War-2 Teaser: ಹೃತಿಕ್ ಎದುರು ಡಲ್ಲಾದ ತಾರಕ್; 'ವಾರ್' ಒನ್‌ಸೈಡ್ ಆಗಿಬಿಡುತ್ತಾ?
ಬಹುನಿರೀಕ್ಷಿತ 'ವಾರ್- 2' ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿದೆ. ಜ್ಯೂ. ಎನ್‌ಟಿಆರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆ ಆಗಿರುವ ಸಣ್ಣ ಝಲಕ್ ಸದ್ದು ಮಾಡ್ತಿದೆ. ಆದರೆ ಟೀಸರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಯಾನ್ ಮುಖರ್ಜಿ ನಿರ್ದೇಶನದ ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಹೃತಿಕ್ ಎದುರು ತಾರಕ್ ಅಬ್ಬರಿಸಿದ್ದಾರೆ.
ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ 'ವಾರ್-2' ಸಿನಿಮಾ ನಿರ್ಮಾಣವಾಗಿದೆ. ಆಗಸ್ಟ್ 14ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆಗಸ್ಟ್ 15ಕ್ಕೆ 'ಕೂಲಿ' ಸಿನಿಮಾ ಬರುತ್ತಿರುವುದರಿಂದ ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಗ್ಯಾರೆಂಟಿ ಎನ್ನುವಂತಾಗಿದೆ. ಚಿತ್ರದಲ್ಲಿ ಕಿಯಾರಾ ಅದ್ವಾನಿ ನಾಯಕಿಯಾಗಿ ಮಿಂಚಿದ್ದಾರೆ.

ಟೀಸರ್ ವಿಚಾರಕ್ಕೆ ಬಂದರೆ ಎಂದಿನಂತೆ ಬಾಲಿವುಡ್ ಆಕ್ಷನ್ ಸಿನಿಮಾಗಳ ರೀತಿ ಮೈ ಜುಮ್ ಎನಿಸೋ ಆಕ್ಷನ್, ಚೇಸಿಂಗ್ ಸೀಕ್ವೆನ್ಸ್, ನಾಯಕಿಯಾ ಒಂದು ಬಿಕಿನಿ ದೃಶ್ಯ ನೋಡಬಹುದು. ಈಗಾಗಲೇ ಇಂಥದ್ದು ಸಾಕಷ್ಟು ನೋಡಿಬಿಟ್ಟಿದ್ದೇವೆ, ಹೊಸದೇನು ಇಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೊಬ್ಬರ ಕಬೀರ್ ಆಗಿ ಹೃತಿಕ್ ರೋಷನ್ ಅಬ್ಬರಿಸಿದ್ದು ಆತನಿಗೆ ಸವಾಲ್ ಹಾಕುವ ಪಾತ್ರದಲ್ಲಿ ಜ್ಯೂ. ಎನ್‌ಟಿಆರ್ ಕಾಣಿಸಿಕೊಂಡಿದ್ದಾರೆ.
"ನನ್ನ ಕಣ್ಣುಗಳು ಯಾವತ್ತಿನಿಂದಲೋ ನಿನ್ನನ್ನು ಹುಡುಕಾಡುತ್ತಿದೆ ಕಬೀರ್" ಎನ್ನುವ ತಾರಕ್ ಖಡಕ್ ಡೈಲಾಗ್ ಹಿನ್ನೆಲೆಯಲ್ಲಿ ಟೀಸರ್ ಶುರುವಾಗುತ್ತದೆ. "ನಿನಗೆ ನನ್ನ ಬಗ್ಗೆ ಗೊತ್ತಿಲ್ಲ. ಈಗ ಗೊತ್ತಾಗುತ್ತೆ, ಗೆಟ್ ರೆಡಿ ಫಾರ್ ವಾರ್" ಎಂಬ ಮತ್ತೊಂದು ಡೈಲಾಗ್ ಕೂಡ ಇದೆ. ತಾರಕ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಟೀಸರ್ ಬಂದಿದ್ದರೂ ಹೃತಿಕ್ ಆರ್ಭಟವೇ ಜೋರಾಗಿದೆ.
