬಳಿ ಇರುವ ಕೆಲಸಗಾರರಿಗೆ ಹಣ ನೀಡಲು ಮತ್ತು ಸಾಲದ ಸುಳಿಯಿಂದ ಹೊರ ಬರಲು ಮುಂಬೈನಲ್ಲಿದ್ದ ತಮ್ಮ 07 ಅಂತಸ್ತಿನ ಬಿಲ್ಡಿಂಗ್ ಮಾರಿದ್ದರು. ಆದರೂ ಪ್ರಯೋಜನವಾಗಲಿಲ್ಲ. ಇವತ್ತು ಕೂಡ ವಾಶು ಭಗ್ನಾನಿ ಸಾಲದ ಸುಳಿಯಿಂದ ಹೊರ ಬರಲು ಸಾಧ್ಯವಾಗಿಲ್ಲ.

ಸರ್ಫಿರಾ
ಕೇವಲ ಬಡೇ ಮಿಯಾ ಚೋಟೆ ಮಿಯಾ ಮಾತ್ರ ಅಲ್ಲ ಅಕ್ಷಯ್ ಕುಮಾರ್ ಅಭಿನಯದ ಮತ್ತೊಂದು ಸರ್ಫಿರಾ ಕೂಡ ಈ ವರ್ಷ ಬಾಲಿವುಡ್‌ನಲ್ಲಿ ಮುಗ್ಗರಿಸಿತು. ನಿರೀಕ್ಷೆಯನ್ನೆಲ್ಲ ಹುಸಿ ಮಾಡಿತು. ಕರ್ನಾಟಕದ ಕ್ಯಾಪ್ಟನ್ಗೋಪಿನಾಥ್ ಅವರ ಜೀವನಕಥೆಯನ್ನಾಧರಿಸಿದ್ದ ಚಿತ್ರ ವನ್ನು ತಮಿಳಿನಲ್ಲಿ ಸೂರ್ಯ 'ಸೂರರೈ ಪೋಟ್ರು' ಹೆಸರಿನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಗೋಪಿನಾಥ್ ಅವರ ಪಾತ್ರಕ್ಕೆ ಖುದ್ದು ಜೀವವನ್ನು ತುಂಬಿದ್ದರು. ಸುಧಾ ಕೊರಂಗ ನಿರ್ದೇಶನದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಪ್ರೇಕ್ಷಕರ ಹೃದಯವನ್ನೂ ಕೂಡ ಗೆದ್ದಿತ್ತು. ಆದರೆ ಅತಿಯಾದ ಆಸೆಯಿಂದ ಸೂರ್ಯ ಈ ಚಿತ್ರವನ್ನು ಹಿಂದಿಯಲ್ಲಿ ಮರು ನಿರ್ಮಾಣ ಮಾಡುವ ದುಸಾಹಸಕ್ಕೆ ಮುಂದಾದರು. ಇನ್ನೂ ಅಕ್ಷಯ್ ಕುಮಾರ್ ನಸೀಬು ಮೊದಲೇ ಸರಿಯಿರದ ಕಾರಣ, ಅಕ್ಷಯ್ ಕುಮಾರ್ ಕೂಡ ಈ ಚಿತ್ರವನ್ನು ಮಾಡಲು ಕಣ್ಮುಚ್ಚಿ ಒಪ್ಪಿಕೊಂಡರು. ನಿರೀಕ್ಷೆಯಂತೆ ಸರ್ಫಿರಾ ಹಿಂದಿಯಲ್ಲಿ ಮಕಾಡೆ ಮಲಗಿತು. ನಿರೀಕ್ಷೆಯ ಭಾರವನ್ನೊತ್ತು ಬಂದ ಸರ್ಫಿರಾ ಕೇವಲ 22 ಕೋಟಿಯನ್ನಷ್ಟೇ ಗಳಿಸಿತು. ಉಳಿದಂತೆ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಎದುರು ನಾಯಕಿಯಾಗಿ ರಾಧಿಕಾ ಮದನ್ ತೆರೆ ಹಂಚಿಕೊಂಡಿದ್ದರು. ಇನ್ನೂ ಸೂರ್ಯ ಕೂಡ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು. ಪರೇಶ್ ರಾವ್ ಮತ್ತು ಪ್ರಕಾಶ್ ಬೆಳವಾಡಿ ಕೂಡ ಈ ಸರ್ಫಿರಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.
