Video: ಟ್ರೋಲ್ ಮಾಡಿ ಬಾಲಿವುಡ್ ಮಂದಿ ಕಾಲೆಳೆದ 'ಕಾಂತಾರ-1' ನಟ ಗುಲ್ಷನ್ ದೇವಯ್ಯ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ- 1' ಚಿತ್ರದಲ್ಲಿ ಎಲ್ಲಾ ಪಾತ್ರಗಳಿಗೆ ಮಹತ್ವ ಇದೆ. ತಮ್ಮ ತಮ್ಮ ಪಾತ್ರಗಳನ್ನು ಎಲ್ಲರೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರಾಜ ಕುಲಶೇಖರನಾಗಿ ಗುಲ್ಷನ್ ದೇವಯ್ಯ ಮೋಡಿ ಮಾಡಿದ್ದಾರೆ. ಆ ಪಾತ್ರವೇ ತಾವಾಗಿಬಿಟ್ಟಿದ್ದಾರೆ. ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಂದಹಾಗೆ ಗುಲ್ಷನ್ ಕರ್ನಾಟಕ ಮೂಲದವರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಕೊಡವ ಕುಟುಂಬದಲ್ಲಿ ಹುಟ್ಟಿದ ಅವರು ಇಂಗ್ಲೀಷ್ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಅವಕಾಶ ಅರಸಿ ಮುಂಬೈಗೆ ಹೋಗಿದ್ದರು. 'ದಟ್ ಗರ್ಲ್ ಇನ್ ಯೆಲ್ಲೋ ಬೂಟ್ಸ್' ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ ಹಲವು ಸಿನಿಮಾಗಳಲ್ಲಿ ಮಿಂಚಿದ್ದರು. 'ಕಾಂತಾರ- 1' ಚಿತ್ರದ ಕುಲಶೇಖರನಾಗಿ ಈಗ ಕಮಾಲ್ ಮಾಡಿದ್ದಾರೆ.

ಗುಲ್ಷನ್ ಕನ್ನಡದವರು, ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು ಎನ್ನುವುದು 'ಕಾಂತಾರ- 1' ಚಿತ್ರದ ಬಳಿಕ ಸಾಕಷ್ಟು ಜನರಿಗೆ ಗೊತ್ತಾಗಿದೆ. ಕನ್ನಡದಲ್ಲಿ ಇದು ಅವರ ಮೊದಲ ಸಿನಿಮಾ ಕೂಡ. ಅಂದಹಾಗೆ ರಿಷಬ್ ಶೆಟ್ಟಿ 'ರುದ್ರಪ್ರಯಾಗ' ಚಿತ್ರ ಮಾಡಲು ಕಥೆ ಸಿದ್ಧಪಡಿಸಿದ್ದರು. ಕೋವಿಡ್ ಸಮಯದಲ್ಲಿ ಅದು ನಿಂತು ಹೋಗಿತ್ತು. ಆ ಚಿತ್ರದಲ್ಲಿ ಅನಂತ್ ನಾಗ್ ಜೊತೆ ಗುಲ್ಷಜ್ ನಟಿಸಬೇಕಿತ್ತು. ಅದು ಸಾಧ್ಯವಾಗದೇ ಇದ್ದಾಗ 'ಕಾಂತಾರ- 1' ಚಿತ್ರಕ್ಕೆ ಕರೆದು ಅವಕಾಶ ಕೊಟ್ಟಿದ್ದರು.
