ಹಿಂದೂಗಳು ಹೆದರು ಪುಕ್ಕಲರು ; ಧುರಂಧರ್ ಚಿತ್ರದಲ್ಲಿ ಈ ಕೆರಳಿಸುವ ಡೈಲಾಗ್ ಹೇಳಿದ ಜಹೂರ್ ಮಿಸ್ತ್ರಿ ಯಾರು ? ಎಲ್ಲಿಯವರು ?
ಸಿನಿಮಾ ಕೇವಲ ಮನರಂಜನೆಯ ಮಾಧ್ಯಮವಲ್ಲ. ಸಮಾಜದ ಪ್ರತಿಬಿಂದ ಕೂಡ ಹೌದು. ಇಂತಹ ಚಿತ್ರರಂಗದಲ್ಲಿ ಕೆಲವು ನಟರು ತಮ್ಮ ಪಾತ್ರಕ್ಕೆ ತನು ಮನ ಅರ್ಪಿಸುತ್ತಾರೆ. ಪಾತ್ರದ ಪರಕಾಯ ಪ್ರವೇಶ ಮಾಡುತ್ತಾರೆ. ತಮ್ಮ ಅಭಿನಯದಿಂದ ಪ್ರೇಕ್ಷಕರ ಮನಸಿನ ಮೇಲೆ ಗಾಢವಾದ ಪ್ರಭಾವವನ್ನೂ ಖೂಡ ಬೀರುತ್ತಾರೆ.
ಆದರೆ, ಹೀಗೆ ಪ್ರಭಾವ ಬೀರುವ ಪಾತ್ರ ಒಳ್ಳೆತನದಿಂದ ಕೂಡಿದ್ದರೆ, ಆ ಪಾತ್ರಧಾರಿಯ ಕುರಿತು ಒಳ್ಳೆಯ ಮಾತುಗಳು ಕೇಳಿ ಬರುತ್ತವೆ. ಆದರೆ, ಅದೇ ಪಾತ್ರ ಖಳನಾಯಕನ ಪಾತ್ರವಾಗಿದ್ದರೆ ಮುಗಿಯಿತು. ಆ ಪಾತ್ರದಂತೆಯೇ ಆ ಪಾತ್ರಧಾರಿಯ ಮನಸ್ಥಿತಿ ಕೂಡ ಇರುತ್ತೆ ಎಂದು ಹಲವರು ಅಂದುಕೊಳ್ಳುತ್ತಾರೆ. ದ್ವೇಷ ಮಾಡಲು ಶುರು ಮಾಡುತ್ತಾರೆ.

ಪ್ರೇಕ್ಷಕರ ಮನದ ಈ ದ್ವೇಷ ಆ ಕಲಾವಿದನ ಗೆಲುವು ಆದರೂ ಕೂಡ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ದ್ವೇಷದ ನಂಜು ಸೋಶಿಯಲ್ ಮೀಡಿಯಾವನ್ನು ಆವರಿಸಿಕೊಂಡಿದೆ. ಪಾತ್ರ ಮತ್ತು ವ್ಯಕ್ತಿಯ ನಡುವೆ ಇರುವ ವ್ಯತ್ಯಾಸ ಮರೆತು ಹಲವರು ಸೈಬರ್ ದಾಳಿ ಮಾಡುತ್ತಾರೆ. ಇಂತಹದ್ದೇ ಒಂದು ದಾಳಿಯಿಂದ ಸದ್ಯ ವಿವೇಕ್ ಸಿನ್ಹಾ ನಲುಗಿ ಹೋಗಿದ್ಧಾರೆ.
