ಯಶ್ ರಾಮಾಯಣ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ , ಈ ದಿನದಂದು ಬೆಂಗಳೂರಿನಲ್ಲಿ ನಡೆಯಲಿದೆ ಸಮಾರಂಭ..!
ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದತ್ತ ಎಲ್ಲರು ತಿರುಗಿ ನೋಡುವಂತೆ ಮಾಡಿದ ಯಶ್ ಕುರಿತು ಇವತ್ತು ಜಗತ್ತು ಮಾತನಾಡುತ್ತಿದೆ. ಯಶ್ ಅವರ ಮುಂದಿನ ಚಿತ್ರ ಟಾಕ್ಸಿಕ್ ಚಿತ್ರಕ್ಕೆ ಕಾತುರದಿಂದ ಕಾಯುತ್ತಿದೆ. ಹಾಲಿವುಡ್, ಬಾಲಿವುಡ್‌ನವರೆಲ್ಲ ಸ್ಯಾಂಡಲ್‌ವುಡ್‌ಗೆ ಬಂದು ಯಶ್ ಜೊತೆ ಕೆಲಸ ಮಾಡುತ್ತಿದ್ದಾರೆ. ಇನ್ನು ಯಶ್ ಇವತ್ತು ಕೇವಲ ಕನ್ನಡದ ಸ್ಟಾರ್ ಅಲ್ಲ. ಬಾಲಿವುಡ್‌ನ ಸೂಪರ್ ವಿಲನ್ ಕೂಡ ಹೌದು.
ಇಷ್ಟೇ ಅಲ್ಲ ನಿರ್ಮಾಪಕ ಕೂಡ ಹೌದು. ಟಾಕ್ಸಿಕ್ ಚಿತ್ರದ ಜೊತೆ ಜೊತೆಯಲ್ಲಿ ರಾಮಾಯಣ ಚಿತ್ರವನ್ನು ಕೂಡ ಯಶ್ ಅದ್ಧೂರಿಯಾಗಿ ತೆರೆಗೆ ತರುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಅಬ್ಬರಿಸಲು ಸರ್ವ ಸನ್ನದ್ಧರಾಗಿದ್ದಾರೆ. ರಾವಣಾಸುರನ ರೂಪದಲ್ಲಿ ತಮ್ಮ ನೆಚ್ಚಿನ ರಾಕಿಯನ್ನು ನೋಡಲು ಅನೇಕರು ಕಾತುರದಿಂದ ಕಾಯುತ್ತಿದ್ದಾರೆ ಕೂಡ.

ಹೀಗಿರುವಾಗ ರಾಮಾಯಣ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ ಎನ್ನುವ ಬ್ರೇಕಿಂಗ್ ನ್ಯೂಸ್ ಒಂದು ಸದ್ಯ ಮಾಯಾನಗರಿ ಮುಂಬೈನಲ್ಲಿ ಕೇಳಿ ಬರುತ್ತಿದೆ. ರಾಮಾಯಣ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ನಮ್ಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎನ್ನುವ ಸುದ್ದಿ ಕೂಡ ಸದ್ಯ ಹಬ್ಬಿದೆ. ರಾಮಾಯಣ ಚಿತ್ರದ ಟೀಸರ್ ಭರ್ತಿ ಮೂರು ನಿಮಿಷ ಇದ್ದು ಟೀಸರ್‌ಗೆ ಸೆನ್ಸಾರ್ ಸರ್ಟಿಫಿಕೆಟ್ ಕೂಡ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ಹೌದು, ಅಸಲಿಗೆ ಸಿನಿಮಾ ಟೀಸರ್, ಟ್ರೈಲರ್ ಬಿಡುಗಡೆಗೂ ಮುನ್ನ ಸೆನ್ಸಾರ್ ಮಂಡಳಿಗೆ ತೋರಿಸಬೇಕು. ಅದರಲ್ಲಿ ಏನಾದರೂ ಆಕ್ಷೇಪಾರ್ಹ ವಿಚಾರಗಳಿದ್ದರೆ ಅದನ್ನು ಗಮನಿಸಿ ಬದಲಾವಣೆಗೆ ಸೆನ್ಸಾರ್ ಮಂಡಳಿ ಸೂಚಿಸುತ್ತದೆ. ಆ ಬಳಿಕವೇ ಅದನ್ನು ಬಿಡುಗಡೆ ಮಾಡಲು ಅವಕಾಶ ಇದೆ. ಅದೇ ರೀತಿ ಇದೀಗ 'ರಾಮಾಯಣ' ಚಿತ್ರದ ಟೀಸರ್‌ನ ಸೆನ್ಸಾರ್ ಮಂಡಳಿ ವೀಕ್ಷಿಸಿದ್ದು ಟೀಸರ್ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ಹೇಳಲಾಗುತ್ತಿದೆ.
ನಿಮಿತ್ ಮಲ್ಹೋತ್ರಾ 'ರಾಮಾಯಣ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಯಶ್ ಕೂಡ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಎರಡು ಭಾಗಗಳಾಗಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದ್ದು ಸದ್ಯ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಈ ಜುಲೈ ಎರಡರಂದು ಬೆಂಗಳೂರಿನಲ್ಲಿ ರಾಮಾಯಣ ಚಿತ್ರದ ಪತ್ರಿಕಾಗೋಷ್ಠಿ ನಡೆಯಲಿದ್ದು, ಜುಲೈ 3ರಂದು ಅದ್ಧೂರಿಯಾಗಿ ಟೀಸರ್ ಬಿಡುಗಡೆಯಾಗಲಿದೆ.

