ಹಠಾತ್ ಹೃದಯಾಘಾತ ; 30 ವರ್ಷದ ಖ್ಯಾತ ನಟಿ ನಿಧನ - ಕಂಬನಿ ಮಿಡಿದ ಚಿತ್ರರಂಗ
ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್‌ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು ಅಸಾಧ್ಯ.
ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಈ ಸಾವಿಗೆ ಲಿಂಗ, ಜಾತಿ, ಧರ್ಮದ ಭೇದ ಭಾವ ಕೂಡ ಇಲ್ಲ. ಸಾವು ಯಾವಾಗ ಬೇಕಾದರೂ ಯಾರನ್ನ ಬೇಕಾದರು ಕರೆಯಬಹುದು. ಇದಕ್ಕೆ ದಿವ್ಯಾಂಕಾ ಸಿರೋಹಿ ಅವರ ಅಕಾಲಿಕ ನಿಧನ ಮತ್ತೊಂದು ಉದಾಹರಣೆ.

ಹೌದು ದಿವ್ಯಾಂಕಾ ಸಿರೋಹಿ.. ಹರಿಯಾಣದ ಖ್ಯಾತ ನಟಿ. ಟಿಕ್ ಟಾಕ್ ಮೂಲಕ ಬೆಳಕಿಗೆ ಬಂದ ದಿವ್ಯಾಂಕಾ ಕೇವಲ ಟಿಕ್ ಟಾಕ್ ನಲ್ಲಿಯೇ 50ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದರು.
ಟಿಕ್ ಟಾಕ್ ಬ್ಯಾನ್ ಆದ ನಂತರ ಇನ್ ಸ್ಟಾಗ್ರಾಮ್ ನಲ್ಲಿ ಇವರ ಹವಾ ಮುಂದುವರೆದಿತ್ತು. ಹೀಗೆ ಚಿತ್ರರಂಗದ ಕಣ್ಣಿಗೆ ಬಿದ್ದ ದಿವ್ಯಾಂಕಾ ಅತ್ಯಲ್ಪ ಅವಧಿಯಲ್ಲಿಯೇ ಹರಿಯಾಣ್ವಿ ಚಿತ್ರರಂಗದಲ್ಲಿ ಖ್ಯಾತಿಯ ಶಿಖರಕ್ಕೇರಿದರು. ಹೆಸರಾಂತ ಗಾಯಕರ ಜೊತೆ ಸಂಗೀತ ನಿರ್ದೇಶಕರ ಜೊತೆ ಒಂದಲ್ಲ, ಎರಡಲ್ಲ, 50 ಕ್ಕೂ ಅಧಿಕ ಆಲ್ಬಂ ಹಾಡುಗಳನ್ನು ಮಾಡಿದರು.
ಹರಿಯಾಣಾದ ಖ್ಯಾತ ಗಾಯಕ ಮಾಸೂಮ್ ಶರ್ಮಾ ಅವರ ಹಲವು ಚಾರ್ಟ್ ಬಸ್ಟರ್ ಹಾಡುಗಳ ಬ್ರ್ಯಾಂಡ್ ಮತ್ತು ಫೇಸ್ ಆಗಿದ್ದರು ದಿವ್ಯಾಂಕಾ. ಇಷ್ಟೇ ಅಲ್ಲ ಪ್ರಸಿದ್ದ ರ್ಯಾಪರ್ ಕೆಡಿ ಅವರ ಜೊತೆ ಕೂಡ ದಿವ್ಯಾಂಕಾ ಕೆಲಸ ಮಾಡಿದ್ದರು.
ದಿವ್ಯಾಂಕಾ ತಮ್ಮ ಹಾಡಿನಲ್ಲಿ ಇದ್ದರೆ ಆ ಹಾಡು ಹಿಟ್ ಆಗುವುದು ಗ್ಯಾರಂಟಿ ಎಂಬ ನಂಬಿಕೆ ಹರಿಯಾಣದ ಚಿತ್ರರಂಗದಲ್ಲಿ ಮನೆ ಮಾಡಿತ್ತು. ''ಮೋರಣಿ''.. ರೋಖಾ''.. ''ಬಹು ಮೀಲಗಿ''.. ''ಚೌಧರಿ'' .. ಇವರ ಕೆಲ ಖ್ಯಾತ ಹಾಡುಗಳು. ''ಬರ್ಸಾನಾ ಮಿಲಾ ಹೈ'' ಇವರ ಕೊನೆಯ ಹಾಡು. ಭಾರೀ ಭಯಂಕರವಾಗಿ ವೈರಲ್ ಆದ ಹಾಡಿದು.

