ಅಪ್ಪನ ಪಡಿಯಚ್ಚು ; ಹೇಗಿದೆ ಶಾರುಖ್ ಖಾನ್ ಮಗ ಆರ್ಯನ್ ನಿರ್ದೇಶನದ ಚೊಚ್ಚಲ ಚಿತ್ರದ ಫಸ್ಟ್ ಲುಕ್ ?
ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಇದಕ್ಕೆ ಬಣ್ಣದ ಪ್ರಪಂಚದಲ್ಲಿ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ.. ಬಾಲಿವುಡ್‌ನಲ್ಲಿ ಇವತ್ತು ಆಳುತ್ತಿರುವ ಬಹುತೇಕರು, ಒಂದ್ಕಾಲಿನ ಸ್ಟಾರ್ ಕಲಾವಿದರ ಮಕ್ಕಳೇ. ಕೇವಲ ಮಕ್ಕಳು ಮಾತ್ರವಲ್ಲ ಅವರ ಹತ್ತಿರದ ಸಂಬಂಧಿಕರು ದೂರದ ನೆಂಟರು ಎಲ್ಲರೂ ಆಯಾ ಕ್ಷೇತ್ರಕ್ಕೆ ಧುಮುಕುವ ಪ್ರಯತ್ನ ಮಾಡುತ್ತಾರೆ.
ಆದರೆ, ಹೀಗೆ ಚಿತ್ರರಂಗಕ್ಕೆ ಬರುವ ಎಲ್ಲರಿಗೆ ಇಲ್ಲಿ ಗೆಲುವು ಸಿಗುವುದಿಲ್ಲ. ತೀರಾ ಅಪರೂಪಕ್ಕೆ ಎಂಬಂತೆ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಗೆಲ್ಲುತ್ತಾರೆ. ಮಿಕ್ಕಂತೆ ಕೆಲವರು ಎಡವುತ್ತಾರೆ. ಮತ್ತೆ ಮತ್ತೆ ಪ್ರಯತ್ನ ಮಾಡುತ್ತಾರೆ.ಇನ್ನೂ ಕೆಲವರು ಕೆಲವರು ಬಂದ ದಾರಿಗೆ ಸುಂಕ ಇಲ್ಲ ಎಂದು ಮನೆಗೆ ಮರಳುತ್ತಾರೆ.

