ನಿರ್ದೇಶಕ ಸುಭಾಷ್ ಘಾಯ್ ವಿರುದ್ಧ ದೂರು ದಾಖಲಿಸಿದ ನಟಿ ಕೇಟ್ ಶರ್ಮಾ
73 ವರ್ಷದ ಬಾಲಿವುಡ್ ನ ಖ್ಯಾತ ನಿರ್ದೇಶಕ ಸುಭಾಷ್ ಘಾಯ್ ವಿರುದ್ಧ ಮೊನ್ನೆಯಷ್ಟೇ ಮಹಿಳೆಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದರು. ಇದೀಗ ಅಂಥದ್ದೇ ಮತ್ತೊಂದು ಆರೋಪ ಸುಭಾಷ್ ಘಾಯ್ ವಿರುದ್ಧ ಕೇಳಿಬಂದಿದೆ. ಸಾಲದಕ್ಕೆ, ಮುಂಬೈ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದೆ.
ಒತ್ತಾಯ ಪೂರ್ವಕವಾಗಿ ತಬ್ಬಿಕೊಂಡು, ಮುತ್ತು ಕೊಟ್ಟಿದ್ದಾರೆ ಎಂದು ಆರೋಪಿಸಿ ನಿರ್ದೇಶಕ ಸುಭಾಷ್ ಘಾಯ್ ವಿರುದ್ಧ ಮಾಡೆಲ್ ಕಮ್ ನಟಿ ಕೇಟ್ ಶರ್ಮಾ ಮುಂಬೈ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಅಷ್ಟಕ್ಕೂ, ಈ ಘಟನೆ ನಡೆದಿದ್ದು ಆಗಸ್ಟ್ 6 ರಂದು ಸುಭಾಷ್ ಘಾಯ್ ಮನೆಯಲ್ಲಿ. ಎರಡು ತಿಂಗಳ ಹಿಂದೆ ನಡೆದಿರುವ ಘಟನೆಯ ಕುರಿತು ನಿನ್ನೆ ದೂರು ನೀಡಿದ್ದಾರೆ ಕೇಟ್ ಶರ್ಮಾ. ಮುಂದೆ ಓದಿರಿ...

ಅಂದು ನಡೆದಿದ್ದೇನು.?
''ಆಗಸ್ಟ್ 6 ರಂದು ಮನೆಗೆ ಬರುವಂತೆ ಸುಭಾಷ್ ಘಾಯ್ ಸೂಚಿಸಿದರು. ಮನೆಯಲ್ಲಿ 5-6 ಮಂದಿ ಇದ್ದರು. ಎಲ್ಲರ ಮುಂದೆ ಮಸಾಜ್ ಮಾಡಲು ಸುಭಾಷ್ ಘಾಯ್ ಸೂಚಿಸಿದರು. ನನಗೆ ಶಾಕ್ ಆಯ್ತು. ಆದರೂ, ಅವರ ವಯಸ್ಸಿಗೆ ಗೌರವ ಕೊಟ್ಟು 2-3 ನಿಮಿಷಗಳ ಕಾಲ ಮಸಾಜ್ ಮಾಡಿದೆ'' - ಕೇಟ್ ಶರ್ಮಾ, ನಟಿ

ಬಲವಂತವಾಗಿ ತಬ್ಬಿ, ಮುತ್ತಿಟ್ಟರು
''ಮಸಾಜ್ ಮಾಡಿದ ಬಳಿಕ ಕೈ ತೊಳೆದುಕೊಳ್ಳಲು ವಾಶ್ ರೂಮ್ ಬಳಿ ಹೋದರೆ, ಅಲ್ಲೂ ನನ್ನ ಫಾಲೋ ಮಾಡಿಕೊಂಡು ಬಂದರು. ಅಲ್ಲಿಂದ ರೂಮ್ ಗೆ ಕರೆದೊಯ್ದು ಬಲವಂತವಾಗಿ ತಬ್ಬಿ ಮುತ್ತು ಕೊಟ್ಟರು. ಅಂದು ರಾತ್ರಿ ನಾನು ಅಲ್ಲೇ ಉಳಿಯದೇ ಇದ್ದರೆ, ನನ್ನನ್ನ ಲಾಂಚ್ ಮಾಡಲ್ಲ ಎಂದು ಬೆದರಿಕೆ ಹಾಕಿದರು'' ಎಂದು ದೂರಿನಲ್ಲಿ ಕೇಟ್ ಶರ್ಮಾ ಉಲ್ಲೇಖಿಸಿದ್ದಾರೆ.

ಸುಭಾಷ್ ಘಾಯ್ ಪ್ರತಿಕ್ರಿಯೆ ಏನು.?
''ಮೀಟೂ ಅಭಿಯಾನಕ್ಕೆ ನನ್ನ ಸಪೋರ್ಟ್ ಇದೆ. ಆದರೆ ಪಬ್ಲಿಸಿಟಿಗಾಗಿ ಕೆಲವರು ಅದನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನನ್ನ ಘನತೆಗೆ ಧಕ್ಕೆ ತರುತ್ತಿರುವುದಕ್ಕೆ ನನಗೆ ಬೇಸರ ಇದೆ. ಈ ಪ್ರಕರಣದ ಬಗ್ಗೆ ನನ್ನ ಪರ ವಕೀಲರು ಗಮನ ಹರಿಸುತ್ತಾರೆ'' ಎಂದು ಟ್ವೀಟ್ ಮಾಡಿದ್ದಾರೆ ನಿರ್ದೇಶಕ ಸುಭಾಷ್ ಘಾಯ್.

#ಮೀಟೂ ಎಫೆಕ್ಟ್
#ಮೀಟೂ ಅಭಿಯಾನದಿಂದಾಗಿ ಸುಭಾಷ್ ಘಾಯ್ ಸೇರಿದಂತೆ ಅಲೋಕ್ ನಾಥ್, ನಾನಾ ಪಾಟೇಕರ್, ಕೈಲಾಶ್ ಕೇರ್, ರಜತ್ ಕಪೂರ್, ಸಾಜಿದ್ ಖಾನ್, ವಿಕಾಸ್ ಬಾಹ್ಲ್ ಸೇರಿದಂತೆ ಹಲವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ.


Click it and Unblock the Notifications










