ರಣಬೀರ್ ಕಪೂರ್ ಮುಖದಲ್ಲಿ ಮುಗ್ಧತೆಯೇ ಇಲ್ಲ; ರಮಾನಂದ್ ಸಾಗರ್ 'ರಾಮಾಯಣ'ದ ಲಕ್ಷ್ಮಣ ಕೆಂಡ..ಕೆಂಡ
''ರಾಮಾಯಣ'', ''ಮಹಾಭಾರತ''ದಂತಹ ಮಹಾನ್ ದೃಶ್ಯ ಕಾವ್ಯಗಳಲ್ಲಿ ರಾಮ, ಲಕ್ಷ್ಮಣ, ಸೀತೆ, ಕೃಷ್ಣ, ಅರ್ಜುನ ಮುಂತಾದ ಪಾತ್ರಧಾರಿಗಳು ಹೇಗೆ ಇದ್ದರು ಎನ್ನುವುದು ಒಂದು ಕಾಲ್ಪನಿಕ ಸೃಷ್ಟಿ. ಆದರೂ ಕೂಡ ಇಂತಹ ಪಾತ್ರಗಳನ್ನು ತೆರೆಯ ಮೇಲೆ ತರುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಆ ಪಾತ್ರಗಳನ್ನು ನಿರ್ವಹಿಸುವ ವ್ಯಕ್ತಿ ಕೂಡ ಅಷ್ಟೇ ಸಮರ್ಥವಾಗಿ ಆ ಪಾತ್ರಕ್ಕೆ ಜೀವ ತುಂಬಬೇಕು.
ಇಲ್ಲದೇ ಹೋದರೆ ಅಭಾಸ ಆಗಿ ಹೋಗುತ್ತೆ. ಆಕ್ರೋಶದ ಅಲೆಯೂ ಎದ್ದೇಳುತ್ತೆ. ಇದಕ್ಕೆ ''ಆದಿಪುರುಷ್'' ಸೇರಿ ಹಲವಾರು ಉದಾಹರಣೆಗಳು ಭಾರತೀಯ ಚಿತ್ರರಂಗದಲ್ಲಿವೆ. ಈ ಸಾಲಿಗೆ ಯಶ್ ಮತ್ತು ನಮಿತ್ ಮಲ್ಹೋತ್ರಾ ಅವರ ಅದ್ಧೂರಿ ''ರಾಮಾಯಣ'' ಕೂಡ ಸೇರುತ್ತಾ ಎನ್ನುವ ಭಯ ಸದ್ಯ ಹಲವರನ್ನು ಕಾಡುತ್ತಿದೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಮೊನ್ನೆ ಮೊನ್ನೆಯಷ್ಟೇ ''ರಾಮಾಯಣ'' ಚಿತ್ರದ ಟೀಸರ್ ಬಿಡುಗಡೆಯಾಗಿದೆ. 4,000 ಕೋಟಿಯ ಕನಸಿದು ಎಂದು ಚಿತ್ರದ ಪ್ರಮುಖ ನಿರ್ಮಾಪಕ ನಮಿತ್ ಮಲ್ಹೋತ್ರಾ ಆರಂಭದಿಂದ ಹೇಳುತ್ತಿದ್ದಾರೆ. ಆದರೆ ಅವರ ಮಾತಿನ ಮೇಲೆ ಹಲವರಿಗೆ ಈಗ ಅನುಮಾನ ಬರಲು ಶುರುವಾಗಿದೆ.
ಯಾಕೆಂದರೆ ಟಾಕ್ ಆಫ್ ದಿ ಟೌನ್ ಆಗಬೇಕಿದ್ದ ಚಿತ್ರಕ್ಕೆ ಟಾಪ್ ಲೆವೆಲ್‌ನಲ್ಲಿ ಕೆಲಸ ನಡೆದಿಲ್ಲ. ವಿಎಫ್‌ಎಕ್ಸ್ ತಂತ್ರಜ್ಞಾನ ಬಳಸಿದರೂ, ಟೀಸರ್ ನಲ್ಲಿ ಭಾವನೆಗಳ ಕೊರತೆ ಎದ್ದು ಕಾಣುತ್ತಿದೆ. ಲೋಪ-ದೋಷ ಕಣ್ಣಿಗೆ ರಾಚುತ್ತಿದೆ.
ಇನ್ನೂ ''ರಾಮಾಯಣ'' ಕೇವಲ ದೃಶ್ಯ ವೈಭವವಲ್ಲ, ಅದು ಜನರ ಭಾವನೆಗಳೊಂದಿಗೆ ಬೆಸೆದುಕೊಂಡಿರುವ ಮಹಾಕಾವ್ಯ. ಇಲ್ಲಿ ಕ್ಯಾಮರಾ ಪಿಕ್ಸೆಲ್‌ಗಳಿಗಿಂತ 'ಭಾವ' ಮುಖ್ಯ. ಹೀಗಾಗಿಯೇ ಹಲವರು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಕೇವಲ ಜನಸಾಮಾನ್ಯರು ಮಾತ್ರವಲ್ಲ. ಚಿತ್ರರಂಗದವರು ಕೂಡ ಅಂದುಕೊಂಡತೆ ಇಲ್ಲ ಈ ''ರಾಮಾಯಣ'' ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಉದಾಹರಣೆಗೆ ಸುನೀಲ್ ಲಹರಿ.
