'ಸಲಾರ್'ಗೆ ಎ ಸರ್ಟಿಫಿಕೇಟ್: ನಾನು ಅಶ್ಲೀಲ ಸಿನಿಮಾ ಮಾಡಿಲ್ಲ ಎಂದ ನಿರ್ದೇಶಕ ಪ್ರಶಾಂತ್ ನೀಲ್
ಹೊಂಬಾಳೆ ಫೀಲ್ಮ್ಸ್‌ನ ಬಹು ನಿರೀಕ್ಷಿತ ಸಿನಿಮಾ 'ಸಲಾರ್ ಭಾಗ ಒಂದು' ಈ ವರ್ಷಾಂತ್ಯದಲ್ಲಿ ಬಿಡುಗಡೆಯಾಗುತ್ತಿದೆ. ಡಿಸೆಂಬರ್ 22 ರಂದು ಸಲಾರ್ ಬಿಡುಗಡೆಗೆ ಮುನ್ನ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಟರಾದ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರೊಂದಿಗೆ ಚಿಟ್ ಚಾಟ್ ನಡೆಸಿದ್ದಾರೆ.
ಈ ಸಂದರ್ಶನದಲ್ಲಿ ಸಿನಿಮಾದ ಪ್ರಮುಖ ಪಿಲ್ಲರ್ ಆದ ಮೂವರು ಕೂಡ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ 'ಸಲಾರ್' ಸಿನಿಮಾಕ್ಕೆ 'ಎ' ಸರ್ಟಿಫಿಕೇಟ್ (ವಯಸ್ಕ ಪ್ರಮಾಣಪತ್ರ) ಸಿಕ್ಕಿರುವ ಬಗ್ಗೆಯೂ ನಿರ್ದೇಶಕ ಪ್ರಶಾಂತ್ ನೀಲ್ ಮಾತನಾಡಿದ್ದಾರೆ.

'ಹಿಂಸಾತ್ಮಕ ಚಿತ್ರ ಮಾಡುವ ಪ್ಲ್ಯಾನ್ ಇರಲಿಲ್ಲ'
'ಸಲಾರ್' ಖಾನ್ಸಾರ್ ಎನ್ನುವ ಒಂದು ಕಾಲ್ಪನಿಕ ಸಾಮ್ರಾಜ್ಯದ ಸುತ್ತ ಸುತ್ತಲಾಗಿದೆ. ಇದು ಕಾನೂನುಬಾಹಿರವಾಗಿ ನಡೆಯುವ ಚಟುವಟಿಕೆಗಳ ತಾಣ ಮತ್ತು ಹಿಂಸೆಯಿಂದ ಕೂಡಿರುವ ಸ್ಥವಾಗಿದ್ದರೂ ಕೂಡ ಇಬ್ಬರು ಬಾಲ್ಯ ಸ್ನೇಹಿತರ ಕಥೆಯನ್ನು ಹೇಳುವುದು ಸಿನಿಮಾದ ಉದ್ದೇಶ. ಈ ಸಿನಿಮಾ ದೇವ ಮತ್ತು ವರದರ ಬಗ್ಗೆ ಇದೆ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.
ಮುಂದುವರಿದು ಮಾತನಾಡಿರುವ ಅವರು, "ನಾನು ತೆಲುಗು ಚಿತ್ರರಂಗವನ್ನು ವರ್ಷಗಳ ಹಿಂದೆಯಿಂದ ನೋಡಿದ್ದೇನೆ ಮತ್ತು ಅದಕ್ಕೆ ಹೋಲಿಸಿದರೆ ನನ್ನ ಚಿತ್ರದಲ್ಲಿನ ಹಿಂಸೆ ತುಂಬಾ ಕಡಿಮೆಯಿದೆ. ಒಂದು ಚಲನಚಿತ್ರವನ್ನು ಹಿಂಸಾತ್ಮಕವಾಗಿ ಮಾಡಬೇಕು ಎಂಬ ಆಲೋಚನೆ ಎಂದಿಗೂ ಇರಲಿಲ್ಲ" ಎಂದು ತಿಳಿಸಿದ್ದಾರೆ.

