ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್ ಕಡಿಮೆ ಆಗಿದ್ದಕ್ಕೆ ಆತ್ಮಹ*ತ್ಯೆ ಮಾಡಿಕೊಂಡ ಖ್ಯಾತ ಕಂಟೆಂಟ್ ಕ್ರಿಯೇಟರ್
ಬದಲಾದ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ. ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ. ಇನ್ನು ಈ ವೇದಿಕೆಯ ಮೂಲಕವೇ ಸಿನಿ ತಾರೆಯರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಜೊತೆಗೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾ
ಕೇವಲ ಸ್ಟಾರ್‌ಗಳಿಗೆ ಮಾತ್ರ ಸಹಕಾರಿಯಾಗಿಲ್ಲ. ಹಲವಾರು ಪ್ರತಿಭಾವಂತರು ಈ ಮಾಧ್ಯಮದ ಮೂಲಕ ಬೆಳಕಿಗೆ ಬಂದಿದ್ದಾರೆ. ಬದುಕು ರೂಪಿಸಿಕೊಂಡಿದ್ದಾರೆ. ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಭಿನ್ನ ವಿಭಿನ್ನವಾದ ಕಂಟೆಂಟ್‌ಗಳ ಮೂಲಕ ಜನರ ಹೃದಯವನ್ನು ಗೆದ್ದಿದ್ದಾರೆ.

ಆದರೆ ಇದೇ ಸಮಯದಲ್ಲಿ ಇಲ್ಲಿ ಹಲವಾರು ಜನ ಈ ಆಯಸ್ಕಾಂತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಒದ್ದಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಮಾಡಬಾರದ ಕೆಲಸವನ್ನೆಲ್ಲ ಮಾಡಿದ್ದಾರೆ.
ಇನ್ನು ಕೆಲವರು ಎಷ್ಟೇ ಪ್ರಯತ್ನ ಮಾಡಿದರು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಿಲ್ಲವಲ್ಲ ಎಂಬ ಆಲೋಚನೆಯಲ್ಲಿಯೇ ಖಿನ್ನತೆಗೆ ಜಾರಿದ್ದಾರೆ. ಕೊನೆಗೆ ಗೀಳೆಂಬ ವ್ಯಾಧಿಯಿಂದ ತಮ್ಮ ಬದುಕನ್ನೇ ಕೊನೆಗೊಳಿಸಿದ್ದಾರೆ. ಉದಾಹರಣೆಗೆ ಮಿಶಾ ಅಗರ್ವಾಲ್.
ಹೌದು, ಮಿಶಾ ಅಗರ್ವಾಲ್.. ಕಳೆದ ವಾರವಷ್ಟೇ ಇಹಲೋಕ ತ್ಯಜಿಸಿದ ಇನ್‌ಸ್ಟಾಗ್ರಾಮ್ ಸ್ಟಾರ್. ಕೇವಲ 24ರ ಪ್ರಾಯದಲ್ಲಿಯೇ ತಮ್ಮ ಮಾತು ತಮ್ಮಲ್ಲಿನ ಪ್ರತಿಭೆಯ ಮೂಲಕ ಎಲ್ಲರನ್ನು ಸೆಳೆದಿದ್ದ ಮಿಶಾ ಹಾಸ್ಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಎಲ್ಲರನ್ನು ನಗಿಸುತ್ತಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಮೂರುವರೆ ಲಕ್ಷ ಫಾಲೋವರ್ಸ್‌ಗಳನ್ನು ಮಿಶಾ ಅಗರ್ವಾಲ್ ಹೊಂದಿದ್ದರು.
ಇಂಥಾ ಮಿಶಾ ತಮ್ಮ 25ನೇ ಹುಟ್ಟುಹಬ್ಬಕ್ಕೆ ಇನ್ನೇನು ಎರಡು ದಿನ ಬಾಕಿ ಇರುವ ಸಮಯದಲ್ಲಿ ಹಠಾತನೇ ಏಪ್ರಿಲ್ 24ರಂದು ನಿಧನರಾದರು. ಮಿಶಾ ಅಗರ್ವಾಲ್ ಅವರ ಅಕಾಲಿಕ ನಿಧನ ಇವರ ಅಭಿಮಾನಿಗಳಿಗೆ ಆಘಾತವನ್ನು ನೀಡಿತ್ತು.
ಮಿಶಾ ಅಗರ್ವಾಲ್ ಸಾವಿಗೆ ಕಾರಣವೇನು ಎನ್ನುವ ಪ್ರಶ್ನೆ ಹಲವರನ್ನು ಕಾಡಲು ಶುರು ಮಾಡಿತ್ತು. ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಮಿಶಾ ಅಗರ್ವಾಲ್ ಅವರ ಸಾವು ಸಹಜವಾದದ್ದಲ್ಲ ಬದಲಿಗೆ ಆತ್ಮಹತ್ಯೆ ಎನ್ನುವುದು ಬಹಿರಂಗವಾಗಿದೆ. ಇನ್‌ಸ್ಟಾಗ್ರಾಮ್ ಮತ್ತು ಸೋಶಿಯಲ್ ಮೀಡಿಯಾ ಗೀಳು ಮಿಶಾ ಅವರ ಬದುಕು ಬಲಿ ಪಡೆದಿರುವ ವಿಚಾರ ಈಗ ಜಗಜ್ಜಾಹೀರಾಗಿದೆ.
