ಅಯೋಧ್ಯೆ ರಾಮಮಂದಿರದ ಆವರಣದಲ್ಲಿ ಸಿನಿಮಾ ತಾರೆಯರು ಕಂಡಿದ್ದು ಹೀಗೆ
ಕೊನೆಗೂ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯಾಗಿದೆ. ಬಹಳ ಶಾಸ್ತ್ರೋಕ್ತವಾಗಿ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಟಾಪನೆಯಾಗಿದೆ. 7 ಸಾವಿರಕ್ಕೂ ಅಧಿಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ರಾಜಕೀಯ ಮುಖಂಡರು, ಉದ್ಯಮಿಗಳು, ಸಿನಿಮಾ, ಕ್ರೀಡಾ ಲೋಕದ ತಾರೆಯರು ಈ ಪಟ್ಟಿಯಲ್ಲಿದ್ದಾರೆ. ಇನ್ನು ಕಾರ್ಯಕ್ರಮಕ್ಕೆ ಭಾರೀ ಭದ್ರತೆ ಒದಗಿಸಲಾಗಿತ್ತು.
1992ರಲ್ಲಿ ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿ ಕೆಡವಲಾಗಿತ್ತು. ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ರಾಮಮಂದಿರ ನಿರ್ಮಾಣ ನಡೆಯುತ್ತಿದೆ. ಹಲವು ಶತಮಾನಗಳ ಭಕ್ತರ ಕನಸು ನನಸಾಗಿದೆ. ಲಕ್ಷಾಂತರ ಜನರ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ. ಸದ್ಯ ಎಲ್ಲೆಲ್ಲೂ ರಾಮನಾಮ ಮೊಳಗುತ್ತಿದೆ. ಶುಭ ಅಭಿಜಿತ್ ಮುಹೂರ್ತದಲ್ಲಿ ನಡೆದ ಶ್ರೀರಾಮ ಪ್ರಾಣ ಪ್ರತಿಷ್ಟಾಪನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ಅರ್ಚಕರು ಹಾಗೂ ಪಂಡಿತರ ಜೊತೆಗೆ ಯಜಮಾನನ ಸ್ಥಾನದಲ್ಲಿದ್ದು ಪ್ರಧಾನಿ ಮೋದಿ ಪ್ರಾಣ ಪ್ರತಿಷ್ಟಾಪನೆ ಕಾರ್ಯ ನೆರವೇರಿಸಿದರು. ಮೋದಿ ರಾಮನ ಮೂರ್ತಿಗೆ ಕೈ ಮುಗಿದು ಪಾದಗಳಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಆರತಿ ಬೆಳಗಿದರು. ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು. ಹೆಲಿಕ್ಯಾಪ್ಟರ್‌ನಲ್ಲಿ ರಾಮಮಂದಿರದ ಮೇಲೆ ಪುಷ್ಪಾರ್ಚನೆ ಆಯಿತು.
ಕನ್ನಡಿಗ ಅರುಣ್ ಯೋಗಿರಾಜ್ ಕೈಚಳಕದಲ್ಲಿ ಮೂಡಿದ ಶ್ರೀರಾಮನ ಮೂರ್ತಿ ಸದ್ಯ ಅಯೋಧ್ಯೆ ರಾಮಮಂದಿರದಲ್ಲಿ ರಾರಾಜಿಸುತ್ತಿದೆ. ಮುಖ್ಯ ಆಲಯದ ಹೊರ ಭಾಗದಲ್ಲಿ ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆವರಣದಲ್ಲಿ ಎಲ್ಇಡಿ ಪರದೆಗಳನ್ನು ಅಳವಿಡಿಸಿ ಪ್ರಾಣ ಪ್ರತಿಷ್ಟಾಪನಾ ಕಾರ್ಯಕ್ರಮ ನೋಡಲು ಅನುವು ಮಾಡಿಕೊಡಲಾಗಿತ್ತು. ರಾಮಮಂದಿರ ಲೋಕಾರ್ಪಣೆ ಆಗುತ್ತಿದ್ದಂತೆ ನಟಿ ಕಂಗನಾ ರಾಣವತ್ ಜೈ ಶ್ರೀರಾಮ್ ಜೈ ಶ್ರೀರಾಮ್ ಎಂದು ಜೈಕಾರ ಹಾಕಿದರು.

