ಬಾಲಿವುಡ್ ಪ್ರವೇಶಿಸಿ ಸೋತು ಸುಮ್ಮನಾದ ದಕ್ಷಿಣದ ಸ್ಟಾರ್ ನಟರಿವರು
ಬಾಲಿವುಡ್ ಕಲಾವಿದರಿಗೆ ಹಾಲಿವುಡ್ ಸಿನಿಮಾಗಳಲ್ಲಿ ನಟಿಸೋ ಆಸೆ ಸಹಜ. ಅದೇ ರೀತಿ ದಕ್ಷಿಣ ಭಾರತದ ನಟ-ನಟಿಯರಿಗೂ ಬಾಲಿವುಡ್‌ನಲ್ಲಿ ದರ್ಬಾರ್ ಮಾಡುವ ಮಹದಾಸೆ ಇರುತ್ತದೆ. ಆದರೆ ರಜನಿಕಾಂತ್, ಮೋಹನ್‌ಲಾಲ್ ರೀತಿಯ ಸೂಪರ್ ಸ್ಟಾರ್‌ಗಳೇ ಹಿಂದಿ ಚಿತ್ರರಂಗದಲ್ಲಿ ಸೋತು ಸುಣ್ಣವಾಗಿದ್ದರು.
ಬಾಲಿವುಡ್ ಹಾಗೂ ಸೌತ್ ಫಿಲ್ಮ್ ಇಂಡಸ್ಟ್ರಿ ನಡುವೆ ಮೊದಲಿನಿಂದಲೂ ಪೈಪೋಟಿ ಇದೆ. ಇವತ್ತಿಗೂ ದಕ್ಷಿಣದ ಕಲಾವಿದರು, ತಂತ್ರಜ್ಞರನ್ನು ಬಿಟೌನ್ ಮಂದಿ ಕ್ಯಾರೇ ಅನ್ನಲ್ಲ. ಆದರೆ 'ಬಾಹುಬಲಿ' ಸರಣಿ ಸಿನಿಮಾಗಳ ಬಳಿಕ ಚಿತ್ರಣ ಬದಲಾಗಿದೆ. 'KGF' ಸರಣಿ ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಇದೀಗ ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸೋಕೆ ಬಿಟೌನ್ ಸೂಪರ್ ಸ್ಟಾರ್‌ಗಳೇ ಸಿದ್ಧರಾಗಿದ್ದಾರೆ. ದಕ್ಷಿಣದ ಕಲಾವಿದರು, ತಂತ್ರಜ್ಞರಿಗೆ ಹಿಂದಿ ಸಿನಿಮಾಗಳಲ್ಲಿ ಹೆಚ್ಚು ಹೆಚ್ಚು ಅವಕಾಶ ಕೊಡುತ್ತಿದ್ದಾರೆ.

ತೆಲುಗು, ತಮಿಳು, ಕನ್ನಡ, ಮಲಯಾಳಂ ಚಿತ್ರರಂಗದಲ್ಲಿ ನಟಿಸಿ ಗೆದ್ದವರು ಬಾಲಿವುಡ್ ಅಂಗಳಕ್ಕೆ ಜಿಗಿಯುವ ಸಾಹಸ ಮೊದಲಿನಿಂದಲೂ ಮಾಡುತ್ತಿದ್ದಾರೆ. ಕೆಲವೊಮ್ಮೆ ನಮ್ಮವರ ಪ್ರತಿಭೆ ನೋಡಿ ಬಿಟೌನ್ ಮಂದಿ ಕರೆದು ಅವಕಾಶ ಕೊಟ್ಟಿರುವುದು ಇದೆ. ಹೀಗೆ ಸೌತ್ ಸೂಪರ್ ಸ್ಟಾರ್‌ಗಳೇ ಹಿಂದಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಆದರೆ ಈ ಪ್ರಯತ್ನದಲ್ಲಿ ಗೆದ್ದವರಿಗಿಂತ ಸೋತವರ ಸಂಖ್ಯೆ ದೊಡ್ಡದಿದೆ.
