ಹಾರ್ದಿಕ್- ನಟಿ ನತಾಶಾ ದಾಂಪತ್ಯದಲ್ಲಿ ಬಿರುಕು? ಐಪಿಎಲ್‌ನಲ್ಲಿ ಕ್ರಿಕೆಟಿಗನ ಕಳಪೆ ಪ್ರದರ್ಶನಕ್ಕೆ ಇದೇ ಕಾರಣನಾ?
ಹಾರ್ದಿಕ್ ಪಾಂಡ್ಯ ಸರ್ಬಿಯದ ನಟಿ ನತಾಶಾ ಸ್ಟಾಂಕೊವಿಕ್ ಅವರನ್ನು ವಿವಾಹವಾಗಿದ್ದು ಗೊತ್ತೇ ಇದೆ. ಆದರೆ, ಇವರಿಬ್ಬರ ಸಂಸಾರದಲ್ಲಿ ಬಿರುಕು ಬಿಟ್ಟಿದೆ ಅನ್ನುವ ವದಂತಿಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಭಾರತದ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಹಾಗೂ ಉಪನಾಯಕ ಹಾರ್ದಿಕ್ ಪಾಂಡ್ಯ ಸಾಂಸಾರಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ ಅನ್ನೋ ಸುದ್ದಿ ಓಡಾಡುತ್ತಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವ ಮುಂಬೈ ತಂಡ ಐಪಿಎಲ್ 2024ರಲ್ಲಿ ಕಳಪೆ ಪ್ರದರ್ಶನ ನೀಡಿ, ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಇದೆ. ಅಲ್ಲದೆ ಹಾರ್ದಿಕ್ ಪಾಂಡ್ಯ ಕೂಡ ನಾಯಕ ಆಟ ಆಡಿಲ್ಲ ಅನ್ನುವ ಕಾಮೆಂಟ್‌ಗಳು ಬರುತ್ತಿವೆ. ಈ ಬೆನ್ನಲ್ಲೇ ಹಾರ್ದಿಕ್ ಕಳೆಪೆ ಪ್ರದರ್ಶನಕ್ಕೆ ಸಾಂಸಾರಿಕ ಜೀವನವೇ ಕಾರಣವೆಂದು ವದಂತಿಗಳು ಹಬ್ಬಿದೆ.

ಅಷ್ಟಕ್ಕೂ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಸಾಂಸಾರಿಕ ಜೀವನದಲ್ಲಿ ಬಿರುಕು ಅನ್ನುವ ಸುದ್ದಿ ಯಾಕೆ ಹರಿದಾಡುತ್ತಿದೆ? ನಿಜಕ್ಕೂ ಹಾರ್ದಿಕ್ ಹಾಗೂ ನತಾಶಾ ನಡುವೆ ಸಮಸ್ಯೆ ಇದೆಯೇ? ಇದೇ ಮುಂಬೈ ತಂಡದ ಸೋಲುಗಳಿಗೆ ಕಾರಣವಾಯಿತೇ? ಅಸಲಿ ಹಾರ್ದಿಕ್ ಪಾಂಡ್ಯ ಪತ್ನಿ ಯಾರು? ಇದೆಲ್ಲವನ್ನು ತಿಳಿಯುವುದಕ್ಕೆ ಮುಂದೆ ಓದಿ..
ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್ ಸೆರ್ಬಿಯಾ ದೇಶದವರು. ಮಾಡಲ್, ನಟಿಯಾಗಿ ಗುರುತಿಸಿಕೊಂಡಿದ್ದಾರೆ. 2013ರಲ್ಲಿ ನತಾಶಾ ಬಾಲಿವುಡ್‌ನ 'ಸತ್ಯಾಗ್ರಹ' ಅನ್ನುವ ಸಿನಿಮಾದಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 8'ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಹಾಗೇ ಮತ್ತೊಂದು ರಿಯಾಲಿಟಿ ಶೋ 'ನಚ್ ಬಲ್ಲಿಯೇ 9'ನಲ್ಲೂ ಭಾಗವಹಿಸಿದ್ದರು.