ಹೌದು.. ಸುನಿಲ್ ಲಹರಿ.. ಗೊತ್ತಲ್ವಾ..? ''ರಮಾನಂದ್ ಸಾಗರ್'' ಅವರ ಜಗದ್ವಿಖ್ಯಾತ ಧಾರಾವಾಹಿ ''ರಾಮಾಯಣ''ದಲ್ಲಿ ಲಕ್ಷ್ಮಣನ ಪಾತ್ರವನ್ನು ನಿರ್ವಹಿಸಿದ್ದವರು. ಜೀವಮಾನವಿಡಿ ಇದೊಂದೇ ಪಾತ್ರ ಮತ್ತು ಧಾರಾವಾಹಿಯ ಮೂಲಕ ಗುರುತಿಸಿಕೊಂಡ ಸುನಿಲ್ ಲಹರಿ ಸದ್ಯ ''ರಾಮಾಯಣ''ದ ಕುರಿತು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ರಣ್ಭೀರ್ ಕಪೂರ್ ಅವರನ್ನು ಟೀಕಿಸಿದ್ದಾರೆ.

ಈ ಕುರಿತು ''ಡಿಎನ್‌ಎ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುನಿಲ್ ಲಹರಿ, ರಣಬೀರ್ ಕಪೂರ್ ಒಬ್ಬ ಅದ್ಭುತ ಕಲಾವಿದರ ಎನ್ನುವುದರಲ್ಲಿ ಸಂಶಯ ಇಲ್ಲ. ಆದರೆ ರಾಮನ ಪಾತ್ರಕ್ಕೆ ಬೇಕಾದ 'ದೈವಿಕ ಮುಗ್ಧತೆ' ಅವರ ಮುಖದಲ್ಲಿ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ರಾಮನಲ್ಲಿದ್ದ ಮತ್ತು ನಾವು ಹಿಂದೆ ಅರುಣ್ ಗೋವಿಲ್ ಅವರ ರಾಮನ ಪಾತ್ರದಲ್ಲಿ ಕಂಡ ತಾಳ್ಮೆ, ಶಾಂತತೆ ಮತ್ತು ಮುಗ್ದತೆ ನನಗೆ ರಣಬೀರ್ ಕಪೂರ್ ಮುಖದಲ್ಲಿ ಕಾಣುತ್ತಿಲ್ಲ ಎಂದು ಹೇಳಿರುವ ಸುನಿಲ್ ಲಹರಿ ರಣಬೀರ್ ಕಪೂರ್ ಅವರ ಮುಖಲಕ್ಷಣಗಳು ರಾಮನ ಪಾತ್ರಕ್ಕಿಂತ ಹೆಚ್ಚಾಗಿ ಲಕ್ಷ್ಮಣ ಅಥವಾ ಭರತನ ಪಾತ್ರಕ್ಕೆ ಹೆಚ್ಚು ಸೂಕ್ತವಾಗಿವೆ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ರಣಬೀರ್ ಕಪೂರ್ ತುಂಬಾ ಒರಟಾಗಿ ಕಾಣಿಸುತ್ತಾರೆ ಎಂದು ಹೇಳಿರುವ ಸುನಿಲ್ ಲಹರಿ, ಇಂತಹ ಪಾತ್ರಗಳಿಗೆ ಯಾವಾಗಲೂ ಹೊಸಬರನ್ನು ಆಯ್ಕೆ ಮಾಡುವುದು ಉತ್ತಮ. ಯಾವುದೇ ಇಮೇಜ್ ಅಥವಾ ವಿವಾದವಿಲ್ಲದ ಹೊಸ ನಟ ಯಾವಾಗಲೂ ಒಳ್ಳೆಯ ಆಯ್ಕೆ ಎಂದು ಕೂಡ ಹೇಳಿದ್ದಾರೆ.
ಹಾಗಂಥ, ಸುನಿಲ್ ಲಹರಿ ''ರಾಮಾಯಣ'' ಚಿತ್ರದ ಕುರಿತು ಅಂತಿಮ ತೀರ್ಪನ್ನೇನು ನೀಡಿಲ್ಲ. ಇದು ಕೇವಲ ಟೀಸರ್ ಮಾತ್ರ ಎಂದು ಹೇಳಿರುವ ಸುನಿಲ್ ಲಹರಿ ಚಿತ್ರದಲ್ಲಿ ತಮ್ಮ ಅಭಿನಯದ ಮೂಲಕ ರಾಮನ ಪಾತ್ರಕ್ಕೆ ರಣಬೀರ್ ಕಪೂರ್ ನ್ಯಾಯ ಒದಗಿಸುತ್ತಾರೆಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ. ವಿಎಫ್‌ಎಕ್ಸ್ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ.


Click it and Unblock the Notifications