ಕನ್ನಡ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ನಟ ನಿಖಿಲ್ ಕುಮಾರಸ್ವಾಮಿ ತಂದೆ, ತಾತ- ಅಜ್ಜಿ ಜೊತೆ ರಾಮಮಂದಿರದ ಆವರಣದಲ್ಲಿ ಕಾಣಿಸಿಕೊಂಡರು. ರಿಷಬ್ ಶೆಟ್ಟಿ ಜೊತೆಗೂ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ತೆಲುಗು ನಟ ಚಿರಂಜೀವಿ, ಪತ್ನಿ ಸುರೇಖಾ ಹಾಗೂ ಪುತ್ರ ರಾಮ್‌ಚರಣ್ ಜೊತೆ ಕಾರ್ಯಕ್ರಮಕ್ಕೆ ಸಾಕ್ಷಿ ಆಗಿದ್ದಾರೆ. ಸಹೋದರ ಪವನ್ ಕಲ್ಯಾಣ್ ಸಹ ಸಾಥ್ ನೀಡಿದರು. ಕನ್ನಡ ಸಿನಿಮಾ ನಿರ್ಮಾಪಕ ಕೆವಿಎನ್ ಪ್ರೊಡಕ್ಷನ್ಸ್‌ನ ವೆಂಟಕ್ ಕೋನಂಕಿ, 'ಆದಿಪುರುಷ್' ಸಿನಿಮಾ ನಿರ್ದೇಶಕ ಓಂ ರಾವುತ್, ಆಲಿಯಾ ಭಟ್- ರಣ್‌ಬೀರ್ ಕಪೂರ್, ರೋಹಿತ್ ಶೆಟ್ಟಿ ಹೀಗೆ ಸಾಕಷ್ಟು ಮಂದಿ ಸಿನಿಮಾ ತಾರೆಯರು ಈ ಸುಂದರ ಕ್ಷಣಗಳನ್ನು ಕಣ್ತುಂಬಿಕೊಂಡರು.
ತಮಿಳು ನಟ ಧನುಷ್, ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್ ಹೀಗೆ ಹಲವರು ರಾಮಮಂದಿರದ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವರಿಗೆ ಆಹ್ವಾನ ಸಿಕ್ಕರೂ ಕಾರ್ಯಕ್ರಮದಲ್ಲಿ ಭಾಗಿ ಆಗಲು ಸಾಧ್ಯವಾಗಲಿಲ್ಲ. ಅಕ್ಷಯ್‌ಕುಮಾರ್, ಟೈಗರ್ ಶ್ರಾಫ್ ಈ ಸುಂದರ ಕ್ಷಣಗಳಿಗೆ ಸಾಕ್ಷಿ ಆಗಲು ಸಾಧ್ಯವಾಗಲಿಲ್ಲ. ಸ್ಪೆಷಲ್ ವಿಡಿಯೋ ಮೂಲಕ ಇಬ್ಬರೂ ಶುಭ ಹಾರೈಸಿದ್ದಾರೆ.
ನಟ ಯಶ್, ತೆಲುಗು ನಟರಾದ ಜ್ಯೂ. ಎನ್‌ಟಿಆರ್, ಮೋಹನ್ ಬಾಬು ಸೇರಿದಂತೆ ಹಲವರಿಗೆ ರಾಮ ಮಂದಿರ ಲೋಕಾರ್ಪಣೆ ಕಾಯ್ರಕ್ರಮದಲ್ಲಿ ಭಾಗಿ ಆಗುವ ಅವಕಾಶ ಸಿಕ್ಕರೂ ಹೋಗಲಿಲ್ಲ. ಬಾಲರಾಮ ಪ್ರಾಣ ಪ್ರತಿಷ್ಟಾಪನೆ ಬಳಿಕ ಪ್ರಧಾನಿ ಮೋದಿ ಭಾಷಣ ಮಾಡಿದರು.


Click it and Unblock the Notifications