ಈ ಕುರಿತು ಅದೇ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಮಿಶಾ ಅವರ ಕುಟುಂಬಸ್ಥರು ಮಿಶಾಗೆ ಸೋಶಿಯಲ್ ಮೀಡಿಯಾನೇ ಎಲ್ಲವೂ ಆಗಿತ್ತು, ಇಲ್ಲಿಯೇ ಅವಳು ವೃತ್ತಿಯನ್ನು ಕಂಡುಕೊಂಡಿದ್ದಳು, ಆಕೆಯ ಇನ್‌ಸ್ಟಾಗ್ರಾಮ್ ಕಂಟೆಂಟ್‌ಗಳೇ ಆಕೆಯ ಕೆರಿಯರ್ ಬಿಲ್ಡ್ ಮಾಡಿದ್ದವು. ಒಂದು ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಬೇಕು ಎನ್ನುವುದೇ ಆಕೆಯ ಜೀವನದ ಬಹುದೊಡ್ಡ ಕನಸಾಗಿತ್ತು, ಗುರಿಯಾಗಿತ್ತು.
ಅಧಿಕ ಫಾಲೋವರ್ಸ್‌ಗಳನ್ನು ಪಡೆಯುವುದು ಹೇಗೆ ಎನ್ನುವುದನ್ನೇ ಆಕೆ ದಿನನಿತ್ಯ ನಮ್ಮೊಡನೆ ಚರ್ಚೆ ಮಾಡುತ್ತಿದ್ದಳು, ಆದರೆ ಏಪ್ರಿಲ್ ತಿಂಗಳಿನಲ್ಲಿ ಫಾಲೋವರ್ಸ್ ಸಂಖ್ಯೆ ಕಡಿಮೆಯಾಗಲು ಶುರುವಾಯ್ತು, ಇದರಿಂದ ಮಾನಸಿಕ ಖಿನ್ನತೆಗೆ ಒಳಗಾದ ಮಿಶಾ ದಿನನಿತ್ಯ ಫಾಲೋವರ್ಸ್ ಕಡಿಮೆ ಆದರೆ ಏನು ಮಾಡಬೇಕೆಂದು ನೊಂದುಕೊಳ್ಳಲು ಶುರು ಮಾಡಿದಳು, ಕೊನೆಗೆ ತನ್ನ ಬದುಕನ್ನೇ ಕೊನೆಗೊಳಿಸಿದಳು ಎಂದು ಕುಟುಂಬಸ್ಥರು ಮಿಶಾ ಅಗರ್ವಾಲ್ ಅವರ ಇನ್‌ಸ್ಟಾಗ್ರಾಮ್ ಪೇಜ್ ಮೂಲಕ ಹೇಳಿದ್ದಾರೆ.
ಇನ್‌ಸ್ಟಾಗ್ರಾಮ್ ನಿನ್ನ ಬದುಕಲ್ಲ, ಅದನ್ನು ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರ ನೋಡು, ನಿನ್ನ ಎಲ್‌ಎಲ್‌ಬಿ ಡಿಗ್ರಿಯನ್ನು ಪೂರ್ಣಗೊಳಿಸು ಒಂದಿಲ್ಲೊಂದು ದಿನ ನೀನು ಜಡ್ಜ್ ಆಗುತ್ತೀಯಾ, PCSJ ಪರೀಕ್ಷೆಗೆ ತಯಾರಿಯನ್ನು ಮಾಡ್ಕೋ ಎಂದು ಎಷ್ಟು ಹೇಳಿದರು ಕೂಡ ಆಕೆಗೆ ಇನ್‌ಸ್ಟಾಗ್ರಾಮ್ ಮುಖ್ಯವಾಗಿತ್ತು, ತನ್ನ ಮೊಬೈಲ್ ವಾಲ್‌ಪೇಪರ್‌ನಲ್ಲಿ ಕೂಡ ಒಂದು ಮಿಲಿಯನ್ ಫಾಲೋವರ್ಸ್ ಕನಸನ್ನೇ ಸ್ಕ್ರೀನ್ ಶಾಟ್ ಆಗಿ ಮಾಡಿಕೊಂಡಿದ್ದಳು ಎಂದು ಕುಟುಂಬಸ್ಥರು ಫೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಖಿನ್ನತೆಗೆ ಒಳಗಾಗಿ ನಮ್ಮೆಲ್ಲರನ್ನು ಅಗಲಿ ಹೋದಳು ಎಂದು ತಮ್ಮ ಮನದ ನೋವನ್ನು ಹಂಚಿಕೊಂಡಿದ್ಧಾರೆ.
ಮಿಶಾ ಅವರ ಸಾವಿನ ಹಿಂದೆ ಇರುವ ಈ ಕಾರಣವನ್ನು ಕೇಳಿ ಅನೇಕ ಇವರ ಫಾಲೋವರ್ಸ್‌ಗಳು ಶಾಕ್ ಆಗಿದ್ದಾರೆ. ಇಷ್ಟೊಂದು ಕ್ಷುಲಕ ವಿಚಾರಕ್ಕೆ ಪ್ರಾಣ ಕಳೆದುಕೊಳ್ಳಬಾರದಿತ್ತು ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇನ್ನು, ಕೆಲವರು ಮಿಶಾ ಸಾವಿಗೆ ಇದೇ ನಿಜವಾದ ಕಾರಣನಾ, ನಿಜಾ ಹೇಳಿ ನಮಗ್ಯಾಕೋ ಅನುಮಾನ ಬರುತ್ತಿದೆ ಎಂದು ಕೂಡ ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











