ಹಿಂದಿ VS ಮರಾಠಿ ; ಕಾಜೋಲ್ ವಿರುದ್ಧ ಭುಗಿಲೆದ್ದ ಆಕ್ರೋಶ, ಹಿಂದಿ ಸಿನಿಮಾ ಮಾಡದಂತೆ ಒತ್ತಾಯ
ಹಿಂದಿ ರಾಷ್ಟ್ರಭಾಷೆ ಎಂಬ ಭಾವನೆ ಹಲವರಲ್ಲಿದೆ. ಆದರೆ ವಾಸ್ತವದಲ್ಲಿ ಅದು ರಾಷ್ಟ್ರಭಾಷೆ ಅಲ್ಲ. ಬದಲಿಗೆ ಅಸ್ತಿತ್ವದಲ್ಲಿರುವ ಇತರ ಅಧಿಕೃತ ಭಾಷೆಗಳ ಪೈಕಿ ಒಂದಷ್ಟೇ. ಭಾರತದ ಸಂವಿಧಾನ ಹಿಂದಿ ರಾಷ್ಟ್ರಭಾಷೆ ಎಂದು ಹೇಳಿಲ್ಲ. ಆದರೂ ಕೂಡ ಹಿಂದಿಯನ್ನು ಹೇರಲಾಗುತ್ತೆ. ಈ ಹೇರಿಕೆಯ ವಿರುದ್ಧ ಸ್ವಾತಂತ್ರ್ಯಪೂರ್ವದಿಂದ ವಿರೋಧ ವ್ಯಕ್ತವಾಗುತ್ತಲೇ ಇದೆ. ಆದರೂ ಈ ಹೇರಿಕೆ ಮುಂದುವರೆಯುತ್ತಲೇ ಇದೆ.
ಮೂಲಭೂತ ಹಕ್ಕುಗಳಿಗೆ ಧಕ್ಕೆ ತರಲಾಗುತ್ತಿದೆ. ಯಾರಾದರೂ ಹಿಂದಿ ಮಾತನಾಡದೇ ಇದ್ದರೆ ಅವರನ್ನು ದೇಶದ್ರೋಹಿಯಂತೆ ಬಿಂಬಿಸಲಾಗುತ್ತಿದೆ. ಇದೆಲ್ಲದರ ಪರಿಣಾಮ 'ಪ್ರಾದೇಶಿಕ ಭಾಷೆ'ಗಳು ಅವನತಿಯತ್ತ ಸಾಗುತ್ತಿವೆ. ಸದ್ಯ ಇದೇ ವಿಚಾರದಿಂದ ಕಾಜೋಲ್ ಸುದ್ದಿಯಲ್ಲಿದ್ದಾರೆ.

ಹೌದು, ಕಾಜೋಲ್ ಬಾಲಿವುಡ್‌ನ ಕೃಷ್ಣ ಸುಂದರಿ. ಕೇವಲ 17ರ ಪ್ರಾಯದಲ್ಲಿಯೇ ''ಬಾಜಿಗರ್'' ಚಿತ್ರದಲ್ಲಿ ಶಾರುಖ್ ಖಾನ್‌ಗೆ ಜೋಡಿಯಾಗಿದ್ದ ಕಾಜೋಲ್ ಆ ನಂತರ ಬಾಲಿವುಡ್‌ನ ನಂಬರ್ 1 ನಾಯಕಿಯಾಗಿದ್ದು .. ಚಿತ್ರರಂಗವನ್ನಾಳಿದ್ದು .. ಈಗ ಇತಿಹಾಸ.
ಇಂಥಾ ಕಾಜೋಲ್ ಮೊನ್ನೆ ಆಗಸ್ಟ್ 5ರಂದು ಮಹಾರಾಷ್ಟ್ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಮಾಧ್ಯಮದವರ ಜೊತೆ ತಮ್ಮ ಖುಷಿಯನ್ನು ಹಂಚಿಕೊಂಡರು. ಎಲ್ಲರ ಜೊತೆ ನಗುತ್ತ ಮರಾಠಿಯಲ್ಲಿ ಮಾತನಾಡಿದರು.
ಆದರೆ ಇದೇ ಸಮಯದಲ್ಲಿ ಅಲ್ಲಿದ್ದ ಪತ್ರಕರ್ತೆ ''ಹಿಂದಿ''ಯಲ್ಲಿ ಮತ್ತೊಮ್ಮೆ ನಿಮ್ಮ ಮಾತುಗಳನ್ನು ಹೇಳಿ ಎಂದರು. ಪತ್ರಕರ್ತೆಯ ಈ ಮಾತು ಕಾಜೋಲ್ ಅವರನ್ನು ಕೆರಳಿಸಿತು. ಹೀಗಾಗಿಯೇ ನಾನು ಈಗ ಹಿಂದಿಯಲ್ಲಿ ಬೇರೆ ಮಾತನಾಡಬೇಕಾ ಎಂದು ಕೋಪದಲ್ಲಿಯೇ ಕೇಳಿದ ಕಾಜೋಲ್ ಯಾರಿಗೆ ಅರ್ಥ ಮಾಡಿಕೊಳ್ಳಬೇಕೋ ಅವರು ಬೇಕಿದ್ದರೆ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿ ಅಲ್ಲಿಂದ ಹೋದರು.
