ಧರ್ಮೇಂದ್ರ ಇನ್ನೂ ಬದುಕಿದ್ದಾರೆ ; ಸಾವಿನ ಸುಳ್ಳು ಸುದ್ದಿಗೆ ಕೆರಳಿ ಕೆಂಡವಾದ ಹೇಮಾಮಾಲಿನಿ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜನ ಸಾಮಾನ್ಯರು ಯಾವುದಾದರು ಒಂದು ಸುದ್ದಿಯನ್ನು ಟಿವಿ ಮತ್ತು ನ್ಯೂಸ್ ಪೇಪರ್‌ಗಳನ್ನು ನೋಡಿದ ನಂತರ ನಂಬುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈಲ್‌ನಲ್ಲಿಯೇ ಎಲ್ಲ ಸುದ್ದಿ ಕೆಲವೇ ಸೆಕೆಂಡ್‌ನಲ್ಲಿ ತಲುಪಿ ಬಿಡುತ್ತಾವೆ. ಇನ್ನೂ ಸಾಮಾಜಿಕ ಜಾಲತಾಣವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ...
ತಳ್ಳಿ ತನ್ನ ಕಂಬಂಧ ಬಾಹುಗಳಿಂದ ಜನರನ್ನು ಆಕ್ರಮಿಸಿಕೊಂಡಿದೆ. ಆದರೆ, ಈ ಸೋಶಿಯಲ್ ಮೀಡಿಯಾದಲ್ಲಿ ಬಿತ್ತರವಾಗುವ ಸುದ್ದಿಗಳಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎನ್ನುವುದನ್ನು ಅರಿಯುವಷ್ಟರಲ್ಲಿ ಆ ಸುಳ್ಳು ಸುದ್ದಿ ಎಲ್ಲಿಂದ ಎಲ್ಲೆಲ್ಲಿಗೋ ತಲುಪಿ ಮತ್ಯಾವುದೋ ಪ್ರಮಾದವನ್ನು ಸೃಷ್ಟಿಸಿರುತ್ತೆ. ವೈರಲ್ ಆಗಿರುತ್ತೆ. ಉದಾಹರಣೆಗೆ ಧರ್ಮೇಂದ್ರ ಅವರ ನಿಧನದ ಸುದ್ದಿಯನ್ನೇ ತೆಗೆದುಕೊಳ್ಳಿ .

ಹೌದು, ಬಾಲಿವುಡ್‌ನ ಹೀ ಮ್ಯಾನ್ ಧರ್ಮೇಂದ್ರ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಕೂಡ ಧರ್ಮೇಂದ್ರ ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.
ಆದರೆ.. ಈ ವಿಷಯವನ್ನು ಅರಿಯದ.. ಸತ್ಯಾಸತ್ಯತೆಯನ್ನು ಪರಿಶೀಲಿಸಲು ಕೂಡ ಸಮಯ ಇರದ.. ಕೆಲ ಮಾಧ್ಯಮಗಳು ಧರ್ಮೇಂದ್ರ ಅವರು ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ಪ್ರಸಾರ ಮಾಡಿವೆ. ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿಯಂತೂ ಧರ್ಮೇಂದ್ರ ಅವರ ಸಾವಿನ ಸುದ್ದಿಯೇ ಕಂಡು ಬರುತ್ತಿದೆ. ಅಸಂಖ್ಯಾತ ಜನ ಇನ್ನೂ ಬದುಕಿರುವ ಧರ್ಮೇಂದ್ರ ಅವರ ಆತ್ಮಕ್ಕೆ ಸೋಶಿಯಲ್ ಮೀಡಿಯಾ ಮೂಲಕ ಶಾಂತಿಯನ್ನು ಕೋರಿದ್ದಾರೆ.
