ನನ್ನ 12 ವರ್ಷದ ಮಗ ನನ್ನ ಆ ಫೋಟೊಗಳನ್ನು ನೋಡಿದರೆ ಅವನಿಗೆ ಹೇಗಾಗಬೇಡ ? ವೈರಲ್ ನೀಲಿ ಸೀರೆ ಸುಂದರಿಯ ಆತಂಕ-ಕಣ್ಣೀರು
ಆರಂಭದಲ್ಲಿ ಮನರಂಜನೆ ದೃಷ್ಟಿಯಿಂದ ಹುಟ್ಟಿಕೊಂಡ ಡೀಪ್ ಫೇಕ್ ದಿನಗಳು ಉರುಳಿದಂತೆ ಚಾರಿತ್ರ್ಯ ಹರಣಕ್ಕೆ, ರಾಜಕೀಯ ಅಪಪ್ರಚಾರಕ್ಕೆ ಹಾಗೂ ಬ್ಲಾಕ್ ಮೇಲ್ ಮಾಡೋದಕ್ಕೂ ಬಳಕೆ ಆಗ್ತಿದೆ. ಅಸಲಿ ವಿಡಿಯೋಗಳನ್ನೇ ಮೀರಿಸುವಷ್ಟು ಅತ್ಯುತ್ತಮ ಗುಣಮಟ್ಟವನ್ನ ಹೊಂದಿರುವ ಈ ನಕಲಿ ವಿಡಿಯೋಗಳಿಂದ ಅನೇಕರು ಹೈರಾಣಾಗಿದ್ದಾರೆ. ಇನ್ನೂ ಚಿತ್ರರಂಗದ ತಾರೆಯರ ಪಾಡಂತೂ ಹೇಳಲು ಅಸಾಧ್ಯ. ಎಐ ತಂತ್ರಜ್ಞಾನದ ಮೂಲಕ ಕಿರಾತಕರು..
ಸೆಲೆಬ್ರೇಟಿಗಳ ಫೋಟೊ ಮತ್ತು ವಿಡಿಯೋಗಳನ್ನು ಮನಬಂದಂತೆ ತಿರುಚುತ್ತಿದ್ದಾರೆ. ನಗ್ನ .. ಅರೆನಗ್ನ .. ತಮ್ಮ ಕಲ್ಪನೆಗೆ ಅನುಗುಣವಾಗಿ ಫೋಟೊ ಮತ್ತು ವಿಡಿಯೋಗಳನ್ನು ಸೃಷ್ಟಿಸಿ ಆನ್ ಲೈನ್‌ನಲ್ಲಿ ಹರಿಬಿಡುತ್ತಿದ್ದಾರೆ. ಇದರಿಂದ ಹಲವಾರು ನಟ ನಟಿಯರ ನೆಮ್ಮದಿಗೆ ಕೊಳ್ಳಿ ಬಿದ್ದಂತಾಗಿದೆ. ನೀವು ನೋಡುತ್ತಿರುವ ಫೋಟೊ ಅಥವಾ ವಿಡಿಯೋ ನನ್ನದಲ್ಲ ಎನ್ನುವ ಸ್ಪಷ್ಟನೆಯನ್ನು ನೀಡುವುದೇ ಇವರಿಗೆ ದೊಡ್ಡ ಕೆಲಸವಾಗಿದೆ.

ಇನ್ನೊಂದು ಕಡೆ ಕಣ್ಣಿಗೆ ಕಂಡಿದ್ದೇ ಸತ್ಯ ಎಂದು ನಂಬುವ ಈ ಕಾಲದಲ್ಲಿ ತಮ್ಮ ಅಶ್ಲೀಲ ಫೋಟೊವನ್ನು ಕಂಡು ಎಲ್ಲಿ ತಮ್ಮ ಮಕ್ಕಳು ಮುಜುಗರಕ್ಕೀಡಾಗುತ್ತಾರೆ. ಕಣ್ಣೆದುರು ಕಂಡ ನಕಲಿ ಫೋಟೊವನ್ನೇ ಅಸಲಿ ಎಂದು ಅಂದುಕೊಳ್ಳುತ್ತಾರೆ ಎನ್ನುವ ಆತಂಕ ಕೂಡ ಹಲವು ನಾಯಕಿಯರಿಗೆ ಈಗ ಕಾಡುತ್ತಿದೆ. ಉದಾಹರಣೆಗೆ ಗಿರಿಜಾ ಓಕ್ ಗೋಡ್‌ಬೋಲೆ.
