ಅವರ ಮನೆ ನಡೆಯುತ್ತಿರುವುದೇ ನನ್ನ ಹೆಸರಿನಲ್ಲಿ ; ಮಾಜಿ ಪತ್ನಿ, ಡ್ಯಾನ್ಸರ್ ಧನಶ್ರೀಗೆ ಯಜುವೇಂದ್ರ ಚಹಾಲ್ ತಿರುಗೇಟು
ಮದುವೆಯಾದ ಹೊಸತರಲ್ಲಿ ಹಲವರು ಎರಡು ಹೆಸರು ಒಂದೇ ಉಸಿರು ಎನ್ನುವಂತೆ ಇರುತ್ತಾರೆ. ಆದರೆ.. ಕಾಲ ಕ್ರಮೇಣ ದಾಂಪತ್ಯದಲ್ಲಿನ ಈ ಪ್ರೀತಿ-ಪ್ರಣಯ ನಿಧಾನಕ್ಕೆ ನೇಪಥ್ಯಕ್ಕೆ ಸರಿಯಲು ಶುರು ಮಾಡುತ್ತೆ. ಅಲ್ಲಿಯವರೆಗೆ ಕಾಣದ ಭಿನ್ನಾಭಿಪ್ರಾಯಗಳು ಕಾಣುತ್ತವೆ. ನೋಡ ನೋಡುತ್ತಲೇ ಸಂಬಂಧ ಮುರಿದು ಬೀಳುತ್ತೆ. ಆ ನಂತರ ಶುರುವಾಗುವುದೇ ಆರೋಪ- ಪ್ರತ್ಯಾರೋಪಗಳ ಸುರಿಮಳೆ. ಉದಾಹರಣೆಗೆ ಯಜುವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಅವರ ಮುರಿದು ಬಿದ್ದ ದಾಂಪತ್ಯ ಜೀವನವನ್ನೇ ತೆಗೆದುಕೊಳ್ಳಿ.
ಹೌದು. ಎಲ್ಲರಿಗೆ ಗೊತ್ತಿರುವಂತೆ ಚಹಾಲ್ ಮತ್ತು ಧನಶ್ರೀ ವರ್ಮಾ ಪ್ರೀತಿಯಲ್ಲಿ ಬಿದ್ದು ಹೊರಳಾಡಿದ್ದರು. ನಾಲ್ಕೂವರೆ ವರ್ಷ ದಾಂಪತ್ಯ ಜೀವನ ಕೂಡ ನಡೆಸಿದರು. ಆದರೆ ಆ ನಂತರ ಇವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತು. ದಾಂಪತ್ಯ ಜೀವನ ಮುರಿದು ಬಿತ್ತು.

ಇಬ್ಬರು ದೂರವಾಗಿ 8 ತಿಂಗಳಾಗಿವೆ. ಆದರೆ.. ಮನಸ್ತಾಪ ಮಾತ್ರ ದೂರವಾಗಿಲ್ಲ. ಒಬ್ಬರ ಹೆಸರನ್ನೊಬ್ಬರು ಕೇಳಿದರೆ ಸಾಕು ಇಬ್ಬರು ಕೆರಳಿ ಕೆಂಡವಾಗುತ್ತಾರೆ. ಈ ಕ್ಷಣದವರೆಗೆ ಇಬ್ಬರು ಬೀದಿಯಲ್ಲಿ ಜಗಳ ಆಡುತ್ತಿದ್ದಾರೆ. ಪರಸ್ಪರ ಚಾರಿತ್ರ್ಯಹರಣವನ್ನು ಮಾಡುತ್ತಿದ್ದಾರೆ.
ಇದಕ್ಕೆ ಒಂದು ಪುರಾವೆ ಎನ್ನುವಂತೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ''ರೈಸ್ & ಫಾಲ್'' ಕಾರ್ಯಕ್ರಮದಲ್ಲಿ ಕೇವಲ ಎರಡೇ ತಿಂಗಳಿನಲ್ಲಿ ಅವನನ್ನ ನಾನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೇ ಎಂದು ಹೇಳಿದ್ದರು. ಧನಶ್ರೀ ಆಡಿದ್ದ ಈ ಮಾತುಗಳಿಗೆ ಈಗ ಯಜುವೇಂದ್ರ ಚಹಾಲ್ ತಿರುಗೇಟು ನೀಡಿದ್ದಾರೆ. ಎರಡು ತಿಂಗಳಲ್ಲಿಯೇ ಗೊತ್ತಾದರೆ ನಾಲ್ಕು ವರ್ಷ ಸಂಸಾರ ನಡೆಸಿದ್ಹೇಗೆ..? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ''ಹಿಂದೂಸ್ತಾನ್ ಟೈಮ್ಸ್''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಚಹಾಲ್, ನಾನು ಕ್ರೀಡಾಪಟು, ಮೋಸಗಾರನಲ್ಲ. ಮದುವೆಯಾದ ಎರಡು ತಿಂಗಳಿನಲ್ಲಿ ಮೋಸ ಆಗಿದ್ದರೆ ಸಂಬಂಧ ನಾಲ್ಕೂವರೆ ವರ್ಷ ಹೇಗೆ ಮುಂದುವರೆಯಿತು ಎಂದು ಕೇಳಿದ್ದಾರೆ.