ಮತ್ತಷ್ಟು ಖಡಕ್ ಆಗಿ ಭಯಾನಕವಾಗಿ ಈ ಬಾರಿ ಕಬೀರ್ ಆರ್ಭಟ ನೋಡಬಹುದು. ಹೃತಿಕ್ ಹುರಿಗಟ್ಟಿದ ದೇಹ, ಖಡಕ್ ನೋಟ, ಬಾಡಿ ಲಾಂಗ್ವೇಜ್ ಎಲ್ಲವೂ ಹುಬ್ಬೇರಿಸುವಂತಿದೆ. ಬಾಲಿವುಡ್ ಗ್ರೀಕ್ ಗಾಡ್ ಆರ್ಭಟದ ಮುಂದೆ ತಾರಕ್ ಕೊಂಚ ಡಲ್ಲಾಗಿಬಿಟ್ಟಿದ್ದಾರೆ. ಕೆಲ ಅಭಿಮಾನಿಗಳು ಕೂಡ ಟೀಸರ್ ನೋಡಿ ಇದೇ ಮಾತು ಹೇಳುತ್ತಿದ್ದಾರೆ. ಇನ್ನು ಮೈ ಜುಮ್ ಎನಿಸುವ ಸ್ಟಂಟ್ಸ್, ಗ್ರಾಫಿಕ್ಸ್ ಬಂದೂಕುಗಳ ಸದ್ದು ಜೋರಾಗಿಯೇ ಇದೆ. ಇದೆಲ್ಲದರ ನಡುವೆ ಸ್ವಿಮ್‌ಸೂಟ್‌ನಲ್ಲಿ ದರ್ಶನ ಕೊಟ್ಟು ಕಿಯಾರಾ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.
150 ದಿನಗಳ ಕಾಲ 'ವಾರ್-2' ಸಿನಿಮಾ ಚಿತ್ರೀಕರಣ ನಡೆದಿದೆ. ಇಟಲಿ, ಸ್ಪೇನ್, ಜಪಾನ್, ರಷ್ಯಾ ಹಾಗೂ ಭಾರತದಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಆದರೆ ಟೀಸರ್ ನೋಡಿದರೆ ಬಹುತೇಕ ಗ್ರೀನ್‌ಮ್ಯಾಟ್‌ನಲ್ಲಿ ಶೂಟ್ ಮಾಡಿದಂತಿದೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಫಿಕ್ಸ್ ಬಗ್ಗೆಯೂ ಅಸಮಾಧಾನ ವ್ಯಕ್ತವಾಗುತ್ತಿದೆ. ಇನ್ನು 2019ರಲ್ಲಿ ಬಂದಿದ್ದ 'ವಾರ್' ಚಿತ್ರಕ್ಕೂ ಸೀಕ್ವೆಲ್‌ಗೂ ಬಹಳ ಸಾಮ್ಯತೆಯಿದೆ. ಟೀಸರ್‌ನಲ್ಲಿರುವ ಕೆಲವು ಶಾಟ್ಸ್ ಸೇಮ್ ಟು ಸೇಮ್ ಇದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಆದಿತ್ಯಾ ಚೋಪ್ರಾ ನಿರ್ಮಾಣದ ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಪ್ರೀತಂ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅಮಿತಾಬ್ ಬಟ್ಟಾಚಾರ್ಯ ಸಾಹಿತ್ಯ, ಅಬ್ಬಾಸ್ ತೈರೆವಾಲಾ ಸಂಭಾಷಣೆ ಚಿತ್ರಕ್ಕಿದೆ. YRF ಸ್ಪೈ ಯೂನಿವರ್ಸ್‌ನಲ್ಲಿ 'ಏಕ್ ಥಾ ಟೈಗರ್', 'ಟೈಗರ್ ಜಿಂದಾ ಹೈ', 'ವಾರ್', 'ಪಠಾಣ್' ಹಾಗೂ 'ಟೈಗರ್-3' ಸಿನಿಮಾಗಳು ಬಂದಿದ್ದವು. ಇದೀಗ ಅದೇ ಸಾಲಿಗೆ 'ವಾರ್- 2' ಚಿತ್ರ ಕೂಡ ಸೇರಿಕೊಳ್ತಿದೆ. ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರ್ತಿದೆ. ಕನ್ನಡಕ್ಕೆ ಡಬ್ ಮಾಡುವ ಪ್ರಯತ್ನ ಮಾಡಿದಂತೆ ಕಾಣುತ್ತಿಲ್ಲ.


Click it and Unblock the Notifications