ಹೌದು, ಗಿರಿಜಾ ಓಕ್ ಗೋಡ್‌ಬೋಲೆ... ಮರಾಠಿಯ ಚೆಲುವೆ. ಕಳೆದ ಹತ್ತು ಹದಿನೈದು ದಿನಗಳಿಂದ ಸೋಶಿಯಲ್ ಮೀಡಿಯಾವನ್ನು ಆವರಿಸಿಕೊಂಡಿರುವ ನೀಲಿ ಸೀರೆಯ ನೀರೆ.
ಕಳೆದ ಎರಡು ದಶಕಗಳಲ್ಲಿ ಹಲವು ಚಿತ್ರ ಮತ್ತು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದರೂ ಕೂಡ ಸಿಗದ ಜನಪ್ರಿಯತೆ, ಇವರಿಗೆ ಕೇವಲ ಒಂದೇ ಒಂದು ಸಂದರ್ಶನದ ಮೂಲಕ ಸಿಕ್ಕಿದೆ. ಅಮೇರಿಕನ್ ನಟಿ ಸಿಡ್ನಿ ಸ್ವೀನಿ ಹಾಗೂ ಇಟಾಲಿಯನ್ ಮಾಡೆಲ್ ಮೋನಿಕಾ ಬೆಲ್ಲುಸಿ ಜೊತೆ ಗಿರಿಜಾ ಓಕ್ ಅವರನ್ನು ಅನೇಕರು ಹೋಲಿಕೆ ಮಾಡುತ್ತಿದ್ದಾರೆ. ಗಿರಿಜಾ ಸೌಂದರ್ಯದ ಮುಂದೆ ಇವರಿಬ್ಬರು ಏನೇನು ಅಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ದೇಶವ್ಯಾಪಿ ತನ್ನ ಹೆಸರಿನ ಭಜನೆ ನಡೆಯುತ್ತಿರುವುದನ್ನು ಕಂಡು ಖುದ್ದು ಗಿರಿಜಾ ಅವಕ್ಕಾಗಿದ್ದಾರೆ. ಸದ್ಯ ತಮ್ಮತ್ತ ಹಲವರ ಚಿತ್ತ ಇರುವ ವಿಚಾರ ತಿಳಿದು ಖುಷಿಯಾಗಿದ್ಧಾರೆ. ಇದೇ ವೇಳೆ ಗಿರಿಜಾ ಓಕ್ ಗೋಡ್‌ಬೋಲೆ ಆತಂಕಕ್ಕೀಡಾಗಿದ್ದಾರೆ. ನನಗೆ ಹನ್ನೆರಡು ವರ್ಷದ ಮಗ ಇದ್ದಾನೆ, ಅವನೇನಾದರೂ ನನ್ನ ಫೋಟೊ ನೋಡಿದರೆ ಗತಿ ಏನು ಎಂದು ಚಿಂತೆಗೀಡಾಗಿದ್ದಾರೆ. ವಿಡಿಯೋ ಮೂಲಕ ಮನವಿಯನ್ನು ಕೂಡ ಮಾಡಿಕೊಂಡಿದ್ಧಾರೆ.