ಸದ್ಯ ಕುಲಶೇಖನ ಪಾತ್ರದ ಮೂಲಕ ಗುಲ್ಷನ್ ಬಾಲಿವುಡ್ ಅಂಗಳದಲ್ಲಿ ಕೂಡ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಕೆಲ ಸಂದರ್ಶನಗಳಲ್ಲಿ ಕೂಡ ಭಾಗಿ ಆಗಿ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಕನ್ನಡ ಮಾಧ್ಯಮಗಳಲ್ಲಿ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದಿದ್ದಾರೆ. ಇದೆಲ್ಲದರ ನಡುವೆ ಮುಂಬೈನಲ್ಲಿ ಪಾಪಾರಾಜಿಗಳ(ಛಾಯಾಗ್ರಾಹಕರು) ಮುಂದೆ ಗುಲ್ಷನ್ ಕಾಣಿಸಿಕೊಂಡಿರುವ ವೀಡಿಯೋ ವೈರಲ್ ಆಗ್ತಿದೆ. ಅದರಲ್ಲಿ ಬಾಲಿವುಡ್ ಸ್ಟಾರ್‌ಗಳನ್ನು ಅವರು ಕಾಲೆಳೆದಿರುವುದು ಗೊತ್ತಾಗುತ್ತಿದೆ.
ಬಾಲಿವುಡ್‌ನಲ್ಲಿ ಪಾಪರಾಜಿ ಸಂಸ್ಕೃತಿ ಜನಪ್ರಿಯವಾಗಿದೆ. ನಟ, ನಟಿಯರು ಹೋದಲ್ಲಿ ಬಂದಲ್ಲಿ ಒಂದಷ್ಟು ಛಾಯಾಗ್ರಾಹಕರು ಮುತ್ತಿಕೊಳ್ಳುತ್ತಾರೆ. ಫೋಟೊಗೆ ಪೋಸ್ ಕೊಡುವಂತೆ ಕೇಳುತ್ತಾರೆ. ವೀಡಿಯೋ, ರೀಲ್ಸ್ ಅಂತೆಲ್ಲಾ ಕ್ಯಾಮರಾಗಳಲ್ಲಿ ಸೆರೆಯಾಗುತ್ತಾರೆ. ಸ್ಟಾರ್ ನಟ, ನಟಿಯರನ್ನು ನೋಡಿ ಕೆಲವೊಮ್ಮೆ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಯಾವುದೇ ಸಭೆ, ಸಮಾರಂಭ, ತಾರೆಯರ ಮನೆಗಳ ಹಬ್ಬ ಹರಿದಿನ, ಅವಾರ್ಡ್ ಫಂಕ್ಷನ್‌ಗಳಲ್ಲಿ ಪಾಪರಾಜಿಗಳ ದರ್ಬಾರ್ ಜೋರಾಗಿ ಇರುತ್ತದೆ.
ನಟ, ನಟಿಯರು ಜಿಮ್‌ಗೆ ಹೋಗುವುದು, ಶಾಪಿಂಗ್ ಮಾಡುವುದು ಹೀಗೆ ಎಲ್ಲಾ ಕಡೆ ಪಾಪರಾಜಿಗಳು ಹೋಗಿ ಕ್ಯಾಮರಾ ಹಿಡಿಯುತ್ತಾರೆ. ಕೆಲವರು ಪ್ರಚಾರಕ್ಕಾಗಿ ಹಣ ಕೊಟ್ಟು ಹೀಗೆ ಪಾಪರಾಜಿಗಳನ್ನು ತಾವು ಹೋಗುವ ಕಡೆಗೆ ಕರೆಸಿಕೊಳ್ಳುವುದು ಇದೆ. ಈ ಬಗ್ಗೆ ಪ್ರಿಯಾಮಣಿ ಸೇರಿ ಕೆಲ ದಕ್ಷಿಣದ ತಾರೆಯರು ಮಾತನಾಡಿದ್ದಾರೆ. ಹಣ ಕೊಟ್ಟು ಯಾಕೆ ಅವರನ್ನು ಕರೆಸಿ ಕ್ಯಾಮರಾಗೆ ಪೋಸ್ ಕೊಡಬೇಕು ಎಂದಿದ್ದಾರೆ. ಇನ್ನು ಪಾಪರಾಜಿಗಳ ಮುಂದೆ ಕೆಲ ನಟ, ನಟಿಯರು ಸ್ಟಂಟ್ ಮಾಡುತ್ತಾರೆ. ಅದನ್ನು ಇಮಿಟೇಟ್ ಮಾಡಿ ಗುಲ್ಷನ್ ಕಾಲೆಳೆದಿದ್ದಾರೆ.
