twitter
    For Quick Alerts
    ALLOW NOTIFICATIONS  
    For Daily Alerts

    '83' ವರ್ಲ್ಡ್ ಕಪ್ ಗೆದ್ದಷ್ಟು ರೋಚಕವಾಗಿಲ್ಲ ಚಿತ್ರದ ಕಲೆಕ್ಷನ್

    By ರವೀಂದ್ರ ಕೊಟಕಿ
    |

    ಇದೇ ಶುಕ್ರವಾರ ಬಿಡುಗಡೆ ಆದ ಬಹುನಿರೀಕ್ಷಿತ '83' ಚಿತ್ರ ವಿಮರ್ಶಕರಿಂದ ಮೆಚ್ಚುಗೆಯ ಮಾತುಗಳನ್ನು ಪಡೆಯುತ್ತಿದೆ. ಕಬೀರ್ ಖಾನ್ ನಿರ್ದೇಶನದಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಧಾರಿಗಳಾಗಿ ಅಭಿನಯಿಸಿರುವ '83' ಚಿತ್ರವು ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ನಲ್ಲಿ 1983 ರಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಹಿನ್ನಲೆಯನ್ನು ಕಥಾವಸ್ತುವಾಗಿ ಹೊಂದಿದೆ.

    ಹಿಂದೆ ಬಿಡುಗಡೆಯಾಗಿದ್ದ ಸುಶಾಂತ್ ಸಿಂಗ್ ರಾಜಪೂತ್ ಅಭಿನಯದ 'ಧೋನಿ' ಚಿತ್ರ ಮಹೇಂದ್ರ ಸಿಂಗ್ ಧೋನಿಯವರ ಜೀವನ ಆಧಾರಿತ ಬಯೋಪಿಕ್ ಆಗಿತ್ತು. ಕ್ರಿಕೆಟರ್ ಆಗುವ ಹಿನ್ನೆಲೆಯಲ್ಲಿ ದೋನಿ ಅನುಭವಿಸುವ ಮಾನಸಿಕ ಹಾಗೂ ಇತರ ಯಾತನೆಗಳನ್ನು ಅದರಲ್ಲಿ ಕಟ್ಟಿಕೊಡುವುದರಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದರು, ಹೀಗಾಗಿಯೇ ಅದು ಸೂಪರ್ ಹಿಟ್ ಚಿತ್ರ ಎಂದು ಕರೆಸಿಕೊಂಡಿತು. '83' ಚಿತ್ರಕ್ಕೆ ಬಂದರೆ ಇದು ಯಾವುದೋ ಒಬ್ಬ ಕ್ರಿಕೆಟಿಗನ ಬಯೋಪಿಕ್ ಅಲ್ಲ ಬದಲಾಗಿ '83'ಭಾರತ ತಂಡದ ಸುತ್ತಲೂ ಹೆಣದ ಕಥೆ. ಆದರೆ ಇದರಲ್ಲಿ 83 ಚಾಂಪಿಯನ್ ಭಾರತ ಆಗಲು ಕಾರಣನಾದ ಕಪಿಲ್ ದೇವ್ ಅವರ ಸುತ್ತಲೂ ಕಥೆ ನಡೆಯುತ್ತದೆ.