ನನ್ನ ಪಾಲಿಗೆ ಅದು ಮುಗಿದ ಅಧ್ಯಾಯ, ನಾನು ನನ್ನ ಬದುಕಿನಲ್ಲಿ ಮುಂದುವರೆದಿದ್ದೇನೆ. ಬೇರೆಯವರು ಕೂಡ ಮುಂದುವರೆಯಬೇಕು ಎಂದು ಹೇಳಿರುವ ಯುಜುವೇಂದ್ರ ಚಹಾಲ್ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ. ನಾನು ನನ್ನ ಭೂತಕಾಲದಿಂದ ಹೊರಬಂದಿದ್ದೇನೆ. ಆದರೆ ಕೆಲವರು ಇನ್ನೂ ಅಲ್ಲಿಯೇ ಸಿಲುಕಿಕೊಂಡಿದ್ದಾರೆ ಎಂದು ಹೇಳಿರುವ ಚಹಾಲ್ ನನ್ನ ಹೆಸರಿನಲ್ಲಿ ಅವರ ಮನೆ ನಡೆಯುತ್ತಿದೆ, ಹೀಗಾಗಿ ಅವರು ತಮ್ಮ ಕೆಲಸವನ್ನು ಮುಂದುವರೆಸಬಹುದು ಎಂದು ಹೇಳಿದ್ದಾರೆ. ನನ್ನ ಮೇಲೆ ಇದ್ಯಾವುದು ಈಗ ಪರಿಣಾಮ ಬೀರುವುದಿಲ್ಲ ಎಂದು ಕೂಡ ಹೇಳಿದ್ದಾರೆ.

ಮುಂದುವರೆದು ಯಾರಾದರೂ ಏನು ಬೇಕಾದರೂ ಮಾತನಾಡಬಹುದು. ಅವರು ಮಾತನಾಡಿದ ತಕ್ಷಣ ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇ ಬೇಗ ಅದು ವೈರಲ್ ಆಗುತ್ತೆ ಎಂದು ಹೇಳಿರುವ ಚಹಾಲ್ ಇದರಿಂದ ನೂರು ವದಂತಿಗಳು ಹರಡುತ್ತವೆ. ಆದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಇದೇ ಕೊನೆಯ ಬಾರಿ.. ಅದೇ ವಿಚಾರದ ಕುರಿತು ಮತ್ತೆ ಮತ್ತೆ ನಾನು ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ನಾನು ಸದ್ಯ ನನ್ನ ಭವಿಷ್ಯದತ್ತ ಗಮನ ನೀಡಿದ್ದೇನೆ, ನನ್ನ ವ್ಯೆಯಕ್ತಿಕ ಬೆಳವಣಿಗೆ ಮತ್ತು ವೃತ್ತಿ ಬದುಕಿಗೆ ಆದ್ಯತೆ ನೀಡುತ್ತಿದ್ದೇನೆ ಎಂದು ಹೇಳಿರುವ ಯುಜುವೇಂದ್ರ ಚಹಾಲ್ ಸದ್ಯ ನಾನು ಸಿಂಗಲ್ ಆಗಿದ್ದೇನೆ. ಹೊಸ ಸಂಬಂಧಕ್ಕೆ ನಾನು ಈಗ ಸಿದ್ಧ ಇಲ್ಲ ಎಂದು ಕೂಡ ಇದೇ ಸಂದರ್ಶನದಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಇನ್ನುಳಿದಂತೆ ನಾನು ಒಂಟಿ ಎಂದು ಯುಜ್ವೇಂದ್ರ ಚಹಾಲ್ ಹೇಳಿದರೂ ಕೂಡ ಆರ್‌ಜೆ ಮಹ್ವಾಶ್ ಇವರ ಹೆಸರು ಥಳುಕು ಹಾಕಿಕೊಂಡಿದೆ. ಇದಕ್ಕೆ ಪೂರಕವಾಗಿ ಇಬ್ಬರು ಜೊತೆಯಲ್ಲಿರುವ ಹಲವು ಫೋಟೊಗಳು ಈ ಹಿಂದೆ ವೈರಲ್ ಕೂಡ ಆಗಿವೆ. ಸದ್ಯ ಚಹಾಲ್ ತಮ್ಮ ಮೇಲಿನ ಮೋಸದ ಆರೋಪಕ್ಕೆ ಉತ್ತರ ನೀಡಿದ್ದಾರೆ. ಧನಶ್ರೀ ಮುಂದೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