ಮೈದಾನ್
ಭಾರೀ ನಿರೀಕ್ಷೆಯನ್ನು ಮೂಡಿಸಿದ್ದ ಅಜಯ್ ದೇವಗನ್ ಅಭಿನಯದ ಸ್ಫೋರ್ಟ್ಸ್ ಡ್ರಾಮಾ ಮೈದಾನ್ ಕೂಡ ಈ ವರ್ಷ ನಿರಾಸೆ ಮಾಡಿತು. ವಿಮರ್ಷಕರು ಈ ಚಿತ್ರವನ್ನು ಮೆಚ್ಚಿಕೊಂಡರು ಕೂಡ ಪ್ರೇಕ್ಷಕರು ಈ ಚಿತ್ರವನ್ನು ಕೈ ಹಿಡಿಯಲಿಲ್ಲ. ಗಲ್ಲಾಪೆಟ್ಟಿಗೆಯಲ್ಲಿ ಹಣದ ಸದ್ದು ಕೇಳಿಸಲಿಲ್ಲ. ಕೊರೊನಾ ಕಾಲದಿಂದ ಕೂಡ ತೆವಳುತ್ತಾ ಬಂದ ಈ ಚಿತ್ರಕ್ಕೆ ಬೋನಿ ಕಪೂರ್ ನಾಲ್ಕೈದು ಜನರ ಸಹಭಾಗಿತ್ವದೊಂದಿಗೆ ₹250 ಕೋಟಿಯನ್ನು ನೀರಿನಂತೆ ಖರ್ಚು ಮಾಡಿದ್ದರು. ಆದರೆ, ಈ ಚಿತ್ರ ಕೇವಲ ₹68 ಕೋಟಿಯನ್ನು ಮಾತ್ರ ಗಳಿಸಿತ್ತು. ಈ ಮೂಲಕ ಬಾಲಿವುಡ್ ಮತ್ತು ಅಜಯ್ ದೇವಗನ್‌ಗೆ ಬಹುದೊಡ್ಡ ಆಘಾತವನ್ನು ಚಿತ್ರ ನೀಡಿತು. ಇನ್ನೂ ವಿಶೇಷ ಅಂದರೆ ಮೈದಾನ್ ಮತ್ತು ಬಡೇ ಮಿಯಾ ಚೋಟೆ ಮಿಯಾ ಇವೆರಡು ಚಿತ್ರಗಳು ಈದ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದವು. ಇನ್ನೂ ಸಾಮಾನ್ಯವಾಗಿ ಈದ್ ಹಬ್ಬದ ಪ್ರಯುಕ್ತ ತೆರೆಗೆ ಬಂದ ಚಿತ್ರಗಳು ಬಾಲಿವುಡ್ ನಲ್ಲಿ ಸೋತ ಉದಾಹರಣೆ ತೀರಾ ಕಡಿಮೆ. ಆದರೆ ಈ ಬಾರಿ ಮಾತ್ರ ಈದ್ ಹಬ್ಬಕ್ಕೆ ಬಂದ ಎರಡು ಚಿತ್ರಗಳು ಸೋತವು. ಈ ಮೂಲಕ ಬಾಲಿವುಡ್‌ನಲ್ಲಿ ಬೇಡದ ದಾಖಲೆಯನ್ನು ಕೂಡ ಎರಡು ಚಿತ್ರಗಳು ಬರೆದವು.
ಜಿಗ್ರಾ
ಆಲಿಯಾ ಭಟ್ ನಿರ್ಮಿಸಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದ ಜಿಗ್ರಾ ನಾನಾ ಕಾರಣಕ್ಕೆ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತ ಬಂದಿತ್ತು. ಭರವಸೆಯನ್ನು ಮೂಡಿಸಿತ್ತು. ಆದರೆ, ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಚಿತ್ರ ಸಂಪೂರ್ಣವಾಗಿ ವಿಫಲವಾಯ್ತು. ಹತ್ ಹತ್ರ ನೂರು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರದ ಮೇಲೆ ಕೃತಿಚೌರ್ಯದ ಆರೋಪವನ್ನು ಮಾಡಲಾಯಿತು. ಚಿತ್ರದ ಗಳಿಕೆಯ ಮೇಲೂ ಪ್ರಶ್ನಾರ್ಥಕ ಚಿಹ್ನೆ ಮೂಡಿತು. ಯಾಕೆಂದರೆ.. ಚಿತ್ರಮಂದಿರದಲ್ಲಿ ಖಾಲಿ ಇರುವ ಕುರ್ಚಿಗಳ ಫೋಟೊ ತೆಗೆದು
ಬಾಲಿವುಡ್‌ನ ನಿರ್ಮಾಪಕಿ-ನಿರ್ದೇಶಕಿ ಮತ್ತು ಟಿ ಸಿರೀಸ್‌ನ ಮಾಲೀಕ ಭೂಷಣ್ ಕುಮಾರ್ ಅವರ ಪತ್ನಿ ದಿವ್ಯಾ ಖೋಸ್ಲಾ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆಲಿಯಾ ಭಟ್ ವಿರುದ್ಧ ಸಮರವನ್ನು ಸಾರಿದರು. ಇದೆಲ್ಲದರಿಂದ ಮೊದಲೇ ಪ್ರೇಕ್ಷಕರ ಕೊರತೆಯನ್ನು ಎದುರಿಸುತ್ತಿದ್ದ ಜಿಗ್ರಾ ಕಂಗಲಾಯಿತು. ಚಿತ್ರಮಂದಿರದಿಂದ ಬಂದಷ್ಟೇ ವೇಗ ಎತ್ತಂಗಡಿ ಕೂಡ ಆಯಿತು.
ಚಂದು ಚಾಂಪಿಯನ್
ಕಾರ್ತಿಕ್ ಆರ್ಯನ್ ಬಾಲಿವುಡ್‌ನ ಸೇಫೆಸ್ಟ್ ಆಕ್ಟರ್ ಅನ್ನುವುದು ಹಲವರ ಅಭಿಪ್ರಾಯ. ಹಾಗೇ ನೋಡಿದರೆ ಇದು ನಿಜಾ ಕೂಡ. ಕಾರ್ತಿಕ್ ಆರ್ಯನ್ ಅಭಿನಯದ ಚಿತ್ರಗಳು ದೊಡ್ಡ ಮಟ್ಟದಲ್ಲಿ ಸೋತ ಉದಾಹರಣೆ ಇಲ್ಲ. ಆದರೆ ಇದಕ್ಕೆ ಅಪವಾದ ಎಂಬಂತೆ ಈ ವರ್ಷ ತೆರೆಗೆ ಬಂದ ಚಂದು ಚಾಂಪಿಯನ್ ಚಿತ್ರ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತು. ಪ್ರಚಾರದ ಕೊರತೆಯಿಂದ ಚಿತ್ರ ಕೊನೆಯುಸಿರೆಳೆಯಿತು.


Click it and Unblock the Notifications