ಯಾರಿಗೆ ಆಗಲಿ ಇಂತಹ ಸುಳ್ಳು ಸುದ್ದಿಗಳು ನೋವುಂಟು ಮಾಡುತ್ತವೆ. ಆತಂಕದಲ್ಲಿರುವ ಕುಟುಂಬಸ್ಥರ ಆಕ್ರೋಶವನ್ನು ಹೆಚ್ಚಿಸುತ್ತವೆ. ಹೀಗಾಗಿಯೇ ಕೆರಳಿ ಕೆಂಡವಾಗಿರುವ ಧರ್ಮೇಂದ್ರ ಅವರ ಪತ್ನಿ ಹೇಮಾಮಾಲಿನಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಹೇಮಾ ಮಾಲಿನಿ,ಸದ್ಯ ನಡೆಯುತ್ತಿರುವ ಕ್ಷಮೆಗೆ ಅರ್ಹವಾದದ್ದಲ್ಲ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮತ್ತು ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯ ಬಗ್ಗೆ ಜವಾಬ್ದಾರಿಯುತ ಚಾನೆಲ್‌ಗಳು ಸುಳ್ಳು ಸುದ್ದಿಗಳನ್ನು ಹೇಗೆ ಹರಡಬಹುದು? ಇದು ಅತ್ಯಂತ ಅಗೌರವ ಮತ್ತು ಬೇಜವಾಬ್ದಾರಿ. ದಯವಿಟ್ಟು ಕುಟುಂಬದ ಗೌಪ್ಯತೆಗೆ ಬೆಲೆ ನೀಡಿ, ಸರಿಯಾದ ಗೌರವವನ್ನು ನೀಡಿ ಎಂದು ಹೇಮಾ ಮಾಲಿನಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಧರ್ಮೇಂದ್ರ ಮತ್ತು ಹೇಮಾ ಮಾಲಿನಿಯವರ ಮಗಳು ಇಶಾ ಡಿಯೋಲ್ ಕೂಡ ತಮ್ಮ ತಂದೆಯ ಕುರಿತು ಪ್ರಸಾರವಾದ ಸುಳ್ಳು ಸುದ್ದಿಗಳನ್ನು ಕಂಡು ಆಘಾತಕ್ಕೆ ಒಳಗಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ನಮ್ಮ ತಂದೆಯ ಆರೋಗ್ಯ ಸ್ಥಿರವಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥನೆಯನ್ನು ಮಾಡಿ. ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ ಎಂದು ಮನವಿಯನ್ನು ಮಾಡಿದ್ದಾರೆ.
ಸದ್ಯ ಧರ್ಮೇಂದ್ರ ಇನ್ನೂ ನಿಧನರಾಗಿಲ್ಲ. ಹೇಮಾಮಾಲಿನಿ ಮಾಡಿರುವ ಟ್ವೀಟ್ನ ಅನ್ವಯ ಅವರಿನ್ನೂ ಬದುಕಿದ್ದಾರೆ. ಧರ್ಮೇಂದ್ರ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಚಿಕಿತ್ಸೆಗೆ ಅವರು ಸ್ಫಂದಿಸುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್.. ಸಲ್ಮಾನ್ ಖಾನ್.. ಗೋವಿಂದ.. ಹೀಗೆ ಬಾಲಿವುಡ್‌ನ ಹಲವಾರು ಸೂಪರ್ ಸ್ಟಾರ್‌ಗಳು ಆಸ್ಪತ್ರೆಗೆ ಧಾವಿಸಿ ಕುಟುಂಬಸ್ಥರನ್ನು ಮಾತನಾಡಿಸಿಕೊಂಡು ಬಂದಿದ್ದಾರೆ. ಧೈರ್ಯ ಹೇಳಿದ್ದಾರೆ. ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಹಾಗೂ ಕುಟುಂಬ ವರ್ಗ ಸದ್ಯ ಆಸ್ಪತ್ರೆಯಲ್ಲಿ ಇದ್ದು ಅಭಿಮಾನಿಗಳು ಧರ್ಮೇಂದ್ರ ಆದಷ್ಟು ಬೇಗ ಗುಣಮುಖರಾಗಲಿ ಮತ್ತೆ ಮರಳಿ ಬರಲಿ ಎಂದು ಪ್ರಾರ್ಥನೆ ಮಾಡುತ್ತಿದ್ಧಾರೆ.


Click it and Unblock the Notifications