ನಟ ಯಶ್ 'ರಾಮಾಯಣ' ಸಿನಿಮಾ ಮೂಲಕ ಇದೀಗ ಬಾಲಿವುಡ್‌ಗೆ ಲಗ್ಗೆ ಇಡುತ್ತಿದ್ದಾರೆ. ಶ್ರೀಲೀಲಾ ಕೂಡ ಈಗಾಗಲೇ ಹಿಂದಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಹೀಗೆ ಇವತ್ತಿಗೂ ದಕ್ಷಿಣದಲ್ಲಿ ಗೆದ್ದವರು ಬಾಲಿವುಡ್‌ಗೆ ಅಡಿ ಇಡುತ್ತಿದ್ದಾರೆ. ಆದರೆ ಹಿಂದಿಯಲ್ಲಿ ಒಂದೆರಡು ಸಿನಿಮಾ ಸೋತವರು ಬಳಿಕ ಅತ್ತ ಮುಖ ಹಾಕಿ ಮಲಗಲಿಲ್ಲ. ಹೀಗೆ ದಕ್ಷಿಣದಲ್ಲಿ ಗೆದ್ದು ಬಾಲಿವುಡ್‌ನಲ್ಲಿ ನಿರಾಸೆ ಅನುಭವಿಸಿದ ಟಾಪ್ 10 ನಟರ ಪಟ್ಟಿ ಮುಂದೆ ಇದೆ ಓದಿ.

ರಜನಿಕಾಂತ್
ಸೂಪರ್ ರಜನಿಕಾಂತ್ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. ಉತ್ತರ ಭಾರತದಲ್ಲಿ ಕೂಡ ತಲೈವಾ ಹವಾ ಇದೆ. ಆದರೆ 80ರ ದಶಕದಲ್ಲೇ ರಜನಿಕಾಂತ್ ಬಾಲಿವುಡ್ ಪ್ರವೇಶಿಸಿದ್ದರು. ಅಮಿತಾಬ್ ಸೇರಿ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದರು. 'ಅಂಧಾ ಕಾನೂನ್', 'ಜಾನ್ ಜಾನಿ ಜನಾರ್ಧನ್', 'ಗೇರಾಫ್ತರ್', 'ಚಾಲ್‌ಬಾಜ್', 'ಹಮ್' ಸೇರಿದಂತೆ ಕೆಲ ಹಿಂದಿ ಸಿನಿಮಾಗಳಲ್ಲಿ ರಜನಿ ಬಣ್ಣ ಹಚ್ಚಿದ್ದರು. ಆದರೆ ದೊಡ್ಡದಾಗಿ ಸಕ್ಸಸ್ ಸಿಗಲಿಲ್ಲ. ಆ ಬಳಿಕ ತಮಿಳು ಸಿನಿಮಾಗಳಿಗೆ ಅವರು ಸೀಮಿತವಾಗಿಬಿಟ್ಟರು.
ಮೋಹನ್ ಲಾಲ್
'ಕಂಪನಿ', 'ಆಗ್' ಹಾಗೂ 'ಟೀಜ್' ಎಂಬ ಹಿಂದಿ ಸಿನಿಮಾಗಳಲ್ಲಿ ಮಲಯಾಳಂ ನಟ ಮೋಹನ್ ಲಾಲ್ ನಟಿಸಿದ್ದರು. ಮಾಲಿವುಡ್‌ನಲ್ಲಿ ಕಂಪ್ಲೀಟ್ ಆಕ್ಟರ್ ಎಂದೇ ಖ್ಯಾತರಾಗಿರುವ ಮೋಹನ್ ಲಾಲ್ ಹಿಂದಿ ಸಿನಿಮಾಗಳಲ್ಲಿ ಅಷ್ಟಾಗಿ ಮೋಡಿ ಮಾಡಲು ಸಾಧ್ಯವಿಲ್ಲ. ಹಿಂದಿ ಚಿತ್ರರಂಗವೇ ವಿಭಿನ್ನ, ಅಲ್ಲಿನವರ ವರ್ಕಿಂಗ್ ಸ್ಟೈಲ್ ಕೂಡ ಭಿನ್ನ ಎಂದು ಕೆಲವರು ಹೇಳುತ್ತಾರೆ. ಅದೇ ಕಾರಣಕ್ಕೋ ಏನು ದಕ್ಷಿಣದ ಸ್ಟಾರ್ ನಟ, ನಟಿಯರು ಒಂದೆರಡು ಸಿನಿಮಾಗಳ ಬಳಿಕ ಸುಮ್ಮನಾಗಿಬಿಡುತ್ತಾರೆ.
