Hrithik vs Jr. Ntr: 'ಜನಾಬ್-ಎ-ಆಲಿ' ಸಾಂಗ್ ಬಂತು; ಡ್ಯಾನ್ಸ್ 'ವಾರ್'ನಲ್ಲಿ ಗೆದ್ದಿದ್ಯಾರು?
ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ತೆಲುಗು ನಟ ಜ್ಯೂ. ಎನ್‌ಟಿಆರ್. ಇಬ್ಬರೂ ಅದ್ಭುತ ಡ್ಯಾನ್ಸರ್ಸ್. ಯಾವುದೇ ತರಹದ ಡ್ಯಾನ್ಸ್ ಸ್ಟೆಪ್ ಆಗಿದ್ರು ನೀರು ಕುಡಿದಷ್ಟೆ ಸಲೀಸಾಗಿ ಕುಣಿಯುತ್ತಾರೆ. 'ವಾರ್- 2' ಚಿತ್ರದಲ್ಲಿ ಒಟ್ಟಿಗೆ ನಟಿಸಿರುವುದು ಮಾತ್ರವಲ್ಲ, ಜನಾಬ್-ಎ-ಆಲಿ ಹಾಡಿನಲ್ಲಿ ಒಟ್ಟಿಗೆ ಕುಣಿದಿದ್ದಾರೆ.
ಭಾರತೀಯ ಚಿತ್ರರಂಗದ ಅದ್ಭುತ ಡ್ಯಾನ್ಸರ್ಸ್ ಲಿಸ್ಟ್‌ನಲ್ಲಿ ಇವರಿಬ್ಬರ ಹೆಸರು ಅಗ್ರಸ್ಥಾನದಲ್ಲಿರುತ್ತೆ. ಅಷ್ಟರಮಟ್ಟಿಗೆ ತಮ್ಮ ಡ್ಯಾನ್ಸ್ ಮೂಲಕ ಮೋಡಿ ಮಾಡುತ್ತಾ ಬರ್ತಿದ್ದಾರೆ. 'ವಾರ್- 2' ಚಿತ್ರದ ಮೂಲಕ ತಾರಕ್ ಬಾಲಿವುಡ್ ಪ್ರವೇಶಿಸಿದ್ದಾರೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ದು ಬಾಕ್ಸಾಫೀಸ್‌ನಲ್ಲಿ ಕುಂಟುತ್ತಾ ಸಾಗಿದೆ. ಇದೆಲ್ಲದರ ನಡುವೆ 'ಜನಾಬ್-ಎ-ಆಲಿ' ಕಂಪ್ಲೀಟ್ ವೀಡಿಯೋ ಸಾಂಗ್ ರಿಲೀಸ್ ಆಗಿದೆ.

ಸಿನಿಮಾ ಬಿಡುಗಡೆಗೂ ಮುನ್ನ ಸಾಂಗ್ ಪ್ರೋಮೊ ಬಂದಿತ್ತು. ಅಭಿಮಾನಿಗಳ ಗಮನ ಸೆಳೆದಿತ್ತು. ತೆರೆಮೇಲೆ ಕೂಡ ಇಬ್ಬರ ಡ್ಯಾನ್ಸ್ ಧಮಾಕಾ ನೋಡಿ ಸಿನಿರಸಿಕರು ಮೆಚ್ಚಿಕೊಂಡಿದ್ದಾರೆ. ಇದೀಗ ಯೂಟ್ಯೂಬ್‌ನಲ್ಲಿ ಕಂಪ್ಲೀಟ್ ಸಾಂಗ್ ನೋಡಿ ಯಾರ ಡ್ಯಾನ್ಸ್ ಬೆಸ್ಟ್? ಯಾರನ್ನು ಯಾರು ಮೀರಿಸಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.
ಪಾರ್ಟಿ ಮೂಡ್‌ನಲ್ಲಿ ಸ್ನೇಹಿತರಿಬ್ಬರು ಕುಣಿಯುವ ಸನ್ನಿವೇಶದಲ್ಲಿ ಈ ಸಾಂಗ್ ಬರುತ್ತದೆ. ಪ್ರೀತಮ್ ಟ್ಯೂನ್ ಹಾಕಿದ್ದು ಅಮಿತಾಬ್ ಭಟ್ಟಚಾರ್ಯ ಸಾಹಿತ್ಯ ಬರೆದಿದ್ದಾರೆ. ಸಚೇತ್ ಟಂಡನ್, ಸಾಜ್ ಭಟ್ ಹಾಡಿಗೆ ದನಿಯಾಗಿದ್ದು ಬಾಸ್ಕೊ ಲೆಸ್ಲೀ ಮಾರ್ಟಿಸ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ಹೃತಿಕ್, ತಾರಕ್ ಇಬ್ಬರನ್ನೂ ಬಿಂದಾಸ್ ಆಗಿ ಕುಣಿಸಿದ್ದಾರೆ. ಒಂದಷ್ಟು ಡ್ಯಾನ್ಸರ್ಸ್ ಸಾಥ್ ಸಿಕ್ಕಿದೆ.
