ತಮ್ಮದೇ ಸಿನಿಮಾ ಸೋಲಿನ ಬಗ್ಗೆ ಮಾತಾಡಿ ಟ್ರೋಲ್ ಮಾಡಿಕೊಂಡ ಹೃತಿಕ್ ರೋಷನ್
ಒಂದು ಸಿನಿಮಾ ಗೆದ್ರೆ ಎಲ್ರೂ ಮಾತಾಡ್ತಾರೆ. ಸಕ್ಸಸ್ ಮೀಟ್ ಮಾಡ್ತಾರೆ. ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕ ಕೊಡ್ತಾರೆ. ಸ್ಟಾರ್ ನಟರು ತಮ್ಮ ಸಿನಿಮಾಗಳ ರಿಸಲ್ಟ್ ಬಗ್ಗೆ ಹೆಚ್ಚು ಮಾತನಾಡಲ್ಲ. ಗೆದ್ರೆ ಮಾತ್ರ ಮುಂದಿನ ಸಿನಿಮಾ ಸಂಭಾವನೆ ಹೆಚ್ಚಿಸಿಕೊಂಡುಬಿಡ್ತಾರೆ. ಸೋಲನ್ನು ಯಾರೂ ಒಪ್ಪಿಕೊಳ್ಳಲ್ಲ.
ಇತ್ತೀಚೆಗೆ ಕೆಲ ಸಿನಿಮಾಗಳು ಭರ್ಜರಿ ಓಪನಿಂಗ್ ಪಡೆದುಕೊಂಡು ಬಳಿಕ ನಷ್ಟ ಅನುಭವಿಸುತ್ತಿವೆ. ಆದರೆ ಸಿನಿಮಾ ಸೋತಿದ್ದನ್ನು ಒಪ್ಪಿಕೊಳ್ಳುವವರು ಕಮ್ಮಿ. ಸುಖಾಸುಮ್ಮನೆ ಅವಮಾನ ಮಾಡಿಕೊಳ್ಳುವುದಕ್ಕಿಂತ ನಿರ್ಮಾಪಕರು ನೋವನ್ನು ತಾವೇ ಅನುಭವಿಸುತ್ತಾರೆ. ತಮ್ಮ ಸಿನಿಮಾ ಸೋತಿದೆ ಎಂದು ಒಪ್ಪಿಕೊಂಡ್ರೆ ಎಲ್ಲಿ ಮಾರ್ಕೆಟ್ ಡೌನ್ ಆಗುತ್ತೋ ಎಂದು ನಟರು ಸುಮ್ಮನಿರುತ್ತಾರೆ. ಆದರೆ ಹೃತಿಕ್ ರೋಷನ್ 'ವಾರ್- 2' ಸಿನಿಮಾ ಸೋಲನ್ನು ಒಪ್ಪಿಕೊಂಡಿದ್ದಾರೆ.

ಅಯಾನ್ ಮುಖರ್ಜಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ವಾರ್- 2' ಆಗಸ್ಟ್ 14ಕ್ಕೆ ತೆರೆಗೆ ಬಂದಿತ್ತು. ತೆಲುಗಿ ನಟ ಜ್ಯೂ. ಎನ್‌ಟಿಆರ್ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಯಶ್ ರಾಜ್ ಫಿಲ್ಮ್ಸ್ ಸ್ಪೈ ಸರಣಿ ಸಿನಿಮಾಗಳಲ್ಲಿ ಇದು ಒಂದು. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ತಾರಕ್ ನಟಿಸಿದ್ದ ಕಾರಣಕ್ಕೆ ಆಂಧ್ರ, ತೆಲಂಗಾಣದಲ್ಲಿ ತಕ್ಕಮಟ್ಟಿಗೆ ಸಿನಿಮಾ ಸದ್ದು ಮಾಡಿತ್ತು. ಆದರೆ ಅಲ್ಲಿ ಕೂಡ ವಿತರಕರು ನಷ್ಟ ಅನುಭವಿಸಿದ್ದರು.
ಇತ್ತೀಚೆಗೆ ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೃತಿಕ್ ರೋಷನ್ ಭಾಗವಹಿಸಿದ್ದರು. ನಿರೂಪಕ ಬಿಲ್ಡಪ್ ಕೊಟ್ಟು ಹೃತಿಕ್ ಅವರನ್ನು ವೇದಿಕೆಗೆ ಸ್ವಾಗತಿಸಿದ್ದರು. "ಸೂಪರ್‌ಸ್ಟಾರ್‌ಗೆ ದೊಡ್ಡ ಚಪ್ಪಾಳೆ ಬರಲಿ" ಎಂದು ಹೇಳಿದ್ದಾರೆ. ತಕ್ಷಣ ಪ್ರತಿಕ್ರಿಯಿಸಿದ ಹೃತಿಕ್ ತಮಾಷೆಯಾಗಿ "ನೀವು ತುಂಬಾ ಒಳ್ಳೆಯವ್ರು. ನನ್ನ ಚಿತ್ರ ಇತ್ತೀಚೆಗೆ ಬಾಕ್ಸ್ ಆಫೀಸ್‌ನಲ್ಲಿ ಸೋತಿತ್ತು. ಆದರೂ ಇಷ್ಟೆಲ್ಲಾ ಪ್ರೀತಿ ಸಿಗುತ್ತಿರುವುದಕ್ಕೆ ಸಂತೋಷವಾಗ್ತಿದೆ" ಎಂದಿದ್ದಾರೆ.
