'ಪಠಾಣ್' 1000 ಕೋಟಿ ರೂ. ಕಲೆಕ್ಷನ್ ಮಾಡಿದ್ದು ಸುಳ್ಳಾ? ಶಾರುಖ್ ಸಿನಿಮಾ ಬಗ್ಗೆ ಗೇಲಿ ಮಾಡಿದ್ರಾ ಕಾಜೋಲ್?
ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಈ ವರ್ಷ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಗೆಲುವಿನ ಟಾನಿಕ್ ಕೊಟ್ಟ ಸಿನಿಮಾ ಇದು. ಬರೋಬ್ಬರಿ 1000 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿ ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಈ ಸಕ್ಸಸ್ ಬೆನ್ನಲ್ಲೇ ಶಾರುಖ್ 'ಜವಾನ್' ಆಗಿ ಬರ್ತಿದ್ದಾರೆ.
ರಿಲೀಸ್‌ಗೂ ಮುನ್ನ ಸಾಕಷ್ಟು ವಿವಾದ ಹುಟ್ಟಾಕ್ಕಿದ್ದ ಸಿನಿಮಾ ನಂತರ ತೆರೆಮೇಲೆ ಮ್ಯಾಜಿಕ್ ಮಾಡಿತ್ತು. ಸಿನಿಮಾ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. 'ಜೀರೋ' ಸಿನಿಮಾ ಸೋಲಿನ ಬಳಿಕ 4 ವರ್ಷ ಯಾವುದೇ ಸಿನಿಮಾ ಮಾಡದ ಕಿಂಗ್ ಖಾನ್ 'ಪಠಾಣ್' ಅವತಾರದಲ್ಲಿ ಬಂದು ಧೂಳೆಬ್ಬಿಸಿದ್ದರು. ಆದರೆ ನಿಜಕ್ಕೂ ಈ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿದ್ಯಾ? ಎನ್ನುವ ಅನುಮಾನ ಈಗ ಶುರುವಾಗಿದೆ. ಚಿತ್ರತಂಡವೇ ಸಿನಿಮಾ ಕಲೆಕ್ಷನ್ ಬಗ್ಗೆ ಮಾಹಿತಿ ಕೊಡುತ್ತಾ ಬರ್ತಿತ್ತು. ಆದರೆ ಈಗ ನಟಿ ಕಾಜೋಲ್ ಹೇಳಿಕೆಯಿಂದ ಶಾರುಖ್ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಕಾಜೋಲ್ 'ಪಠಾಣ್' ಸಿನಿಮಾ ಕಲೆಕ್ಷನ್ ಬಗ್ಗೆ ಅಪಹಾಸ್ಯ ಮಾಡುವಂತೆ ಮಾತನಾಡಿದ್ದಾರೆ. 'ಪಠಾಣ್' ಸಿನಿಮಾ ಅಸಲಿ ಕಲೆಕ್ಷನ್ ಎಷ್ಟು ಎಂದು ಕೇಳಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗ್ತಿದ್ದು ಇದೇ ವಿಚಾರ ಈಗ ಬಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಕಾರಣಕ್ಕೆ ಕಿಂಗ್ ಖಾನ್ ಅಭಿಮಾನಿಗಳು ನಟಿ ಕಾಜೋಲ್ ಮೇಲೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕಾಜೋಲ್ ನಟನೆಯ 'ದಿ ಟ್ರಯಲ್' ವೆಬ್ ಸಿರೀಸ್ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ. ಇದರ ಪ್ರಚಾರಕ್ಕಾಗಿ ಸಂದರ್ಶನವೊಂದರಲ್ಲಿ ಭಾಗಿ ಆಗಿದ್ದರು. ಈ ವೇಳೆ ಸಾಕಷ್ಟು ವಿಚಾರಗಳನ್ನು ಮಾತನಾಡಿದ ಬಳಿಕ "ನೀವು ಶಾರುಖ್ ಖಾನ್‌ಗೆ ಏನಾದರೂ ಪ್ರಶ್ನೆ ಕೇಳಬೇಕಾ?" ಎಂದು ಸಂದರ್ಶಕ ಕೇಳಿದ್ದಾರೆ. ಆಗ ಕಾಜೋಲ್ ಏನಪ್ಪಾ ಕೇಳೋದು? ಶಾರುಖ್ ಬಗ್ಗೆ ಎಲ್ಲಾ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಇದೆ. ಗೊತ್ತಿಲ್ಲದೇ ಇರುವುದು ಏನು ಎಂದು ಯೋಚಿಸಿ, ಏನನ್ನೋ ನೆನಪಿಸಿಕೊಂಡು "ನಿಜಕ್ಕೂ ಪಠಾಣ್ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿತು? ಎಂದು ಪ್ರಶ್ನಿಸಿದ್ದಾರೆ. ನಂತರ ವ್ಯಂಗ್ಯವಾಗಿ ನಕ್ಕಿದ್ದಾರೆ.