ಮುಂಬೈನಲ್ಲಿ ಗುಲ್ಷನ್ ಕಂಡು ಪಾಪರಾಜಿಗಳು ಪೋಸ್ ಕೊಡುವಂತೆ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿ ನಟ, ನಟಿಯರು ಹೇಗೆ ಕ್ಯಾಮರಾ ಮುಂದೆ ನಟಿಸುತ್ತಾರೆ ಎಂದು ಗುಲ್ಷನ್ ಗೇಲಿ ಮಾಡಿದ್ದಾರೆ. "ಖಾನಾ ಖಾ ಲಿಯಾ ಆಪ್ನೇ? ಯಾಹಿ ಪೂಚ್ಚೇ ಹೈ ನಾ? (ನೀವು ತಿಂದಿದ್ದೀರಾ? ಅವರು ಹೀಗೆ ಕೇಳ್ತಾರಲ್ಲ?)" ಎಂದು ತಮಾಷೆ ಮಾಡಿದ್ದಾರೆ. ಬಳಿಕ "ಕೈಸೆ ಹೋ ಆಪ್ ಲೋಗ್? ಹ್ಯಾಪಿ ದೀಪಾವಳಿ ಹಾನ್, ಖಾನಾ ಖಾಕೆ ಜಾನಾ ಔರ್ ಮೇರೆ ಬರ್ತ್‌ಡೇ ಪಾರ್ ಮೇನ್ ಕೇಕ್ ಭಿ ಲಾವುಂಗಾ, ವೋ ಕೇಕ್ ಭಿ ಕಾಟೆಂಗೆ ಹಮ್ ಲೋಗ್ (ಹೇಗಿದ್ದೀರಿ? ದೀಪಾವಳಿಯ ಶುಭಾಶಯಗಳು, ದಯವಿಟ್ಟು ಹೋಗುವ ಮುನ್ನ ಊಟ ಮಾಡಿ. ನಾನು ನನ್ನ ಹುಟ್ಟುಹಬ್ಬದಂದು ಕೇಕ್ ತರ್ತೀನಿ, ಒಟ್ಟಿಗೆ ಕೇಕ್ ಕಟ್ ಮಾಡೋಣ" ಎಂದಿದ್ದಾರೆ.
ಪಾಪರಾಜಿಗಳ ಮುಂದೆ ಕೆಲವರು ನೀರಿನ ಬಾಟಲ್ ಎತ್ತುವಂತೆ, ಕಸ ತೆಗೆದು ಹಾಕುವಂತೆ ಕಾಣಿಸಿಕೊಳ್ಳುವುದು ಇದೆ. ಅದನ್ನು ಇಮಿಟೇಟ್ ಮಾಡಲು ಯಾರಾದರೂ ಕಸ ಎಸೆಯುವಂತೆ ಹೇಳಿದ್ದು ಯಾರೋ ನೀರಿನ ಬಾಟಲ್ ಎಸೆದಿದ್ದಾರೆ. ಅದನ್ನು ತೆಗೆದು ಜೇಬಿನಲ್ಲಿಟ್ಟುಕೊಂಡಿದ್ದಾರೆ. ಪ್ಲಾಸ್ಟಿಕ್ ಬಾಟಲ್‌ನಲ್ಲಿ ನೀರು ಕುಡಿಯಬೇಡಿ ಸರೀನಾ ಎಂದು ಹೇಳಿ ಹೊರಟಿದ್ದಾರೆ. ಈ ವೀಡಿಯೋ ವೈರಲ್ ಆಗ್ತಿದ್ದು ಗುಲ್ಷನ್ ಬೇಕಂತಲೇ ಬಾಲಿವುಡ್ ತಾರೆಯರನ್ನು ಗೇಲಿ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.


Click it and Unblock the Notifications











