For Quick Alerts
  ALLOW NOTIFICATIONS  
  For Daily Alerts

  ಬಿಲ್ ಪಾವತಿಸಲಿಲ್ಲವೆಂದು ಚಿತ್ರತಂಡವನ್ನು ಒತ್ತೆ ಇರಿಸಿಕೊಂಡ ಹೋಟೆಲ್ ಸಿಬ್ಬಂದಿ!

  |

  ಸಿನಿಮಾ ನಿರ್ಮಾಣ ಎನ್ನುವುದು ಸುಲಭದ ಕಾರ್ಯವಲ್ಲ. ಹಲವು ವಿವಿಧ ವಿಭಾಗಗಳು ಒಟ್ಟಿಗೆ ಸೇರಿದರಷ್ಟೆ ಸಿನಿಮಾ ಆಗಲು ಸಾಧ್ಯ. ಚಿತ್ರೀಕರಣ, ಕಲಾವಿದರು, ತಂತ್ರಜ್ಞರು, ಸಂಗೀತ, ಸಂಕಲನ, ಪ್ರಚಾರ, ಬಿಡುಗಡೆ ಇನ್ನೂ ಹಲವು ವಿಭಾಗಗಳು ಸಿನಿಮಾ ನಿರ್ಮಾಣದ ಅಡಿಗೆ ಬರುತ್ತವೆ, ಇವೆಲ್ಲವನ್ನೂ ನಿಭಾಯಿಸುವುದು ನಿರ್ಮಾಪಕರಿಗೆ ಸುಲಭದ ಕಾರ್ಯ ಆಗಿರುವುದಿಲ್ಲ.

  ಅನುಭವಿ ನಿರ್ಮಾಪಕರೆ ದೊಡ್ಡ ಬಜೆಟ್‌ನ ಸಿನಿಮಾ ಮಾಡುವಷ್ಟರಲ್ಲಿ ಹೈರಾಣಾಗಿಬಿಡುತ್ತಾರೆ. ಹೊಸ ನಿರ್ಮಾಪಕ ಕತೆಯಂತೂ ಹೇಳ ತೀರದು. ಹೀಗೆ ಸಿನಿಮಾ ಮಾಡಲು ತೊಡಗಿಕೊಂಡಿರುವ ಹೊಸ ನಿರ್ಮಾಪಕರೊಬ್ಬರು ಇಡೀಯ ಚಿತ್ರತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದ ಘಟನೆ ಬಾಲಿವುಡ್‌ನಲ್ಲಿ ನಡೆದಿದೆ.

  'ಗುಡ್ಡು ಕಿ ಗರ್ಲ್‌ಫ್ರೆಂಡ್' ಸಿನಿಮಾದ ಚಿತ್ರೀಕರಣ ಬನಾರಸ್‌ನಲ್ಲಿ ನಡೆಯುತ್ತಿತ್ತು. ಸಿನಿಮಾದ ನಿರ್ಮಾಪಕ ಮಾಡಿದ ಯಡವಟ್ಟಿನಿಂದಾಗಿ ಸಿನಿಮಾದ ನಾಯಕ ನಟ, ನಟಿ ಸೇರಿದಂತೆ ಇಡೀಯ ಚಿತ್ರತಂಡ ಒತ್ತೆಯಾಳುಗಳಾಗಿ ಹೋಟೆಲ್‌ನಲ್ಲಿಯೇ ಇರಬೇಕಾಯಿತು.

