400 ಕೋಟಿ ಕ್ಲಬ್ ಸೇರಿದ ಆದಿಪುರುಷ್; ಲಾಭ ಗಳಿಸಲು ಇನ್ನೆಷ್ಟು ಕಲೆಕ್ಷನ್ ಮಾಡಬೇಕು?
ಕಳೆದ ವಾರ ಜೂನ್ 16ರಂದು ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಬಿಡುಗಡೆಗೊಂಡಿತು. ಪ್ರಭಾಸ್ ನಟನೆಯ ಮೊದಲ ಹಿಂದಿ ಚಿತ್ರ ಇದಾಗಿದ್ದು ಬಿಡುಗಡೆಗೂ ಮುನ್ನ ಕುತೂಹಲ ಸೃಷ್ಟಿಸಿತ್ತು ಹಾಗೂ ಟೀಸರ್‌ನಲ್ಲಿದ್ದ ಕಳಪೆ ವಿಎಫ್ಎಕ್ಸ್ ಕಾರಣದಿಂದಾಗಿ ಹೀನಾಯವಾಗಿ ಟ್ರೋಲ್ ಆಗಿತ್ತು.
ಹೀಗೆ ಬಿಡುಗಡೆಗೂ ಮುನ್ನವೇ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಆದಿಪುರುಷ್ ಚಿತ್ರ ಬಿಡುಗಡೆಯಾದ ನಂತರವೂ ಸಹ ಅದೇ ರೀತಿಯ ವಿಮರ್ಶೆಗಳನ್ನು ಪಡೆದುಕೊಂಡಿದೆ. ಹೌದು, ಆದಿಪುರುಷ್ ತನ್ನ ಕಳಪೆ ವಿಎಫ್ಎಕ್ಸ್ ಕಾರಣಕ್ಕೆ ಕೆಟ್ಟ ಟೀಕೆಗಳನ್ನು ಪಡೆದುಕೊಳ್ತಿದೆ. ಚಿತ್ರ ನೋಡಿ ಹೊರಬಂದ ಸಿನಿ ರಸಿಕರು ಇದು ರಾಮಾಯಣ ಅಲ್ಲ, ಮಾಡರ್ನ್ ಅಪ್‌ಡೇಟೆಡ್ ರಾಮಾಯಣ ಎಂದು ಅಸಮಾಧಾನ ಹೊರಹಾಕಿದ್ದರು. ಚಿತ್ರದ ಮೊದಲ ಪ್ರದರ್ಶನ ಮುಗಿಯುತ್ತಿದ್ದಂತೆಯೇ ಚಿತ್ರದ ವಿರುದ್ಧ ದೊಡ್ಡ ಮಟ್ಟದಲ್ಲಿ ನೆಗೆಟಿವ್ ವಿಮರ್ಶೆಗಳು ಕೇಳಿಬಂದವು.

ಹೀಗೆ ಮಿಶ್ರ ಪ್ರತಿಕ್ರಿಯೆ ಎಂಬ ಹಿನ್ನಡೆ ಒಂದೆಡೆಯಾದರೆ, ಮತ್ತೊಂದೆಡೆ ಚಿತ್ರದ ವಿವಾದಗಳು ಹಲವರ ಮೇಲೆ ಪರಿಣಾಮ ಬೀರಿದ್ದು ಬ್ಯಾನ್ ವಿರೋಧ ಪಡೆದುಕೊಳ್ಳುವಷ್ಟು ಹಿನ್ನಡೆ ಅನುಭವಿಸಿದೆ. ಇಷ್ಟೆಲ್ಲಾ ಚಟುವಟಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಜರುಗುತ್ತಿದ್ದರೆ ಅತ್ತ ಆಫ್‌ಲೈನ್‌ನಲ್ಲಿ ಆದಿಪುರುಷ್ ಚಿತ್ರ ಸತತ ಮೂರು ದಿನಗಳ ಕಾಲ ನೂರು ಕೋಟಿ ಕ್ಲಬ್ ಸೇರಿ ಸಮಾಧಾನಕರ ಗಳಿಕೆ ಮಾಡಿದೆ.
ಚಿತ್ರ ಇಂದಿಗೆ ( ಜೂನ್ 22 ) 6 ದಿನಗಳ ಪ್ರದರ್ಶನವನ್ನು ಪೂರೈಸಿದ್ದು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 415 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಮೊದಲ ದಿನ 140 ಕೋಟಿ ಗಳಿಸಿದ್ದ ಆದಿಪುರುಷ್ ಎರಡನೇ ದಿನ 100, ಮೂರನೇ ದಿನವೂ ಸಹ 100 ಕೋಟಿ ಗಲ್ಲಾಪೆಟ್ಟಿಗೆ ಸೇರಿತು, ನಾಲ್ಕನೇ ದಿನ 35 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತು, ಐದನೇ ದಿನ 20 ಕೋಟಿ ಕಲೆಕ್ಷನ್ ಮಾಡಿತು ಹಾಗೂ ಆರನೇ ದಿನ ಕೇವಲ 15 ಕೋಟಿ ಗಳಿಕೆ ಮಾಡಿದೆ.
ಇನ್ನು ಆದಿಪುರುಷ್ ಚಿತ್ರ 500 ಕೋಟಿ ರೂಪಾಯಿ ಬಜೆಟ್‌ನೊಂದಿಗೆ ತಯಾರಾಗಿದ್ದು, 6 ದಿನಗಳಲ್ಲಿ 415 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ಇದರಲ್ಲಿ 186 ಕೋಟಿ ಶೇರ್ ಕಲೆಕ್ಷನ್ ಇದೆ. ಚಿತ್ರ ಬ್ರೇಕ್ ಈವನ್ ಸಾಧಿಸಿ ಲಾಭ ಗಳಿಸಲಾರಂಭಿಸಲು 242 ಗಳಿಸಬೇಕಿದ್ದು, ಇನ್ನೂ 56 ಕೋಟಿ ಶೇರ್ ಕಲೆಕ್ಷನ್ ಮಾಡಬೇಕಿದೆ. 6 ಮತ್ತು 5ನೇ ದಿನದ ಕಲೆಕ್ಷನ್ ಮೊದಲ ಮೂರು ದಿನಗಳ ಕಲೆಕ್ಷನ್‌ಗಿಂತ ತೀರ ಕೆಳಮಟ್ಟದಲ್ಲಿದ್ದು ಆದಿಪುರುಷ್ ಬ್ರೇಕ್ ಈವನ್ ತಲುಪುವುದರಲ್ಲಿ ಅನುಮಾನ ಮೂಡಿದೆ.


Click it and Unblock the Notifications