ಅಂದ್ಹಾಗೇ 3 ನಿಮಿಷಗಳ ಅವಧಿಯನ್ನೊಂದಿರುವ ಈ ಟೀಸರ್‌ನಲ್ಲಿ ರಾಮ-ಸೀತೆ ಮತ್ತು ರಾವಣನ ದರ್ಶನ ಎಷ್ಟು ಸೆಕೆಂಡ್‌ಗಳ ಕಾಲ ಆಗಲಿದೆ ಎನ್ನುವುದು ಸದ್ಯ ಗೊತ್ತಿಲ್ಲವಾದರೂ ಹಿಂದಿ ಭಾಷೆಯಲ್ಲಿ ಈ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಮುಂಬೈ ಸೆನ್ಸಾರ್ ಮಂಡಳಿಯಲ್ಲಿ ಈ ಚಿತ್ರದ ಟೀಸರ್‌ಗೆ ಸರ್ಟಿಫಿಕೆಟ್ ನೀಡಲಾಗಿದ್ದು ಹರಿದಾಡುತ್ತಿರುವ ಸನ್ಸಾರ್ ಸರ್ಟಿಫಿಕೆಟ್ ಈ ಮಾತುಗಳನ್ನು ಪುಷ್ಠಿಕರಿಸುವಂತೆ ಇದೆ.
ಇನ್ನುಳಿದಂತೆ ಯಶ್ ನಿರ್ಮಾಣ ರಾಮಾಯಣ ಪ್ಯಾನ್ ಇಂಡಿಯಾ ಚಿತ್ರವಲ್ಲ ಬದಲಿಗೆ ಪ್ಯಾನ್ ವರ್ಲ್ಡ್ ಸಿನಿಮಾ. ಜಾಗತಿಕ ಪ್ರೇಕ್ಷಕರಿಗಾಗಿಯೇ ಮಾಡಲಾಗುತ್ತಿರುವ ಚಿತ್ರ. ಚಿಲ್ಲರ್ ಪಾರ್ಟಿ', 'ದಂಗಲ್', 'ಚಿಚೋರೆ', 'ಭವಾಲ್' ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದಲ್ಲಿ ಎರಡು ಭಾಗಗಳಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ಇದ್ದಾರೆ.
ರಣ್‌ಬೀರ್ ಕಪೂರ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರೆ ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಯಶ್ ಲಂಕಾಸುರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹನುಮಂತನಾಗಿ ಸನ್ನಿ ಡಿಯೋಲ್, ಇಂದ್ರದೇವನಾಗಿ ಕುನಾಲ್ ಕಪೂರ್, ಲಕ್ಷ್ಮಣನಾಗಿ ರವಿ ದುಬೆ, ಶೂರ್ಪನಖಿಯಾಗಿ ರಕುಲ್ ಪ್ರೀತ್‌ಸಿಂಗ್, ಮಂಡೋದರಿಯಾಗಿ ಶಿಬಾ ಚಡ್ಡಾ, ದಶರಥನಾಗಿ ಅರುಣ್ ಗೋವಿಲ್, ಕೈಕೆಯಿಯಾಗಿ ಲಾರಾ ದತ್ತಾ ಬಣ್ಣ ಹಚ್ಚಿದ್ದಾರೆ. ಇನ್ನು ಹಾಲಿವುಡ್‌ನ ಅನೇಕ ತಂತ್ರಜ್ಞರು ರಾಮಾಯಣ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. 2026ರ ದೀಪಾವಳಿಯಂದು ರಾಮಾಯಣ ಚಿತ್ರದ ಮೊದಲ ಭಾಗ ತೆರೆಗೆ ಬರಲಿದೆ. 2027ರಲ್ಲಿ ಎರಡನೇ ಭಾಗ ಬಿಡುಗಡೆಯಾಗಲಿದೆ.


Click it and Unblock the Notifications