ಚಿರಂಜೀವಿ
ತೆಲುಗು ಮೆಗಾಸ್ಟಾರ್ ಚಿರಂಜೀವಿ ಕೂಡ ಹಿಂದಿ ಸಿನಿಮಾಗಳಲ್ಲಿ ನಟಿಸೋ ಸಾಹಸ ಮಾಡಿದ್ದರು. ಒಂದ್ಕಾಲದಲ್ಲಿ ಬಿಗ್ ಬಿ ಅಮಿತಾಬ್ ಮೀರಿಸಿ ಚಿರು ಸಂಭಾವನೆ ಪಡೆದು ದಾಖಲೆ ಬರೆದಿದ್ದರು. 'ಪ್ರತಿಭಂದ್', 'ಆಜ್ ಕಾ ಗೂಂಡಾ' ಹಾಗೂ 'ದಿ ಜಂಟಲ್‌ಮನ್' ಎಂಬ ಹಿಂದಿ ಸಿನಿಮಾಗಳಲ್ಲಿ ಮೆಗಾ ಸ್ಟಾರ್ ನಟಿಸಿದ್ದರು. ಆದರೆ ಈ ಚಿತ್ರಗಳು ರೀಮೆಕ್ ಸಿನಿಮಾಗಳಾಗಿದ್ದವು.
ಮಮ್ಮುಟಿ
ಮೋಹನ್ ಲಾಲ್ ರೀತಿಯಲ್ಲೇ ಮಲಯಾಳಂ ಚಿತ್ರರಂಗದ ದಿಗ್ಗಜ ನಟ ಮೊಮ್ಮುಟಿ. 'ತ್ರಿಯತ್ರಿ', 'ಧರ್ತಿಪುತ್ರ', 'ಹಲ್ಲಾ ಬೋಲ್' ರೀತಿಯ ಸಿನಿಮಾಗಳಲ್ಲಿ ಮೋಹನ್ ಲಾಲ್ ಮಿಂಚಿದ್ದರು. ಆದರೆ ದೊಡ್ಡದಾಗಿ ಪ್ರಯೋಜನವಾಗಿರಲಿಲ್ಲ. ಮಲಯಾಳಂನಲ್ಲಿ 400ಕ್ಕೂ ಅಧಿಕ ಸಿನಿಮಾಗಳಲ್ಲಿ ಮಮ್ಮುಟ್ಟಿ ನಟಿಸಿದ್ದಾರೆ. ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ.
ನಾಗಾರ್ಜುನ
ತೆಲುಗು ನಟ ನಾಗಾರ್ಜುನ 90ರ ದಶಕದ ಬಹುಬೇಡಿಕೆಯ ನಟ ಎನಿಸಿಕೊಂಡಿದ್ದರು. 'ಶಿವ' ಚಿತ್ರದ ಮೂಲಕ ಆಂಗ್ರಿ ಯಂಗ್‌ಮ್ಯಾನ್ ಆಗಿ ಅಬ್ಬರಿಸಿ ಗೆದ್ದಿದ್ದರು. ಹಾಗಾಗಿ ಹಿಂದಿ ಚಿತ್ರರಂಗದಲ್ಲಿ ಸುಲಭವಾಗಿ ಅವಕಾಶಗಳು ಸಿಕ್ಕಿತ್ತು. 'ದ್ರೋಹಿ', ಮಿಸ್ಟರ್ ಬೆಚಾರ, ಕ್ರಿಮಿನಲ್ ಹೀಗೆ ಒಂದಷ್ಟು ಬಾಲಿವುಡ್ ಸಿನಿಮಾಗಳಲ್ಲಿ ನಾಗ್ ಅಬ್ಬರಿಸಿದ್ದರು. ಇತ್ತೀಚೆಗೆ 'ಬ್ರಹ್ಮಾಸ್ತ್ರ' ಚಿತ್ರದ ಮುಖ್ಯ ಪಾತ್ರದಲ್ಲಿ ಕೂಡ ಬಣ್ಣ ಹಚ್ಚಿ ನಟಿಸಿದ್ದರು.
