ಪಾಕಿಸ್ತಾನದ ಕರಾಚಿಯಲ್ಲಿ 'ಮಹಾವತಾರ್ ನರಸಿಂಹ' ಚಿತ್ರ ಪ್ರದರ್ಶನ; ವೈರಲ್ ವೀಡಿಯೋ ಇಲ್ಲಿದೆ
ಆನಿಮೇಟೆಡ್ ಸಿನಿಮಾ 'ಮಹಾವತಾರ್ ನರಸಿಂಹ' ದೇಶವಿದೇಶಗಳಲ್ಲಿ ಬಿಡುಗಡೆಯಾಗಿ ದಾಖಲೆ ಬರೆದಿತ್ತು. ಎಲ್ಲರ ನಿರೀಕ್ಷೆ ಮೀರಿ ಬಾಕ್ಸಾಫೀಸ್‌ನಲ್ಲಿ 300 ಕೋಟಿ ರೂ. ಕಲೆಕ್ಷನ್ ಮಾಡಿ ಗಮನ ಸೆಳೆದಿತ್ತು. ಸಿನಿಮಾ ನೋಡುಗರನ್ನು ಭಕ್ತಿಪರವಶರನ್ನಾಗಿ ಮಾಡಿತ್ತು. ಕೆಲವರು ಚಿತ್ರಮಂದಿರದ ಹೊರಗೆ ಚಪ್ಪಲಿ ಬಿಟ್ಟು ಹೋಗಿ ಸಿನಿಮಾ ವೀಕ್ಷಿಸಿದ್ದರು.
ಮಹಾವಿಷ್ಣು ನರಸಿಂಹಸ್ವಾಮಿ ಅವತಾರ ತಾಳಿ ಹಿರಣ್ಯ ಕಶಪು ಸಂಹಾರ ಮಾಡುವ ಕಥೆಯನ್ನು ಆನಿಮೇಷನ್ ಮೂಲಕ ದೃಶ್ಯರೂಪಕ್ಕಿಸಿದ ಸಿನಿಮಾ ಇದು. ಜುಲೈ 25ರಂದು ತೆರೆಗೆ ಬಂದಿದ್ದ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಕ್ಲೀಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅಶ್ವಿನ್ ಕುಮಾರ್ ಚಿತ್ರವನ್ನು ಕಟ್ಟಿಕೊಟ್ಟಿದ್ದರು. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬೆಂಬಲದೊಂದಿಗೆ ಸಿನಿಮಾ ತೆರೆಕಂಡು ಗೆದ್ದಿತ್ತು.

ಈ ಬಾರಿ ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿ 'ಮಹಾವತಾರ್ ನರಸಿಂಹ' ಸಿನಿಮಾ ಕೂಡ ಇದೆ. 98ನೇ ಅಕಾಡೆಮಿ ಪ್ರಶಸ್ತಿ ಅರ್ಹತಾ ಪಟ್ಟಿ ಪ್ರವೇಶಿಸಿ ಸಿನಿಮಾ ಭರವಸೆ ಮೂಡಿಸಿದೆ. ಇದೆಲ್ಲದರ ನಡುವೆ ಪಾಕಿಸ್ತಾನದಲ್ಲಿ ಕೂಡ ಸಿನಿಮಾ ಪ್ರದರ್ಶನವಾಗದೆ. ಕರಾಚಿಯ ಸ್ವಾಮಿ ನಾರಾಯಣ ದೇವಸ್ಥಾನದಲ್ಲಿ ಸಿನಿಮಾ ಸ್ಕ್ರೀನಿಂಗ್ ಮಾಡಿದ್ದು ಭಕ್ತರು ಸಿನಿಮಾ ನೋಡಿ ಪುನೀತರಾಗಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗ್ತಿದೆ.
ಪಾಕಿಸ್ತಾನದಲ್ಲಿ ಬಹುತೇಕ ಮುಸ್ಲಿಂ ಸಮದಾಯದವರು ವಾಸಿಸುತ್ತಿದ್ದಾರೆ. ಆದರೂ ಇಂದಿಗೂ ಕೆಲ ಹಿಂದೂಗಳು ಅಲ್ಲಿದ್ದಾರೆ. ಹಿಂದೂ ಆಲಯಗಳಲ್ಲಿ ಪೂಜೆ ನಡೆಯುತ್ತಿದೆ. ಅದೇ ರೀತಿ ಕರಾಚಿಯ ಸ್ವಾಮಿ ನಾರಾಯಣ ಆಲಯದಲ್ಲಿ ನೂರಾರು ಭಕ್ತರಿಗೆ 'ಮಹಾವತಾರ್ ನರಸಿಂಹ' ಸಿನಿಮಾ ಪ್ರದರ್ಶಿಸಲಾಗಿದೆ. ತೆರೆಮೇಲೆ ದೃಶ್ಯವೈಭವ ಕಂಡು ಬೆರಗಾಗಿದ್ದಾರೆ. ಭಕ್ತಿಯಿಂದ ಕೈ ಮುಗಿದಿದ್ದಾರೆ. ಭಾರತದ ಕೆಲ ಸಿನಿಮಾಗಳು ಪಾಕಿಸ್ತಾನದಲ್ಲಿ ಬಿಡುಗಡೆಯಾಗುತ್ತೆ. ಮೊದಲೆಲ್ಲಾ ಬಾಲಿವುಡ್ ಸಿನಿಮಾಗಳ ಆರ್ಭಟ ಅಲ್ಲಿ ಜೋರಾಗಿತ್ತು. ಆದರೆ ಇತ್ತೀಚೆಗೆ ದಕ್ಷಿಣ ಭಾರತ ಸಿನಿಮಾಗಳು ತೆರೆಕಂಡು ಸದ್ದು ಮಾಡ್ತಿವೆ.