    ನಿರ್ದೇಶಕ ಕಬೀರ್ ಖಾನ್ ಅವರು '83' ಚಿತ್ರವನ್ನು ಭಾವನಾತ್ಮಕವಾಗಿ ಕಟ್ಟುವುದರಲ್ಲಿ ಮೇಲ್ನೋಟಕ್ಕೆ ವಿಫಲರಾಗಿದ್ದಾರೆ. '83' ಚಿತ್ರದ ಕತೆ ಎಲ್ಲರಿಗೂ ಗೊತ್ತಿರುವಂತದ್ದೇ '83' ರಲ್ಲಿ ಭಾರತ ವರ್ಲ್ಡ್ ಕಪ್ ಗೆದ್ದ ಹಿನ್ನೆಲೆಯನ್ನು ಹೊಂದಿದೆ. ಇದು ಆರಂಭದಿಂದ ಅಂತ್ಯದವರೆಗೂ ಇಡೀ ವರ್ಲ್ಡ್ ಕಪ್ ಪ್ರಯಾಣವನ್ನು ನಮ್ಮ ಮುಂದೆ ಇಡುತ್ತದೆ. ಕೊನೆಗೆ ಎಲ್ಲರಿಗೂ ಗೊತ್ತಿರುವಂತೆ ಭಾರತ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮುತ್ತದೆ. 83 ತಂಡ ಹೇಗಿತ್ತು? ತಂಡದ ಆಟಗಾರರ ಮನಸ್ಥಿತಿ ಅವರ ಪರಿವಾರದ ಹಿನ್ನೆಲೆ ಹೀಗೆ ಎಲ್ಲವನ್ನೂ ಕೂಡ ಚಿತ್ರ ನಮ್ಮ ಮುಂದೆ ತೆರೆದಿಡುತ್ತದೆ. ಆದರೆ ಇಡೀ ಚಿತ್ರ ಒಂದು ಆಟದಂತೆ ಸಾಗುತ್ತದೆ ಹೊರತು ಒಂದು ಭಾವುಕವಾದ ಅನುಭವವನ್ನು ಪೂರ್ಣಪ್ರಮಾಣದಲ್ಲಿ ಕಟ್ಟಿಕೊಡುವುದಿಲ್ಲ. ಹೀಗಾಗಿ ಈ ವಿಚಾರದಲ್ಲಿ ನೋಡಿರುವ ಜನರಲ್ಲಿ ಒಂದು ರೀತಿಯ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

    83 ತಂಡದಿಂದ ಭಾರೀ ಪ್ರಚಾರ

    83 ತಂಡದಿಂದ ಭಾರೀ ಪ್ರಚಾರ

    ಕಳೆದ ಒಂದು ತಿಂಗಳಿಂದ '83' ಚಿತ್ರತಂಡ ಮಾತ್ರವಲ್ಲ 1983 ವಿಶ್ವಚಾಂಪಿಯನ್ ತಂಡದ ಆಟಗಾರರು ಕೂಡ ಚಿತ್ರವನ್ನು ಭಾರಿ ಪ್ರಮಾಣದಲ್ಲಿ ಪ್ರಚಾರ ಮಾಡಿದ್ದಾರೆ. ಮುಂಬೈ ಜೊತೆಗೆ ದೆಹಲಿಯಲ್ಲಿ ಹಾಗೆ ಬೆಂಗಳೂರು-ಹೈದರಾಬಾದ್ ಚೆನ್ನೈನಲ್ಲಿ ಕೂಡ ಚಿತ್ರತಂಡ ಮತ್ತು ಕ್ರಿಕೆಟ್ ಆಟಗಾರರು ಬಂದು ಪ್ರಚಾರ ಮಾಡಿ ಹೋಗಿದ್ದಾರೆ. '83' ಟ್ರೈಲರ್ ನೋಡಿದ ಜನರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು ಯಾಕೋ ಚಿತ್ರ ನೋಡುವ ವಿಚಾರದಲ್ಲಿ ಮಾತ್ರ ಅನ್ಯಮನಸ್ಕರಾಗಿದ್ದಾರೆ. ಬಹುಶಃ '83' ಚಿತ್ರದ ಕಥಾವಸ್ತು ಎಲ್ಲರಿಗೂ ಗೊತ್ತಿರುವ ಕಾರಣಕ್ಕೋ ಅಥವಾ ಇತರ ಬಿಡುಗಡೆಯಾಗಿರುವ ಚಿತ್ರಗಳಾದ 'ಸ್ಪೈಡರ್ಮ್ಯಾನ್', 'ಪುಷ್ಪ' ಚಿತ್ರಗಳು ಗುಂಗಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲವೇ ಗೊತ್ತಿಲ್ಲ. '83' ಚಿತ್ರಕ್ಕೆ ಮೊದಲ ದಿನ ನಿರೀಕ್ಷಿತ ಪ್ರಮಾಣದ ಓಪನಿಂಗ್ ಮಾತ್ರ ಸಿಕ್ಕಿಲ್ಲ.