ಇಲ್ಲಿಂದ ನತಾಶಾ ಸ್ಟಾಂಕೋವಿಕ್ ಹೆಸರು ಬಾಲಿವುಡ್ ಅಂಗಳದಲ್ಲಿ ಹರಿದಾಡುವುದಕ್ಕೆ ಶುರುವಾಗಿತ್ತು. ಸಿನಿಮಾ ಹೆಚ್ಚು ಅವಕಾಶಗಳೇನು ಸಿಕ್ಕಿಲ್ಲ. ನಟಿಸಿ ಬಹುತೇಕ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದೇ ಹೆಚ್ಚು. ಈ ವೇಳೆ ಹಾರ್ದಿಕ್ ಪಾಂಡ್ಯ ಪರಿಚಯ ಆಗಿ, ಅದು ಪ್ರೀತಿಗೂ ತಿರುಗಿತ್ತು. 2020, ಜನವರಿ 1ರಂದು ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದಾಗಲೇ ನತಾಶಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಇದೇ ವರ್ಷ ಮೇ 31ಕ್ಕೆ ಮದುವೆನೂ ಆಗಿದ್ದರು. ಇದೇ ವರ್ಷ ಮೊದಲ ಮಗುವಿಗೆ ಜನ್ಮವನ್ನೂ ನೀಡಿದ್ದರು.

ಮೊದಲ ಮಗುವಿನ ಜನ್ಮ ನೀಡಿದ ಮೂರು ವರ್ಷಗಳ ಬಳಿಕ ಉದಯಪುರದಲ್ಲಿ ಅದ್ದೂರಿಯಾಗಿ ಮತ್ತೆ ಮದುವೆಯಾದರು. ಇಂತಹ ಜೋಡಿ ಬೇರೆಯಾಗುತ್ತಿದ್ದಾರೆ ಅನ್ನುವ ಸುದ್ದಿಯೀಗ ಸಂಚಲನ ಸೃಷ್ಟಿಸುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಬೇರೆಯದ್ದೇ ರೂಪ ಪಡೆದುಕೊಂಡಿದ್ದು, ಹಾರ್ದಿಕ್ ಪಾಂಡ್ಯ ಕಳಪೆ ಪ್ರದರ್ಶನಕ್ಕೆ ಈ ವಿಷಯವೇ ಕಾರಣ ಎಂದು ಹಬ್ಬಿಸಲಾಗುತ್ತಿದೆ.
ಅಷ್ಟಕ್ಕೂ ಈ ವದಂತಿಗಳು ಹುಟ್ಟಿಕೊಳ್ಳುವುದಕ್ಕೆ ನೆಟ್ಟಿಗರೇ ಒಂದಿಷ್ಟು ಕಾರಣಗಳನ್ನು ಕೊಟ್ಟಿದ್ದಾರೆ. ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್ ಮೇ 4ರಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆಗ ಹಾರ್ದಿಕ್ ಪಾಂಡ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಗಳನ್ನು ತಿಳಿಸಿರಲಿಲ್ಲ. ಇದನ್ನು ನೆಟ್ಟಿಗರು ಗಮನಿಸಿದ್ದಾರೆ. ಇನ್ನೊಂದು ಕಡೆ ನತಾಶಾ ಕೂಡ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪಾಂಡ್ಯ ಹೆಸರನ್ನು ತೆಗೆದು ಹಾಕಿದ್ದಾರೆ ಎನ್ನಲಾಗಿದೆ.
ಐಪಿಎಲ್‌ನಲ್ಲಿ ಟ್ರೋಲ್ ಆಗಿದ್ದಕ್ಕೂ, ಕಳಪೆ ಪ್ರದರ್ಶನ ನೀಡಿದ್ದಕ್ಕೂ, ಮುಂಬೈ ಹೀನಾಯ ಪ್ರದರ್ಶನ ನೀಡಿದ್ದಕ್ಕೂ, ಈಗ ಸಂಸಾರಿಕ ಜೀವನದ ಬಗೆಗಿನ ವದಂತಿ ಎಲ್ಲದರ ಹಿಂದೆನೂ ಹಾರ್ದಿಕ್ ಪಾಂಡ್ಯ ಹೆಸರೇ ಇದೆ. ಒಟ್ನಲ್ಲಿ ಅವರ ಫ್ಯಾನ್ಸ್ ತನ್ನ ನೆಚ್ಚಿನ ಕ್ರಿಕೆಟರ್ ಟೈಮ್ ಸರಿಯಿಲ್ಲ ಅಂತ ಮಾತಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











