ರೈಲ್ವೇ ಸ್ಟೇಶನ್ ಸ್ಟಾರ್ ರಾನು ಮಂಡಲ್ ಬದುಕು ಘನಘೋರ, ಮಾನಸಿಕ ಅಸ್ವಸ್ಥೆಯಾದ ವೈರಲ್ ಗಾಯಕಿ
ಯಾರಿಗೆ ಎಲ್ಲಿ, ಹೇಗೆ ಅದೃಷ್ಟ ಒಲಿಯುತ್ತದೆ ಎಂಬುದನ್ನು ಯಾರಿಂದನೂ ಊಹಿಸಲು ಸಾಧ್ಯ ಇಲ್ಲ. ಕುರಿಕಾಯುತ್ತಾ ತನಗಿಷ್ಟ ಬಂದಂತೆ ಹಾಡುತ್ತಿದ್ದ ಹನುಮಂತ ''ಸರಿಗಮಪ'' ಸೀಜನ್ 15ರ ರನ್ನರ್ ಅಪ್ ಆಗುತ್ತಾನೆ.. ''ಬಿಗ್ ಬಾಸ್'' ಗೆಲ್ತಾನೆ ಅಂದರೆ ತಮಾಷೆಯ ಮಾತೇ.? ಇನ್ನೂ ಕೇವಲ ಕಣ್ಸನ್ನೆಯಿಂದ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿ ಬೇಡಿಕೆ ಸೃಷ್ಟಿಸಿಕೊಂಡ ಪ್ರಿಯಾ ವಾರಿಯರ್ ಅವರದ್ದು ಅದೃಷ್ಟವಲ್ಲದೇ ಮತ್ತೇನು..?
ಆದರೆ ಹೀಗೆ ಅದೃಷ್ಟದಿಂದ ಮೇಲೆ ಬಂದ ಬೆನ್ನಲ್ಲೇ ಕೆಲವರಿಗೆ ದುರಾದೃಷ್ಟ ಬೆನ್ನು ಹತ್ತಿದ್ದು ಇದೆ. ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ದೇಶದೆಲ್ಲೆಡೆ ಚರ್ಚೆಗೀಡಾಗಿ ಆ ನಂತರ ಹೇಳ ಹೆಸರಿಲ್ಲದೆ ಕೆಲವರು ಕಾಣೆಯಾಗಿದ್ದು ಇದೆ. ಆ ಪೈಕಿ ರಾನು ಮಂಡಲ್ ಕೂಡ ಒಬ್ಬರು.

ಹೌದು. ನಿಮಗೆ ರಾನು ಮಂಡಲ್ ನೆನಪಿರಬೇಕು. 2019ರ ಆಸು-ಪಾಸು ತನ್ನ ಕಂಠದಿಂದ ಮೋಡಿ ಮಾಡಿದ್ದ ಮಹಿಳೆ. ರೇಲ್ವೆ ನಿಲ್ದಾಣದಲ್ಲಿ ಕುಳಿತು ಲತಾ ಮಂಗೇಶ್ಕರ್ ಅವರ ''ಏಕ್ ಪ್ಯಾರ್ ಕಾ ನಗ್ಮಾ ಹೈ'' ಹಾಡನ್ನು ರಾನು ಹಾಡಿದ್ದೇ ತಡ ರಾನು ಮಂಡಲ್ ನಸೀಬು ಬದಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದು ಬಂದಿತ್ತು.
ಇಷ್ಟೇ ಅಲ್ಲ ರಾನು ಅವರ ಕಂಠಕ್ಕೆ ಮನ ಸೋತ ಬಾಲಿವುಡ್‌ನ ಸ್ಟಾರ್ ಸಂಗೀತ ನಿರ್ದೇಶಕ, ಗಾಯಕ ಮತ್ತು ನಾಯಕ ಹಿಮೇಶ್ ರೇಷ್ಮಿಯಾ ಕರೆದು ಅವಕಾಶ ನೀಡಿದ್ದರು. ''ತೇರಿ ಮೇರಿ ಕಹಾನಿ'' ಎಂಬ ಆಲ್ಬಂನ್ನು ಹೊರ ತಂದರು. ಕಿರುತೆರೆಯ ಹಲವು ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸುವ ಸೌಭಾಗ್ಯ ಕೂಡ ಸಿಕ್ಕಿತ್ತು ರಾನುಗೆ.