    '83' ಬಾಕ್ಸ್ ಆಫೀಸ್ ಕಲೆಕ್ಷನ್

    '83' ಬಾಕ್ಸ್ ಆಫೀಸ್ ಕಲೆಕ್ಷನ್

    83ರ ಕ್ರಿಕೆಟ್ ಹೀರೋ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದು ಶುಕ್ರವಾರ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಕಬೀರ್ ಖಾನ್ ನಿರ್ದೇಶನದ ಈ ಚಿತ್ರದ ಮೊದಲ ದಿನದ ಓಪನಿಂಗ್ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್ 'ಮತ್ತು 'ಸೂರ್ಯವಂಶಿ' ಯಂತಹ ಬಿಡುಗಡೆ ದಿನದ ಒಂದು ಸಂಗ್ರಹಕ್ಕಿಂತ ಕಡಿಮೆ ಸಂಗ್ರಹಿಸಿದೆ. ಪ್ರಸ್ತುತ, 'ಸ್ಪೈಡರ್ ಮ್ಯಾನ್' ಭಾರತದಲ್ಲಿ ಬಿಡುಗಡೆಯಾದ ಎಂಟು ದಿನಗಳಲ್ಲಿ ಸುಮಾರು ₹150 ಕೋಟಿಗಳ ಸಂಗ್ರಹದೊಂದಿಗೆ ಬಾಕ್ಸ್ ಆಫೀಸ್ ಅನ್ನು ಆಳುತ್ತಿದೆ. ಬಾಕ್ಸಾಫೀಸ್ ವರದಿಗಳ ಪ್ರಕಾರ '83' ಬಿಡುಗಡೆಯಾದ ಮೊದಲ ದಿನದಲ್ಲಿ ಸುಮಾರು ₹13-14 ಕೋಟಿ ನಿವ್ವಳವನ್ನು ಸಂಗ್ರಹಿಸಿದೆ ಎಂದು ಅಂದಾಜಿಸಲಾಗಿದೆ. ಚಿತ್ರಪ್ರೇಮಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗಳಿಗೆ ಕರೆತಂದ ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಅಭಿನಯದ 'ಸೂರ್ಯವಂಶಿ' ಚಿತ್ರವು ನವೆಂಬರ್‌ನಲ್ಲಿ ತೆರೆಕಂಡಿತ್ತು. ತೆರೆಕಂಡ ಮೊದಲನೆಯ ದಿನವೇ ₹26.29 ಕೋಟಿ ಗಳಿಕೆಯನ್ನು ಬಾಕ್ಸಾಫೀಸಿನಲ್ಲಿ ರಿಜಿಸ್ಟರ್ ಮಾಡಿತ್ತು. ಡಿಸೆಂಬರ್‌ನಲ್ಲಿ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಮೊದಲ ದಿನದ ಗಳಿಕೆ 32 ಕೋಟಿಯನ್ನು ಭಾರತದಲ್ಲಿ ಕಂಡಿದೆ. ಅಚ್ಚರಿಯ ಸಂಗತಿಯೆಂದರೆ ಸೌತ್ ಸಿನಿಮಾ 'ಪುಷ್ಪ' ಇವೆಲ್ಲದಕ್ಕಿಂತ ಹೆಚ್ಚಿಗೆ ಅಂದರೆ ಸುಮಾರು 50 ಕೋಟಿಯನ್ನು ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನ ಗಳಿಸಿದ್ದು 2021 ವರ್ಷದ ದೊಡ್ಡ ಓಪನಿಂಗ್ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    'ಸ್ಪೈಡರ್ ಮ್ಯಾನ್', 'ಪುಷ್ಪ' ಇಂದ ಭಾರಿ ಹೊಡೆತ

