ಸರೋಜ್ ಖಾನ್ ವಿರುದ್ಧ ತಿರುಗಿ ಬಿದ್ದ ಡ್ಯಾನ್ಸ್ ಮಾಸ್ಟರ್ ಗಣೇಶ್ ಆಚಾರ್ಯ
ಬಾಲಿವುಡ್ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ವಿರುದ್ಧ 33 ವರ್ಷದ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿ ಪೊಲೀಸ್ ದೂರು ನೀಡಿದ್ದರು.
ಅಶ್ಲೀಲ ವಿಡಿಯೋಗಳನ್ನು ನೋಡುವಂತೆ ಮತ್ತು ತನಗೆ ಬರುವ ಆದಾಯದಲ್ಲಿ ಕಮಿಷನ್ ನೀಡುವಂತೆ ಬೇಡಿಕೆಯಿಟ್ಟಿದ್ದರು ಎಂದು ದೂರಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಣೇಶ್ ಆಚಾರ್ಯ ಪ್ರತಿಕ್ರಿಯೆ ನೀಡಿದ್ದು, ಹಿರಿಯ ನೃತ್ಯ ನಿರ್ದೇಶಕಿ ಸರೋಜ್ ಖಾನ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಸರೋಜ್ ಖಾನ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಹಾಗಿದ್ರೆ, ಮಹಿಳೆ ಮಾಡಿರುವ ಆರೋಪದ ಬಗ್ಗೆ ಗಣೇಶ್ ಆಚಾರ್ಯ ಏನಂದ್ರು? ಮುಂದೆ ಓದಿ...

ಇದು ನನ್ನ ವಿರುದ್ಧದ ಷಡ್ಯಂತ್ರ
ನೃತ್ಯಗಾರ್ತಿ ಮಹಿಳೆ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಗಣೇಶ್ ಆಚಾರ್ಯ ''ಇದಕ್ಕೆ ಕಾರಣ ಸರೋಜ್ ಖಾನ್ ಮತ್ತು ಆಕೆಯ ಸ್ನೇಹಿತರು. ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರಲು, ಪೂರ್ವ ನಿಯೋಜಿತವಾಗಿ ಈ ಷಡ್ಯಂತ್ರ ಮಾಡಿದ್ದಾರೆ'' ಎಂದು ತಿರುಗೇಟು ನೀಡಿದ್ದಾರೆ.

ನನ್ನ ಮೇಲೆ ಸೇಡು ತೀರಿಸಿಕೊಳ್ಳುವ ಯತ್ನ
''ನಾನು ನೃತ್ಯಗಾರರ ಸಂಘದ ಕಾರ್ಯದರ್ಶಿ ಆದ್ಮೇಲೆ ಅವರ ಬಿಸಿನೆಸ್ ನಷ್ಟವಾಗಿದೆ. ಸಂಘದಲ್ಲಿ ಯಾವುದೇ ಲಾಭ ಸಿಗುತ್ತಿಲ್ಲ. ಅವರು ಹಣ ಗಳಿಸುವುದಕ್ಕೆ ನಾನು ಅಡ್ಡಿಯಾಗಿದ್ದೇನೆ. ಮನೆಯಲ್ಲಿ ಕೂತು ಆರಾಮಾಗಿ ದುಡ್ಡು ಮಾಡುತ್ತಿದ್ದವರಿಗೆ ಈಗ ಕಷ್ಟವಾಗಿದೆ. ಹಾಗಾಗಿ, ಇಂತಹ ಕೆಲಸ ಮಾಡುತ್ತಿದ್ದಾರೆ'' ಎಂದು ಗಣೇಶ್ ಪ್ರತ್ಯಾರೋಪ ಮಾಡಿದ್ದಾರೆ.

ಮಾನಹಾನಿ ದಾಖಲಿಸುತ್ತೇನೆ
''ಅವರ ವಿರುದ್ಧ ಹೋರಾಡಲು ನಾನು ಎಲ್ಲ ಪ್ರಯತ್ನ ಮಾಡುತ್ತೇನೆ. ಸರೋಜ್ ಖಾನ್ ಮತ್ತು ಆಕೆಗೆ ಜೊತೆಯಾಗಿ ನಿಂತು ನನ್ನ ವಿರುದ್ಧ ಈ ರೀತಿ ಟೀಕೆ ಮಾಡಿರುವವರ ಮೇಲೆ ಮಾನಹಾನಿ ಮೊಕದ್ದಮೆ ಹೂಡುತ್ತೇನೆ'' ಎಂದು ಡ್ಯಾನ್ಸ್ ಮಾಸ್ಟರ್ ಕಿಡಿ ಕಾರಿದ್ದಾರೆ.

ಇಬ್ಬರ ಮಧ್ಯೆ ಹಳೆ ದ್ವೇಷ ಇದೆ
ಅಂದ್ಹಾಗೆ, ಗಣೇಶ್ ಆಚಾರ್ಯ ಮತ್ತು ಸರೋಜ್ ಖಾನ್ ನಡುವೆ ಹಳೆ ದ್ವೇಷ ಇದೆ. ಗಣೇಶ್ ಆಚಾರ್ಯ ನನ್ನ ನೃತ್ಯಗಾರರನ್ನು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಈ ಹಿಂದೆ ಸರೋಜ್ ಖಾನ್ ದೂರಿದ್ದರು. ನೃತ್ಯಗಾರರ ಸಂಘದಲ್ಲಿ ಸರೋಜ್ ಖಾನ್ ವಿರುದ್ಧ ಆಚಾರ್ಯ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ.


Click it and Unblock the Notifications