ತಮ್ಮದೇ 'ವಾರ್- 2' ಸಿನಿಮಾವನ್ನು ಹೃತಿಕ್ ತಾವೇ ಟ್ರೋಲ್ ಮಾಡಿಕೊಂಡಿದ್ದಾರೆ. ಬಾಲಿವುಡ್ ನಟನ ಈ ನಡೆಯನ್ನು ಕೆಲವರು ಸ್ವಾಗತಿಸಿದ್ದಾರೆ. ಒಂದು ಸಿನಿಮಾ ಗೆಲುವು ಅಷ್ಟು ಸುಲಭ ಅಲ್ಲ. ಭಾರೀ ಬಜೆಟ್ ಹಾಕಿ ನಿರ್ಮಿಸಿದ ಸಿನಿಮಾಗಳು ಈಗ ಸೋಲುತ್ತಿವೆ. ಸಿನಿಮಾ ಸಕ್ಸಸ್ ಸೂತ್ರ ಎನ್ನುವುದು ಯಾರಿಗೂ ಗೊತ್ತಿಲ್ಲ. ಹೃತಿಕ್ ನಟಿಸಿದ್ದ 'ವಾರ್' ಸಿನಿಮಾ ಗೆದ್ದಿತ್ತು. ಹಾಗಾಗಿ ಸೀಕ್ವೆಲ್ ಮಾಡಿದ್ದರು.
ಕಿಯಾರಾ ಅದ್ವಾನಿ ಈ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಅನಿಲ್ ಕಪೂರ್, ಅಶುತೋಷ್ ರಾಣಾ, ವರುಣ್ ಬದೊಲ, ರೇಷ್ಮಾ ಬಾಂಬೆವಾಲಾ, ವಿಜಯ್ ವಿಕ್ರಮ್ ಸಿಂಗ್ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಅಂದಾಜು 300 ಕೋಟಿ ರೂ. ಬಜೆಟ್ ಸಿನಿಮಾ ಭಾರೀ ನಷ್ಟ ತಂದೊಡ್ಡಿತ್ತು.
'ವಾರ್- 2' ಬಳಿಕ ಹೃತಿಕ್ ನಟನೆಯ ಯಾವುದೇ ಸಿನಿಮಾ ಶುರುವಾಗಿಲ್ಲ. ಹೊಂಬಾಳೆ ಫಿಲ್ಮ್ಸ್ ಜೊತೆ ಚಿತ್ರವೊಂದಕ್ಕೆ ಹೃತಿಕ್ ಸಹಿ ಮಾಡಿದ್ದಾರೆ. 'ಕ್ರಿಶ್- 4' ಚಿತ್ರವನ್ನು ತಾವೇ ನಿರ್ದೇಶಿಸಿ ನಟಿಸಲು ಹೃತಿಕ್ ರೋಷನ್ ಮನಸ್ಸು ಮಾಡಿದ್ದಾರೆ.
'ವಾರ್- 2' ಎದುರು ತಮಿಳಿನ 'ಕೂಲಿ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಿತ್ತು. ಲೋಕೇಶ್ ಕನಕರಾಜ್ ನಿರ್ದೇಶನದ ಮಲ್ಟಿಸ್ಟಾರರ್ ಚಿತ್ರದಲ್ಲಿ ಆಮೀರ್ ಖಾನ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದರು. 'ಕೂಲಿ' ಆರ್ಭಟ ಕೂಡ 'ವಾರ್- 2' ಆರ್ಭಟಕ್ಕೆ ಕೊಂಚ ಕಡಿವಾಣ ಹಾಕಿತ್ತು. ಚಿತ್ರದ ಗ್ರಾಫಿಕ್ಸ್ ಸೇರಿ ಸಾಕಷ್ಟು ವಿಚಾರಗಳ ಬಗ್ಗೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದರು.
ದಕ್ಷಿಣದ ಕಲಾವಿದರು ಬಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಯಾರೂ ಕೂಡ ಗೆದ್ದಿಲ್ಲ. ಈ ಹಿಂದೆ ರಜನಿಕಾಂತ್, ಚಿರಂಜೀವಿ, ರಾಮ್‌ಚರಣ್, ಪ್ರಭಾಸ್ ಎಲ್ಲರೂ ಬಾಲಿವುಡ್ ಅಂಗಳಕ್ಕೆ ಜಿಗಿದು ಅದೃಷ್ಟ ಪರೀಕ್ಷಿಸಿಕೊಂಡಿದ್ದರು. ಯಾರಿಗೂ ಗೆಲುವು ಸಿಗಲಿಲ್ಲ. 'ವಾರ್- 2' ಚಿತ್ರದ ಮೂಲಕ ಬಾಲಿವುಡ್‌ಗೆ ಲಗ್ಗೆ ಇಟ್ಟಿದ್ದ ತಾರಕ್‌ಗೂ ಸೋಲಿನ ರುಚಿ ಸಿಕ್ಕಿದೆ.


Click it and Unblock the Notifications











