'ನಾನು ತುಂಬಾ ಅದೃಷ್ಟವಂತ': ಅಯೋಧ್ಯೆಗೆ ಭೇಟಿ ನೀಡಿದ ನಟ ರಜನಿಕಾಂತ್
ಜೈಲರ್ ಯಶಸ್ಸಿನ ಖುಷಿಯಲ್ಲಿರುವ ರಜನಿಕಾಂತ್ ಸದ್ಯ ಉತ್ತರ ಪ್ರದೇಶದಲ್ಲಿದ್ದಾರೆ. ಆಗಸ್ಟ್ 18 ರ ರಾತ್ರಿ ಲಕ್ನೋಗೆ ಬಂದಿಳಿದ ನಟ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ರಜನಿಕಾಂತ್ ಆದಿತ್ಯನಾಥ್ ಪಾದಗಳನ್ನು ಮುಟ್ಟುವ ಚಿತ್ರ ವೈರಲ್ ಆಗುತ್ತಿದೆ.
ಇದಾದ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರನ್ನು 9 ವರ್ಷಗಳ ನಂತರ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಅಖಿಲೇಶ್ ಯಾದವ್ ಭೇಟಿ ಬಳಿಕ ರಜನಿಕಾಂತ್ ಅಯೋಧ್ಯೆಗೆ ಭೇಟಿ ನೀಡಿದ್ದಾರೆ.

ಆಗಸ್ಟ್ 20 ರಂದು ಅಯೋಧ್ಯೆ ಮತ್ತು ಹನುಮಾನ್‌ಗರ್ಹಿ ಮಂದಿರಕ್ಕೆ ಭೇಟಿ ನೀಡುವ ಮೂಲಕ ಅವರು ತಮ್ಮ ಪ್ರವಾಸವನ್ನು ಪೂರ್ಣಗೊಳಿಸಿದ್ದಾರೆ. ಇದಾದ ಬಳಿಕ ನಟ ರಜನಿಕಾಂತ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಅಯೋಧ್ಯೆಗೆ ಭೇಟಿ ನೀಡಿದ ತಾನು 'ಅದೃಷ್ಟಶಾಲಿ' ಎಂದು ಭಾವಿಸುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ.
ಅಯೋಧ್ಯೆಗೆ ರಜಿನಿಕಾಂತ್ ಭೇಟಿ
ಸೂಪರ್‌ಸ್ಟಾರ್ ರಜನಿಕಾಂತ್ ಅವರು ಭಾನುವಾರ ಆಗಸ್ಟ್ 20 ರಂದು ಅಯೋಧ್ಯೆಗೆ ಭೇಟಿ ನೀಡಿದ್ದರು. ಅಯೋಧ್ಯೆಯಿಂದ ಬಂದ ನಟ ತಮ್ಮ ಕಾರಿಗೆ ಹತ್ತುವಾಗ ಅವರು ತಮ್ಮ ಹಣೆಯ ಮೇಲೆ ಕುಂಕುಮ- ಅರಿಶಿಣ ಹಚ್ಚಿಕೊಂಡಿದ್ದು ಕಾಣಿಸಿಕೊಂಡಿದೆ. ಈ ವೇಳೆ ರಜನಿಕಾಂತ್ ಅವರ ಜೊತೆಗೆ ಕಾರಿನೊಳಗೆ ಅವರ ಪತ್ನಿ ಲತಾ ಕೂಡ ಕಾಣಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಯೋಧ್ಯೆ ಮತ್ತು ಹನುಮಂತನಗರ ದೇವಸ್ಥಾನಕ್ಕೆ ಭೇಟಿ ನೀಡಲು ಸಾಧ್ಯವಾಗಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ನಾನು ಈ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಬಹಳ ಸಮಯದಿಂದ ಬಯಸಿದ್ದೆ" ಎಂದು ಹೇಳಿದ್ದಾರೆ. ಇನ್ನು, ನಿರ್ಮಾಣವಾಗುತ್ತಿರುವ ರಾಮಮಂದಿರದ ಬಗ್ಗೆ ಮಾತನಾಡಿದ ರಜನಿಕಾಂತ್, ಅದನ್ನು ಪೂರ್ಣಗೊಳಿಸಲು ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ರಜನಿಕಾಂತ್ ಭೇಟಿಯ ನಂತರ ಅಖಿಲೇಶ್ ಯಾದವ್ ಟ್ವೀಟ್