ಹೌದು, ವಿವೇಕ್ ಸಿನ್ಹಾ ... ''ಧುರಂಧರ್'' ಚಿತ್ರವನ್ನು ನೀವು ನೋಡಿದ್ದರೆ ಇವರನ್ನು ಮರೆಯಲು ಸಾಧ್ಯ ಇಲ್ಲ.ಈ ಚಿತ್ರದಲ್ಲಿ ಜಹೂರ್ ಮಿಸ್ತ್ರಿ ಪಾತ್ರವನ್ನು ಇವರು ನಿರ್ವಹಿಸಿದ್ದಾರೆ. ಪಾತ್ರ ಚಿಕ್ಕದಾದರೂ ಆ ಪಾತ್ರವನ್ನು ಚೊಕ್ಕದಾಗಿ ನಿರ್ವಹಿಸಿದವರು ಇವರು. ದೊರೆತ ಕೆಲವೇ ಕೆಲ ಸೆಕೆಂಡ್‌ಗಳ ಸ್ಕ್ರೀನ್ ಟೈಮ್‌ನ್ನೂ ಸದುಪಯೋಗ ಪಡಿಸಿಕೊಂಡ ವಿವೇಕ್ ಸಿನ್ಹಾ ''ಧುರಂಧರ್'' ಚಿತ್ರದಲ್ಲಿ ಸಂಭಾಷಣೆಯೊಂದನ್ನು ಹೇಳಿದ್ದಾರೆ. ''ಹಿಂದೂಗಳು ಹೆದರು ಪುಕ್ಕಲರು'' ಎನ್ನುವ ಡೈಲಾಗ್ ಅದು.
ಈ ಡೈಲಾಗ್‌ನ ಆದಿತ್ಯ ಧರ್ ತಮ್ಮ ''ಧುರಂಧರ್ 2'' ಚಿತ್ರದ ಟ್ರೇಲರ್ ನಲ್ಲಿ ತೋರಿಸಿದ್ದರು. ಟ್ರೇಲರ್ ನ ಆರಂಭದಿಂದಲೇ ಈ ಡೈಲಾಗ್ ತೋರಿಸಿದ್ದರು. ಟ್ರೇಲರ್ ಬಿಡುಗಡೆಯಾಗಿದ್ದೇ ತಡ, ವಿವೇಕ್ ಸಿನ್ಹಾ ನೆಮ್ಮದಿಗೆ ಕೊಳ್ಳಿ ಬಿದ್ದಿದೆ. ಯಾಕೆಂದರೆ ಹಲವರು ಇವರನ್ನು ನಿಜಕ್ಕೂ ಪಾಕಿಸ್ತಾನದ ಪ್ರಜೆ ಎಂದುಕೊಂಡಿದ್ದಾರೆ. ನಿಜವಾದ ಭಯೋತ್ಪಾದಕ ಎಂದುಕೊಂಡಿದ್ದಾರೆ. '' ಧುರಂಧರ್ 2'' ಬಿಡುಗಡೆಯಾದರೂ ಕೂಡ ಇವರನ್ನು ಹಲವರು ಬಿಡ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕುತ್ತಿದ್ದಾರೆ.
ಇದರಿಂದ ಹೈರಾಣಾಗಿರುವ ವಿವೇಕ್ ಸಿನ್ಹಾ ಹೋದಲ್ಲಿ ಬಂದಲ್ಲಿ ನಾನು ಪಾಕಿಸ್ತಾನದವನಲ್ಲ ಬದಲಿಗೆ ಭಾರತೀಯ ಎಂದು ಸ್ಪಷ್ಟೀಕರಣವನ್ನು ಕೊಡುತ್ತಿದ್ದಾರೆ. ಸಂದರ್ಶನಗಳನ್ನು ನೀಡುತ್ತಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೂಡ ವಿಡಿಯೋ ಹಂಚಿಕೊಂಡು ನಾನು ನಿಮ್ಮವನೇ, ಭಯೋತ್ಪಾದಕನಲ್ಲ, ನನ್ನನ್ನೂ ದ್ವೇಷಿಸಬೇಡಿ ಎಂದು ಕೈ ಮುಗಿದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಈ ಕುರಿತು ವಿಡಿಯೋ ಮಾಡಿರುವ ವಿವೇಕ್ ಸಿನ್ಹಾ ನನ್ನ ಹೆಸರು ವಿವೇಕ್ ಸಿನ್ಹಾ, ನಾನೇನು ಭಯೋತ್ಪಾದಕನಲ್ಲ. ಉತ್ತರ ಪ್ರದೇಶದ ಬಿಜ್ನೋರ್ ಮೂಲದವನು ನಾನು. ಸದ್ಯ ಮುಂಬೈನಲ್ಲಿ ನೆಲೆಸಿರುವ ಒಬ್ಬ ಸಾಮಾನ್ಯ ಕಲಾವಿದ ಎಂದು ಹೇಳಿದ್ಧಾರೆ.