    'ಸ್ಪೈಡರ್ ಮ್ಯಾನ್', 'ಪುಷ್ಪ' ಇಂದ ಭಾರಿ ಹೊಡೆತ

    ಕಳೆದ ವಾರ ಬಿಡುಗಡೆಗೊಂಡ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ 'ಸ್ಪೈಡರ್ ಮ್ಯಾನ್' ಮತ್ತು 'ಪುಷ್ಪ'ಚಿತ್ರಗಳು ಕೂಡ '83'ಚಿತ್ರದ ಮೇಲೆ ಭಾರೀ ಪರಿಣಾಮವನ್ನು ಬೀರುತ್ತವೆ. ಮಲ್ಟಿ ಪ್ಲೆಕ್ಸ್ ಗಳಲ್ಲಿ ಈಗಲೂ ಕೂಡ 'ಸ್ಪೈಡರ್ ಮ್ಯಾನ್' ಅತ್ಯುತ್ತಮವಾದ ಗಳಿಕೆಯನ್ನು ಕಾಣುತ್ತಿದೆ. ಅಚ್ಚರಿಯ ಸಂಗತಿಯೆಂದರೆ ಹಿಂದಿ ಬೆಲ್ಟ್ ನಲ್ಲಿರುವ ಸಿಂಗಲ್ ಸ್ಕ್ರೀನ್ ಥಿಯೇಟರುಗಳಲ್ಲಿ ಈಗಲೂ ಪೂರ್ತಿಯಾಗಿ 'ಪುಷ್ಪ' ಚಿತ್ರದ ಹವಾ ಜೋರಾಗಿದೆ. ಎರಡನೇ ವಾರದಲ್ಲಿ ಕೂಡ ಎರಡು ಚಿತ್ರಗಳು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವುದು '83'ಚಿತ್ರಕ್ಕೆ ಒಂದು ದೊಡ್ಡಮಟ್ಟದ ಓಪನಿಂಗ್ ಪಡೆಯುವುದಕ್ಕೆ ಹಿನ್ನಡೆಯುಂಟು ಮಾಡಿದೆ. '83'ಭಾರತದ ಐತಿಹಾಸಿಕ 1983 ಕ್ರಿಕೆಟ್ ವಿಶ್ವಕಪ್ ಗೆಲುವಿನ ಸುತ್ತ ಸುತ್ತುತ್ತದೆ, ರಣವೀರ್ ಸಿಂಗ್ ಅವರ ಜೊತೆಗೆ ತಾಹಿರ್ ರಾಜ್ ಭಾಸಿನ್, ಜೀವಾ, ಸಾಕಿಬ್ ಸಲೀಮ್, ಜತಿನ್ ಸರ್ನಾ, ಚಿರಾಗ್ ಪಾಟೀಲ್, ದಿನಕರ್ ಶರ್ಮಾ, ನಿಶಾಂತ್ ದಹಿಯಾ, ಸಾಹಿಲ್ ಖಟ್ಟರ್, ಆಮಿ ವಿರ್ಕ್, ಆದಿನಾಥ್ ಕೊಠಾರೆ, ಧೈರ್ಯ ಕರ್ವಾ, ಆರ್ ಬದ್ರಿ ಮತ್ತು ಪಂಕಜ್ ತ್ರಿಪಾಠಿ ಇತರ ಆಟಗಾರರ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಕಪಿಲ್ ದೇವ್ ಪತ್ನಿ ರೋಮಿ ಭಾಟಿಯಾ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. '83' ಚಿತ್ರದ ಬಗ್ಗೆ ಜನ ಒಳ್ಳೆ ಅಭಿಪ್ರಾಯಗಳನ್ನು ಒಂದು ಮಟ್ಟಿಗೆ ವ್ಯಕ್ತಪಡಿಸುತ್ತಿದ್ದರು ಕೂಡ ಥಿಯೇಟರ್ ಗಳಲ್ಲಿ ಈಗಲೂ ' ಸ್ಪೈಡರ್ ಮ್ಯಾನ್: ನೋ ವೇ ಹೋಮ್ ' ಅಲ್ಲು ಅರ್ಜುನ್‌ನ 'ಪುಷ್ಪ'ತೀವ್ರ ಹೊಡೆತವನ್ನು ನೀಡುತ್ತಿದೆ. 2ನೇ ದಿನ ಕೂಡ '83'ಚಿತ್ರ ಎರಡನೇ ದಿನ ಕೇವಲ 16 ಕೋಟಿ ಅಷ್ಟೇ ಗಳಿಸಲು ಶಕ್ತವಾಗಿದೆ.