ಆದರೆ.. ಆಗಲೇ ಹೇಳಿದಂತೆ ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ರಾನು ವಿಚಾರದಲ್ಲಿ ಕೂಡ ಇದೇ ಆಗಿದೆ. ಮತ್ತೆ ತನ್ನ ಹಳೆಯ ಬದುಕಿಗೆ ಈಗ ರಾನು ಮರಳಿದ್ದಾರೆ. ಆದರೆ ಈ ಬಾರಿ ಇವರ ಬದುಕು ಮೊದಲಿಗಿಂತ ದಾರುಣವಾಗಿದೆ.
ಹೌದು, ಯೂಟ್ಯೂಬರ್ ''ನಿಶು ತಿವಾರಿ'' ಸದ್ಯ ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿದವರ ಬೆನ್ನತ್ತಿ ಹೊರಟಿದ್ದಾರೆ. ಖ್ಯಾತಿ ಸಿಕ್ಕ ನಂತರದ ಬದುಕಿನ ಚಿತ್ರಣವನ್ನು ತೆರೆದಿಡುವ ಪ್ರಯತ್ನ ಮಾಡುತ್ತಿದ್ದಾರೆ. ಆ ಪೈಕಿ ರಾನು ಮಂಡಲ್ ಅವರನ್ನು ಹುಡುಕುತ್ತಾ ನಿಶು ತಿವಾರಿ ಕೋಲ್ಕತ್ತಾದ ರಾನಾಘಾಟ್‌ಗೆ ಹೋಗಿದ್ದಾರೆ. ರಾನು ಮಂಡಲ್ ಅವರನ್ನು ಭೇಟಿಯಾಗಿದ್ದಾರೆ.
ಹೀಗೆ ಹೋದ ನಿಶು ತಿವಾರಿಗೆ ಆಘಾತ ಕಾದಿತ್ತು. ಯಾಕೆಂದರೆ ರಾನು ಈಗ ಮಾನಸಿಕ ಅಸ್ವಸ್ಥರಾಗಿದ್ದಾರೆ. ಖಾಲಿ ಕೈಯಲ್ಲಿ ಯಾರು ಬಂದು ಇವರನ್ನು ನೋಡುವಂತೆ ಇಲ್ಲ. ಭೇಟಿಯಾಗಬೇಕು ಅಂದರೆ ಚಿಪ್ಸ್.. ಪಿಜ್ಜಾ.. ಪೆಪ್ಸಿ.. ಕುರಕುರೆ.. ಅಥವಾ ತಿಂಡಿ-ಊಟ ತೆಗೆದುಕೊಂಡು ಹೋಗಬೇಕು. ಇಲ್ಲವಾದಲ್ಲಿ ಹಣ ನೀಡಬೇಕು. ಆಗಲೇ ರಾನು ತಮ್ಮ ಮನೆಯ ಬಾಗಿಲನ್ನು ತೆರೆಯುತ್ತಾರೆ.
ಇನ್ನೂ ಮನೆಯ ಕಥೆ ಹೇಳಲು ಸಾಧ್ಯ ಇಲ್ಲ. ಆಗಲೋ ಈಗಲೋ ಗೋಡೆ ಬೀಳುವಂತೆ ಇವೆ. ಮನೆಯ ತುಂಬಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು ಮನೆಯ ತುಂಬಾ ದುರ್ನಾತ ಇದೆ.ರಾಶಿ ಪ್ಲಾಸ್ಟಿಕ್ ಬಾಟಲಿಗಳು ಮನೆಯಲ್ಲಿ ಬಿದ್ದಿವೆ.

ನಿಶು ತಿವಾರಿ ಅವರ ಜೊತೆ ಮಾತನಾಡುವಾಗ ರಾನು ಸುಮ್ ಸುಮ್ಮನೆ ನಗುತ್ತಾರೆ. ಹಾಗೇ ಕೋಪವನ್ನು ಕೂಡ ಮಾಡಿಕೊಳ್ಳುತ್ತಾರೆ. ಹಿಮೇಶ್ ರೇಶಮಿಯಾ ಕುರಿತು ಕೇಳಿದ ಪ್ರಶ್ನೆಗೆ ಏನೇನೋ ಕವರಿಸುತ್ತಾರೆ. ನಿಶು ಜೊತೆ ಮಾತನಾಡುವ ಸಮಯದಲ್ಲಿ ಒಮ್ಮೆ ನನ್ನ ಬಳಿ ತುಂಬಾ ದುಡ್ಡು ಇದೆ ಎನ್ನುವ ರಾನು ಮಂಡಲ್ ಮತ್ತೊಮ್ಮೆ ನನಗೆ ಮೋಸವಾಗಿದೆ ಎಂದು ಹೇಳುತ್ತಾರೆ.
ಇನ್ನು ರಾನು ಮಂಡಲ್ ಜೊತೆ ನಿಶು ತಿವಾರಿ ಮಾತನಾಡುವಾಗ ಅಲ್ಲಿ ಬರುವ ಅಕ್ಕ-ಪಕ್ಕದವರು ಕೂಡ ರಾನುಗೆ ಹುಚ್ಚು ಹಿಡಿದಿದೆ ಎಂಬರ್ಥದಲ್ಲಿ ಮಾತನಾಡುತ್ತಾರೆ. ಒಟ್ನಲ್ಲಿ ರಾನುಗೆ ಆ ದೇವರು ಅವಕಾಶ ನೀಡಿದ್ದ. ಆದರೆ ಆ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಎಡವಿದ ರಾನು ಮಂಡಲ್ ಮತ್ತೆ ಮೊದಲಿನ ಸ್ಥಿತಿಗೆ ಮರಳಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆ ಇವರ ಹತ್ತಿರ ಹೋಗಲು ಕೂಡ ಹಲವರು ಹೆದರುತ್ತಿದ್ದಾರೆ.


Click it and Unblock the Notifications