ವಿಡಿಯೋ ಮೂಲಕ ತಮ್ಮ ಈ ಆತಂಕ ಹೊರ ಹಾಕಿರುವ ಗಿರಿಜಾ, ಕಳೆದ ಕೆಲ ದಿನಗಳಿಂದ ನೀವು ವ್ಯಕ್ತಪಡಿಸುತ್ತಿರುವ ಪ್ರೀತಿ, ನನ್ನ ಮೇಲೆ ನೀವು ತೋರುತ್ತಿರುವ ಅಭಿಮಾನಕ್ಕೆ ನಾನು ಚಿರ ಋಣಿ ಎಂದು ಹೇಳಿದ್ಧಾರೆ. ನನಗೆ ಹಲವರು ಕರೆ ಮಾಡುತ್ತಿದ್ದಾರೆ.. ಹಲವು ರೀತಿಯ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ.. ನನ್ನ ಕುರಿತು ಹಲವು ಮೀಮ್‌ಗಳನ್ನು ತುಂಬಾನೇ ಬುದ್ದಿ ಖರ್ಚು ಮಾಡುತ್ತಿದ್ದಾರೆ.. ಆ ಪೈಕಿ ಕೆಲ ಮೀಮ್‌ಗಳು ತುಂಬಾನೇ ಹಾಸ್ಯಾಸ್ಪದವಾಗಿವೆ.. ತಮಾಷೆಯಾಗಿವೆ.. ಎಂದು ಹೇಳಿರುವ ಗಿರಿಜಾ ಆದರೆ ಇದೇ ಸಮಯದಲ್ಲಿ ನನ್ನ ಕೆಲ ಫೋಟೊಗಳನ್ನು ಎಐ ತಂತ್ರಜ್ಞಾನದ ಮೂಲಕ ತಿರುಚಿ ಆನ್‌ಲೈನ್‌ನಲ್ಲಿ ತೇಲಿ ಬಿಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮಾರ್ಫ್ ಮಾಡಿರುವ ಈ ಫೋಟೊಗಳು ಒಳ್ಳೆಯ ಅಭಿರುಚಿ ಫೋಟೊಗಳಲ್ಲ, ಮಾನಸಿಕವಾಗಿ ಕಿರುಕುಳ ನೀಡುವಂತಹ ಫೋಟೊಗಳು ಎಂದು ಹೇಳಿರುವ ಗಿರಿಜಾ ನನಗೆ 12 ವರ್ಷದ ಮಗನಿದ್ದಾನೆ... ಸದ್ಯ ಅವನು ಸೋಶಿಯಲ್ ಮೀಡಿಯಾದಲ್ಲಿ ಇಲ್ಲ. ಆದರೆ ಮುಂದೊಂದು ದಿನ ಸೋಶಿಯಲ್ ಮೀಡಿಯಾದ ಬಾಗಿಲು ಅವನಿಗೆ ಕೂಡ ತೆರೆಯುತ್ತೆ. ಇಂಟರ್‌ನೆಟ್‌ನಲ್ಲಿ ಮಾರ್ಫ್ ಮಾಡಿರುವ ನನ್ನ ಅಸಭ್ಯ- ಅಶ್ಲೀಲ ಫೋಟೊಗಳು ಕೂಡ ಶಾಶತ್ವವಾಗಿ ಉಳಿದಿರುತ್ತವೆ. ತನ್ನ ತಾಯಿಯ ಈ ಅಶ್ಲೀಲ ಫೋಟೊಗಳನ್ನು ಮುಂದೊಂದು ದಿನ ಆತ ನೋಡಿದರೆ ಅವನಿಗೆ ಹೇಗಾಗಬೇಡ..? ಎಂದು ಪ್ರಶ್ನೆ ಮಾಡಿದ್ಧಾರೆ. ತಮ್ಮ ಮನದ ನೋವನ್ನು, ಆತಂಕವನ್ನು ಹೊರ ಹಾಕಿದ್ದಾರೆ.
ನೀವು ಮಹಿಳೆಯರ ಫೋಟೊಗಳನ್ನು ಎಐ ಮೂಲಕ ಅನುಚಿತವಾಗಿ ಮಾರ್ಫ್ ಮಾಡುತ್ತಿದ್ದರೆ ಅಥವಾ ಮಾರ್ಫ್ ಮಾಡಲಾದ ಫೋಟೊಗಳನ್ನು ನೋಡಿ ನೀವು ಆನಂದ ಪಡುತ್ತಿದ್ದರೆ ದಯಮಾಡಿ ಒಮ್ಮೆ ಯೋಚನೆ ಮಾಡಿ ಎಂದು ಹೇಳಿರುವ ಗಿರಿಜಾ ಆಗ ನೀವು ಕೂಡ ಈ ಸಮಸ್ಯೆಯ ಭಾಗವಾಗಿದ್ದೀರಿ ಎನ್ನುವುದನ್ನು ಮರೆಯದಿರಿ ಎಂದು ಹೇಳಿದ್ದಾರೆ. ಫೋಟೊಗಳನ್ನು ಮಾರ್ಫ್ ಮಾಡಿ ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ಧಾರೆ.


Click it and Unblock the Notifications