  'ಗುಡ್ಡು ಕಿ ಗರ್ಲ್‌ ಫ್ರೆಂಡ್' ಸಿನಿಮಾದ ಚಿತ್ರೀಕರಣ ಬನಾರಸ್‌ನಲ್ಲಿ ನಡೆಯುತ್ತಿದ್ದು ಸಿನಿಮಾದ ಸುಮಾರು 80 ಮಂದಿ ನಟರು, ತಂತ್ರಜ್ಞರು ಹೋಟೆಲ್ ಒಂದರಲ್ಲಿ ಇದ್ದರು. ಚಿತ್ರೀಕರಣ ಮುಗಿದ ಬಳಿಕ ಅವರು ಹೊರಗೆ ಹೋಗುವ ಸಮಯಕ್ಕೆ ಅವರನ್ನು ಹೋಟೆಲ್ ಸಿಬ್ಬಂದಿ ತಡೆದಿದ್ದು, ನಿರ್ಮಾಪಕ ಬಿಲ್ ಚುಕ್ತಾ ಮಾಡುವವರೆಗೆ ಚಿತ್ರತಂಡದ ಯಾರೊಬ್ಬರೂ ಹೊರಗೆ ಹೋಗುವಂತಿಲ್ಲ ಎಂದು ಹೇಳಿ ರೂಮ್‌ನಲ್ಲಿ ಕೂಡಿಹಾಕಿದ್ದಾರೆ.

  ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ಫ್ರೆಡ್ಡಿ ಧರುವಾಲಾ, ಸುಖೇಶ್ ಆನಂದ್ ಸಹ ಹೋಟೆಲ್‌ನಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಬಂಧಿಯಾಗಿದ್ದರು. ಕೊನೆಗೆ ಟಿವಿ ಉದ್ಯಮದಲ್ಲಿ ಕಲಾವಿದ, ನಿರ್ಮಾಪಕರಾಗಿ ಹೆಸರು ಮಾಡಿರುವ ನೂಪುರ್ ಅಲಂಕಾರ್‌ ಅನ್ನು ಸಂಪರ್ಕ ಮಾಡಿದಾಗ ಅವರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಟ್ವೀಟ್ ಮಾಡಿ, ಸ್ಥಳೀಯ ಪೊಲೀಸರಿಗೆ ಮಾಹಿತಿ ಮುಟ್ಟಿಸಿ ನಂತರ ಕಲಾವಿದರು, ತಂತ್ರಜ್ಞರನ್ನು ಬಿಡುಗಡೆಗೊಳಿಸಿದ್ದಾರೆ.

  ಹೋಟೆಲ್‌ನಿಂದ ಬಿಡುಗಡೆ ಆದ ಬಳಿಕ ಮಾತನಾಡಿರುವ ಸುಖೇಶ್ ಆನಂದ್, ನಾನು ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಸುಖೇಶ್ ಮಾತ್ರವೇ ಅಲ್ಲದೆ ಇನ್ನೂ ಹಲವು ನಟ, ನಟಿಯರು ಇನ್ನು ಮುಂದೆ ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದಾರೆ.'

  ಸಿನಿಮಾದ ನಾಯಕಿ ಮೀರಾ ಚೋಪ್ರಾ ಹಾಗೂ ತನುಜ್ ವಿರ್ವಾನಿ ಅವರುಗಳು ಬನಾರಸ್‌ನ ಬೇರೆ ಹೋಟೆಲ್‌ನಲ್ಲಿ ತಂಗಿದ್ದರು ಹಾಗಾಗಿ ಅವರಿಗೆ ಈ ಸಮಸ್ಯೆ ಎದುರಾಗಿಲ್ಲ. ಆದರೆ ತಮ್ಮ ಸಹಕಲಾವಿದರೊಂದಿಗೆ ಹೀಗೊಂದು ಘಟನೆ ಆಗಿರುವುದರಿಂದ ಬೇಸತ್ತಿರುವ ಅವರು ಸಹ ತಾವು ಸಹ 'ಗುಡ್ಡು ಕಿ ಗರ್ಲ್‌ಫ್ರೆಂಡ್' ಸಿನಿಮಾದಲ್ಲಿ ಇನ್ನು ಮುಂದೆ ನಟಿಸುವುದಿಲ್ಲ ಎಂದಿದ್ದಾರೆ.