ರಜನಿಕಾಂತ್ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಇಂದು ಆಗಸ್ಟ್ 20 ರಂದು ಅವರ ಲಕ್ನೋ ನಿವಾಸದಲ್ಲಿ ಭೇಟಿಯಾಗಿದ್ದರು. ಸಭೆಯ ನಂತರ ಅಖಿಲೇಶ್ ಯಾದವ್ ತಮ್ಮ ಸಮಾಜಿಕ ಜಾಲತಾಣಗಳಲ್ಲಿ ತಲೈವ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಹಿಂದಿಯಲ್ಲಿ "ಹೃದಯಗಳು ಭೇಟಿಯಾದಾಗ ಜನರು ಅಪ್ಪಿಕೊಳ್ಳುತ್ತಾರೆ" ಎಂದು ಶೀರ್ಷಿಕೆ ಬರೆದಿದ್ದಾರೆ.
"ಮೈಸೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಗ ರಜನೀಕಾಂತ್ ಅವರನ್ನು ತೆರೆಯ ಮೇಲೆ ನೋಡಿದ ಖುಷಿ ಈಗಲೂ ಹಾಗೇ ಇದೆ. ನಾವು 9 ವರ್ಷಗಳ ಹಿಂದೆ ವೈಯಕ್ತಿಕವಾಗಿ ಭೇಟಿಯಾಗಿದ್ದೇವೆ. ಅಂದಿನಿಂದ ಸ್ನೇಹಿತರಾಗಿದ್ದೇವೆ" ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಟ ರಜನಿಕಾಂತ್, "9 ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಾನು ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದೆ. ಅಂದಿನಿಂದ ನಾವು ಸ್ನೇಹಿತರಾಗಿದ್ದೇವೆ. ನಾವು ಆಗ್ಗಾಗೆ ಫೋನ್‌ನಲ್ಲಿ ಮಾತನಾಡುತ್ತೇವೆ. ಐದು ವರ್ಷಗಳ ಹಿಂದೆ ನಾನು ಶೂಟಿಂಗ್‌ಗಾಗಿ ಇಲ್ಲಿಗೆ ಬಂದಾಗ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ.ಈಗ ಅವರನ್ನು ಭೇಟಿಯಾದೆ" ಎಂದು ಹೇಳಿದ್ದಾರೆ. ಇಬ್ಬರ ಭೇಟಿ ಬಳಿಕ ತಲೈವ ಅಯೋಧ್ಯೆಗೆ ತೆರಳಿದ್ದರು.
ಯೋಗಿ ಆದಿತ್ಯನಾಥ್ ಪಾದ ಮುಟ್ಟಿದ ರಜನಿಕಾಂತ್
ಶನಿವಾರ ಲಕ್ನೋದಲ್ಲಿ 'ಜೈಲರ್' ವಿಶೇಷ ಪ್ರದರ್ಶನ ನಡೆದಿದ್ದು, ಆದಿತ್ಯನಾಥ್ ಅವರ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭಾಗವಹಿಸಿದ್ದರು. ಈ ವೇಳೆ ಕೇಶವ್ ಪ್ರಸಾದ್ ಮೌರ್ಯ ಅವರು ರಜನಿಕಾಂತ್ ಅವರ ಅಭಿನಯವನ್ನು ಹೊಗಳಿದ್ದಾರೆ.


Click it and Unblock the Notifications