'ಜನಾಬ್-ಎ-ಆಲಿ' ಸಾಂಗ್ ದೊಡ್ಡದಾಗಿ ಸದ್ದು ಮಾಡಲಿಲ್ಲ. ಆದರೆ ಇದೀಗ ವೀಡಿಯೋ ಸಾಂಗ್ ಬಂದು ಅಭಿಮಾನಿಗಳ ಗಮನ ಸೆಳೆದಿದೆ. ಇಬ್ಬರಲ್ಲಿ ಯಾರ ಡ್ಯಾನ್ಸ್ ಚೆನ್ನಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಹೃತಿಕ್ ಬಹಳ ನಯವಾಗಿ ದೇಹವನ್ನು ಬಾಗಿಸಿ ಬಳುಕಿಸಿ ಡ್ಯಾನ್ಸ್ ಮಾಡಿದ್ದು ತಾರಕ್ ಎನರ್ಜಿ ಕೂಡ ಚೆನ್ನಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಇಬ್ಬರಿಗೂ ಬೇರೆ ಬೇರೆ ಸ್ಟೆಪ್ಸ್ ಸಿಕ್ಕಿದೆ. ಆದರೆ ಒಂದೆರಡು ಕಡೆ ಸೇಮ್ ಸ್ಟೆಪ್ಸ್ ಇಬ್ಬರೂ ಮಾಡಿದ್ದಾರೆ. ಆದರೆ ನೋಡುಗರ ಗಮನವೆಲ್ಲಾ ಹೃತಿಕ್ ಕಡೆಗೆ ಇರುತ್ತದೆ. ಅಷ್ಟರಮಟ್ಟಿಗೆ ಬಾಲಿವುಡ್ ಡ್ಯಾನ್ಸಿಂಗ್ ಸ್ಟಾರ್ ಕಮಾಲ್ ಮಾಡಿದ್ದಾರೆ. ತಾರಕ್ ಶ್ರಮ ಕೂಡ ಎದ್ದು ಕಾಣುತ್ತದೆ. ಹೃತಿಕ್ ಪಕ್ಕ ಡ್ಯಾನ್ಸ್ ಮಾಡುವುದು ಅಂದರೆ ತಮಾಷೆ ಮಾತಲ್ಲ. ತಮಗೆ ತಾವೇ ಸಾಟಿ ಎನ್ನುವಂತೆ ಇಬ್ಬರೂ ಕುಣಿದಿದ್ದಾರೆ.
ಜ್ಯೂ. ಎನ್‌ಟಿಆರ್ ಡ್ಯಾನ್ಸ್ ಬಗ್ಗೆ ಹೃತಿಕ್ ವಾರದ 15 ದಿನಗಳ ಹಿಂದೆ ಮಾತನಾಡಿದ್ದರು. "ಜೂ. ಎನ್‌ಟಿಆರ್ ಅದ್ಭುತ ಪ್ರತಿಭೆ. ನಾನು ಸಾಕಷ್ಟು ಜನರೊಟ್ಟಿಗೆ ಕೆಲಸ ಮಾಡಿದ್ದೀನಿ. ಆದರೆ ಡ್ಯಾನ್ಸ್ ರಿಹರ್ಸಲ್ ಇಲ್ಲದೇ ಬಂದು ಡ್ಯಾನ್ಸ್ ಮಾಡಿದವರು ತಾರಕ್ ಮಾತ್ರ. ಅವರೊಳಗೆ ಎಲ್ಲಾ ಸ್ಟೆಪ್ಸ್ ಇದೆ. ನನಗೆ ಅಚ್ಚರಿಯಾಯಿತು. ಅವರೊಟ್ಟಿಗೆ ಡ್ಯಾನ್ಸ್ ಮಾಡಿದ್ದು ಅದ್ಭುತ ಅನುಭವ" ಎಂದು ಹೃತಿಕ್ ಹೇಳಿದರು.
ಒಟ್ಟಾರೆ ಇಬ್ಬರೂ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರ ಗ್ರೇಸ್, ಸ್ಟೈಲ್ ಬೇರೆ ಬೇರೆ. ಇಬ್ಬರ ನಡುವೆ ಭಾರೀ ಪೈಪೋಟಿ ಇದೆ. ಆದರೂ ಒಂದು ಹಂತದಲ್ಲಿ ಹೃತಿಕ್ ಕೈ ಮೇಲಾಗಿದೆ ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ. 'ವಾರ್- 2' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿತ್ತು. ಆಂಧ್ರ, ತೆಲಂಗಾಣದಲ್ಲಿ ಕಲೆಕ್ಷನ್ ಚೆನ್ನಾಗಿತ್ತು. ಮೊದಲ 5 ದಿನಕ್ಕೆ ಚಿತ್ರ 300.50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡವೇ ಘೋಷಿಸಿತ್ತು.


Click it and Unblock the Notifications