ಮೊನ್ನೆ ಮೊನ್ನೆಯಷ್ಟೇ ತಮ್ಮ ಈ ಹೊಸ ಹಾಡಿಗೆ ಸಿಕ್ತಿರುವ ಪ್ರೀತಿಯನ್ನು ಕಂಡು ದಿವ್ಯಾಂಕಾ ಮೂಕ ವಿಸ್ಮಿತರಾಗಿದ್ದರು. ಆದರೆ ವಿಧಿ ಲಿಖಿತ, ಈಗ ದಿವ್ಯಾಂಕಾ ನಮ್ಮ ನಡುವೆ ಇಲ್ಲ. ಕೇವಲ 30ರ ಹರೆಯದಲ್ಲೇ ಹೃದಯಾಘಾತಕ್ಕೆ ದಿವ್ಯಾಂಕಾ ಮೊನ್ನೆ ( ಏಪ್ರಿಲ್ 21) ಬಲಿಯಾಗಿದ್ದಾರೆ.
ಹೃದಯಾಘಾತದ ನಂತರ ಕೂಡಲೇ ದಿವ್ಯಾಂಕಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ನಟಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ನಟಿಯ ಹಠಾತ್ ನಿಧನದಿಂದಾಗಿ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.
ಅಂದ್ಹಾಗೇ ದಿವ್ಯಾಂಕ ಸಿರೋಹಿ ಮೂಲತಃ ಉತ್ತರ ಪ್ರದೇಶದ ಬುಲಂದ್‌ಶಹರ್‌ನವರಾಗಿದ್ದರು. 1996ರ ನವೆಂಬರ್ 19ರಂದು ಜನಿಸಿದರು. ದಿವ್ಯಾಂಕ ಓದಿನಲ್ಲಿಯೂ ಕೂಡ ಮುಂದೆ ಇದ್ದರು. ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಿಂದ ಬಿಸಿಎ ಪೂರ್ಣಗೊಳಿಸಿದ್ದ ದಿವ್ಯಾಂಕಾ ಆ ನಂತರ ಸಿಕ್ಕಿಂನಿಂದ ಎಂಬಿಎ ಪದವಿಯನ್ನು ಕೂಡ ಪಡೆದಿದ್ದರು. ಶಿಕ್ಷಣದ ಹೊರತಾಗಿಯೂ, ಬಾಲ್ಯದಿಂದಲೂ ನಟನೆ ಮತ್ತು ನೃತ್ಯದತ್ತ ದಿವ್ಯಾಂಕಾ ಒಲವು ಹೊಂದಿದ್ದರು.
ಇಂತಹ ದಿವ್ಯಾಂಕಾ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಗಾಜಿಯಾಬಾದ್ ನ ಹಿಂದೂನ್ ಮೋಕ್ಷ ಸ್ಥಳದಲ್ಲಿ ಇವರ ಅಂತಿಮ ಸಂಸ್ಕಾರ ನೆರವೇರಿದೆ ದಿವ್ಯಾಂಕಾ ಸಿರೋಹಿ ಅವರ ಈ ಅಕಾಲಿಕ ನಿಧನದ ಸುದ್ದಿಯಿಂದ ಹರಿಯಾಣ ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದ್ದು ಹಲವರು ದಿವ್ಯಾಂಕಾ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಶ್ರದ್ದಾಂಜಲಿ ಸಲ್ಲಿಸಿದ್ದಾರೆ.


Click it and Unblock the Notifications