"ಈ ಸಿನಿಮಾಕ್ಕೆ 'A' ಸರ್ಟಿಫಿಕೇಟ್ ಸಿಕ್ಕಿದೆ. ಆದರೆ ಮಾರ್ಗಸೂಚಿಗಳು ಬದಲಾಗಿವೆ ಮತ್ತು ಸೆನ್ಸಾರ್ ಮಂಡಳಿಯು ಕೆಲವು ಕತ್ತರಿ ಪ್ರಯೋಗ ಮಾಡಲು ನನಗೆ ತಿಳಿಸಿತ್ತು. ಆದರೆ, ನಾನು ಅಶ್ಲೀಲ (ಅಸಭ್ಯ) ಸಿನಿಮಾ ಮಾಡದ ಕಾರಣ ಅವರು ಹೇಳಿದಾಗ ನಾನು ಸುಮ್ಮನಿದ್ದೆ. ಚಿತ್ರಕ್ಕೆ ಹಿಂಸೆ ಅವಶ್ಯಕವಾಗಿತ್ತು. ನಾನು ನಿರಾಶೆಗೊಂಡಿದ್ದೇನೆ. ಆದರೆ, ಪ್ರಭಾಸ್ ಪರವಾಗಿಲ್ಲ ಎಂದು ಹೇಳಿದರು" ಎಂದಿದ್ದಾರೆ.
'ಸಲಾರ್ ಸಿನಿಮಾ ಕೆಜಿಎಫ್‌ನಂತೆ ಅಲ್ಲ'
ಇನ್ನು, 'ಸಲಾರ್' ಸಿನಿಮಾ ಪ್ರಚಾರ ಅರಂಭವಾದಾಗಿನಿಂದ ಅದನ್ನು ಪ್ರಶಾಂತ್ ನೀಲ್ ಅವರ ಕೆಜಿಎಫ್‌ಗೆ ಹೋಲಿಸಲಾಗುತ್ತಿದೆ. ಅದರಲ್ಲೂ ಕೆಜಿಎಫ್ ಬಣ್ಣದ ಪ್ಯಾಲೆಟ್ ಸಲಾರ್‌ನಲ್ಲಿಯೂ ಬಳಸಿರುವುದು. ಇದನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದಾರೆಯೇ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಅವರು, "ಸಲಾರ್‌ಗೂ ಕೆಜಿಎಫ್‌ಗೂ ಯಾವುದೇ ಸಂಬಂಧವಿಲ್ಲ. ಎಲ್ಲರೂ ಹೇಳುವಂತೆ ಎರಡು ಸಿನಿಮಾಗಳು ಒಂದೇ ರೀತಿ ಕಾಣುವಂತೆ ಮಾಡುವುದು ಪ್ರಜ್ಞಾಪೂರ್ವಕ ಆಯ್ಕೆಯಾಗಿರಲಿಲ್ಲ. ಖಾನ್ಸಾರ್ ಸಾಮ್ರಾಜ್ಯದಲ್ಲಿ ವಾಸಿಸುವವರ ಜಗತ್ತು ಎಷ್ಟು ಕತ್ತಲೆ ಎಂಬುದನ್ನು ತೋರಿಸಲು ನಾನು ಬಯಸುತ್ತೇನೆ" ಎಂದು ಹೇಳಿದ್ದಾರೆ.
ಸಲಾರ್ ಭಾಗ 1
ಅಧಿಕಾರಕ್ಕಾಗಿ ಆಂತರಿಕ ಮತ್ತು ಬಾಹ್ಯ ಯುದ್ಧಗಳು ನಡೆಯುತ್ತಿರುವ ಖಾನ್ಸಾರ್ ಸಾಮ್ರಾಜ್ಯದಲ್ಲಿ ನಡೆಯುವ ಘಟನೆಗಳ ಚಿತ್ರಣ ಮತ್ತು ಇಬ್ಬರು ಬಾಲ್ಯ ಸ್ನೇಹಿತರ ಸ್ನೇಹ- ದ್ವೇಷದ ಸುತ್ತ ಸುತ್ತುವ ಕಥೆ ಸಲಾರ್. ಚಿತ್ರಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದು, ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ. ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿರುವ ಚಿತ್ರದಲ್ಲಿ ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಲಾರ್: ಭಾಗ 1 ಈ ಶುಕ್ರವಾರ ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ.


Click it and Unblock the Notifications