ಅಜಿತ್
ಶಾರುಖ್ ಖಾನ್ ನಟನೆಯ 'ಅಶೋಕ' ಚಿತ್ರದಲ್ಲಿ ಚಿತ್ರದಲ್ಲಿ ತಮಿಳು ನಟ ಅಜಿತ್ ಕೂಡ ಮಿಂಚಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ. ಸದ್ಯ ಅಜಿತ್ ನಟನೆಯ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ನಟನೆ ಜೊತೆಗೆ ಕಾರ್ ರೇಸಿಂಗ್‌ನಲ್ಲಿ ಕೂಡ ತಮಿಳು ನಟ ಆಸಕ್ತಿ ಬೆಳೆಸಿಕೊಂಡಿದ್ದಾರೆ.
ರಾಮ್‌ಚರಣ್
'ಮಗಧೀರ' ಸಿನಿಮಾ ಮೂಲಕ ದೇಶ ವಿದೇಶಗಳಲ್ಲಿ ಸದ್ದು ಮಾಡಿದವರು ರಾಮ್‌ಚರಣ್. ದಿಢೀರನೆ ನೇಮ ಫೇಮು ಗಳಿಸಿದ ಚಿರು ಪುತ್ರನ ಮೇಲೆ ಬಾಲಿವುಡ್ ಮಂದಿ ಕಣ್ಣು ಬಿದ್ದಿತ್ತು. ಅಮಿತಾಬ್ ಬಚ್ಚನ್ ನಟನೆಯ 'ಜಂಜೀರ್' ಚಿತ್ರವನ್ನು ಅದೇ ಹೆಸರಿನಲ್ಲಿ ರೀಮೆಕ್ ಮಾಡಿದ್ದರು. ಪ್ರಿಯಾಂಕ ಚೋಪ್ರಾ ನಾಯಕಿಯಾಗಿ ನಟಿಸಿದ್ದಾರೆ. ಖಡಕ್ ಪೊಲೀಸ್ ಆಫೀಸರ್ ಅವತಾರದಲ್ಲಿ ಚರಣ್ ಅಬ್ಬರಿಸಿದ್ದರು. ಆದರೆ ಸಿನಿಮಾ ಹೀನಾಯವಾಗಿ ಸೋತು ಇವತ್ತಿಗೂ ಅದು ದುಸ್ವಪ್ನವಾಗಿ ಅವರನ್ನು ಕಾಡುತ್ತಿದೆ.
ವಿಜಯ್ ದೇವರಕೊಂಡ
'ಅರ್ಜುನ್ ರೆಡ್ಡಿ' ರೀತಿಯ ಸೆನ್ಸೇಷನಲ್ ಚಿತ್ರದಲ್ಲಿ ನಟಿಸಿ ಗೆದ್ದಿದ್ದ ವಿಜಯ್ ದೇವರಕೊಂಡ 3 ವರ್ಷದ ಹಿಂದೆ ಬಾಲಿವುಡ್ ಕನಸು ಕಂಡಿದ್ದರು. ಪೂರಿ ಜಗನ್ನಾಥ್ ನಿರ್ದೇಶನದ 'ಲೈಗರ್' ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿತ್ತು. ಬಾಲಿವುಡ್ ಪ್ರೇಕ್ಷಕರನ್ನು ಟಾರ್ಗೆಟ್ ಮಾಡಿ ಸಿನಿಮಾ ಕಟ್ಟಿಕೊಟ್ಟಿದ್ದರು. ಹಿಂದಿ ನಿರ್ಮಾಪಕರು ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಆದರೆ ಸಿನಿಮಾ ಸೋತು ಭಾರೀ ಪೆಟ್ಟು ಕೊಟ್ಟಿತ್ತು.
