ಮದುವೆ ಬಳಿಕ ಸೈಲೆಂಟಾದ ತಾರೆ ಜೆನಿಲಿಯಾ
ರಿತೇಶ್ ದೇಶ್ ಮುಖ್ ಅವರ ಕೈಹಿಡಿದ ಬಳಿಕ ತಾರೆ ಜೆನಿಲಿಯಾ ಡಿಸೋಜಾ ಸೈಲೆಂಟ್ ಆಗಿದ್ದಾರೆ. ಆಕೆಯ ಸದ್ದಿಲ್ಲ, ಸುಳಿವಿಲ್ಲ. ಬೆಳ್ಳಿಪರದೆಯಿಂದಲೇ ಮಂಗಮಾಯವಾಗಿದ್ದಾರೆ. ಅವರು ಇನ್ನೂ ಮದುವೆ ಮೂಡ್ ನಿಂದ ಹೊರಬಂದಂತಿಲ್ಲ. ತನ್ನ ಪತಿಯೊಂದಿಗೆ ಹಾಯಾಗಿ ರಸಗುಲ್ಲ ಸವಿಯುತ್ತಿದ್ದಾರೆ.
ಜೆನಿಲಿಯಾ ಐದು ಭಾಷೆಗಳಲ್ಲಿ ಮಿಂಚಿ ಪಡ್ಡೆಗಳ ಕಣ್ಣು ಕುಕ್ಕಿದವರು. ಬಾಲಿವುಡ್, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ಒಂದು ಸುತ್ತು ಹಾಕಿಕೊಂಡು ಬಂದವರು. ಈಗ ಇದ್ದಕ್ಕಿದ್ದಂತೆ ಸೈಲೆಂಟಾದರೆ ಪಡ್ಡೆಗಳ ಪಾಡೇನಾಗಬೇಕು.
ಫೆಬ್ರವರಿ 3, 2012ರಲ್ಲಿ ಸಪ್ತಪದಿ ತುಳಿದ ಜೆನಿಲಿಯಾ ಇದುವರೆಗೂ ಯಾವುದೇ ಚಿತ್ರಕ್ಕೂ ಸಹಿಹಾಕಿಲ್ಲವಂತೆ. ಇದನ್ನು ಸ್ವತಃ ಆಕೆಯೇ ಸ್ಪಷ್ಟಪಡಿಸಿದ್ದಾರೆ. ತನ್ನ 10ನೇ ವರ್ಷಕ್ಕೆ ಬೆಳ್ಳಿಪರದೆಗೆ ಅಡಿಯಿಟ್ಟ ತಾನು ವರ್ಷದ 365 ದಿನವೂ ಬಿಜಿಯಾಗಿರುತ್ತಿದ್ದೆ. ಈಗ ಬ್ರೇಕ್ ತಗೊಂಡಿದ್ದಿದ್ದೇನೆ ಅಷ್ಟೇ ಎನ್ನುತ್ತಾರೆ.
ಮದುವೆಗೆ ಮುಂಚೆ ನಾನು ಹೇಗಿದ್ದೆನೋ ಈಗಲೂ ಹಾಗೆಯೇ ಇದ್ದೇನೆ. ನನ್ನಲ್ಲೇನು ಬದಲಾವಣೆಯಾಗಿಲ್ಲ. ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸುತ್ತಿಲ್ಲ ಅಷ್ಟೆ. ತೆರೆಯ ಮೇಲೆ ಇಲ್ಲದಿದ್ದರೂ ಬೇರೆ ಕೆಲಸಗಳಲ್ಲಿ ತಾನು ಬಿಜಿಯಾಗಿದ್ದೇನೆ ಎಂದಿದ್ದಾರೆ.
ರಿತೇಶ್ ಅವರು ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ತಂಡವೊಂದನ್ನು ಖರೀದಿಸಿದ್ದಾರೆ. ಇದಿಷ್ಟೇ ಅಲ್ಲದೆ ಹೋಂ ಪ್ರೊಡಕ್ಷನ್ ನಲ್ಲಿ 'ಬಲಕ್ ಪಲಕ್' ಎಂಬ ಚಿತ್ರವನ್ನೂ ನಿರ್ಮಿಸುತ್ತಿದ್ದೇವೆ. ಈ ಕೆಲಸಗಳಲ್ಲಿ ತಾನೀಗ ಬಿಜಿಯಾಗಿದ್ದೇನೆ. ಆದರೆ ಮದುವೆಗೂ ಮುನ್ನ ಸಹಿ ಹಾಕಿದ್ದ 'ಇಟ್ಸ್ ಮೈ ಲೈಫ್' ಹಾಗೂ 'ರಾಖ್ ದ ಶಾದಿ' ಚಿತ್ರಗಳಲ್ಲಿ ಅಭಿನಯಿಸಬೇಕಾಗಿದೆ ಎನ್ನುತ್ತಾರೆ. (ಏಜೆನ್ಸೀಸ್)


Click it and Unblock the Notifications