ಕಾಜೋಲ್ ಅವರ ಈ ನಡೆ ಸದ್ಯ ಚರ್ಚೆಗೆ ನಾಂದಿ ಹಾಡಿದೆ. ಕಾಜೋಲ್ ಅವರ ವಿರುದ್ಧ ಒಂದು ವರ್ಗ ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಕಾರುತ್ತಿದೆ. ಹಣ..ಕೀರ್ತಿ.. ಎಲ್ಲವೂ ಹಿಂದಿ ಚಿತ್ರರಂಗದಿಂದ, ಹಿಂದಿ ಪ್ರೇಕ್ಷಕರಿಂದ ಇವರಿಗೆ ಬೇಕು ಆದರೆ ಮಾತನಾಡಲು ಮಾತ್ರ ಮುಜುಗರ ಎನ್ನುತ್ತಿದ್ದಾರೆ. ಮೇಡಂ ನಿಮ್ಮಿಂದ ಈ ತರಹದ ಉತ್ತರವನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ.
ಇನ್ನು, ಹಿಂದಿ ಮಾತನಾಡಲು ಅಷ್ಟು ಕಷ್ಟವಾದರೆ ಹಿಂದಿ ಸಿನಿಮಾದಲ್ಲಿ ನೀವು ಯಾಕೆ ಅಭಿನಯಿಸುತ್ತಿದ್ದೀರಾ ? ಎಂದು ಪ್ರಶ್ನೆಯನ್ನು ಕೂಡ ಕೇಳಿರುವ ಹಲವರು ಬಾಲಿವುಡ್‌ದಿಂದ ತೊಲಗಿ ನಿಮ್ಮ ಮರಾಠಿಯಲ್ಲಿಯೇ ಸಿನಿಮಾಗಳನ್ನು ಮಾಡ್ಕೊಂಡು ನೆಮ್ಮದಿಯಾಗಿರಿ ಎಂದು ಕೂಡ ಹಲವರು ಹೇಳಿದ್ದಾರೆ.
ಇಷ್ಟೇ ಅಲ್ಲ ಕಾಜೋಲ್ ಅವರನ್ನು ಬಾಲಿವುಡ್‌ದಿಂದ ಬಹಿಷ್ಕರಿಸಬೇಕೆಂಬ ಒತ್ತಾಯವನ್ನು ಕೂಡ ಮಾಡುತ್ತಿರುವ ಹಲವರು, ಅಜಯ್ ದೇವಗನ್ ಅವರ ವಿರುದ್ಧ ಕೂಡ ಕೆಂಡ ಕಾರುತ್ತಿದ್ದಾರೆ. ವಿಮಲ್ ತಿನ್ನುವನ ಪತ್ನಿ ಮರಾಠಿ ಗೂಂಡಾ ರೀತಿ ವರ್ತಿಸುತ್ತಿದ್ಧಾಳೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಹಿಂದಿ ಭಾಷೆಯನ್ನು ಮಾತನಾಡಲು ಹಿಂದೇಟು ಹಾಕುವ ಕಾಜೋಲ್‌ಗೆ ಕೊನೆ ಪಕ್ಷ ಮರಾಠಿಯಾದರೂ ಸರಿಯಾಗಿ ಮಾತನಾಡಲು ಬರುತ್ತಾ ಅಂದರೆ ಅದು ಇಲ್ಲ, ಮಾತುಗಳ ನಡುವೆ ಇಂಗ್ಲೀಷ್ ಪದಗಳನ್ನು ಬಳಸುವ ಇವಳ ಮುಖ ಮತ್ತು ಹೃದಯ ಎರಡು ಕೊಳಕುಗಳಿಂದ ತುಂಬಿದೆ ಎಂದು ಆಕ್ರೋಶವನ್ನು ಕೂಡ ಹಲವರು ವ್ಯಕ್ತಪಡಿಸುತ್ತಿದ್ದಾರೆ.
ತಮ್ಮ ವಿರುದ್ಧ ವ್ಯಕ್ತವಾಗುತ್ತಿರುವ ಈ ಆಕ್ರೋಶಕ್ಕೆ ಕಾಜೋಲ್ ಸದ್ಯ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇನ್ನುಳಿದಂತೆ ಸದ್ಯ ಬಾಲಿವುಡ್‌ನಲ್ಲಿ ಮತ್ತೆ ಬ್ಯುಸಿಯಾಗಿರುವ ಕಾಜೋಲ್ ಇತ್ತೀಚೆಗಷ್ಟೇ ''ಮಾ'' ಚಿತ್ರದಲ್ಲಿ ಅಭಿನಯಿಸಿದ್ದರು.'' ಸರ್‌ಜಮೀನ್'' ಎಂಬ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಸದ್ಯ ''ದಿ ಟ್ರಯಲ್'' ಸೀಸನ್ 2ದಲ್ಲಿ ಕಾಜೋಲ್ ಅಭಿನಯಿಸಿದ್ದಾರೆ. ಸೆಪ್ಟೆಂಬರ್ 19ರಂದು ಜೀಯೋ ಹಾಟ್ ಸ್ಟಾರ್‌ನಲ್ಲಿ ಈ ಸರಣಿ ಪ್ರಸಾರವಾಗಲಿದೆ.


Click it and Unblock the Notifications