ಕನ್ನಡದ 'ಕೆಜಿಎಫ್' ಸರಣಿ, ತೆಲುಗಿನ 'ಪುಷ್ಪ' ಚಿತ್ರಗಳು ಅಲ್ಲಿ ತೆರೆಕಂಡು ಸಕ್ಸಸ್ ಕಂಡಿದ್ದವು. ಇದೀಗ ಭಕ್ತಿಪ್ರದಾನ ಪೌರಾಣಿಕ ಕಥೆಯ ಆನಿಮೇಷನ್ ಸಿನಿಮಾ 'ಮಹಾವತಾರ್ ನರಸಿಂಹ' ಸಿನಿಮಾ ಅಲ್ಲಿ ಪ್ರದರ್ಶನ ಕಂಡಿರುವುದು ವಿಶೇಷ. "ಪಾಕಿಸ್ತಾನದಲ್ಲಿ ಮೊಟ್ಟ ಮೊದಲ ಬಾರಿಗೆ.. ಸ್ವಾಮಿ ನಾರಾಯಣ ಮಂದಿರದಲ್ಲಿ ಮಹಾವತಾರ ನರಸಿಂಹ ಸಿನಿಮಾ ಪ್ರದರ್ಶನ" ಎಂದು ಕ್ಯಾಪ್ಷನ್ ಕೊಟ್ಟು ವೀಡಿಯೋ ಪೋಸ್ಟ್ ಮಾಡಿದ್ದು ವೈರಲ್ ಆಗ್ತಿದೆ. ಸಾಕಷ್ಟು ಜನ ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ.
'ಮಹಾವತಾರ್ ನರಸಿಂಹ' ಸಕ್ಸಸ್ ಬಳಿಕ ಕ್ಲೀಮ್ ಪ್ರೊಡಕ್ಷನ್ಸ್ ಹಾಗೂ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗಳು ಜಂಟಿಯಾಗಿ 7 ಆನಿಮೇಷನ್ ಸಿನಿಮಾ ಘೋಷಿಸಿದ್ದಾರೆ. ಮಹಾವತಾರ್ ಸರಣಿ ಮುಂದುವರೆಸುತ್ತಿದ್ದು 'ಮಹಾವತಾರ್ ಪರಶುರಾಮ್' (2027), 'ಮಹಾವತಾರ್ ರಘುನಂದನ್' (2029), 'ಮಹಾವತಾರ್ ದ್ವಾರಕಾಧೀಶ್' (2031), 'ಮಹಾವತಾರ್ ಗೋಕುಲಾನಂದ' (2033), 'ಮಹಾವತಾರ್ ಕಲ್ಕಿ' ಭಾಗ -1 (2035), ಮತ್ತು 'ಮಹಾವತಾರ್ ಕಲ್ಕಿ' ಭಾಗ- 2 (2037) ಹೀಗೆ ಸಿನಿಮಾಗಳನ್ನು ಘೋಷಿಸಿದ್ದಾರೆ. ಮುಂದಿನ 12 ವರ್ಷಗಳಲ್ಲಿ ಈ ಸಿನಿಮಾಗಳು ತೆರೆಗೆ ಬರಲಿವೆ.
ಆನಿಮೇಷನ್ ಸಿನಿಮಾ ಅಂದರೆ ಕಾರ್ಟೂನ್ ಸಿನಿಮಾ ಎನ್ನುವ ಭಾವನೆ ಕೆಲವರಲ್ಲಿದೆ. ಅದನ್ನೆಲ್ಲಾ ಸುಳ್ಳಾಗಿಸಿ 'ಮಹಾವತಾರ್ ನರಸಿಂಹ' ಸಿನಿಮಾ ದಾಖಲೆ ಬರೆದಿತ್ತು. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿಹೆಚ್ಚು ಗಳಿಕೆ ಕಂಡ ಆನಿಮೇಷನ್ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ಮುಂದೆ ಇಂತಹ ಸಾಕಷ್ಟು ಪ್ರಯತ್ನಗಳಿಗೆ ನಾಂದಿಯಾಗಿದೆ. ಈಗಾಗಲೇ ಕೆಲವರು ನಮ್ಮ ಪೌರಾಣಿಕ ಕಥೆಗಳನ್ನು ಆಧರಿಸಿ ಆನಿಮೇಷನ್ ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ.


Click it and Unblock the Notifications