ತಮಗೆ ಬರುತ್ತಿರುವ ನಿರಂತರ ಬೆದರಿಕೆಯ ಮೆಸೇಜ್‌ಗಳ ಕುರಿತು ಅಚ್ಚರಿ ವ್ಯಕ್ತಪಡಿಸಿರುವ ವಿವೇಕ್ ಸಿನ್ಹಾ, ನನ್ನ ಮೇಲ್ಯಾಕೇ ನಿಮಗೆ ಇಷ್ಟೊಂದು ಕೋಪ ಬರ್ತಿದೆ ಎಂದು ಪ್ರಶ್ನೆ ಮಾಡಿದ್ಧಾರೆ. ನೀನು ನೋಡಲು ಥೇಟ್ ಭಯೋತ್ಪಾದಕನಂತೆಯೇ ಇದೀಯಾ ಎಂದು ಹಲವರು ನನಗೆ ಹೇಳ್ತಿದ್ದೀರಾ, ಸ್ಕ್ರೀನ್‌ನ ಹರಿದುಕೊಂಡು ಒಳಗಡೆ ಬಂದು ನಿನ್ನ ಹೊಡಿಬೇಕು ಎಂದು ಅನ್ಸುತ್ತಿದೆ ಎಂದು ಮೆಸೇಜ್ ಮಾಡುತ್ತಿದ್ದೀರಾ ಎಂದು ಹೇಳಿರುವ ವಿವೇಕ್ ಸಿನ್ಹಾ ಇದೇ ವೇಳೆ ಭಾರತೀಯರ ದೇಶಾಭಿಮಾನಕ್ಕೆ ಸೆಲ್ಯೂಟ್ ಕೂಡ ಹೊಡೆದಿದ್ದಾರೆ.
ನಿಜಾ ಹೇಳಬೇಕು ಅಂದರೆ ನನಗೆ ಒಂದು ಕಡೆ ಖುಷಿ ಕೂಡ ಆಗ್ತಿದೆ ಎಂದು ಹೇಳಿರುವ ವಿವೇಕ್ ಸಿನ್ಹಾ, ನಿಮ್ಮಲ್ಲಿನ ಈ ದೇಶಭಕ್ತಿಗೆ ನನ್ನ ಸಲಾಂ ಎಂದು ಹೇಳಿದ್ಧಾರೆ. ಹಲವರು ಪಾಕಿಸ್ತಾನಕ್ಕೆ ನುಗ್ಗಿ ನಿನ್ನನ್ನು ಹೊಡೆಯುತ್ತೇವೆ ಎಂದೆಲ್ಲಾ ನನಗೆ ಮೆಸೇಜ್ ಮಾಡ್ತಿದ್ಧಾರೆ ಎಂದು ಹೇಳಿರುವ ವಿವೇಕ್ ಸಿನ್ಹಾ ನಾನು ಭಾರತೀಯ ಎಂದು ಹೇಳಿದ್ದಾರೆ.
ಸದ್ಯ ವಿವೇಕ್ ಸಿನ್ಹಾ ಅವರ ಈ ವಿಡಿಯೋ ವೈರಲ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿವೇಕ್ ಸಿನ್ಹಾ ತಮ್ಮ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿದ್ದಾರೆ, ಆದರೆ ಆ ಪ್ರಾಮಾಣಿಕತೆಯೇ ಇಂದು ಅವರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿರುವುದು ವಿಪರ್ಯಾಸ ಎನ್ನುತ್ತಿದ್ದಾರೆ.


Click it and Unblock the Notifications