    ಹೂಡಿದ ಬಂಡವಾಳ ವಾಪಸ್ ಕಷ್ಟ?

    ಹೂಡಿದ ಬಂಡವಾಳ ವಾಪಸ್ ಕಷ್ಟ?

    '83' ಚಿತ್ರ 2D ಮತ್ತು 3D ಫಾರ್ಮೆಟ್ ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ 3D ಫಾರ್ಮೆಟ್ ನಲ್ಲಿ ಚಿತ್ರ ಪ್ರೇಕ್ಷಕರನ್ನು ರಂಜಿಸಲು ವಿಫಲವಾಗಿದೆ. ರಿಲಿಯನ್ಸ್ ಈ ಚಿತ್ರದ ಮೇಲೆ ಸುಮಾರು 150 ಕೋಟಿಗೂ ಹೆಚ್ಚು ಹಣವನ್ನು ಹೂಡಿದೆ. ಚಿತ್ರದ ಸಾಧಾರಣ ಗಳಿಕೆಯಿಂದ ಚಿತ್ರ ವಾರಾಂತ್ಯಕ್ಕೆ ಸುಮಾರು 60 ಕೋಟಿ ವರೆಗೂ ಮಾತ್ರ ಮಾಡಬಹುದು ಅಂತ ಟ್ರೇಡ್ ಪಂಡಿತರು ಹೇಳುತ್ತಿದ್ದಾರೆ. ಅಲ್ಲದೆ ಮುಂದಿನವಾರ ಶಾಹಿದ್ ಕಪೂರ್ ಅಭಿನಯದ 'ಜರ್ಸಿ' ಚಿತ್ರ ಬಿಡುಗಡೆಯಾಗುತ್ತಿದೆ.ಗೌತಮ್ ತಿನ್ನನೂರಿ ನಿರ್ದೇಶನದ 'ಜರ್ಸಿ' ಅದೇ ಹೆಸರಿನ ನಟ ನಾನಿ ಅವರ ಚಿತ್ರದ ರಿಮೇಕ್ ಆಗಿದೆ. ಚಿತ್ರವು ತನ್ನ ಮಗನಿಗಾಗಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಕನಸನ್ನು ನನಸಾಗಿಸಲು ನಿರ್ಧರಿಸುವ ವಿಫಲ ಕ್ರಿಕೆಟಿಗ ಅರ್ಜುನ್ (ಶಾಹಿದ್) ಸುತ್ತ ಸುತ್ತುತ್ತದೆ. ಈ ಚಿತ್ರದಲ್ಲಿ ಹೆಚ್ಚಿನ ಭಾವನಾತ್ಮಕ ಸನ್ನಿವೇಶಗಳು ಇರುವುದರಿಂದ ಈ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತದೆ ಅಂತ ವಿಶ್ಲೇಷಿಸಲಾಗುತ್ತಿದೆ. ಅದು ಅಲ್ಲದೆ ಮುಂದಿನ ಜನವರಿ ಏಳರಂದು 'ಆರ್ ಆರ್ ಆರ್' ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ಬಹುತೇಕ ಎಲ್ಲಾ ಮಲ್ಟಿಪ್ಲೆಕ್ಸ್ ಗಳನ್ನು 'ಆರ್ ಆರ್ ಆರ್' ಆಕ್ರಮಿಸಿಕೊಳ್ಳುತ್ತದೆ. ಹೀಗಾಗಿ ಬಹುತೇಕ '83' ಚಿತ್ರ ಈ ವಾರ ಗಳಿಕೆ ಕಾಣುವ ಕಲೆಕ್ಷನ್ ಮಾತ್ರವೇ ಗಟ್ಟಿ ಅಂತ ಹೇಳಲಾಗುತ್ತಿದೆ.

    English summary
    Hindi movie '83' fail to register good opening at box office. From critics film getting good reviews but fail to attract audience to cinema hall.
    Monday, December 27, 2021, 15:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X