ಮತ್ತೆ ಹೃತಿಕ್- ತಾರಕ್ ಮುಖಾಮುಖಿ; 'ವಾರ್- 2' ಬಾಕ್ಸಾಫೀಸ್ ದಿಕ್ಕು ಬದಲಿಸುವ ನ್ಯೂಸ್
ಆಗಸ್ಟ್ 14ಕ್ಕೆ ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ 'ವಾರ್- 2' ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ ಚಿತ್ರದ ಟೀಸರ್ ಬಂದು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೂ ಸಿನಿಮಾ ಬಗ್ಗೆ ಸಿನಿರಸಿಕರ ನಿರೀಕ್ಷೆ ಹೆಚ್ಚಾಗಿದೆ. ಇದೆಲ್ಲದರ ನಡುವೆ ಸಿನಿಮಾ ಬಗ್ಗೆ ಕ್ರೇಜಿ ನ್ಯೂಸ್ ಬಂದಿದೆ.
YRF ಸ್ಪೈ ಥ್ರಿಲ್ಲರ್ ಸರಣಿಯ ಬಹುನಿರೀಕ್ಷಿತ ಸಿನಿಮಾ 'ವಾರ್-2'. ಅಯಾನ್ ಮುಖರ್ಜಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಮಾ ಮೂಲಕ ತಾರಕ್ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನು 45 ದಿನಗಳು ಮಾತ್ರ ಬಾಕಿಯಿದೆ. ಟೀಸರ್ ಬಳಿಕ ಚಿತ್ರದ ಸಾಂಗ್ಸ್ ಬಿಡುಗಡೆಗೆ ಸಿದ್ಧತೆ ನಡೀತಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗ್ತಿದೆ.

'ವಾರ್- 2' ಸಿನಿಮಾ ಚಿತ್ರೀಕರಣದಿಂದ ಬಿಡುವು ಮಾಡಿಕೊಂಡಿದ್ದ ತಾರಕ್ ಇತ್ತೀಚೆಗೆ 'ಡ್ರ್ಯಾಗನ್' ಚಿತ್ರದ ಒಂದು ಶೆಡ್ಯೂಲ್ ಮುಗಿಸಿದ್ದಾರೆ. ಪ್ರಶಾಂತ್ ನೀಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದೀಗ 'ವಾರ್- 2' ಚಿತ್ರದ ಕೊನೆ ಹಂತದ ಚಿತ್ರೀಕರಣಕ್ಕೆ ವೇದಿಕೆ ಸಿದ್ಧವಾಗಿದೆ. ಮುಂಬೈನಲ್ಲಿರುವ ಯಶ್ ರಾಜ್ ಸ್ಟುಡಿಯೋದಲ್ಲೇ ಸೆಟ್ ಹಾಕಿ ಸಾಂಗ್ ಶೂಟ್ ಮಾಡಲಾಗುತ್ತಿದೆ. ಈಗಾಗಲೇ ರಿಹರ್ಸಲ್ ಶುರುವಾಗಿದೆ. 500 ಜನ ಡ್ಯಾನ್ಸರ್ಸ್ ಬಳಸಿಕೊಂಡು ಡ್ಯಾನ್ಸ್ ಮಾಸ್ಟರ್ ಬಾಸ್ಕೊ ಮಾರ್ಟಿಸ್ ಸ್ಟೆಪ್ಸ್ ಕಂಪೋಸ್ ಮಾಡುತ್ತಿದ್ದಾರೆ.
ಹೃತಿಕ್ ಹಾಗೂ ತಾರಕ್ ಡ್ಯಾನ್ಸ್ ಮಾಡುವುದರಲ್ಲಿ ನಿಸ್ಸೀಮರು. ಬಾಲಿವುಡ್ ಮಟ್ಟಿಗೆ ಹೃತಿಕ್ ನಂಬರ್ ಡ್ಯಾನ್ಸರ್. ದಕ್ಷಿಣದ ಮಟ್ಟಿಗೆ ತಾರಕ್ ನಂಬರ್ ವನ್ ಡ್ಯಾನ್ಸರ್. ಹಾಗಾಗಿ ಇವರಿಬ್ಬರು ಒಟ್ಟಿಗೆ ಹೆಜ್ಜೆ ಹಾಕಿದರೆ ಹಬ್ಬವೇ ಸರಿ. ಅದೇ ಕಾರಣಕ್ಕೆ ಈ ಸಾಂಗ್ ಶೂಟಿಂಗ್ ಬಹಳ ಕುತೂಹಲ ಮೂಡಿಸಿದೆ. 7 ದಿನಗಳ ಕಾಲ ಸಾಂಗ್ ಶೂಟ್ ಮಾಡೋಕೆ ಇಬ್ಬರೂ ಕಾಲ್‌ಶೀಟ್ ಕೊಟ್ಟಿದ್ದಾರೆ. ಬಹಳ ಅದ್ಧೂರಿಯಾಗಿ ಸಾಂಗ್ ಸೆರೆ ಹಿಡಿಯಲಾಗುತ್ತಿದೆ.