ನಾಗಚೈತನ್ಯಾ
ಆಮೀರ್ ಖಾನ್ ನಿರ್ಮಿಸಿ ನಟಿಸಿದ್ದ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ 3 ವರ್ಷಗಳ ಹಿಂದೆ ತೆರೆಕಂಡು ಸೋತಿತ್ತು. ಚಿತ್ರದ ಪ್ರಮುಖ ಪಾತ್ರದಲ್ಲಿ ತೆಲುಗು ನಟ ನಾಗಚೈತನ್ಯಾ ನಟಿಸಿದ್ದರು. ಹಾಲಿವುಡ್ ಚಿತ್ರದಿಂದ ಪ್ರೇರಣೆಗೊಂಡು ಮಾಡಿದ್ದ ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು. ನಾಗಚೈತನ್ಯ ಬಾಲಿವುಡ್ ಕನಸು ನುಚ್ಚು ನೂರಾಗಿತ್ತು. ದಕ್ಷಿಣದಲ್ಲಿ ಭರ್ಜರಿ ಪ್ರಚಾರ ಮಾಡಿದರೂ ಪ್ರಯೋಜನವಾಗಿರಲಿಲ್ಲ.
ಚಿಯಾನ್ ವಿಕ್ರಂ
ತಮಿಳು ನಟ ಚಿಯಾನ್ ವಿಕ್ರಂ ಕೂಡ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು. 'ರಾವಣ್' ಹಾಗೂ 'ಡೇವಿಡ್' ಸಿನಿಮಾಗಳಲ್ಲಿ ಅವರು ನಟಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಅದ್ಯಾಕೋ ಇತ್ತೀಚೆಗೆ ವಿಕ್ರಂ ಅಭಿನಯದ ತಮಿಳು ಚಿತ್ರಗಳು ಕೂಡ ಅಷ್ಟಾಗಿ ಸದ್ದು ಮಾಡುತ್ತಿಲ್ಲ.
'ಅಯ್ಯಾ' ಚಿತ್ರದಲ್ಲಿ ನಟಿಸಿದ್ದ ಪೃಥ್ವಿರಾಜ್ ಸುಕುಮಾರನ್, 'ರಕ್ತಚರಿತ್ರ-2'ಚಿತ್ರದಲ್ಲಿ ಮಿಂಚಿದ್ದ ಸೂರ್ಯ, 'ಮೆರಿ ಕ್ರಿಸ್‌ಮಸ್' ಚಿತ್ರದಲ್ಲಿ ಮಿಂಚಿದ್ದ ವಿಜಯ್ ಸೇತುಪತಿ ಕೂಡ ಬಾಲಿವುಡ್ ಪ್ರೇಕ್ಷಕರ ಮನ ಗೆಲ್ಲಲಿಲ್ಲ. ಹೀಗೆ ಹಲವರು ಬಾಲಿವುಡ್ ಕನಸು ಕಂಡು ಸೋತಿದ್ದಾರೆ. ಕಮಲ್ ಹಾಸನ್, ಧನುಷ್ ಸೇರಿದಂತೆ ಕೆಲವರು ಮಾತ್ರ ಹಿಂದಿ ಸಿನಿಮಾಗಳಲ್ಲಿ ಮೋಡಿ ಮಾಡಿದ್ದಾರೆ. ಇನ್ನು ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿ ಹಿಂದಿ ಚಿತ್ರದಲ್ಲೇ ನಟಿಸಬೇಕು ಎನ್ನುವ ಕ್ರೇಜ್ ಕೂಡ ಕಮ್ಮಿ ಆಗಿದೆ.


Click it and Unblock the Notifications











