'ಹಾಥಿ ಮೇರೆ ಸಾಥಿ' ಚಿತ್ರಕ್ಕಾಗಿ 30 ಕೆ.ಜಿ ತೂಕ ಇಳಿಸಿದ್ದಾರೆ ರಾನಾ ದಗ್ಗುಬಾಟಿ.!
'ಬಾಹುಬಲಿ' ಚಿತ್ರದಲ್ಲಿ ಬಲ್ಲಾಳದೇವನಾಗಿ ಅಬ್ಬರಿಸಿ ಬೊಬ್ಬಿರಿದಿದ್ದ ರಾನಾ ದಗ್ಗುಬಾಟಿ ಇದೀಗ 'ಹಾಥಿ ಮೇರೆ ಸಾಥಿ' ಚಿತ್ರದಲ್ಲಿ ದಟ್ಟ ಅರಣ್ಯದಲ್ಲಿ ವಾಸಿಸುವ ಬಂದೇವ್ ಆಗಿ ಕಾಣಿಸಿಕೊಂಡಿದ್ದಾರೆ.
'ಬಾಹುಬಲಿ' ಸರಣಿಯಲ್ಲಿ ಬಲಾಢ್ಯ ದೇಹ ಹೊಂದಿದ್ದ ರಾನಾ ದಗ್ಗುಬಾಟಿ 'ಹಾಥಿ ಮೇರೆ ಸಾಥಿ' ಚಿತ್ರಕ್ಕಾಗಿ ತಮ್ಮ ದೇಹದ ತೂಕವನ್ನು ಕಮ್ಮಿ ಮಾಡಿಕೊಂಡಿದ್ದಾರೆ. ಬಂದೇವ್ ಪಾತ್ರಕ್ಕೆ ಅನುಗುಣವಾಗಿ 30 ಕೆ.ಜಿ ತೂಕವನ್ನು ಇಳಿಸಿಕೊಂಡಿದ್ದಾರೆ.
ದೃಢಕಾಯನಾಗಿದ್ದ ರಾನಾ ದಗ್ಗುಬಾಟಿ ಕಠಿಣ ಡಯೆಟ್ ಅನುಸರಿಸಿ 30 ಕೆ.ಜಿ ತೂಕ ಕಳೆದುಕೊಂಡಿದ್ದಾರೆ. ''ಹಾಥಿ ಮೇರೆ ಸಾಥಿ' ಚಿತ್ರದಲ್ಲಿ ಎಲ್ಲವೂ ನೈಜವಾಗಿ ಮೂಡಿಬರಬೇಕು ಎಂಬುದು ನಿರ್ದೇಶಕ ಪ್ರಭು ಸೋಲೋಮನ್ ಇಚ್ಛೆ ಆಗಿತ್ತು. ಸದಾ ಕಟ್ಟುಮಸ್ತಾದ ದೇಹ ಹೊಂದಿದ್ದ ನನಗೆ ತೂಕ ಕಳೆದುಕೊಳ್ಳಲು ತುಂಬಾ ಕಷ್ಟ ಆಯ್ತು. ಬಂದೇವ್ ಪಾತ್ರದ ಲುಕ್ ಗಾಗಿ ಅತ್ಯಂತ ಕಠಿಣ ಫಿಸಿಕಲ್ ಟ್ರೈನಿಂಗ್ ಪಡೆದುಕೊಳ್ಳಬೇಕಾಯಿತು. ಇದರಿಂದ ನನಗೆ ಒಳ್ಳೆಯ ಅನುಭವ ಲಭಿಸಿತು'' ಎನ್ನುತ್ತಾರೆ ರಾನಾ ದಗ್ಗುಬಾಟಿ.

ರಾನಾ ದಗ್ಗುಬಾಟಿ, ವಿಷ್ಣು ವಿಶಾಲ್ (ತೆಲುಗು ಮತ್ತು ತಮಿಳು), ಪುಲ್ಕಿತ್ ಸಮ್ರಾಟ್ (ಹಿಂದಿ), ಶ್ರಿಯಾ, ಝೋಯಾ ಹುಸೇನ್, ಪಾರಸ್ ಅರೋರಾ ಸೇರಿದಂತೆ ದೊಡ್ಡ ತಾರಾಬಳಗ ಇರುವ ಪ್ರಭು ಸೋಲೋಮನ್ ನಿರ್ದೇಶನದ 'ಹಾಥಿ ಮೇರೆ ಸಾಥಿ' ಮೂರು ಭಾಷೆಗಳಲ್ಲಿ (ಹಿಂದಿ, ತೆಲುಗು, ತಮಿಳು) ಏಕಕಾಲಕ್ಕೆ ತಯಾರಾಗಿದೆ.
ಹಿಂದಿಯಲ್ಲಿ 'ಹಾಥಿ ಮೇರೆ ಸಾಥಿ', ತೆಲುಗಿನಲ್ಲಿ 'ಅರಣ್ಯ' ಮತ್ತು ತಮಿಳಿನಲ್ಲಿ 'ಕಾಡನ್' ಆಗಿ ಚಿತ್ರ ತೆರೆಗೆ ಬರಲಿದೆ. ಮಾನವ ಮತ್ತು ಆನೆಗಳ ನಡುವಿನ ಸಂಬಂಧದ ಕಥೆ ಹೊಂದಿರುವ 'ಹಾಥಿ ಮೇರೆ ಸಾಥಿ' ಸಿನಿಮಾ ಏಪ್ರಿಲ್ 2 ರಂದು ಬಿಡುಗಡೆ ಆಗಲಿದೆ.


Click it and Unblock the Notifications