ಇದೊಂದು ಸಾಂಗ್ ಚೆನ್ನಾಗಿ ಬಂದುಬಿಟ್ಟರೆ ಸಿನಿಮಾ ಬಾಕ್ಸಾಫೀಸ್ ಮಾಡೋದು ಗ್ಯಾರೆಂಟಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಡ್ಯಾನ್ಸ್ ವಿಚಾರದಲ್ಲಿ ಇಬ್ಬರೂ ತಮಗೆ ತಾವೇ ಸಾಟಿ. ಹಾಗಿರುವಾಗ ಇಬ್ಬರು ಒಮ್ಮೆ ಡ್ಯಾನ್ಸ್ ಮಾಡೋಕೆ ನಿಂತ್ರೆ ಹೇಗಿರುತ್ತದೆ ಎಂದು ಊಹಿಸಿಕೊಂಡೇ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಿಂದೆ 'RRR' ಚಿತ್ರದಲ್ಲಿ ತಾರಕ್ ಹಾಗೂ ಚರಣ್ ನಡುವೆ ಇದೇ ರೀತಿ ಪೈಪೋಟಿ ಏರ್ಪಟ್ಟಿತ್ತು. ಆದರೆ ಇಬ್ಬರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿ ರಾಜಮೌಳಿ ಗೆದ್ದಿದ್ದರು.
'ನಾಟು ನಾಟು' ಸಾಂಗ್ ಕ್ರೇಜ್ ಹೇಗಿತ್ತು ಎನ್ನುವುದು ಗೊತ್ತೇಯಿದೆ. ಇದೀಗ ಹೃತಿಕ್ ಕಾಗೂ ತಾರಕ್ ನಡುವೆ ಅಂಥದ್ದೆ ಡ್ಯಾನ್ಸಿಂಗ್ ನಂಬರ್ ಕಂಪೋಸ್ ಮಾಡಲಾಗುತ್ತಿದೆ. ಸಂಗೀತ ನಿರ್ದೇಶಕ ಪ್ರೀತಂ ಈಗಾಗಲೇ ಟ್ಯೂನ್ ಹಾಕಿ ಸಾಂಗ್ ರೆಡಿ ಮಾಡಿದ್ದಾರೆ ಎನ್ನಲಾಗ್ತಿದೆ. ನಾಳೆ(ಜುಲೈ 1)ಯಿಂದ ಸತತ 7 ದಿನಗಳ ಕಾಲ ಸಾಂಗ್ ಚಿತ್ರೀಕರಣ ನಡೆಯುತ್ತದೆ ಎಂದು 'ಫಿಲ್ಮ್ ಫೇರ್ ಡಾಟ್ ಕಾಮ್' ವೆಬ್‌ಸೈಟ್ ವರದಿ ಮಾಡಿದೆ.
ಇತ್ತೀಚೆಗೆ ಜ್ಯೂ. ಎನ್‌ಟಿಆರ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ವಾರ್- 2' ಟೀಸರ್ ಬಿಡುಗಡೆಯಾಗಿತ್ತು. ಆದರೆ ಹೃತಿಕ್ ಮುಂದೆ ತಾರಕ್ ಡಲ್ಲಾಗಿಬಿಟ್ಟಿದ್ದರು. ಇದೀಗ ಡ್ಯಾನ್ಸ್ ಮೂಲಕ ಹೃತಿಕ್‌ಗೆ ಸವಾಲ್ ಹಾಕಿ ಗೆಲ್ಲುತ್ತಾರಾ? ಕಾದು ನೋಡಬೇಕಿದೆ. ಇನ್ನು 'ವಾರ್- 2' ಸಿನಿಮಾ ಬಿಡುಗಡೆಯಾಗುವ ಅದೇ ದಿನ ರಜನಿಕಾಂತ್ ನಟನೆಯ 'ಕೂಲಿ' ಚಿತ್ರ ತೆರೆಗೆ ಬರ್ತಿದೆ. ಹಾಗಾಗಿ ಬಾಕ್ಸಾಫೀಸ್ ಕ್ಲ್ಯಾಶ್ ಪಕ್ಕಾ ಎನ್ನುವಂತಾಗಿದೆ.


Click it and Unblock the Notifications