ಈ ವರ್ಷ ಕೂಡ ಬಾಲಿವುಡ್ ಇದೆಲ್ಲದರಿಂದ ಹೊರತಾಗಿಲ್ಲ. 2025ರ ಈ 08 ತಿಂಗಳಿನಲ್ಲಿ ಹಲವಾರು ಜನ ತಮ್ಮ ತಂದೆ-ತಾಯಿ ಮತ್ತು ಸಂಬಂಧಿಕರ ಹೆಸರು ಹೇಳಿಕೊಂಡು ಚಿತ್ರರಂಗಕ್ಕೆ ಬಂದಿದ್ದಾರೆ. ತಮ್ಮ ಅದೃಷ್ಟ ಪರೀಕ್ಷೆಯನ್ನು ಕೂಡ ಮಾಡಿಕೊಂಡಿದ್ದಾರೆ. ಈ ಸಾಲಿಗೆ ಈಗ ಶಾರುಖ್ ಖಾನ್ ಅವರ ಮುದ್ದಿನ ಮಗ ಆರ್ಯನ್ ಖಾನ್ ಕೂಡ ಸೇರಿಕೊಂಡಿದ್ದಾರೆ. ಆದರೆ ನಾಯಕನಾಗಿ ಅಲ್ಲ ಬದಲಿಗೆ ನಿರ್ದೇಶಕನಾಗಿ ಎನ್ನುವುದೇ ವಿಶೇಷ.
ಹೌದು, ಆರ್ಯನ್ ಖಾನ್ ವರ್ಷದ ಹಿಂದೆ ವೆಬ್ ಸೀರಿಸ್ ಒಂದನ್ನು ಘೋಷಣೆ ಮಾಡಿದ್ದರು. ಆ ಚಿತ್ರದ ಹೆಸರು ''ದಿ ಬಾ***ಡ್ಸ್ ಆಫ್ ಬಾಲಿವುಡ್'' (The The Ba***ds of Bollywood ). ಶಾರುಖ್ ಖಾನ್ ಅವರ ಒಡೆತನದ ''ರೆಡ್ ಚಿಲ್ಲಿ'' ಸಂಸ್ಥೆಯೇ ಈ ಚಿತ್ರಕ್ಕೆ ಹಣ ಹೂಡಿತ್ತು. ಶಾರುಖ್ ಖಾನ್ ಜೊತೆ ''ನೆಟ್‌ಫ್ಲಿಕ್ಸ್'' ಕೂಡ ಈ ವೆಬ್ ಸರಣಿಗೆ ಕೈ ಜೋಡಿಸಿತ್ತು.
ಆದರೆ ಆ ನಂತರ ಈ ಚಿತ್ರದ ಸದ್ದು ಸುದ್ದಿ ಇರಲಿಲ್ಲ. ಆದರೆ ಈಗ ಸದ್ದು ಶುರುವಾಗಿದೆ. ಸದ್ಯ ತಮ್ಮ ಕನಸಿನ ಚೊಚ್ಚಲ ಚಿತ್ರದ ಚಿಕ್ಕ ಸ್ಯಾಂಪಲ್‌ನ ಆರ್ಯನ್ ಖಾನ್ ಬಿಡುಗಡೆ ಮಾಡಿದ್ದಾರೆ.
1 ನಿಮಿಷ 26 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಶಾರುಖ್ ಖಾನ್ ಅವರ ಸೂಪರ್ ಹಿಟ್ ''ಮೊಹಬತ್ತೇನ್'' ಚಿತ್ರದ ಸೂಪರ್ ಹಿಟ್ ಡೈಲಾಗ್ ''ಏಕ್ ಲಡ್ಕಿ ಥಿ ದೀವಾನಿ ಸಿ..''ಯನ್ನು ಆರ್ಯನ್ ಉಪಯೋಗಿಸಿಕೊಂಡಿದ್ದಾರೆ. ಆ ನಂತರ ಈ ಸಂಭಾಷಣೆಯ ಸಾಲಿನಲ್ಲಿಯೇ ''ಕಿಲ್'' ಖ್ಯಾತಿಯ ''ಲಕ್ಷ್ಯ ಲಾಲ್ವಾನಿ'' ಮತ್ತು ''ಅನ್ಯಾ ಸಿಂಗ್'' ಅವರ ಪ್ರೇಮಾಂಕುರದ ದೃಶ್ಯಗಳು ಅನಾವರಣಗೊಳ್ಳುತ್ತವೆ ಇದರ ಬೆನ್ನಲ್ಲೇ ಅಪಘಾತ ಆ ನಂತರ ಸಾಹಸದ ದೃಶ್ಯಗಳನ್ನು ಆರ್ಯನ್ ಪೋಣಿಸಿದ್ದಾರೆ. ಚೂರು ಜಾಸ್ತಿಯಾಯ್ತು ಆದರೂ ಕೂಡ ಅಭ್ಯಾಸ ಮಾಡಿಕೊಳ್ಳಿ ಯಾಕೆಂದರೆ ಈ ಕಥೆ ಬಾಲಿವುಡ್‌ನದ್ದು ಇಲ್ಲಿ ಪ್ರೀತಿಯು ಇದೆ ಯುದ್ಧವೂ ಇದೆ ಎಂದು ಹೇಳಿದ್ದಾರೆ.

ಸದ್ಯ ಈ ವಿಡಿಯೋ ಕುತೂಹಲ ಮೂಡಿಸಿದೆ. ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದೆ. ಎಲ್ಲಕ್ಕಿಂತ ಆರ್ಯನ್ ಖಾನ್ ಅವರ ಲುಕ್ ಮತ್ತು ಅವರ ಧ್ವನಿಯ ಕುರಿತು ಸಾಕಷ್ಟು ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಹಲವಾರು ಜನ ಅಪ್ಪನ ಪಡಿಯಚ್ಚು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆ ಇನ್ನೂ ಕೆಲವರು ತಂದೆಯನ್ನು ಮೀರಿಸುವಂತಹ ಪ್ರತಿಭೆ ಆರ್ಯನ್ ಅವರಲ್ಲಿದೆ ಅದಕ್ಕೆ ಈ ಚಿಕ್ಕ ವಿಡಿಯೋನೇ ಸಾಕ್ಷಿ ಎಂದು ಹೇಳಿದ್ದಾರೆ. ನಿರ್ದೇಶಕನಾಗುವ ಬದಲು ನೀವು ನಾಯಕನಾಗಬೇಕು ನಿಮ್ಮ ತಂದೆಯಂತೆ ನಿಮಗೆ ಒಳ್ಳೆಯ ಭವಿಷ್ಯ ಇದೆ ಆಕ್ಟಿಂಗ್‌ನಲ್ಲಿ ಪ್ರಯತ್ನ ಮಾಡಿ ಎಂದು ಕೂಡ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಸದ್ಯ ''ದಿ ಬಾ***ಡ್ಸ್ ಆಫ್ ಬಾಲಿವುಡ್'' (The The Ba***ds of Bollywood ) ಚಿತ್ರದ ಫಸ್ಟ್ ಲುಕ್ ಇಂದು ಒಂದೇ ದಿನದಲ್ಲಿ 281, 162 ವೀಕ್ಷಣೆಯನ್ನು ಕಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಆಗಸ್ಟ್ 20ಕ್ಕೆ ಪ್ರಿವ್ಯೂ ಬಿಡುಗಡೆಯಾಗಲಿದೆ.


Click it and Unblock the Notifications