  ಘಟನೆ ಕುರಿತು ಮಾತನಾಡಿರುವ ನಟ ಫ್ರೆಡ್ಡಿ ಧರುವಾಲಾ, ''ನಮ್ಮನ್ನೆಲ್ಲ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು ಎಂಬುದು ಬಹಳ ದೊಡ್ಡ ಶಬ್ದವಾಗುತ್ತದೆ. ಹೋಟೆಲ್ ಸಿಬ್ಬಂದಿ ಭಯೋತ್ಪಾದಕರೇನೂ ಅಲ್ಲ. ಅವರು ವಿನಯದಿಂದಲೇ ನಮ್ಮ ಬಳಿ ನಡೆದುಕೊಂಡರು. ನಾನು ಸುಮಾರು ಮೂರು ಗಂಟೆ ಬಳಿಕ ಹೋಟೆಲ್ ಸಿಬ್ಬಂದಿ ಜೊತೆ ಜಗಳವಾಡಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆಂದು ಹೇಳಿ ಹೊರಗೆ ಬಂದೆ, ಸಹ ನಟರು ಇನ್ನೂ ಹೋಟೆಲ್‌ನಲ್ಲಿಯೇ ಇದ್ದರು'' ಎಂದಿದ್ದಾರೆ. ತಾವು ಸಿನಿಮಾದಲ್ಲಿ ಮುಂದೆ ನಟಿಸುವುದಾಗಿ ಹೇಳಿದ್ದಾರೆ ಫ್ರೆಡ್ಡಿ.

  ಆದರೆ ಸುಖೇಶ್ ಆನಂದ್, ಘಟನೆಯಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದು, ನಿರ್ಮಾಪಕರ ಬಳಿ ಹಣ ಖಾಲಿಯಾದರೆ ಅದಕ್ಕೆ ನಟರು, ತಂತ್ರಜ್ಞರು ಹೇಗೆ ಹವಾಬ್ದಾರಿ ಆಗುತ್ತಾರೆ. ನಮ್ಮನ್ನು ಏಕೆ ಒತ್ತೆಯಾಳಾಗಿ ಇರಿಸಿಕೊಳ್ಳಲಾಯಿತು ಎಂದು ಪ್ರಶ್ನೆ ಮಾಡಿದ್ದಾರೆ. ಈ ಘಟನೆ ಬಳಿಕ ನಾನು ಈ ಸಿನಿಮಾದಲ್ಲಿ ಸುತರಾಂ ನಟಿಸುವುದಿಲ್ಲ ಎಂದಿದ್ದಾರೆ.

  'ಗುಡ್ಡು ಕಿ ಗರ್ಲ್‌ಫ್ರೆಂಡ್' ಸಿನಿಮಾವನ್ನು ಇಲಿಯಾಸ್ ಗುಡ್ಡು ಎಂಬ ಹೊಸ ನಿರ್ಮಾಪಕ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಇನ್ನೂ ಅರ್ಧ ಚಿತ್ರೀಕರಣವಷ್ಟೆ ಮುಗಿದಿದೆ. ಆದರೆ ತಮ್ಮ ಬಳಿ ಹಣ ಖಾಲಿಯಾಗಿದೆ ಎಂದು ನಿರ್ಮಾಪಕ ಜಂಡಾ ಎತ್ತಿದ್ದಾರೆ. ಹೋಟೆಲ್ ಬಿಲ್ ನೀಡಲು ಸಹ ಇಲಿಯಾಸ್ ಬಳಿ ಹಣ ಇಲ್ಲವಂತೆ. ಸಿನಿಮಾದಲ್ಲಿ ಕೆಲಸ ಮಾಡಿದ ಹಲವು ಕಲಾವಿದರಿಗೆ, ತಂತ್ರಜ್ಞರಿಗೆ ಇಲಿಯಾಸ್ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಅಲ್ಲದೆ ಚಿತ್ರೀಕರಣಕ್ಕೆ ಬಳಸಿಕೊಂಡಿದ್ದ ವಸ್ತುಗಳಿಗೆ ಬಾಡಿಗೆ ನೀಡುವುದನ್ನು ಸಹ ಅವರು ಬಾಕಿ ಉಳಿಸಿಕೊಂಡಿದ್ದಾರಂತೆ.

  English summary
  Guddu ki girlfriend movie cast and crew held hostage in a hotel in Banaras for not paying hotel bill. Producer Illyas Guddu said he ran out of money.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X