'ಪಠಾಣ್' ಸಿನಿಮಾ ಕಲೆಕ್ಷನ್ ಬಗ್ಗೆ ಕಾಜೋಲ್ ಈ ರೀತಿ ಗೇಲಿ ಮಾಡಿದ್ದಾರೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. "ನಿಜಕ್ಕೂ ಪಠಾಣ್ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿತು?" ಅಂದರೆ ಅದರ ಅರ್ಥ ಅಷ್ಟು ಕಲೆಕ್ಷನ್ ಮಾಡ್ಲಿಲ್ಲ ಅಂತಾ ಅರ್ಥನಾ? ಅಥವಾ ಅದಕ್ಕಿಂತ ಹೆಚ್ಚು ಗಳಿಸಿದ್ದರೂ ಸುಳ್ಳು ಹೇಳಿದ್ರು ಅಂತಾನಾ? ಎಂದು ಕೆಲವರು ಚರ್ಚೆ ಮಾಡ್ತಿದ್ದಾರೆ. ಆದರೂ ಸ್ನೇಹಿತನ ಸಿನಿಮಾ ಬಗ್ಗೆ ಕಾಜೋಲ್ ಈ ರೀತಿ ಕೇಳಿದ್ದು ಎಷ್ಟು ಸರಿ ಎಂದು ಕಿಂಗ್ ಖಾನ್ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್. ಖಾನ್ ಟ್ವೀಟ್ ಮಾಡಿ "ಪಠಾಣ್ ಸಿನಿಮಾದ ಕಲೆಕ್ಷನ್ ಬಗ್ಗೆ ಕಾಜೋಲ್ ಅಪಹಾಸ್ಯ ಮಾಡಿದ್ದಾರೆ. ಶಾರುಖ್ ಸುಳ್ಳು ಲೆಕ್ಕ ನೀಡಿದ್ದಾರೆ ಅಂತ ಮನೇಲಿ ಕಾಜೋಲ್ ಜೊತೆ ಅಜಯ್ ದೇವಗನ್ ಚರ್ಚಿಸಿರಬಹುದು. ಅದಕ್ಕೆ ಆಕೆ ಹೀಗೆ ಮಾನಾಡಿದ್ದಾಳೆ. ಇದು ಬಾಲಿವುಡ್‌ನ ಅಸಲಿ ಮುಖ" ಎಂದು ಬರೆದುಕೊಂಡಿದ್ದಾರೆ.
'ದಿಲ್‌ವಾಲೆ ದುಲ್ಹಾನಿಯಾ ಲೇ ಜಾಯೆಂಗೆ', 'ಕುಚ್ ಕುಚ್ ಹೋತಾ ಹೈ', 'ಕಭಿ ಖುಷ್ ಕಭಿ ಗಮ್', 'ದಿಲ್‌ವಾಲೆ', 'ಮೈ ನೇಮ್ ಈಸ್ ಖಾನ್' ಹೀಗೆ ಹಲವು ಸಿನಿಮಾಗಳಲ್ಲಿ ಶಾರುಖ್ ಹಾಗೂ ಕಾಜೋಲ್ ಜೊತೆಯಾಗಿ ನಟಿಸಿದ್ದಾರೆ. ಇವರಿಬ್ಬರದ್ದು ಬಾಲಿವುಡ್‌ನ ಎವರ್‌ಗ್ರೀನ್ ಜೋಡಿ. ಕಾಜೋಲ್ ಇತ್ತೀಚೆಗೆ ಸಿನಿಮಾಗಳಿಗಿಂತ ಹೆಚ್ಚು ವೆಬ್ ಸೀರಿಸ್‌ಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











